ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯೆಮೆನ್‌ನ ತೈಜ್ ಪ್ರಾಂತ್ಯದ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ: 30 ಮಂದಿ ಸಾವು

ಅಂತರ್ಯುದ್ಧದಿಂದ ಜರ್ಜರಿತವಾಗಿರುವ ಯೆಮನ್‌ನಲ್ಲಿ ಮತ್ತೊಂದು ಭೀಕರ ರಕ್ತಪಾತ ನಡೆದಿದೆ. ನೈರುತ್ಯ ಯೆಮನ್‌ನ ತೈಜ್ (Taiz) ಪ್ರಾಂತ್ಯದ ಸಾರ್ವಜನಿಕ ಮಾರುಕಟ್ಟೆಯೊಂದರ ಮೇಲೆ ನಡೆದ ಭೀಕರ ದಾಳಿಯಲ್ಲಿ ಕನಿಷ್ಠ 30 ನಾಗರಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 8ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಯೆಮೆನ್‌ನ ತೈಜ್ ಪ್ರಾಂತ್ಯದ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 7, 2026 9:16 AM

ಸನಾ: ಅಂತರ್ಯುದ್ಧದಿಂದ ಜರ್ಜರಿತವಾಗಿರುವ ಯೆಮನ್‌ನಲ್ಲಿ ಮತ್ತೊಂದು ಭೀಕರ ರಕ್ತಪಾತ ನಡೆದಿದೆ. ನೈರುತ್ಯ ಯೆಮನ್‌ನ ತೈಜ್ (Taiz) ಪ್ರಾಂತ್ಯದ ಸಾರ್ವಜನಿಕ ಮಾರುಕಟ್ಟೆಯೊಂದರ ಮೇಲೆ ನಡೆದ ಭೀಕರ ದಾಳಿಯಲ್ಲಿ ಕನಿಷ್ಠ 30 ನಾಗರಿಕರು (Strikes On Yemen's Market) ಸ್ಥಳದಲ್ಲೇ ಸಾವನ್ನಪ್ಪಿದ್ದು, 8ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ದಾಳಿಯ ತೀವ್ರತೆಗೆ ಮಾರುಕಟ್ಟೆಯಲ್ಲಿದ್ದ ಹತ್ತಾರು ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

ತೈಜ್ ಪ್ರಾಂತ್ಯದ ಒಕ್ಕೂಟ ಪಡೆಗಳ ಹಿಡಿತದಲ್ಲಿರುವ 'ಅಲ್-ಹಧಾರ' ಅಥವಾ ಅಲ್-ವಾಜಿಯಾ ನಗರದ ಜನನಿಬಿಡ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಸಂದರ್ಭದಲ್ಲೇ ಈ ದುರಂತ ಸಂಭವಿಸಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಈ ಭೀಕರ ಹತ್ಯಾಕಾಂಡದ ಹೊಣೆಯ ಕುರಿತು ಯೆಮನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮತ್ತು ಸೌದಿ ಅರೇಬಿಯಾ ಬೆಂಬಲಿತ ಅಧಿಕೃತ ಸರ್ಕಾರಿ ಪಡೆಗಳ ನಡುವೆ ತೀವ್ರ ಆರೋಪ-ಪ್ರತ್ಯಾರೋಪಗಳು ಆರಂಭವಾಗಿವೆ. ಸೌದಿ ಅರೇಬಿಯಾ ನೇತೃತ್ವದ ಮಿಲಿಟರಿ ಒಕ್ಕೂಟದ ಯುದ್ಧ ವಿಮಾನಗಳು ಮಾರುಕಟ್ಟೆಯ ಮೇಲೆ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿವೆ. ನಾಗರಿಕರನ್ನು ಗುರಿಯಾಗಿಸಿಕೊಂಡು ಸೌದಿ ಒಕ್ಕೂಟ ಎಸಗಿರುವ ಕ್ರೂರ ಅಪರಾಧ ಇದಾಗಿದೆ ಎಂದು ಹೌತಿಗಳ ಆರೋಗ್ಯ ಸಚಿವಾಲಯದ ವಕ್ತಾರ ಅನಿಸ್ ಅಲ್-ಅಸ್ಬಾಹಿ ಆರೋಪಿಸಿದ್ದಾರೆ.

ಹೌತಿಗಳ ಆರೋಪವನ್ನು ಸೌದಿ ಒಕ್ಕೂಟ ಮತ್ತು ಯೆಮನ್ ಸರ್ಕಾರಿ ಪಡೆಗಳು ಸಂಪೂರ್ಣವಾಗಿ ತಳ್ಳಿಹಾಕಿವೆ. ದಾಳಿ ನಡೆದ ಪ್ರದೇಶದಲ್ಲಿ ಸೌದಿ ಒಕ್ಕೂಟ ಯಾವುದೇ ವೈಮಾನಿಕ ಕಾರ್ಯಾಚರಣೆ ನಡೆಸಿಲ್ಲ. ಬದಲಿಗೆ, ಹೌತಿ ಬಂಡುಕೋರರೇ ಸಾರ್ವಜನಿಕ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಅಂಧಾದುಂಧು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದಾರೆ. ನಾಗರಿಕರನ್ನು ಕೊಂದ ಮರುಕ್ಷಣವೇ ಹೌತಿಗಳು ಸೌದಿ ಮೇಲೆ ಗೂಬೆ ಕೂರಿಸುವ ನಾಟಕವಾಡುತ್ತಿದ್ದಾರೆ ಎಂದು ಯೆಮನ್ ಸರ್ಕಾರದ ರಕ್ಷಣಾ ಇಲಾಖೆ ತಿರುಗೇಟು ನೀಡಿದೆ.

Guwahati Shootout: 5 ಮಂದಿಯನ್ನು ಬಲಿ ಪಡೆದ ಹೊಟೇಲ್‌ ಮೇಲಿನ ಭೀಕರ ದಾಳಿಗೆ ದಾಳಿಯ ಕಾರಣ ಬಹಿರಂಗ; ಗುತ್ತಿಗೆ ವಿವಾದದಿಂದಲೇ ನರಮೇಧ?

ವರ್ಷಗಳಿಂದ ನಡೆಯುತ್ತಿರುವ ಯೆಮನ್ ಅಂತರ್ಯುದ್ಧದಲ್ಲಿ ನಾಗರಿಕರನ್ನು, ಅದರಲ್ಲೂ ವಿಶೇಷವಾಗಿ ಮಾರುಕಟ್ಟೆ, ಶಾಲೆ ಮತ್ತು ಆಸ್ಪತ್ರೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ತೈಜ್ ಪ್ರಾಂತ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಉಭಯ ಬಣಗಳ ನಡುವೆ ಸಂಘರ್ಷ ತಾರಕಕ್ಕೇರಿದ್ದು, ಇಂದಿನ ದಾಳಿಯು ಆ ಭಾಗದ ನಾಗರಿಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.