ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Summer Health Tips: ಬಿಸಿಲಿಗೆ ಸ್ಮೃತಿ ತಪ್ಪದಿರಲಿ; ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಬಿಸಿಲು ತೀವ್ರವಾಗಿದೆ. ಹೀಗಾಗಿ ಮನೆಯಿಂದ ಹೊರಗೆ ಹೋಗುವಾಗ ಮಾತ್ರವಲ್ಲ ಮನೆಯ ಒಳಗೇ ಇದ್ದರೂ ಕೂಡ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬಿಸಿಲಿನ ತೀವ್ರತೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿರಬೇಕು. ಇವುಗಳು ಬಾಧಿಸದಂತೆ ಎಚ್ಚರ ವಹಿಸಬೇಕು. ಅದು ಹೇಗೆ ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಬಿಸಿಲಿಗೆ ಆರೋಗ್ಯ ಕಾಳಜಿ ಹೇಗಿರಬೇಕು?

ಸಾಂದರ್ಭಿಕ ಚಿತ್ರ -

ಬೆಂಗಳೂರು, ಏ. 15: ಬಿಸಿಲು (Summer) ಈಗಲೇ ಸಹಿಸುವುದಕ್ಕೆ ಅಸಾಧ್ಯವಾಗಿದೆ. ಇದಿಷ್ಟೇ ಅಲ್ಲ, ಇನ್ನೂ ಹೆಚ್ಚಾಗಲಿದೆ ಎನ್ನುವ ಮುನ್ಸೂಚನೆ ಹವಾಮಾನ ತಜ್ಞರಿಂದ ದೊರೆತಿದೆ. ಛತ್ರಿ ಹಿಡಿದೇ ಹೋಗುತ್ತೇವೆ ಹೊರಗೆ, ಚೆನ್ನಾಗಿ ನೀರು ಕುಡಿಯುತ್ತೇವೆ ನಾವು, ನಮಗೇನು ಬಿಸಿಲಿನ (summer health tips) ಭಯವಿಲ್ಲ ಎನ್ನುವವರಿದ್ದಾರೆ. ವಿಷಯ ಹಾಗಲ್ಲ, ಬಿಸಿಲ ದಿನಗಳಲ್ಲಿ ಆರೋಗ್ಯದ (health tips) ಕಾಳಜಿಯನ್ನು ಎಷ್ಟು ಮಾಡಿದರೂ ಸಾಲದು. ಒಮ್ಮೆ ಶಾಖದ ಆಘಾತಕ್ಕೆ ಅಥವಾ ನಿರ್ಜಲೀಕರಣಕ್ಕೆ ತುತ್ತಾದರೆ ಚೇತರಿಸಿಕೊಳ್ಳಲು ನಾಲ್ಕಾರು ದಿನಗಳಾದರೂ ಬೇಕಾಗುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ, ಜೀವಕ್ಕೆ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಇವುಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲವೇ?

ಮೊದಲಿಗೆ ಬಿಸಿಲಿಗೆ ಎಚ್ಚರ ತಪ್ಪುವುದೇಕೆ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಹೊರಗಿನ ವಾತಾವರಣದ ಉಷ್ಣತೆಯನ್ನು ಆಧರಿಸಿ, ನಮ್ಮ ದೇಹ ತನ್ನ ಉಷ್ಣತೆಯನ್ನು ಮಾರ್ಪಾಡು ಮಾಡಿಕೊಳ್ಳುತ್ತದೆ.

ಆರೋಗ್ಯ ತಪಾಸಣೆಗೆ ಹೋದವರಲ್ಲಿ ದೀರ್ಘಕಾಲದಿಂದಿದ್ದ ಕಾಯಿಲೆ ಪತ್ತೆ

ಹೊರಗಿನ ತಾಪಮಾನ ತೀವ್ರವಾಗಿ ಏರಿಕೆಯಾದಾಗ ದೇಹದೊಳಗಿನ ಉಷ್ಣತೆಯನ್ನು ತಗ್ಗಿಸುವುದಕ್ಕೆ ಶರೀರ ಬೆವರಲು ಪ್ರಾರಂಭಿಸುತ್ತದೆ. ಇದರಿಂದಲೇ ದೇಹ ತಣ್ಣಗಾಗಬೇಕು, ಆಂತರಿಕ ಉಷ್ಣತೆ ನಿಯಂತ್ರಣದಲ್ಲಿ ಇರಬೇಕು. ಆದರೆ ಈ ಎಲ್ಲ ತಂತ್ರಗಳು ಕೈಕೊಟ್ಟಾಗ, ಸಾಕಾಗದೆ ಇದ್ದಾಗ ಅಥವಾ ಅತಿಯಾಗಿ ಬೆವರಿ ದೇಹದಲ್ಲಿ ನೀರಿನಂಶ ಕಡಿಮೆ ಆದಾಗ, ಎಚ್ಚರ ತಪ್ಪುತ್ತದೆ. ಇದರಿಂದ ಮೆದುಳಿಗೆ ಅಗತ್ಯವಾದಷ್ಟು ರಕ್ತಸಂಚಾರ ಆಗದಿದ್ದರೆ, ಪಾರ್ಶ್ವವಾಯು ಸಂಭವಿಸಿ ಜೀವಹಾನಿಯೂ ಆಗಬಹುದು.

ಮಾನವ ಶರೀರ ತನ್ನಷ್ಟಕ್ಕೆ ತಡೆದುಕೊಳ್ಳಲು ಸಾಧ್ಯವಾಗುವ ಗರಿಷ್ಟ ಉಷ್ಣತೆಯೆಂದರೆ 42.3 ಡಿಗ್ರಿ ಸೆ. ಇದಿಷ್ಟು ತಡೆಯುವುದೂ ಸುಲಭವಿಲ್ಲ. ಇನ್ನು ಇದಕ್ಕಿಂತಲೂ ಹೆಚ್ಚಿನ ತಾಪಮಾನವನ್ನು ಸಹಿಸಿಕೊಳ್ಳಲು ಏನೆಲ್ಲ ಉಪಚಾರ ಸಾಧ್ಯವೋ ಅದನ್ನು ನಮಗೆ ನಾವೇ ಮಾಡಿಕೊಳ್ಳಬೇಕು. ಸಿಕ್ಕಾಪಟ್ಟೆ ನೀರು ಕುಡಿಯುವುದು, ಎಲೆಕ್ಟ್ರೋಲೈಟ್‌ ಮರುಪೂರಣ ಮಾಡುವುದು, ಚೆನ್ನಾಗಿ ಗಾಳಿಯಾಡುವ ವಾತಾವರಣದಲ್ಲಿರುವುದು- ಇಂಥವೆಲ್ಲ ನಾವು ಅಗತ್ಯವಾಗಿ ಮಾಡಬೇಕಾದ ಕೆಲಸಗಳು.

ಉಷ್ಣತೆಗೆ ಮಾತ್ರವಲ್ಲ

ತೀವ್ರ ತಾಪಮಾನಗಳಿಗೆ ಎಚ್ಚರ ತಪ್ಪುವುದು ಬಿಸಿ ಹೆಚ್ಚಾದಾಗ ಮಾತ್ರವಲ್ಲ, ತೀವ್ರ ಚಳಿಯಲ್ಲೂ ಆಗುತ್ತದೆ. ಈ ಎರಡೂ ಅತಿರೇಕದ ತಾಪಮಾನಗಳಲ್ಲಿ ದೇಹದ ಉಷ್ಣತಾ-ನಿಯಂತ್ರಕ ವ್ಯವಸ್ಥೆ ಕೈಕೊಡಬಹುದು. ಬಿಸಿ ಹೆಚ್ಚಾದಾಗ ಮೆದುಳಿಗೆ ರಕ್ತಸಂಚಾರ ಸರಾಗ ಆಗದಿರುವ ಸಂಭವ ಇರುವದಂತೆಯೇ, ಚಳಿ ಹೆಚ್ಚಾದಾಗಲೂ ಆಗುತ್ತದೆ. ಹೊರಗಿನ ಚಳಿ ತೀವ್ರವಾಗಿ ಹೆಚ್ಚಾದರೆ, ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವುದಕ್ಕೆ ರಕ್ತ ನಾಳಗಳು ಸಂಕೋಚಗೊಳ್ಳುತ್ತವೆ. ಹೀಗೆ ಸಂಕೋಚಗೊಳ್ಳುವುದು ಅತಿಯಾದರೆ ಆಗಲೂ ಮೆದುಳಿಗೆ ಬೇಕಾದಷ್ಟು ರಕ್ತಸಂಚಾರ ಆಗದೆ ಜ್ಞಾನ ತಪ್ಪಬಹುದು.

ತಪ್ಪಿಸಿಕೊಳ್ಳಲಾಗದೆ?

ಖಂಡಿತ ಸಾಧ್ಯವಿದೆ. ಮೊದಲಿಗೆ, 38 ಡಿ.ಸೆ. ಉಷ್ಣತೆಯನ್ನು ತಲುಪಿದಾಗ ಮನೆಯಿಂದ ಹೊರಗೆ ಹೋಗಬೇಡಿ. ಹೋಗುವುದು ಅನಿವಾರ್ಯವಾದರೆ ನಡುಮಧ್ಯಾಹ್ನ 12 ರಿಂದ 3 ಗಂಟೆಯವರೆಗಿನ ಸಮಯ ಬೇಡ. ಉಳಿದ ಹೊತ್ತಿನಲ್ಲಿ ಸಡಿಲವಾದ ಬಿಳಿ ಅಥವಾ ತಿಳಿ ಬಣ್ಣದ ಹತ್ತಿಯ ಬಟ್ಟೆಗಳನ್ನೇ ಧರಿಸಿ. ತಲೆಗೆ ಟೋಪಿ, ಛತ್ರಿಗಳಂಥವು ಇದ್ದರೆ ಕ್ಷೇಮ.

ನಿಲ್ಲಿಸಿದ ಕಾರಿನೊಳಗೆ ಮಕ್ಕಳನ್ನು, ವೃದ್ಧರನ್ನು, ಪ್ರಾಣಿಗಳನ್ನು ಅಥವಾ ಯಾರನ್ನೂ ಬಿಡಬೇಡಿ. ಈ ಸೆಕೆಯಲ್ಲಿ ದಿನಕ್ಕೆ ಐದು ಲೀಟರ್‌ ನೀರು ಅಥವಾ ಪೇಯಗಳನ್ನು ಕುಡಿಯುವ ಗುರಿ ಇರಿಸಿಕೊಳ್ಳಿ. ಆಲ್ಕೋಹಾಲ್‌ ಮತ್ತು ಕೆಫೇನ್‌ ಸೇವನೆಯ ಮೇಲೆ ಕಡಿವಾಣ ಅಗತ್ಯ. ಇಲ್ಲದಿದ್ದರೆ ದೇಹ ಬೇಗನೇ ನಿರ್ಜಲೀಕರಣಕ್ಕೆ ತುತ್ತಾಗುತ್ತದೆ. ಜೊತೆಗೆ, ಸೆಕೆಯಲ್ಲಿ ದೇಹವನ್ನು ತಂಪಾಗಿಸುವ ಶಾರೀರಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.

ತಲೆನೋವು, ಅತಿಯಾಗಿ ಬೆವರುವುದು, ಬಾಯಿ ಒಣಗುವುದು, ತೀರದ ದಾಹ, ಮೈಯೆಲ್ಲ ಬಿಸಿಯಾದ ಅನುಭವಗಳು ಕಂಡುಬಂದರೆ ಜಾಗ್ರತೆ ಮಾಡಿ. ತಕ್ಷಣವೇ ದೇಹವನ್ನು ತಂಪಾಗಿಸುವ ಬಗ್ಗೆ ಕ್ರಮ ಕೈಗೊಳ್ಳಿ. ತಂಪಾದ ಬಟ್ಟೆಯಿಂದ ಇಡೀ ದೇಹವನ್ನು ಒರೆಸಬಹುದು. ಒಆರ್ ಎಸ್‌, ಎಳನೀರು ಮುಂತಾದ ಎಲೆಕ್ಟ್ರೋಲೈಟಿಕ್‌ ಪೇಯಗಳು ಬೇಕಾಗುತ್ತವೆ.

ಹೃದಯದ ಆರೋಗ್ಯಕ್ಕೆ ನಿಮ್ಮ ದಿನನಿತ್ಯದ ಜೀವನ ಶೈಲಿಯಲ್ಲಿ ಈ ಬದಲಾವಣೆ ಮಾಡಿ!

ಕೂಲರ್‌, ಎಸಿಯಂಥ ಉಪಕರಣಗಳ ಮೂಲಕ ಮನೆಯ ವಾತಾವರಣವನ್ನು ತಂಪಾಗಿಸಲು ಪ್ರಯತ್ನಿಸಿ. ಈ ಹೊತ್ತಿನಲ್ಲಿ ಮನೆಯಿಂದ ಹೊರಗಿದ್ದರೆ, ತಂಪಾದ ನೆರಳಿನಂಥ ಜಾಗಕ್ಕೆ ಹೋಗಿ. ಬಿಸಿಲಿನ ಆಘಾತ ತಾಗಿದಾಗ ತ್ವರಿತವಾಗಿ ಕ್ರಮ ಕೈಗೊಳ್ಳದಿದ್ದರೆ ಜೀವಕ್ಕೇ ಎರವಾಗುತ್ತದೆ, ನೆನಪಿರಲಿ.