ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

US Gold Card Scheme: ಅಮೆರಿಕದ ಗೋಲ್ಡ್ ಕಾರ್ಡ್ ಯೋಜನೆ ಬಿಗ್‌ ಹಿಟ್‌? ಒಂದೇ ದಿನ 1,000 ಕಾರ್ಡ್ ಮಾರಾಟ?

US Gold Card Scheme: ವಿದೇಶಿ ಶ್ರೀಮಂತ ವಲಸಿಗರನ್ನು ತನ್ನತ್ತ ಸೆಳೆಯಲು ಡೊನಾಲ್ಡ್‌ ಟ್ರಂಪ್‌ ಪರಿಚಯಿಸಿದ 'ಗೋಲ್ಡ್‌ ಕಾರ್ಡ್‌ ಸ್ಕೀಮ್'‌, ಅಮೆರಿಕಕ್ಕೆ ಭಾರೀ ಲಾಭ ತಂದುಕೊಟ್ಟಿದ್ದು, 'ಗೋಲ್ಡ್ ಕಾರ್ಡ್' ಯೋಜನೆ ಯುಸ್ ದೇಶದಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಕೇವಲ ಒಂದೇ ದಿನದಲ್ಲಿ 1,000 'ಗೋಲ್ಡ್ ಕಾರ್ಡ್'ಗಳು ಸೇಲ್ ಆಗಿದ್ದು, ಈ ಕುರಿತು ವಾಣಿಜ್ಯ ಕಾರ್ಯದರ್ಶಿ ಹೌವರ್ಡ್ ಲುಟ್ನಿಕ್ ಮಾಹಿತಿ ನೀಡಿದ್ದಾರೆ.

ಅಮೆರಿಕದಲ್ಲಿ ಒಂದೇ ದಿನದಲ್ಲಿ ಸೇಲ್ ಆಯಿತು 1 ಸಾವಿರ ಗೋಲ್ಡ್‌ ಕಾರ್ಡ್‌!

ಗೋಲ್ಡ್‌ ಕಾರ್ಡ್‌ ಸ್ಕೀಮ್

Profile Sushmitha Jain Mar 26, 2025 10:12 AM

ವಾಷಿಂಗ್ಟನ್: ಅಮೆರಿಕಾದ ಶಾಶ್ವತ ನಿವಾಸ ಮತ್ತು ಐಚ್ಛಿಕ ಪೌರತ್ವದ ಹಕ್ಕು ನೀಡುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ʼಗೋಲ್ಡ್‌ ಕಾರ್ಡ್‌ʼ ಯೋಜನೆ(US Gold Card Scheme) ಯಶಸ್ವಿಯಾಗಿದೆ ಎಂದು ಯುಎಸ್ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ (US Commerce Secretary Howard Lutnick) ಹೇಳಿದ್ದಾರೆ. ಪ್ರತಿ ಕಾರ್ಡ್‌ಗೆ $5 ಮಿಲಿಯನ್ ಪಾವತಿಸಲು ಹಲವರು ಮುಂದೆ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ. ಟ್ರಂಪ್‌ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಗೋಲ್ಡ್‌ ಕಾರ್ಡ್‌(Gold Card) ಅನ್ನು ಕೇವಲ ಒಂದು ದಿನದಲ್ಲಿ ಒಂದು ಸಾವಿರ ಜನ ಖರೀದಿಸಿದ್ದಾರೆ ಎಂದು ಹೋವಾರ್ಡ್‌ ಹೇಳಿದ್ದಾರೆ. ಇನ್ನು ಸುಮಾರು ಎರಡು ವಾರಗಳಲ್ಲಿ ಈ ಯೋಜನೆಯು ಅಧಿಕೃತವಾಗಿ ಜಾರಿಗೆ ಬರಲಿದೆ. ಇದಕ್ಕೆ ಅಗತ್ಯವಿರುವ ತಂತ್ರಾಂಶಗಳನ್ನು ಎಲೋನ್‌ ಮಸ್ಕ್‌ ನಿರ್ಮಿಸುತ್ತಿದ್ದು, ಇನ್ನೆರಡು ವಾರಗಳಲ್ಲಿ ಅದು ಲಭ್ಯವಾಗಲಿದೆ. ಆಶ್ಚರ್ಯ ಎಂದರೆ, ನಾನೇ ನಿನ್ನೆ ಒಂದು ಸಾವಿರ ಗೋಲ್ಡ್‌ ಕಾರ್ಡ್‌ ಮಾರಾಟ ಮಾಡಿದ್ದೇನೆ ಎಂದು ಹೋವಾರ್ಡ್‌ ಪಾಡ್‌ಕಾಸ್ಟ್‌ವೊಂದರಲ್ಲಿ ಹೇಳಿದ್ದಾರೆ.

"ನೀವು ಯುಎಸ್ ಪ್ರಜೆಯಾಗಿದ್ದರೆ, ಜಾಗತಿಕ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಹೊರಗಿನವರು ಜಾಗತಿಕ ತೆರಿಗೆಯನ್ನು ಪಾವತಿಸಲು ಖಂಡಿತವಾಗಿಯೂ ಯುಎಸ್‌ಗೆ ಬರುವುದಿಲ್ಲ. ನೀವು ಈಗ ಗೋಲ್ಡ್ ಕಾರ್ಡ್ ಹೊಂದಿದ್ದರೆ, ತೆರಿಗೆ ಪಾವತಿಸದೆ ಅಮೆರಿಕದ ಶಾಶ್ವತ ನಿವಾಸಿಯಾಗಬಹುದು. ಇದರ ಮೂಲಕ ಜಾಗತಿಕ ತೆರಿಗೆಯನ್ನು ಪಾವತಿಸುವುದನ್ನು ತಪ್ಪಿಸಬಹುದು" ಎಂದು ಅವರು ಹೇಳಿದರು. ಗೋಲ್ಡ್‌ ಕಾರ್ಡ್‌ನ ಪ್ರಯೋಜನ ಕುರಿತು ಮತ್ತಷ್ಟು ವಿವರಿಸಿದ ಅವರು, 5 ಮಿಲಿಯನ್ ಡಾಲರ್ ಪಾವತಿಸುವ ಮೂಲಕ ನೀವು ಅಮೆರಿಕದಲ್ಲಿ ಅನಿರ್ದಿಷ್ಟವಾಗಿ ಮತ್ತು ಅವರು ಬಯಸುವ ಯಾವುದೇ ಸಮಯದಲ್ಲಿ ಇರಲು ಹಕ್ಕು ಪಡೆಯುತ್ತೀರಾ ಎಂದರು.

ಈ ಸುದ್ದಿಯನ್ನು ಓದಿ: USA Horror: ಅಮೆರಿಕದಲ್ಲಿ ಭಾರತೀಯರ ಹತ್ಯೆ; ಮದ್ಯದಂಗಡಿ ತೆರೆದಿಲ್ಲವೆಂದು ಗುಜರಾತ್‌ ಮೂಲದ ತಂದೆ- ಮಗಳ ಕೊಲೆ

“ನಾನು ಅಮೆರಿಕದ ಪ್ರಜೆಯಾಗಿರದಿದ್ದರೆ 6 ಗೋಲ್ಡ್ ಕಾರ್ಡ್‌ಗಳನ್ನು ಖರೀದಿಸುತ್ತಿದ್ದೆ. ಒಂದು ನನಗೆ, ಒಂದು ನನ್ನ ಹೆಂಡತಿಗೆ ಮತ್ತು ನನ್ನ ನಾಲ್ಕು ಮಕ್ಕಳಿಗೆ. ಏಕೆಂದರೆ ಏನಾದರೂ ವಿಪತ್ತು ಸಂಭವಿಸಿದರೆ, ವಿಮಾನ ನಿಲ್ದಾಣಕ್ಕೆ ಹೋಗಿ ಅಮೆರಿಕಕ್ಕೆ ಹಾರುವ ಆಯ್ಕೆ ಮತ್ತು ಹಕ್ಕನ್ನು ನಾನು ಹೊಂದಿರುತ್ತೇನೆ. ಯುಎಸ್ ನನ್ನನ್ನು ನನ್ನ 'ಮನೆಗೆ' ಸ್ವಾಗತಿಸುತ್ತದೆ. ನಾನು ಯಾವುದೇ ಸಮಯದಲ್ಲಿ ವಾಪಸ್‌ ನನ್ನ ಮಾತೃ ರಾಷ್ಟ್ರಕ್ಕೆ ತೆರಳಿ ನನ್ನ ಜೀವನವನ್ನು ಪುನರಾರಂಭಿಸಬಹುದು” ಎಂದು ಅವರು ವಿವರಿಸಿದರು.

ತೆರಿಗೆಗಳ ಬಗ್ಗೆ ಮಾತನಾಡಿದ ಅವರು, ಗೋಲ್ಡ್‌ ಕಾರ್ಡ್‌ ಇದ್ದರೆ ಇಲ್ಲಿ ವ್ಯವಹಾರ ಮಾಡಬಹುದು ಅಥವಾ ಯಾವುದೇ ಕೆಲಸವನ್ನು ಮಾಡಬಹುದು. ವಿದೇಶದಲ್ಲಿ ಗಳಿಸಿದ ಎಲ್ಲಾ ಹಣವು ಇಲ್ಲಿ ತೆರಿಗೆಗೆ ಒಳಪಡುವುದಿಲ್ಲ. ಇಲ್ಲಿ ವಾಸಿಸುವಾಗ ಅಮೆರಿಕದಲ್ಲಿ ಗಳಿಸುವ ಹಣಕ್ಕೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ ಎಂದು ಹೇಳಿದರು.

ವಿಶ್ವದ 37 ಮಿಲಿಯನ್ ಜನರು ಗೋಲ್ಡ್ ಕಾರ್ಡ್ ಖರೀದಿಸಲು ಸಮರ್ಥರಾಗಿದ್ದಾರೆ. ಇವರ ಪೈಕಿ ಕನಿಷ್ಠ ಒಂದು ಮಿಲಿಯನ್‌ ಜನರಿಗೆ ಗೋಲ್ಡ್‌ ಕಾರ್ಡ್‌ ಮಾರಾಟ ಮಾಡಬಹುದು ಎಂದು ಟ್ರಂಪ್‌ ಹೇಳಿದ್ದರು. ಈ ಸರ್ಕಾರಿ ಯೋಜನೆಯಿಂದ ಬೊಕ್ಕಸಕ್ಕೆ ಬರುವ ಹಣವನ್ನು ಅಮೆರಿಕದ ಹಣಕಾಸಿನ ಕೊರತೆ ಅಥವಾ ರಾಷ್ಟ್ರೀಯ ಸಾಲವನ್ನು ಕಡಿಮೆ ಮಾಡಲು ಬಳಸಲಾಗುವುದು ಎಂದು ವರದಿಯಾಗಿದೆ.

ಗೋಲ್ಡ್‌ ಕಾರ್ಡ್‌ಗಳನ್ನು ನೀಡಲು ಯಾವುದೇ ವಾರ್ಷಿಕ ಮಿತಿ ಇರುವುದಿಲ್ಲ ಎಂದು ಯೋಜನೆ ಘೋಷಿಸುವಾಗ ಟ್ರಂಪ್‌ ಹೇಳಿದ್ದರು. ಕೇವಲ ಒಂದು ದಿನದಲ್ಲಿ ಒಂದು ಸಾವಿರ ಗೋಲ್ಡ್‌ ಕಾರ್ಡ್‌ ಮಾರಾಟವಾಗಿದೆ ಎಂದರೆ, ಈ ಮೂಲಕ ಅಮೆರಿಕ ಒಂದು ದಿನದಲ್ಲಿ ಐದು ಬಿಲಿಯನ್‌ ಡಾಲರ್‌ ಹಣ ಗಳಿಸಿದೆ ಎಂದರ್ಥ. ಒಂದು ವೇಳೆ, ಟ್ರಂಪ್‌ನ ಈ ಮಹತ್ವಾಕಾಂಕ್ಷೆ ಯೋಜನೆ ನಿಜಕ್ಕೂ ಯಶಸ್ವಿಯಾದರೆ, ಹಣದ ಹೊಳೆಯೇ ಹರಿಯುವ ಸಾಧ್ಯತೆಯಿದೆ.