ಇರಾನ್‌ನ ಖಾರ್ಗ್ ದ್ವೀಪದಲ್ಲಿ ಅಮೆರಿಕ ಮಿಲಿಟರಿ ನಿಯೋಜನೆ? ಮಧ್ಯಪ್ರಾಚ್ಯದಲ್ಲಿ ಏನಾಗ್ತಿದೆ?
Iran’s Kharg Island: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಇರಾನ್‌ನ ಖಾರ್ಗ್ ದ್ವೀಪಕ್ಕೆ ಅಮೆರಿಕದ ಸೈನ್ಯವನ್ನು ನಿಯೋಜಿಸಿರುವ ಬಗ್ಗೆ ಅಮೆರಿಕ ತನ್ನ ಯೋಜನೆಯನ್ನು ತಿಳಿಸಿದೆ. ಎಲ್ಲಾ ಆಯ್ಕೆಗಳು ಮೇಜಿನ ಮುಂದಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ. ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ಬೆಸೆಂಟ್ ಅವರು ಈ ಹೇಳಿಕೆ ನೀಡಿದ್ದಾರೆ.
ಸ್ಕಾಟ್ ಬೆಸೆಂಟ್ (ಸಂಗ್ರಹ ಚಿತ್ರ) -
ವಾಷಿಂಗ್ಟನ್, ಮಾ. 23: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ (Middle east crisis) ನಡುವೆ, ಇರಾನ್‌ನ ಖಾರ್ಗ್ ದ್ವೀಪದಲ್ಲಿ ಅಮೆರಿಕದ ಪಡೆಗಳನ್ನು (US Military) ನಿಯೋಜಿಸುವ ಸಾಧ್ಯತೆ ಇದೆ. ಈ ಬಗೆಗಿನ ಎಲ್ಲ ಆಯ್ಕೆ ಮೇಜಿನ ಮುಂದಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ. ಫೆಬ್ರವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯಿಂದ ಆರಂಭವಾದ ಯುದ್ಧವು ದಿನೇ ದಿನೆ ಹೆಚ್ಚುತ್ತಿದೆ. ಇದರ ಮಧ್ಯೆ ಬೆಸೆಂಟ್ ಈ ಹೇಳಿಕೆ ನೀಡಿದ್ದಾರೆ. ಅವರು ಯಾವುದೇ ನಿರ್ಧಾರವನ್ನು ದೃಢಪಡಿಸಲಿಲ್ಲ. ಆದರೆ ದ್ವೀಪದಲ್ಲಿ ಮಿಲಿಟರಿ ನಿಯೋಜನೆಯು ಪರಿಗಣನೆಯಲ್ಲಿದೆ ಎಂದು ಹೇಳಿದರು.
ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ 48 ಗಂಟೆಗಳ ಅಂತಿಮ ಗಡುವನ್ನು ಘೋಷಿಸಿದ್ದರು. ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವಂತೆ ಬೆದರಿಕೆ ಹಾಕಿದ್ದರು. ಒಂದು ವೇಳೆ ಜಲಸಂಧಿ ತೆರೆಯದಿದ್ದರೆ ಟೆಹರಾನ್‌ನ ವಿದ್ಯುತ್ ಸ್ಥಾವರಗಳನ್ನು ನಾಶಮಾಡುವುದಾಗಿ ಬೆದರಿಕೆ ಹಾಕಿದ್ದರು.
ಹಾರ್ಮೊಜ್ ಜಲಸಂಧಿ ದಾಟಲು 18.8 ಕೋಟಿ ರೂ. ಶುಲ್ಕ ವಿಧಿಸಿದ ಇರಾನ್; ತೈಲ ಮಾರುಕಟ್ಟೆ ಕತೆಯೇನು?
ಪರ್ಷಿಯನ್ ಕೊಲ್ಲಿಯಲ್ಲಿರುವ ಖಾರ್ಗ್ ದ್ವೀಪವು ಇರಾನ್‌ನ ಪ್ರಾಥಮಿಕ ತೈಲ ರಫ್ತು ಕೇಂದ್ರವಾಗಿದ್ದು, ದೇಶದ ಕಚ್ಚಾ ಸಾಗಣೆಯ ಗಮನಾರ್ಹ ಪಾಲನ್ನು ನಿರ್ವಹಿಸುತ್ತದೆ. ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಟೆಹರಾನ್ ಮೇಲೆ ಒತ್ತಡ ಹೇರುವುದಕ್ಕಾಗಿ ಅಮೆರಿಕವು ಇರಾನ್‌ನ ಪ್ರಮುಖ ಖಾರ್ಗ್ ದ್ವೀಪವನ್ನು ಆಕ್ರಮಿಸಲು ಅಥವಾ ದಿಗ್ಬಂಧನಗೊಳಿಸಲು ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಲಾಗಿದೆ.
ನೆಲದ ಮೇಲೆ ಸೈನಿಕರನ್ನು ನಿಯೋಜಿಸುವ ಬಗ್ಗೆ ಒಲವು ತೋರುತ್ತಿಲ್ಲ ಎಂದು ಟ್ರಂಪ್ ಈ ಹಿಂದೆ ಹೇಳಿಕೊಂಡಿದ್ದರೂ, ವಾಷಿಂಗ್ಟನ್ ಖಾರ್ಗ್ ದ್ವೀಪವನ್ನು ಆಕ್ರಮಿಸಿಕೊಳ್ಳುವ ಅಥವಾ ದಿಗ್ಬಂಧನ ಮಾಡುವ ಯೋಜನೆಗಳ ಬಗ್ಗೆ ಯೋಚಿಸುತ್ತಿದೆ ಎಂದು ಹೇಳಲಾಗಿದೆ. ಆದರೀಗ ಬೆಸೆಂಟ್ ಅವರ ಹೇಳಿಕೆಯು ಅಮೆರಿಕದ ನಿಲುವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ದ್ವೀಪದಲ್ಲಿನ ಮಿಲಿಟರಿ ಉಪಕರಣಗಳು ನಾಶವಾಗಿವೆ. ಅಮೆರಿಕ ಅಂತಿಮವಾಗಿ ಅದರ ಮೇಲೆ ಹಿಡಿತ ಸಾಧಿಸುತ್ತದೆಯೇ ಎಂದು ಕಾದು ನೋಡಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಟ್ರಂಪ್ ಅವರ 48 ಗಂಟೆಗಳ ಅಂತಿಮ ಗಡುವನ್ನು ಬೆಸೆಂಟ್ ಬೆಂಬಲಿಸಿದರು. ಇರಾನ್ ಈ ರೀತಿಯ ಸಂವಹನಕ್ಕೆ ಮಾತ್ರ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದರು.
ಖಾರ್ಗ್ ದ್ವೀಪವು ಕೊಲ್ಲಿಯ ಉತ್ತರ ತುದಿಯಲ್ಲಿರುವ ಇರಾನಿನ ನಗರ ಬುಶೆಹರ್‌ನಿಂದ 16 ಮೈಲಿಗಳು (25 ಕಿ.ಮೀ.) ದೂರದಲ್ಲಿದೆ. ಇದು ಕೇವಲ 8 ಚದರ ಮೈಲಿ (20 ಚದರ ಕಿ.ಮೀ.) ಗಾತ್ರದಲ್ಲಿದೆ. ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವ ಯಾವುದೇ ಪ್ರಯತ್ನವು ಗಮನಾರ್ಹ ಅಪಾಯಗಳನ್ನು ಎದುರಿಸುವ ಸಾಧ್ಯತೆಯಿದೆ. ಯಾಕೆಂದರೆ ಅಮೆರಿಕನ್ ಪಡೆಗಳು ಸಣ್ಣ ಪ್ರದೇಶದಲ್ಲಿ ಇರಾನಿನ ರಾಕೆಟ್ ಮತ್ತು ಡ್ರೋನ್ ದಾಳಿಗೆ ಗುರಿಯಾಗಿಸಬಹುದು. ಆದರೆ, ಟ್ರಂಪ್ ಮಾತ್ರ ಸೈನ್ಯವನ್ನು ಕಳುಹಿಸುವ ಯೋಜನೆ ಹೊಂದಿಲ್ಲ ಎಂದು ಹೇಳಿದ್ದಾರೆ.