ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಮೆರಿಕದಲ್ಲಿ ಭಾರಿ ಹಿಮಪಾತ; ಸಾವಿನ ಸಂಖ್ಯೆ 30ಕ್ಕೆ ಏರಿಕೆ: ಕಡು ಚಳಿಗೆ ದೇಶವೇ ತತ್ತರ

ಅಮೆರಿಕದಲ್ಲಿ ಅಪರೂಪದ ಭೀಕರ ಹಿಮಪಾತ ಮತ್ತು ಕಡು ಚಳಿ ಮುಂದುವರಿದಿದ್ದು, ಹಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ವಿದ್ಯುತ್ ವ್ಯತ್ಯಯದಿಂದ ಲಕ್ಷಾಂತರ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಹಿಮ ಬಿರುಗಾಳಿ ಕಾರಣ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಭಾರಿ ಹಿಮಪಾತದಿಂದ ತತ್ತರಿಸಿದ ಅಮೆರಿಕ

ಹಿಮಪಾತ -

Profile
Sushmitha Jain Jan 27, 2026 3:11 PM

ವಾಷಿಂಗ್ಟನ್, ಜ. 27: ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಹಿಂದೆಂದೂ ಕಂಡು ಕೇಳರಿಯಂತಹ ಹಿಮಪಾತ (Snowstorm) ಆಗುತ್ತಿದ್ದು, ಕಡು ಚಳಿಯ ಅಬ್ಬರ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ತಾಪಮಾನದಲ್ಲಿ ತೀವ್ರ ಕುಸಿತವಾಗಿರುವುದರಿಂದ ಲಕ್ಷಾಂತರ ಮಂದಿ ವಿದ್ಯುತ್ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಿಮ ಬಿರುಗಾಳಿ ಮತ್ತು ತೀವ್ರ ಶೀತದ ಪರಿಣಾಮವಾಗಿ ಈವರೆಗೂ 30ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕವಿದೆ. ಅಮೆರಿಕದ ಸುಮಾರು ಮೂರನೇ ಎರಡು ಭಾಗ ಪ್ರದೇಶಗಳು ಈಗಾಗಲೇ ಈ ಹಿಮ ಚಂಡಮಾರುತದ ಪ್ರಭಾವಕ್ಕೆ ಒಳಗಾಗಿವೆ.

ಅಮೆರಿಕದಲ್ಲಿ ತೀವ್ರ ಹಿಮಪಾತ

ನ್ಯೂ ಇಂಗ್ಲೆಂಡ್ ಸೇರಿದಂತೆ ಪೂರ್ವ ಅಮೆರಿಕದ ಭಾಗಗಳಲ್ಲಿ ಭಾರೀ ಹಿಮಪಾತದಿಂದ ಚಳಿಗಾಲದ ಬಿರುಗಾಳಿ ಆವರಿಸಿದೆ. ಪ್ರಸ್ತುತ ಉಂಟಾಗಿರುವ ಭೀಕರ ಹಿಮ ಬಿರುಗಾಳಿಯಿಂದ ಅಮೆರಿಕದಲ್ಲಿ ಭಾರಿ ಅನಾಹುತ ಸಂಭವಿಸಿದೆ. ಇದರೊಂದಿಗೆ ಜೀವಹಾನಿಯ ಪ್ರಮಾಣವೂ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಸುತ್ತಿರುವ ಕಡು ಚಳಿ ಮತ್ತು ಹಿಮ ಬಿರುಗಾಳಿಯಿಂದ ದೇಶವೇ ತತ್ತರಿಸಿದೆ. ದೊಡ್ಡ ದೊಡ್ಡ ರಾಜ್ಯಗಳಲ್ಲೂ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಜನರು ಹೊರಗೆ ಹೋಗುವುದು ಅಸಾಧ್ಯವಾಗಿರುವುದಷ್ಟೇ ಅಲ್ಲ, ಮನೆಯೊಳಗೇ ಉಳಿದುಕೊಳ್ಳುವುದೂ ಕಷ್ಟವಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಅಮೆರಿಕದಲ್ಲಿನ ಭೀಕರ ಪರಿಸ್ಥಿತಿ:



ತೀವ್ರವಾಗಿ ಹಿಮ ಮತ್ತು ಗಾಳಿಯ ಅಬ್ಬರ ಮುಂದುವರಿದಿರುವುದರಿಂದ ಜನರು ಸುರಕ್ಷತೆಗಾಗಿ ಹೋರಾಡುವ ಸ್ಥಿತಿಗೆ ತಲುಪಿದ್ದಾರೆ. ಈ ಸಂಕಷ್ಟದ ನಡುವೆಯೂ ಸರ್ಕಾರ ಹಲವು ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡಿದ್ದರೂ, ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗದೆ ಆತಂಕ ಹೆಚ್ಚುತ್ತಿದೆ.

ಗಣರಾಜ್ಯೋತ್ಸವದ ಶುಭ ಹಾರೈಸಿ, ಭಾರತ- ಅಮೆರಿಕ ಸಂಬಂಧಗಳಿಗೆ ಅಭಿನಂದನೆ ಸಲ್ಲಿಸಿದ ಡೊನಾಲ್ಡ್ ಟ್ರಂಪ್

ವಿಮಾನ ಸಂಚಾರಕ್ಕೆ ಭಾರಿ ಅಡ್ಡಿ

ಈ ಹಿಮಪಾತದಿಂದ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ವಿಶೇಷವಾಗಿ ವಾಯು ಸಂಚಾರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಭಾನುವಾರ (ಜನವರಿ 25) ಒಂದೇ ದಿನ ಅಮೆರಿಕದಲ್ಲಿ ಸುಮಾರು 12,000 ವಿಮಾನಗಳು ರದ್ದಾಗಿದ್ದು, 20,000ಕ್ಕೂ ಹೆಚ್ಚು ಸೇವೆಗಳು ವಿಳಂಬಗೊಂಡಿವೆ. 1,300 ಮೈಲಿ ವ್ಯಾಪ್ತಿಯಲ್ಲಿ ಹಿಮಪಾತದ ಅಬ್ಬರ ಮುಂದುವರಿದಿದೆ. ಇಂಗ್ಲೆಂಡ್‌ನಿಂದ ಅಮೆರಿಕದ ಅರ್ಕಾನ್ಸಾಸ್‌ವರೆಗೆ ವ್ಯಾಪಿಸಿರುವ ಈ ಭೀಕರ ಹಿಮ ಬಿರುಗಾಳಿಯಿಂದ ಚಳಿಯ ತೀವ್ರತೆ ಹೆಚ್ಚಾಗಿ ಭಾರಿ ನಷ್ಟ ಉಂಟಾಗಿದೆ. ಚಳಿಗಾಲದ ಬಿರುಗಾಳಿಯ ಪರಿಣಾಮ ಸುಮಾರು 2,100 ಕಿಲೋ ಮೀಟರ್ ಉದ್ದದ ಪ್ರದೇಶದಲ್ಲಿ ಒಂದು ಅಡಿ (30 ಸೆಂ.ಮೀ.)ಗಿಂತ ಹೆಚ್ಚು ಹಿಮ ಸುರಿದಿದೆ ಎಂಬ ವರದಿಯಿದೆ. ಈ ಪರಿಸ್ಥಿತಿಯಿಂದಾಗಿ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಆದೇಶ ಹೊರಡಿಸಲಾಗಿದೆ. ಮುಂದಿನ ಕೆಲ ದಿನಗಳೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದ್ದು, ಅಮೆರಿಕ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇದರ ನಡುವೆಯೇ ನ್ಯೂಯಾರ್ಕ್ ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಣದಷ್ಟು ಭೀಕರ ಹಿಮಪಾತ ದಾಖಲಾಗಿದೆ. ನಗರದಲ್ಲಿ 8ರಿಂದ 15 ಇಂಚು (20ರಿಂದ 38 ಸೆಂ.ಮೀ.)ವರೆಗೆ ಹಿಮ ಸುರಿದಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜನರು ಮನೆಯಿಂದ ಹೊರಗೆ ಬರಲಾರದ ಸ್ಥಿತಿ ನಿರ್ಮಾಣವಾಗಿದ್ದು, ಹಿಮ ಬಿರುಗಾಳಿಯ ಹಿನ್ನೆಲೆಯಲ್ಲಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳಲ್ಲಿ ಭಾಗವಹಿಸಲು ಸೂಚಿಸಲಾಗಿದೆ.