ಓಲಾದಿಂದ ವಿದ್ಯುತ್ ಕಾರು
ಓಲಾದಿಂದ ವಿದ್ಯುತ್ ಕಾರು
Vishwavani News
August 16, 2022
ಅಜಯ್ ಅಂಚೆಪಾಳ್ಯ
ಟ್ಯಾಕ್ಸಿಗಳನ್ನು ಬಾಡಿಗೆಗೆ ಒದಗಿಸುವುದನ್ನು ಪ್ರಮುಖ ಉದ್ಯೋಗ ಮಾಡಿಕೊಂಡಿರುವ ಓಲಾ, ಈಗ ವಿದ್ಯುತ್ ಕಾರು ಗಳನ್ನು ತಯಾರಿಸುವ ಕ್ಷೇತ್ರಕ್ಕೆ ಕಾಲಿಟ್ಟಿದೆ. ಕಳೆದ ವರ್ಷ ವಿದ್ಯುತ್ ಚಾಲಿತ ಓಲಾ ಸ್ಕೂಟರುಗಳು ರಸ್ತೆಗೆ ಇಳಿದಿದ್ದವು. ಆಧುನಿಕ ಸೌಲಭ್ಯಗಳನ್ನು ಒಳಗೊಂಡ ವಿದ್ಯುತ್ ಕಾರುಗಳನ್ನು ಓಲಾ ಸಂಸ್ಥೆಯು ೨೦೨೪ರಲ್ಲಿ ನಮ್ಮ ದೇಶದಲ್ಲಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ.
ಓಲಾ ಸಂಸ್ಥೆಯು ಕಳೆದ ವರ್ಷ ನಮ್ಮ ದೇಶದ ಸ್ವಾತಂತ್ರ್ಯೋತ್ಸವದಂದು ತಾನು ಬಿಡುಗಡೆ ಮಾಡಲಿರುವ ಎಲೆಕ್ಟ್ರಿಕ್ ಸ್ಕೂಟರ್ ವಿಚಾರವನ್ನು ಬಹಿರಂಗ ಗೊಳಿಸಿತ್ತು. ಈ ವರ್ಷ ಸ್ವಾತಂತ್ರ್ಯೋತ್ಸವದಂದು ಅದು ಹೊಸ ಎಲೆಕ್ಟ್ರಿಕ್ ಕಾರ್ ತಯಾರಿಸುವುದಾಗಿ ಘೋಷಿಸಿದೆ!
ಇದೊಂದು ಪ್ರಮುಖ ಬೆಳವಣಿಗೆ. ಏಕೆಂದರೆ, ಪರಿಸರ ಸ್ನೇಹಿ ವಾಹನವೆಂಬ ಹೆಗ್ಗಳಿಕೆಯೊಂದಿಗೆ ಬಹು ಪ್ರಚಾರ ಪಡೆದಿರುವ ವಿದ್ಯುತ್ ಚಾಲಿತ ಕಾರುಗಳು, ಭವಿಷ್ಯದ ಸಂವಹನ ಮಾಧ್ಯಮಗಳು ಎಂದೇ ಗುರುತಿಸಲ್ಪಟ್ಟಿವೆ.
ಅಮೆರಿಕದಲ್ಲಿ ಟೆಸ್ಲಾದಂತಹ ಸಂಸ್ಥೆಗಳು ಅತ್ಯಾಧುನಿಕ ಸೌಲಭ್ಯಗಳುಳ್ಳ ವಿದ್ಯುತ್ ಚಾಲಿತ ಕಾರುಗಳನ್ನು ಮಾರುಕಟ್ಟೆಗೆ ತಂದು, ಬಹಳಷ್ಟು ಜನರ ಮನ ಗೆದ್ದಿವೆ. ನಮ್ಮ ದೇಶದಲ್ಲೂ ಕಿಯಾ, ಮಹಿಂದ್ರ ಮೊದಲಾದ ಸಂಸ್ಥೆಗಳು ವಿದ್ಯುತ್ ಚಾಲಿತ ಕಾರುಗಳನ್ನು ರಸ್ತೆಗೆ ಇಳಿಸಿದ್ದು, ನಿಧಾನವಾಗಿ ಜನರ ಮನ ಗೆಲ್ಲುತ್ತಿವೆ.
ಮುಂದಿನ ಒಂದೆರಡು ದಶಕಗಳಲ್ಲಿ ತೈಲವನ್ನು ಇಂಧನವನ್ನಾಗಿ ಬಳಸುವ ವಾಹನಗಳ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡಿ, ವಿದ್ಯುತ್ ಚಾಲಿತ ವಾಹನಗಳನ್ನು ಜನಪ್ರಿಯಗೊಳಿಸಲು ಸರಕಾರ ಸಹ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ.
ಈ ಸನ್ನಿವೇಶದಲ್ಲಿ ಓಲಾ ಸಂಸ್ಥೆಯು ಹೊಸ ವಿದ್ಯುತ್ ಚಾಲಿತ ಕಾರನ್ನು ಮಾರುಕಟ್ಟೆಗೆ ತರಲಿರುವ ಸುದ್ದಿಯು ಬಹಳಷ್ಟು ಜನರ
ಗಮನ ಸೆಳೆದಿದೆ. ಜತೆಗೆ, ಓಲಾ ಕಾರು, ಸಾಕಷ್ಟು ಆಧುನಿಕ ಸೌಲಭ್ಯಗಳನ್ನು ಹೊಂದಿದೆ ಮತ್ತು ಇಂದು ಮಾರುಕಟ್ಟೆಯಲ್ಲಿರುವ ಕಾರುಗಳಿಗಿಂದ ಹೆಚ್ಚಿನ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲಿದೆ ಎಂದು ಘೋಷಿಸಲಾಗಿದೆ.
೨೦೨೪ರಲ್ಲಿ ಬಿಡುಗಡೆಯಾಗಲಿರುವ ಓಲಾ ಕಾರಿನ ವಿಶೇಷತೆಗಳನ್ನು ಸಂಸ್ಥೆ ಈ ರೀತಿ ಘೋಷಿಸಿದೆ:
ಒಮ್ಮೆ ಚಾರ್ಜ್ ಮಾಡಿದರೆ ೫೦೦ ಕಿ.ಮೀ. ಚಲಿಸುತ್ತದೆ.
ಸ್ಟಾರ್ಟ್ ಮಾಡಿ ನಾಲ್ಕು ಸೆಕೆಂಡಿನಲ್ಲಿ ೦-೧೦೦ ಕಿ.ಮೀ. ವೇಗ
ಸ್ಪೋರ್ಟಿ ಲುಕ್
ಆಲ್ ಗ್ಲಾಸ್ ರೂಫ್
ಕೀ ಲೆಸ್ ಇಗ್ನಿಷನ್
ಡ್ರಾಗ್ ಕೊಎಫಿಷಿಯೆಂಟ್ ೦.೨೧
ಓಲಾ ಸಂಸ್ಥೆಯು ಲೀಥಿಯಂ ಅಯಾನ್ ಬ್ಯಾಟರಿ ತಯಾರಿಕೆಯಲ್ಲೂ ತೊಡಗಿ ಕೊಂಡಿದ್ದು, ಹೊಸ ಕಾರಿಗೆ ಈ ಬ್ಯಾಟರಿಯನ್ನು ಅಳವಡಿಸಲಾಗುವುದೇ ಇಲ್ಲವೇ ಎಂಬುದು ಸ್ಪಷ್ಟವಿಲ್ಲ. ಇನ್ನು ಎರಡು ವರ್ಷಗಳಲ್ಲಿ ಬಿಡುಗಡೆಯಾಗಲಿರುವ ಓಲಾ ಕಾರಿನ ಅಂದಾಜು ಬೆಲೆಯನ್ನು ಸಂಸ್ಥೆಯು ಹೇಳಿಕೊಂಡಿಲ್ಲ. ವಿದ್ಯುತ್ ಚಾಲಿತ ಕಾರಿನ ಘೋಷಣೆಯ ಜತೆಯಲ್ಲೇ, ಓಲಾ ಸ್ಕೂಟರ್‌ನ ಹೊಸ ಅವತರಣಿಕೆಯನ್ನು ಗ್ರಾಹಕರಿಗೆ ಪರಿಚಯಿಸಲಾಗಿದ್ದು, ರು.೪೯೯/- ನೀಡಿ ಸ್ಕೂಟರನ್ನು ಬುಕ್ ಮಾಡಬಹುದು.
ಹೊಸ ಓಲಾ ಇವಿ ಸ್ಕೂಟರಿನ ಬೆಲೆ ರು.೯೯,೯೯೯/- ರಿಂದ ಆರಂಭ.
ಭೂಮಿಯತ್ತ ಧಾವಿಸುತ್ತಿರುವ ಕ್ಷುದ್ರಗ್ರಹ
ಆಗಸ್ಟ್ ೧೮ರಂದು ದೊಡ್ಡಗಾತ್ರದ ಕ್ಷುದ್ರಗ್ರಹವೊಂದು ಭೂಮಿಗೆ ಸಮೀಪದಲ್ಲಿ ಹಾದುಹೋಗುವುದೆಂದು ನಾಸಾ ಹೇಳಿದೆ. ಸುಮಾರು ೧೯೦ ಅಡಿ ಉದ್ದದ ಈ ಕ್ಷುದ್ರಗ್ರಹವು ಭೂಮಿಯಿಂದ ೬.೩ ಮಿಲಿಯ ಕಿ.ಮೀ.ನಷ್ಟು ದೂರದಲ್ಲಿ ಸಾಗಿ, ಸೂರ್ಯನಿಗೊಂದು ಸುತ್ತು ಹಾಕಿ ವಾಪಸಾಗುವುದು. ಸೆಕೆಂಡಿಗೆ ೪.೦೭ ಕಿ.ಮೀ.ವೇಗದಲ್ಲಿ ಸಾಗುವ ಇದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಕಡಿಮೆ. ಮೊನ್ನೆ ೧೧೦ ಅಡಿ ಅಗಲದ ಕ್ಷುದ್ರಗ್ರಹವೊಂದು ೪.೭ ಮಿಲಿಯ ಕಿ.ಮೀ. ದೂರದಲ್ಲಿ ಹಾದುಹೋಗಿತ್ತು.
ಆಗಸ್ಟ್ ೧೬ರಂದು ೯೩ ಅಡಿ ಅಗಲದ ಕ್ಷುದ್ರಗ್ರಹವೊಂದು ನಮ್ಮ ಭೂಮಿಯ ಬಳಿ ಸಾಗಿಬರುತ್ತಿದೆ! ೫,೨೯,೦೦೦ ಕಿಮೀ ಹತ್ತಿರ ದಲ್ಲಿ ಹಾದು ಹೋಗುವ ಇದು ಇತರ ಅಂತಹ ಕಾಯಗಳಿಗೆ ಹೋಲಿಸಿದರೆ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚು. ಭೂಮಿ ಮತ್ತು ಚಂದ್ರನ ನಡುವಿನ ದೂರ ೩,೮೫,೦೦೦ ಕಿಮೀ. ಇದನ್ನು ಹೋಲಿಸಿದರೆ, ಈ ಉಪಗ್ರಹವು ಅದೆಷ್ಟು ಸಮೀಪದಲ್ಲಿ ಹಾದುಹೋಗುವುದೆಂದು ಊಹಿಸಬಹುದು!
ಚಿಕ್ಕಗಾತ್ರದ ಸಾವಿರಾರು ಕ್ಷುದ್ರಗ್ರಹಗಳೂ ಭೂಮಿಯ ಬಳಿ ಹಾದುಹೋಗುವುದು ಸಾಮಾನ್ಯ ವಿಷಯ. ಪುಟ್ಟ ಪುಟ್ಟ ಕ್ಷುದ್ರ ಗ್ರಹಗಳು ಭೂಮಿಯ ವಾತಾವರಣವನ್ನು ಪ್ರವೇಶಿಸಿದರೆ, ಸುಟ್ಟು ಭಸ್ಮವಾಗುತ್ತವೆ. ೪೯೨ ಅಡಿಗಿಂತಲೂ ಹೆಚ್ಚು ಉದ್ದವಿರುವ ಕ್ಷುದ್ರಗ್ರಹಗಳು ಭೂಮಿಯ ಬಳಿ ಬಂದರೆ, ಅದನ್ನು ಸಂಭಾವ್ಯ ಅಪಾಯ ಎಂದು ನಾಸಾ ಗ್ರಹಿಸುತ್ತದೆ. ಸದ್ಯದಲ್ಲಿ ಅಷ್ಟು ದೊಡ್ಡ ಕ್ಷುದ್ರಗ್ರಹಗಳು ಭೂಮಿಯ ಬಳಿ ಬರುವ ಸಾಧ್ಯತೆ ಅತಿ ಕಡಿಮೆ.