ಅಮೆರಿಕ ಸೆರೆ ಹಿಡಿದ ರಷ್ಯಾದ ತೈಲ ಟ್ಯಾಂಕರ್‌ನಲ್ಲಿದ್ದಾರೆ ಮೂವರು ಭಾರತೀಯರು
ಅಮೆರಿಕದ ನೌಕಾಪಡೆ ಇರಾನ್‌ನಿಂದ ವೆನೆಜುವೆಲಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್ ‘ಮರಿನೆರಾ’ವನ್ನು ವಶಕ್ಕೆ ಪಡೆದಿದೆ. ಈ ಬೆಳವಣಿಗೆ ಭಾರತದ ರಿಲಯನ್ಸ್, ನಯಾರಾ, ಇಂಡಿಯನ್ ಆಯಿಲ್ ಹಾಗೂ ಭಾರತ್ ಪೆಟ್ರೋಲಿಯಂ ಕಂಪನಿಗಳ ಕಚ್ಚಾ ತೈಲ ಸರಬರಾಜಿಗೆ ಅಡ್ಡಿ ಉಂಟಾಗಿದ್ದು, ಇದೀಗ ಅಮೆರಿಕ ಸೆರೆ ಹಿಡಿದ ರಷ್ಯಾದ ತೈಲ ಹಡಗಿನಲ್ಲಿ ಭಾರತೀಯರು ಪತ್ತೆಯಾಗಿದ್ದಾರೆ.
ಸಾಂದರ್ಭಿಕ ಚಿತ್ರ -
ವಾಷಿಂಗ್ಟನ್, ಜ. 8: ಅಮೆರಿಕ (America)ದ ನೌಕಾಪಡೆ ಜನವರಿ 7ರಂದು ವಶಪಡಿಸಿಕೊಂಡ ರಷ್ಯಾ (Russia)ದ ತೈಲ ಟ್ಯಾಂಕರ್ (Oil tanker) 'ಮರಿನೆರಾ' (Marinera)ದಲ್ಲಿ ಮೂವರು ಭಾರತೀಯ ಸಿಬ್ಬಂದಿ ಇದ್ದಾರೆ ಎಂದು ವರದಿ ತಿಳಿಸಿವೆ. ಜನವರಿ 7ರಂದು ವೆನೆಜುವೆಲಾ (Venezuela)ದಿಂದ ತೈಲ ಹೊತ್ತು ಬರುತ್ತಿದ್ದ ರಷ್ಯಾದ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ಅನ್ನು ಅಮೆರಿಕ ವಶಪಡಿಸಿಕೊಂಡಿತ್ತು. ಆ ಹಡಗಿನಲ್ಲಿ 17 ಉಕ್ರೇನಿಯನ್ (Ukrainian) ನಾಗರಿಕರು, 6 ಜಾರ್ಜಿಯನ್ (Georgian) ನಾಗರಿಕರು, ಮೂವರು ಭಾರತೀಯ (Indian) ನಾಗರಿಕರು ಹಾಗೂ ಇಬ್ಬರು ರಷ್ಯಾದ ನಾಗರಿಕರಿದ್ದಾರೆ ಎಂದು ವರದಿಗಳು ಹೇಳಿವೆ.
ಈ ಹಡಗು ಇರಾನ್‌ನಿಂದ ವೆನೆಜುವೆಲಾಗೆ ತೆರಳಿ ಅಲ್ಲಿ ತೈಲವನ್ನು ತುಂಬಿಸಿಕೊಂಡು ರಷ್ಯಾ ತೈಲ ಒಪ್ಪಂದ ಮಾಡಿಕೊಂಡ ರಾಷ್ಟ್ರಗಳಿಗೆ ಸರಬರಾಜು ಮಾಡುತ್ತಿತ್ತು. ವೆನೆಜುವೆಲಾದಿಂದ ತೈಲ ರಫ್ತಿನ ಮೇಲೆ ಅಮೆರಿಕ ಈ ಹಿಂದೆಯೇ ಅನೇಕ ನಿರ್ಬಂಧಗಳನ್ನು ಹೇರಿತ್ತು. ಅದಾಗ್ಯೂ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ತೈಲವನ್ನು ರಫ್ತು ಮಾಡಲಾಗುತ್ತಿತ್ತು ಎನ್ನಲಾಗಿದೆ. ವೆನೆಜುವೆಲಾದ ತೈಲ ರಫ್ತಿನ ಮೇಲೆ ಅಮೆರಿಕದ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ.
ಅಟ್ಲಾಂಟಿಕ್ ಸಾಗರದಲ್ಲಿ ಸುಮಾರು 2 ವಾರಗಳ ಕಾಲ ಅಮೆರಿಕದ ಕೋಸ್ಟ್ ಗಾರ್ಡ್‌ಗಳು ಈ ಹಡಗನ್ನು ಹಿಂಬಾಲಿಸಿದ್ದರು. ಈ ಕಾರ್ಯಾಚರಣೆಯ ಸಮಯದಲ್ಲಿ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು. ಏಕೆಂದರೆ, ರಷ್ಯಾದ ಮಿಲಿಟರಿ ಹಡಗು ಮತ್ತು ಜಲಾಂತರ್ಗಾಮಿ ನೌಕೆ ಕೂಡ ಆ ಪ್ರದೇಶದಲ್ಲಿತ್ತು. ಆದರೆ, ರಷ್ಯಾ ಮತ್ತು ಅಮೆರಿಕ ದೇಶಗಳ ನಡುವೆ ಯಾವುದೇ ಮಿಲಿಟರಿ ಘರ್ಷಣೆ ನಡೆದಿಲ್ಲ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ವೆನೆಜುವೆಲಾಗೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ
ತೈಲ ಹಡಗನ್ನು ವಶಪಡಿಸಿಕೊಂಡಿರುವುದರಿಂ ರಿಲಯನ್ಸ್ , ನಯಾರಾ, ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಂಪನಿಗಳಿಗೆ ಸಕಾಲದಲ್ಲಿ ಬರಬೇಕಿರುವ ಕಚ್ಚಾ ತೈಲ ಪೂರೈಕೆಯಾಗದೇ, ಕೊಂಚ ನಷ್ಟವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಈಗಾಗಲೇ ತಗಾದೆ ತಗೆದಿರುವ ಅಮೆರಿಕ, ರಷ್ಯಾ ತೈಲ ಖರೀದಿಸಿದ್ದಕ್ಕಾಗಿ ದಂಡ ಪ್ರಯೋಗ ಮತ್ತು ಹಲವು ನಿರ್ಬಂಧಗಳನ್ನು ಹೇರಿದೆ. ಇದೆಲ್ಲದರ ನಡುವೆಯೂ ರಷ್ಯಾದಿಂದ ಕಚ್ಚಾತೈಲವು ಭಾರತಕ್ಕೆ ನಿರಾತಂಕವಾಗಿ ಸರಬರಾಜಾಗುತ್ತಿದೆ.
ಇನ್ನೂ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿರುವ ಅಮೆರಿಕದ ನಡೆಗೆ ತೀವ್ರ ಆಕ್ರೋಶ ವ್ಯಕ್ತಿಪಡಿಸಿರುವ ರಷ್ಯಾ, ಇದೊಂದು 'ಹಗಲು ದರೋಡೆ' ಎಂದಿದೆ. ರಷ್ಯಾ ಧ್ವಜವನ್ನು ಹೊತ್ತ ಹಡಗನ್ನು ಅಮೆರಿಕ ವಶಪಡಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘನೆ ಮಾಡಿದೆ ಎಂದು ರಷ್ಯಾದ ಸಾರಿಗೆ ಸಚಿವಾಲಯ ಕಿಡಿಕಾರಿದೆ.