ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಾಸ್ ಏಂಜಲೀಸ್‌ನಲ್ಲಿ 5.0 ತೀವ್ರತೆಯ ಭೂಕಂಪ: ವಿಮಾನ ನಿಲ್ದಾಣಕ್ಕೆ ಹಾನಿ, ತೈಲ ಸಂಸ್ಕರಣಾಗಾರದಲ್ಲಿ ದಟ್ಟ ಹೊಗೆ

ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ 5.0 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (LAX) ಭಾಗಶಃ ಹಾನಿಯಾಗಿದ್ದು, ಸಮೀಪದ ತೈಲ ಸಂಸ್ಕರಣಾಗಾರದಲ್ಲಿ ಭಾರಿ ಬೆಂಕಿ ಮತ್ತು ದಟ್ಟ ಹೊಗೆ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಲಾಸ್ ಏಂಜಲೀಸ್‌ನಲ್ಲಿ 5.0 ತೀವ್ರತೆಯ ಭೂಕಂಪ: ವಿಮಾನ ನಿಲ್ದಾಣಕ್ಕೆ ಹಾನಿ

ಲಾಸ್ ಏಂಜಲೀಸ್‌ನಲ್ಲಿ 5.0 ತೀವ್ರತೆಯ ಭೂಕಂಪ -

Vishakha Bhat Heggar
Vishakha Bhat Heggar Nov 29, 2026 10:47 AM

ವಾಷಿಂಗ್ಟನ್‌: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ 5.0 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ (Los Angeles Earthquake) ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (LAX) ಭಾಗಶಃ ಹಾನಿಯಾಗಿದ್ದು, ಸಮೀಪದ ತೈಲ ಸಂಸ್ಕರಣಾಗಾರದಲ್ಲಿ ಭಾರಿ ಬೆಂಕಿ ಮತ್ತು ದಟ್ಟ ಹೊಗೆ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಭೂಕಂಪನದ ಕೆಲ ವಿಡಿಯೋಗಳು ವೈರಲ್‌ ಆಗುತ್ತಿವೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಮಾಹಿತಿಯ ಪ್ರಕಾರ, ಸ್ಥಳೀಯ ಕಾಲಮಾನ ಬೆಳಿಗ್ಗೆ ಸುಮಾರು 9:30ರ ವೇಳೆಗೆ ಲಾಸ್ ಏಂಜಲೀಸ್‌ನ ನೈಋತ್ಯಕ್ಕಿರುವ ಮ್ಯಾನ್‌ಹ್ಯಾಟನ್ ಬೀಚ್ ಕರಾವಳಿಯ ಸಮೀಪ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ. ಮೊದಲ ಭೂಕಂಪದ ಬೆನ್ನಲ್ಲೇ 4.6 ತೀವ್ರತೆಯ ಕಂಪನವೂ ಸೇರಿದಂತೆ 40ಕ್ಕೂ ಹೆಚ್ಚು ನಂತರದ ಕಂಪನಗಳು ಸಂಭವಿಸಿದ್ದು, ಕಟ್ಟಡಗಳು ನಡುಗಿ ಕಾರುಗಳ ಅಲಾರಂಗಳು ಮೊಳಗಿವೆ. 2014ರ ನಂತರ ಈ ಭಾಗದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪ ಇದಾಗಿದೆ.

ವಿಡಿಯೋ ನೋಡಿ



ವಿಮಾನ ನಿಲ್ದಾಣದಲ್ಲಿ ಹಾನಿ, ಲ್ಯಾಂಡಿಂಗ್ ರದ್ದು

ಭೂಕಂಪದ ತೀವ್ರತೆಗೆ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದ ಟರ್ಮಿನಲ್-7ರ ಕಿಟಕಿ ಗಾಜುಗಳು ಒಡೆದು ಪುಡಿಯಾಗಿವೆ. ಅಲ್ಲದೆ, ಮೇಲ್ಛಾವಣಿಯ ಟೈಲ್ಸ್‌ಗಳು ಕಳಚಿ ಬಿದ್ದಿದ್ದು, ನೀರಿನ ಪೈಪ್ ಒಡೆದು ಹಾನಿಯಾಗಿದೆ. ರನ್‌ವೇ ಸುರಕ್ಷತೆಯನ್ನು ಪರಿಶೀಲಿಸುವ ಸಲುವಾಗಿ, ಲ್ಯಾಂಡಿಂಗ್‌ಗೆ ಸಿದ್ಧವಾಗಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನವೊಂದಕ್ಕೆ ತಕ್ಷಣವೇ ಲ್ಯಾಂಡಿಂಗ್ ರದ್ದುಗೊಳಿಸಲಾಗಿದೆ. ತಪಾಸಣೆಯ ಬಳಿಕ ವಿಮಾನ ಸಂಚಾರವನ್ನು ಪುನರಾರಂಭಿಸಲಾಗಿದೆ ಎಂದು ಮೇಯರ್ ಕರೆನ್ ಬಾಸ್ ತಿಳಿಸಿದ್ದಾರೆ.

Earthquake: ರಷ್ಯಾದಲ್ಲಿ 7.8 ರಿಕ್ಟರ್‌ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ, ಪಾಕ್‌ನಲ್ಲೂ ಭೂಕಂಪ

ಭೂಕಂಪ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದ ಸಮೀಪವಿರುವ ಚೆವ್ರಾನ್ ಎಲ್ ಸೆಗುಂಡೊ ತೈಲ ಸಂಸ್ಕರಣಾಗಾರದಿಂದ ಭಾರಿ ಜ್ವಾಲೆ ಮತ್ತು ಕಪ್ಪು ಹೊಗೆ ಆಕಾಶದೆತ್ತರಕ್ಕೆ ಚಿಮ್ಮಿದ್ದು ಪ್ರಯಾಣಿಕರು ಹಾಗೂ ಸ್ಥಳೀಯರಲ್ಲಿ ಭೀತಿ ಮೂಡಿಸಿತ್ತು. ಆದರೆ, ಭೂಕಂಪದ ಹಿನ್ನೆಲೆಯಲ್ಲಿ ಘಟಕದ ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆ ಸಕ್ರಿಯಗೊಂಡು ಹೆಚ್ಚುವರಿ ಅನಿಲವನ್ನು ಸುರಕ್ಷಿತವಾಗಿ ಸುಡುವ ಪ್ರಕ್ರಿಯೆ ನಡೆದಿದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ಹಾಗೂ ಸಂಸ್ಥೆ ಸ್ಪಷ್ಟಪಡಿಸಿದೆ. ಘಟನೆಯ ಬೆನ್ನಲ್ಲೇ ಲಾಸ್ ಏಂಜಲೀಸ್ ಅಗ್ನಿಶಾಮಕ ದಳವು 106 ಅಗ್ನಿಶಾಮಕ ಠಾಣೆಗಳ ಸಿಬ್ಬಂದಿಯನ್ನು ನಿಯೋಜಿಸಿ ನಗರದ ಪ್ರಮುಖ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.