Sheikh Hasina: ಶೇಖ್ ಹಸೀನಾ ವಿರುದ್ಧದ ತೀರ್ಪಿಗೂ ಮುನ್ನ ಬಾಂಗ್ಲಾದಲ್ಲಿ ಭಾರೀ ಕಟ್ಟೆಚ್ಚರ
Verdict against Sheikh Hasina: ಪದಚ್ಯುತ ಪ್ರಧಾನಮಂತ್ರಿ ಶೇಖ್ ಹಸೀನಾ ವಿರುದ್ಧದ ತೀರ್ಪು ಹೊರಬರುವ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಭಾರಿ ಕಟ್ಟೆಚ್ಚರ ಜಾರಿಗೆ ತರಲಾಗಿದೆ. ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಸುರಕ್ಷತಾ ಪಡೆಯನ್ನು ಹೈ ಅಲರ್ಟ್‌ನಲ್ಲಿರಿಸಲಾಗಿದೆ.
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ(ಸಂಗ್ರಹ ಚಿತ್ರ) -
ಢಾಕಾ: ಬಾಂಗ್ಲಾದೇಶವು (Bangladesh) ಪದಚ್ಯುತ ಪ್ರಧಾನಮಂತ್ರಿ ಶೇಖ್ ಹಸೀನಾ (Sheikh Hasina) ಅವರ ವಿರುದ್ಧವಿರುವ ಹಲವು ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯು ಸೋಮವಾರ ತೀರ್ಪು ನೀಡಲಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಢಾಕಾ ಮತ್ತು ಇತರ ಹಲವಾರು ಪ್ರದೇಶಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ–ಬಾಂಗ್ಲಾದೇಶ (ICT-BD) ತನ್ನ ತೀರ್ಪು ಪ್ರಕಟಿಸಲು ಸನ್ನದ್ಧವಾಗಿರುವ ಸಂದರ್ಭದಲ್ಲಿ, ವಿಸರ್ಜಿತ ಅವಾಮಿ ಲೀಗ್ ಎರಡು ದಿನಗಳ ಬಂದ್‌ಗೆ ಕರೆ ನೀಡಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಮಿಲಿಟರಿ, ಅರೆಸೈನ್ಯ ಪಡೆಗಳು ಮತ್ತು ಪೊಲೀಸರು ಸೇರಿದಂತೆ ಭದ್ರತಾ ಪಡೆಗಳನ್ನು ಕಟ್ಟೆಚ್ಚರದಲ್ಲಿ ಇರಿಸಲಾಯಿತು.
ಭಾನುವಾರ ರಾತ್ರಿ, ಗುಂಪೊಂದು ಪೊಲೀಸ್ ಠಾಣೆ ಸಂಕೀರ್ಣದ ವಾಹನ ತ್ಯಾಜ್ಯ ವಿಭಾಗಕ್ಕೆ ಬೆಂಕಿ ಹಚ್ಚಿದೆ. ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಸಲಹಾ ಮಂಡಳಿ ಸದಸ್ಯ ಪ್ರೊಫೆಸರ್ ಮುಹಮ್ಮದ್ ಯೂನಸ್ ಅವರ ನಿವಾಸದ ಹೊರಗೆ ಎರಡು ಕಚ್ಚಾ ಬಾಂಬ್‌ಗಳನ್ನು ಸ್ಫೋಟಿಸಿವೆ. ರಾಜಧಾನಿಯಾದ್ಯಂತ ಹಲವೆಡೆ ಸ್ಫೋಟಗಳು ವರದಿಯಾಗಿವೆ. ಅಶಾಂತಿ ಹೆಚ್ಚುತ್ತಿದ್ದಂತೆ, ಅಗತ್ಯವಿದ್ದರೆ ಹಿಂಸಾತ್ಮಕ ಗುಂಪುಗಳ ಮೇಲೆ ಗುಂಡು ಹಾರಿಸುವಂತೆ ಢಾಕಾ ಮೆಟ್ರೋಪಾಲಿಟನ್ ಪೊಲೀಸರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದನ್ನೂ ಓದಿ: Bomb threat: ಎಂ.ಕೆ. ಸ್ಟಾಲಿನ್, ನಟರಾದ ಅಜಿತ್, ಅರವಿಂದ್ ಸ್ವಾಮಿ ಮತ್ತು ಖುಷ್ಬುಗೆ ಬಾಂಬ್ ಬೆದರಿಕೆ
ನವೆಂಬರ್ 10 ರಿಂದ, ಢಾಕಾವು ರಹಸ್ಯ ದಾಳಿಗಳಿಗೆ ತುತ್ತಾಗಿದೆ. ಇದರಲ್ಲಿ ಯೂನಸ್ ಸ್ಥಾಪಿಸಿದ ಸಂಸ್ಥೆಯಾದ ಗ್ರಾಮೀಣ ಬ್ಯಾಂಕಿನ ಮಿರ್ಪುರ್ ಪ್ರಧಾನ ಕಚೇರಿಯ ಪ್ರವೇಶದ್ವಾರದಲ್ಲಿ ಕಚ್ಚಾ ಬಾಂಬ್ ಸ್ಫೋಟಗಳು ಸೇರಿವೆ. ಬ್ಯಾಂಕಿನ ಹಲವಾರು ಶಾಖೆಗಳ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮತ್ತು ಬೆಂಕಿ ಹಚ್ಚಲಾಗಿದೆ. ಕಳೆದ ವಾರದಲ್ಲಿ, ದಾಳಿಕೋರರು ಹಲವಾರು ನಿಲ್ಲಿಸಿದ್ದ ಬಸ್‌ಗಳನ್ನು ಸುಟ್ಟುಹಾಕಿದ್ದಾರೆ. ವಾಹನದೊಳಗೆ ನಿದ್ರಿಸುತ್ತಿದ್ದ ಚಾಲಕ ಘಟನೆಯಲ್ಲಿ ಸುಟ್ಟುಕರಕಲಾಗಿದ್ದಾನೆ.
ಪ್ರಸ್ತುತ ಭಾರತದಲ್ಲಿರುವ ಹಸೀನಾ ಮತ್ತು ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಲ್ ಅವರ ಗೈರುಹಾಜರಿಯಲ್ಲಿ ವಿಚಾರಣೆ ನಡೆಯುತ್ತಿದೆ. ಹಸೀನಾಗೆ ಸಾಧ್ಯವಾದಷ್ಟು ಹೆಚ್ಚಿನ ಶಿಕ್ಷೆ ವಿಧಿಸಬೇಕೆಂದು ನಾವು ಕೋರಿದ್ದೇವೆ. ಕಳೆದ ವರ್ಷದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಹುತಾತ್ಮರಾದ ಮತ್ತು ಗಾಯಗೊಂಡ ಸಂತ್ರಸ್ಥ ಕುಟುಂಬಗಳಿಗೆ ವಿತರಿಸಲು ಅಪರಾಧಿಗಳ ಆಸ್ತಿಯನ್ನು ವಶಪಡಿಸಿಕೊಳ್ಳುವಂತೆಯೂ ನಾವು ವಿನಂತಿಸಿದ್ದೇವೆ ಎಂದು ಐಸಿಟಿ-ಬಿಡಿ ಪ್ರಾಸಿಕ್ಯೂಟರ್ ಗಾಜಿ ಎಂಎಚ್ ತಮೀಮ್ ಭಾನುವಾರ ಹೇಳಿದ್ದಾರೆ.
ಐಸಿಟಿ-ಬಿಡಿ ಕಾನೂನಿನಡಿಯಲ್ಲಿ, ತೀರ್ಪಿನ 30 ದಿನಗಳ ಒಳಗೆ ಶರಣಾಗದ ಹೊರತು ಅಥವಾ ಬಂಧಿಸದ ಹೊರತು ಹಸೀನಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಯಾವುದೇ ಅಶಾಂತಿ ಉಂಟಾಗದಂತೆ ಅಧಿಕಾರಿಗಳು ದೇಶಾದ್ಯಂತ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.
ಇದನ್ನೂ ಓದಿ: Sheikh Hasina: ಶೇಖ್ ಹಸೀನಾ ವಿರುದ್ಧ ಇಂಟರ್‌ಪೋಲ್ ಮೆಟ್ಟಿಲೇರಿದ ಬಾಂಗ್ಲಾದೇಶ
ಹಸೀನಾ ಮತ್ತು ಹಲವಾರು ಅವಾಮಿ ಲೀಗ್ ನಾಯಕರು ಕೊಲೆ, ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ. ಸೋಮವಾರದ ತೀರ್ಪು ಕಳೆದ ವರ್ಷದ ಜುಲೈ ದಂಗೆಗೆ ಸಂಬಂಧಿಸಿದ ಮಾನವೀಯತೆಯ ವಿರುದ್ಧದ ಐದು ಅಪರಾಧಗಳನ್ನು ಒಳಗೊಂಡಿದೆ.
ಈ ಆರೋಪಗಳಲ್ಲಿ ಹತ್ಯೆ, ಕೊಲೆ ಯತ್ನಗಳು, ಚಿತ್ರಹಿಂಸೆ, ನಿರಾಯುಧ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಮಾರಣಾಂತಿಕ ದಾಳಿ ಸೇರಿದಂತೆ ಹಲವು ಆರೋಪಗಳು ಮಾಜಿ ಪ್ರಧಾನಿ ಶೇಖ್ ಹಸೀನಾ, ಮಾಜಿ ಗೃಹ ಸಚಿವ ಅಸಾದುಜ್ಜಾಮಾನ್ ಖಾನ್ ಕಮಲ್ ಹಾಗೂ ಮಾಜಿ ಐಜಿಪಿ ಚೌಧರಿ ಅಬ್ದುಲ್ಲಾ ಅಲ್-ಮುಮುನ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆದರೆ, ಈ ಆರೋಪಗಳನ್ನು ಹಸೀನಾ ಅವರು ನಿರಂತರವಾಗಿ ನಿರಾಕರಿಸಿದ್ದಾರೆ. ಈ ಸಂಬಂಧ 54 ಸಾಕ್ಷ್ಯಗಳನ್ನು ಪರಿಶೀಲಿಸಿರು ನ್ಯಾಯಮಂಡಳಿ ಸೋಮವಾರ ತೀರ್ಪು ಪ್ರಕಟಿಸಲಿದೆ.