ಗರ್ಭಾವಸ್ಥೆಯ ಮಧುಮೇಹ: ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ವಿಶೇಷ ಕಾಳಜಿ ಇರಲಿ
ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಮಧುಮೇಹವನ್ನು ಗರ್ಭಾವಸ್ಥೆಯ ಮಧುಮೇಹ (Gestational Diabetes Mellitus – GDM) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಗರ್ಭ ಧಾರಣೆಯ 24ರಿಂದ 28ನೇ ವಾರಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಗರ್ಭಾವಸ್ಥೆಯಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಗಳಿಂದ ಇನ್ಸುಲಿನ್ ಸರಿಯಾಗಿ ಕಾರ್ಯನಿರ್ವಹಿಸದೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ.
-
ಡಾ.ವಿದ್ಯಾಶ್ರೀ ಕಾಮತ್, ಸಲಹಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಕೆಎಂಸಿ ಆಸ್ಪತ್ರೆ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು.
ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಮಧುಮೇಹವನ್ನು ಗರ್ಭಾವಸ್ಥೆಯ ಮಧುಮೇಹ (Gestational Diabetes Mellitus – GDM) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಗರ್ಭ ಧಾರಣೆಯ 24ರಿಂದ 28ನೇ ವಾರಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಗರ್ಭಾವಸ್ಥೆಯಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಗಳಿಂದ ಇನ್ಸುಲಿನ್ ಸರಿಯಾಗಿ ಕಾರ್ಯನಿರ್ವಹಿಸದೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಆದರೆ, ಸರಿಯಾದ ಆಹಾರ ಪದ್ಧತಿ, ವ್ಯಾಯಾಮ ಮತ್ತು ವೈದ್ಯಕೀಯ ಆರೈಕೆಯಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.
ಇದನ್ನೂ ಓದಿ: Diabetes Control Tips: ಮಧುಮೇಹ ಇದ್ದವರು ಎಷ್ಟು ಬಾರಿ ಶುಗರ್ ಲೆವೆಲ್ ಟೆಸ್ಟ್ ಮಾಡಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ
ಮಗುವಿನ ಆರೋಗ್ಯದ ಮೇಲಿನ ಪರಿಣಾಮಗಳು
ತಾಯಿಯ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಹೆಚ್ಚುವರಿ ಸಕ್ಕರೆ ಮಗುವಿಗೂ ತಲುಪುತ್ತದೆ. ಇದರಿಂದ ಮಗುವಿನ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಹೆಚ್ಚಾಗಿ, ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಪರಿಣಾಮವಾಗಿ ಮಗು ಸಾಮಾನ್ಯಕ್ಕಿಂತ ಹೆಚ್ಚಿನ ತೂಕದೊಂದಿಗೆ ಜನಿಸುವ ಸಾಧ್ಯತೆಯಿದೆ. ಇದರಿಂದ ಹೆರಿಗೆ ಕಷ್ಟಕರವಾಗುವುದು, ಸಿಸೇರಿಯನ್ ಅಗತ್ಯ ಬೀಳುವುದು ಹಾಗೂ ಹೆರಿಗೆಯ ನಂತರ ಮಗುವಿನಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುವ ಅಪಾಯವಿದೆ. ಅಲ್ಲದೆ, ಶ್ವಾಸಕೋಶಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಭವಿಷ್ಯದಲ್ಲಿ ಬೊಜ್ಜು ಮತ್ತು ಟೈಪ್-2 ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಾಗುತ್ತದೆ.
ಮಧುಮೇಹ ನಿಯಂತ್ರಣಕ್ಕೆ ಸರಳ ಕ್ರಮಗಳು
ಗರ್ಭಾವಸ್ಥೆಯ ಮಧುಮೇಹವನ್ನು ನಿಯಂತ್ರಿಸಲು ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಮುಖ್ಯ.
- ವೈದ್ಯರ ಸಲಹೆಯಂತೆ ಮನೆಯಲ್ಲಿ ಗ್ಲುಕೋಮೀಟರ್ ಅಥವಾ ಪ್ರಯೋಗಾಲಯದ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಮಿತವಾಗಿ ಪರೀಕ್ಷಿಸಬೇಕು.
- ತರಕಾರಿಗಳು, ಪ್ರೋಟೀನ್‌ಯುಕ್ತ ಆಹಾರ ಮತ್ತು ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡ ಸಮತೋಲಿತ ಆಹಾರವನ್ನು ಸೇವಿಸಬೇಕು.
- ಒಂದೇ ಬಾರಿಗೆ ಹೆಚ್ಚು ಆಹಾರ ಸೇವಿಸುವ ಬದಲು ಸಣ್ಣ ಪ್ರಮಾಣದಲ್ಲಿ ಆಗಾಗ್ಗೆ ಆಹಾರ ಸೇವಿಸುವುದು ಉತ್ತಮ.
- ವೈದ್ಯರ ಸಲಹೆಯಂತೆ ಊಟದ ನಂತರ 15ರಿಂದ 30 ನಿಮಿಷಗಳ ಕಾಲ ನಡಿಗೆ ಮಾಡಬೇಕು.
- ಆಹಾರ ಮತ್ತು ವ್ಯಾಯಾಮದಿಂದ ಸಕ್ಕರೆ ನಿಯಂತ್ರಣಕ್ಕೆ ಬಾರದಿದ್ದರೆ ವೈದ್ಯರು ಔಷಧಿ ಅಥವಾ ಇನ್ಸುಲಿನ್ ಸೂಚಿಸಬಹುದು.
ಹೆರಿಗೆಯ ನಂತರವೂ ಎಚ್ಚರಿಕೆ ಅಗತ್ಯ
ಹೆಚ್ಚಿನ ಮಹಿಳೆಯರಲ್ಲಿ ಹೆರಿಗೆಯ ನಂತರ ಗರ್ಭಾವಸ್ಥೆಯ ಮಧುಮೇಹ ನಿವಾರಣೆಯಾಗುತ್ತದೆ. ಆದರೂ ಮುಂದೆ ಟೈಪ್-2 ಮಧುಮೇಹ ಬರುವ ಸಾಧ್ಯತೆ ಸುಮಾರು ಶೇ. 50ರಷ್ಟಿರುತ್ತದೆ. ಆದ್ದ ರಿಂದ ಹೆರಿಗೆಯಾದ 6ರಿಂದ 12 ವಾರಗಳೊಳಗೆ ಸಕ್ಕರೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಂತರವೂ ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ.
ಸರಿಯಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ವೈದ್ಯಕೀಯ ಆರೈಕೆಯ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯಕರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಬಹುದು.