ಹಾರ್ಮೊಜ್ ಜಲಸಂಧಿ ದಾಟಲು 18.8 ಕೋಟಿ ರೂ. ಶುಲ್ಕ ವಿಧಿಸಿದ ಇರಾನ್; ತೈಲ ಮಾರುಕಟ್ಟೆ ಕತೆಯೇನು?
Hormuz: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಇರಾನ್ ಇದೀಗ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹಾರ್ಮೊಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಸುಂಕ ಅಥವಾ ಸಾರಿಗೆ ಶುಲ್ಕ ವಿಧಿಸಲು ಇರಾನ್ ಮುಂದಾಗಿದೆ ಎಂದು ತಿಳಿದು ಬಂದಿದೆ.
ಸಂಗ್ರಹ ಚಿತ್ರ -
ಟೆಹ್ರಾನ್: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ (Israel-Iran War) ಇರಾನ್ ಇದೀಗ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹಾರ್ಮೊಜ್ ಜಲಸಂಧಿಯ (Hormuz) ಮೂಲಕ ಹಾದುಹೋಗುವ ಹಡಗುಗಳ ಮೇಲೆ ಸುಂಕ ಅಥವಾ ಸಾರಿಗೆ ಶುಲ್ಕ ವಿಧಿಸಲು ಇರಾನ್ ಮುಂದಾಗಿದೆ. ಜಲಸಂಧಿಯ ಮೂಲಕ ಹಾದುಹೋಗಲು ಕೆಲವು ಹಡಗುಗಳಿಗೆ 2 ಮಿಲಿಯನ್ ಡಾಲರ್ (ಸುಮಾರು ರೂ. 18.8 ಕೋಟಿ) ಶುಲ್ಕ ವಿಧಿಸಲು ಇರಾನ್ ನಿರ್ಧರಿಸಿದೆ. ನಿರ್ಣಾಯಕ ಜಲಮಾರ್ಗವನ್ನು ನಿಯಂತ್ರಿಸುವ ಹೊಸ ವಿಧಾನವನ್ನು ಗುರುತಿಸುವ ಮೂಲಕ ಭಾರಿ ಪ್ರಮಾಣದ ಸುಂಕವನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಸದಸ್ಯರಾಗಿರುವ ಇರಾನಿನ ಶಾಸಕ ಅಲಾಯೆದ್ದೀನ್ ಬೊರೊಜೆರ್ಡಿ ರಾಜ್ಯ ಪ್ರಸಾರಕ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ (ಐಆರ್‌ಐಬಿ) ಗೆ ತಿಳಿಸಿದ್ದಾರೆ.
ಹಾರ್ಮೊಜ್ ಜಲಸಂಧಿಯ ಮೂಲಕ ಜಾಗತಿಕ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಸರಿಸುಮಾರು ಶೇ.20 ಇದರ ಮೂಲಕ ಹಾದುಹೋಗುತ್ತದೆ. ಆದ್ದರಿಂದ ಈ ಪ್ರದೇಶದಲ್ಲಿನ ಯಾವುದೇ ಬದಲಾವಣೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಯುದ್ಧಕ್ಕೆ ವೆಚ್ಚಗಳು ಇರುವುದರಿಂದ, ಸ್ವಾಭಾವಿಕವಾಗಿ ನಾವು ಇದನ್ನು ಮಾಡಬೇಕು ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಂದ ಸಾರಿಗೆ ಶುಲ್ಕವನ್ನು ತೆಗೆದುಕೊಳ್ಳಬೇಕು ಎಂದು ಇರಾನ್ ಸಚಿವಾಲಯ ತಿಳಿಸಿದೆ.
ಟ್ರಂಪ್ ಬೆದರಿಕೆ
48 ಗಂಟೆಗಳ ಒಳಗೆ ಜಲಸಂಧಿಯನ್ನು ಮತ್ತೆ ತೆರೆಯದಿದ್ದರೆ, ಅಮೆರಿಕವು ಇರಾನ್‌ನ ವಿದ್ಯುತ್ ಮೂಲಸೌಕರ್ಯವನ್ನು ಗುರಿಯಾಗಿಸಬಹುದು ಎಂದು ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಇರಾನ್ ಈ ನಿರ್ಧಾರವನ್ನು ಕೈಗೊಂಡಿದೆ. ಇರಾನ್ ಜಲಸಂಧಿಯನ್ನು ತೆರೆಯದಿದ್ದರೆ, ಅಮೆರಿಕವು ಅದರ "ವಿವಿಧ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುತ್ತದೆ , ಮೊದಲು ಅತಿದೊಡ್ಡದರೊಂದಿಗೆ ಪ್ರಾರಂಭಿಸುತ್ತದೆ" ಎಂದು ಟ್ರಂಪ್ ಬೆದರಿಕೆ ಹಾಕಿದ್ದರು.
ಹಾರ್ಮೊಜ್ ಮುಚ್ಚಿದರೆ ಪರಿಣಾಮ ಏನು?
ದಕ್ಷಿಣ ಏಷ್ಯಾ ಸೇರಿದಂತೆ ಹಲವಾರು ರಾಷ್ಟ್ರಗಳಿಗೆ ತೈಲ ಸರಬರಾಜು ಆಗುವ ಹೊರ್ಮುಝ್ ಜಲಸಂಧಿ 33 ಕಿಮೀ ಅಗಲವಿದೆ. ಎರಡು ದೊಡ್ಡ ಭೂಖಂಡಗಳನ್ನು ಪ್ರತ್ಯೇಕಿಸುವ ಕಿರಿದಾದ ಜಲಮಾರ್ಗವನ್ನು ಜಲಸಂಧಿ ಎಂದು ಕರೆಯಲಾಗುತ್ತದೆ. ಇರಾನ್ ಈ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಪ್ರತಿದಿನ ಸುಮಾರು 2 ಕೋಟಿ ಬ್ಯಾರೆಲ್ ತೈಲ ಈ ಮಾರ್ಗದ ಮೂಲಕ ಸಾಗುತ್ತದೆ. ವಿಶ್ವದ ಒಟ್ಟು ಎಲ್‌ಎನ್‌ಜಿ ಪೂರೈಕೆಯ ಶೇ. 20ರಷ್ಟು ಭಾಗ ಇಲ್ಲಿಂದಲೇ ಸಾಗುತ್ತದೆ. ಇಲ್ಲಿಂದ ರಫ್ತಾಗುವ ಶೇ. 84ರಷ್ಟು ತೈಲ ಏಷ್ಯಾದ ಮಾರುಕಟ್ಟೆಗಳಿಗೆ ಹೋಗುತ್ತದೆ. ಇದೀಗ ಇರಾನ್ ಶುಲ್ಕದಿಂದಾಗಿ ತೈಲ ಮಾರುಕಟ್ಟೆಯಲ್ಲಿ ಏರಿಳಿತ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.