ಜಿರಳೆ ಕಾಟ ಎಂದು ನ್ಯಾಫ್ತಲೀನ್ ಗುಳಿಗೆ ಬಳಸ್ತೀರಾ? ಈ ವಿಚಾರ ನಿಮಗೆ ತಿಳಿದಿರಲೇ ಬೇಕು
Naphthalene Balls: ಕಪಾಟು ಅಥವಾ ಡ್ರಾಗಳಲ್ಲಿ ಜಿರಳೆ, ಜೇಡ ಮತ್ತಿತರ ಸಣ್ಣ ಕೀಟಗಳು ಮನೆ ಮಾಡಿಕೊಳ್ಳುವುದನ್ನು ತಪ್ಪಿಸಲು ಬಿಳಿ ಬಣ್ಣದ ನ್ಯಾಫ್ತಲೀನ್ ಗುಳಿಗೆಗಳಲ್ಲಿ ಹಾಕಿಡುವುದು ಬಹುತೇಕರ ಅಭ್ಯಾಸ. ಆದರೆ ಇದರ ಅತಿಯಾದ ಬಳಿಕೆ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ನಿಮಗೆ ತಿಳಿದಿದೆಯೇ? ಇದರ ಅತಿಯಾದ ಉಪಯೋಗದಿಂದಾಗುವ ಸಮಸ್ಯೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಮೆಟಾಎಐ ರಚಿತ ಚಿತ್ರ -
ಬೆಂಗಳೂರು: ನಮ್ಮ ಕಪಾಟು ಅಥವಾ ಡ್ರಾಗಳಲ್ಲಿ ಜಿರಳೆ, ಜೇಡ ಮತ್ತಿತರ ಸಣ್ಣ ಕೀಟಗಳು ಮನೆ ಮಾಡಿಕೊಳ್ಳುವುದನ್ನು ತಪ್ಪಿಸಲು ಬಿಳಿ ಬಣ್ಣದ ನ್ಯಾಫ್ತಲೀನ್ ಗುಳಿಗೆಗಳಲ್ಲಿ ಹಾಕಿಡುವುದು ನಮ್ಮಲ್ಲಿ ಬಹಳ ಮಂದಿಯ ಅಭ್ಯಾಸ. ಕೆಲವೊಮ್ಮೆ ಇದೇ ರೀತಿಯ ಗುಳಿಗೆಳನ್ನು ಸಿಂಕ್ ಅಥವಾ ಬಾತ್ರೂಂಗಳಲ್ಲೂ ಇರಿಸುತ್ತೇವೆ. ಇವುಗಳಿಂದ ಜಿರಳೆಯಂಥ ಒಂದಿಷ್ಟು ಕೀಟಗಳ ಕಾಟ ತಪ್ಪುವುದು ನಿಜ. ಆದರೆ ಈ ನ್ಯಾಫ್ತಲೀನ್ ಗುಳಿಗೆಗಳಲ್ಲಿರುವ ರಾಸಾಯನಿಕವೇನು? ಇದರಿಂದ ನಮ್ಮ ಆರೋಗ್ಯದ ಮೇಲೇನು ಪರಿಣಾಮ ಉಂಟಾಗುತ್ತದೆ? ಮನೆಗಳಲ್ಲಿ ಇವು ಬಳಕೆಗೆ ಯೋಗ್ಯವೇ?
ಈ ಬಿಳಿ ಬಣ್ಣದ ನ್ಯಾಫ್ತಲೀನ್ ಗುಳಿಗೆಗಳಲ್ಲಿ (ನುಸಿಗುಳಿಗೆ) ಇರುವುದು ಕೀಟನಾಶಕ. ಇವುಗಳನ್ನು ಸದಾ ಕಾಲ ಉಸಿರಾಡುತ್ತಿದ್ದರೆ, ಯಾವುದೇ ರೀತಿಯಲ್ಲಿ ಹೊಟ್ಟೆಗೆ ಹೋದರೆ ಅಥವಾ ಬಟ್ಟೆಗಳಲ್ಲಿ ದೀರ್ಘಕಾಲ ಇರಿಸಿ, ಅದರ ಮೂಲಕ ಚರ್ಮದೊಳಗೆ ನುಸುಳಿದರೆ ಆರೋಗ್ಯಕ್ಕೆ ಹಾನಿ ಮಾಡುವ ಎಲ್ಲ ಸಾಮರ್ಥ್ಯ ಈ ನ್ಯಾಫ್ತಲೀನ್ ಎನ್ನುವ ರಾಸಾಯನಿಕಕ್ಕಿದೆ.
ಪರಾಗಗಳ ಅಲರ್ಜಿ ಅಥವಾ ಪೋಲನ್ ಅಲರ್ಜಿ: ಏನು, ಎತ್ತ?
ಏನು ರಾಸಾಯನಿಕವಿದು?
ಇನ್ನಷ್ಟು ವಿವರವಾಗಿ ಈ ರಾಸಾಯನಿಕದ ಬಗ್ಗೆ ತಿಳಿಯುವುದಾದರೆ- ನ್ಯಾಫ್ತಲೀನ್ ಎನ್ನುವುದು ಆವಿಯಾಗಬಲ್ಲಂಥ ರಾಸಾಯನಿಕ. ಹಾಗಾಗಿಯೇ ದೊಡ್ಡ ನುಸಿಗುಳಿಗೆಯನ್ನು ಕಪಾಟಿನಲ್ಲಿ ಇರಿಸಿದ್ದರೂ ಕೆಲವೇ ದಿನಗಳಲ್ಲಿ ಅದು ಒಂದೋ ಸಣ್ಣದಾಗುತ್ತದೆ ಅಥವಾ ಮಾಯವೇ ಆಗಿರುತ್ತದೆ. ಅಂದರೆ, ವಾತಾವರಣದ ಉಷ್ಣತೆಯಲ್ಲಿ ಈ ನ್ಯಾಫ್ತಲೀನ್ ಎನ್ನುವುದು ಘನ ಸ್ಥಿತಿಯಿಂದ ಅನಿಲ ಸ್ಥಿತಿಗೆ ಪರಿವರ್ತನೆ ಹೊಂದುತ್ತದೆ. ಮುಚ್ಚಿದ ಕಪಾಟಿನಲ್ಲಿರಿಸಿದ್ದ ಗುಳಿಗೆಗಳು ಸಹ ನಿಧಾನವಾಗಿ ತಮ್ಮ ಅಣುಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುವುದರಿಂದಲೇ ಕಪಾಟಿನ ತುಂಬೆಲ್ಲ ನ್ಯಾಫ್ತಲೀನ್ ವಾಸನೆ ತುಂಬಿಹೋಗುತ್ತದೆ.
ದೀರ್ಘಕಾಲ ಇವುಗಳನ್ನು ಅಲಮಾರುಗಳಲ್ಲಿ ಇರಿಸಿದ್ದರೆ ಅಥವಾ ಒಂದು ನುಸಿಗುಳಿಗೆ ಮಾಯವಾಗುತ್ತಿದ್ದಂತೆ ಇನ್ನೊಂದು ಹಾಕಿಡುವವರು ನೀವಾಗಿದ್ದರೆ, ಈ ಮೂಲಕ ಅಲ್ಲಿರುವ ವಸ್ತ್ರಗಳಲ್ಲಿ ನ್ಯಾಫ್ತಲೀನ್ ಸೇರಿಕೊಳ್ಳುತ್ತದೆ. ಆ ವಸ್ತ್ರಗಳನ್ನು ಧರಿಸಿದಾಗ ಚರ್ಮದ ಮೂಲಕ ಧರಿಸಿದವರ ದೇಹವನ್ನೂ ನ್ಯಾಫ್ತಲೀನ್ ಸೇರುತ್ತದೆ. ಅಂಥ ಕಪಾಟುಗಳನ್ನು ತೆರೆದಾಗಲೆಲ್ಲ ಒಂದಿಷ್ಟು ನ್ಯಾಫ್ತಲೀನ್ ನಮ್ಮ ಉಸಿರಿಗೂ ಸೇರಬಲ್ಲದು. ಅದು ಅಲ್ಪ ಪ್ರಮಾಣದಲ್ಲಿದ್ದರೆ ಅಂಥ ಸಮಸ್ಯೆಯೇನಿಲ್ಲ. ಆದರೆ ದೀರ್ಘಕಾಲ ಅದನ್ನೇ ಮಾಡುತ್ತಿದ್ದರೆ, ಸರಿಯಾಗಿ ಗಾಳಿಯಾಡದಂಥ ಕೊಠಡಿಗಳಲ್ಲಿ ಇವುಗಳನ್ನು ಇರಿಸಿದ್ದರೆ ಆಗ ಯೋಚಿಸಬೇಕು.

ಇದರಿಂದ ಏನಾಗುತ್ತದೆ?
ದೀರ್ಘ ಕಾಲ ಅಥವಾ ಪದೇಪದೆ ನ್ಯಾಫ್ತಲೀನ್ ಗಾಳಿಯನ್ನು ಉಸಿರಾಡುತ್ತಿದ್ದರೆ ಕಣ್ಣುರಿ, ತಲೆನೋವು, ತಲೆ ಸುತ್ತಿದಂತಾಗುವುದು, ಚರ್ಮದ ಅಲರ್ಜಿಗಳು, ನೆಗಡಿ, ಉಸಿರಾಟದ ತೊಂದರೆ, ನಿಶ್ಶಕ್ತಿಯೆನಿಸುವುದು ಇಂಥ ಅಡ್ಡಪರಿಣಾಮಗಳು ನಿಶ್ಚಿತ. ಅದನ್ನು ದೀರ್ಘಕಾಲ ಅತಿಯಾಗಿ ಉಸಿರಾಡುತ್ತಿದ್ದರೆ ಗಂಭೀರ ಸಮಸ್ಯೆಗಳೇ ಬರಬಹುದು. ನಮ್ಮ ಕೆಂಪುರಕ್ತಕಣಗಳನ್ನು ಈ ರಾಸಾಯನಿಕ ಹಾಳುಗೆಡವಿ ಅನೀಮಿಯದಂಥ ತೊಂದರೆಗೆ ಸಿಲುಕಿಸಬಹುದು.
ತಡೆ ಹೇಗೆ?
ಇದಕ್ಕಿರುವ ಒಂದೇ ಉಪಾಯವೆಂದರೆ ನ್ಯಾಫ್ತಲೀನ್ ಗುಳಿಗೆಗಳನ್ನು ಎಲ್ಲಿ ಮತ್ತು ಹೇಗೆ ಬಳಸಬೇಕೆಂಬುದನ್ನು ಸರಿಯಾಗಿ ತಿಳಿದುಕೊಳ್ಳುವುದು. ಉಗ್ರಾಣದಂಥ ಸ್ಥಳಗಳಲ್ಲಿ ಇವುಗಳನ್ನು ಬಳಸುವುದಕ್ಕೆ ನಿಗದಿ ಮಾಡಿರುವುದೇ ಹೊರತು, ಮನೆಗಳಲ್ಲಿ ರೂಮ್ ಫ್ರೆಶ್ನರ್ನಂತೆ ಬಳಸುವುದಕ್ಕಲ್ಲ. ಮಕ್ಕಳು ಆಡುವಂಥ ಸ್ಥಳಗಳಲ್ಲಿ, ಅಡುಗೆಮನೆಗಳಲ್ಲಿ, ಬೆಡ್ರೂಮುಗಳಲ್ಲಿ, ಬಾತ್ರೂಂ ಅಥವಾ ಗಾಳಿಯಾಡದ ಯಾವುದೇ ಸ್ಥಳಗಳಲ್ಲಿ ಇವುಗಳನ್ನು ಬಳಸುವುದು ಸರಿಯಲ್ಲ. ಆಗ ಇವುಗಳನ್ನು ದೀರ್ಘಕಾಲ ಈ ರಾಸಾಯನಿಕವನ್ನು ಉಸಿರಾಡುವುದು ಅನಿವಾರ್ಯವಾಗಿ ಆರೋಗ್ಯಕ್ಕೆ ಸಮಸ್ಯೆ ಉಂಟಾಗಬಹುದು.
ಮೊಬೈಲ್ ಬಳಕೆಯಿಂದ ನಿಮ್ಮ ಕೈಗಳಿಗೂ ಸಮಸ್ಯೆ? ಹೇಗೆ ತಿಳಿದಿದೆಯೇ?
ಅದರಲ್ಲೂ ಮಕ್ಕಳ ಕೋಣೆಗಳಲ್ಲಿ ಇವುಗಳನ್ನು ಖಂಡಿತಕ್ಕೂ ಬಳಸುವುದಲ್ಲ. ಕಂಡಿದ್ದನ್ನೆಲ್ಲ ಮುಟ್ಟಿ, ತಟ್ಟಿ, ಮಾಡುವುದು ಮಕ್ಕಳ ಸಹಜ ಸ್ವಭಾವ. ಈ ನ್ಯಾಫ್ತಲೀನ್ ರಾಸಾಯನಿಕ ಅವರ ದೇಹದೊಳಗೆ ಸುಲಭವಾಗಿ ಪ್ರವೇಶಬಹುದು, ಪುಟ್ಟ ಮಕ್ಕಳಾದರಂತೂ ಬಾಯಿಗೂ ಹಾಕಬಹುದು, ಜಾಗ್ರತೆ! ಮನೆಯಲ್ಲಿ ನಾಯಿ, ಬೆಕ್ಕುಗಳಿದ್ದರೆ ಅವುಗಳಿಗೂ ನ್ಯಾಫ್ತಲೀನ್ ಹಾನಿ ಮಾಡುತ್ತದೆ. ಒಂದೊಮ್ಮೆ ಈ ಪ್ರಾಣಿಗಳನ್ನು ಅದನ್ನು ತಿಂದರೆ, ವಿಷವನ್ನೇ ತಿಂದಂತೆ. ಹಾಗಾಗಿ ಮನೆಗಳಲ್ಲಿ ನ್ಯಾಫ್ತಲೀನ್ ಗುಳಿಗೆಗಳನ್ನು ಬಳಸುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಿ, ಅನಗತ್ಯವಾಗಿ ಬಳಸಬೇಡಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.