ಇಂದು ವಿಶ್ವ ಯೋಗ ದಿನ: ಆರೋಗ್ಯಪೂರ್ಣ ಭವಿಷ್ಯಕ್ಕೆ ಯೋಗದ ಸಂಕಲ್ಪ
International Yoga Day 2026: ಪ್ರತಿ ವರ್ಷ ಜೂನ್ 21ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನವು ಯೋಗದ ಆರೋಗ್ಯ, ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಮಹತ್ವವನ್ನು ಸಾರುತ್ತದೆ. 2026ರ ಥೀಮ್ ʼಆರೋಗ್ಯಪೂರ್ಣ ವಯಸ್ಸಿಗೆ ಯೋಗʼ ಆಗಿದ್ದು, ಎಲ್ಲ ವಯೋಮಾನದವರ ಸಮಗ್ರ ಆರೋಗ್ಯವನ್ನು ಉತ್ತೇಜಿಸುವ ಗುರಿ ಹೊಂದಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಜೂ. 21: ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ (International Yoga Day) ದಿನವನ್ನು ಆಚರಿಸಲಾಗುತ್ತದೆ. ದೈಹಿಕ ಆರೋಗ್ಯ, ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಯೋಗ ನೀಡುವ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಒತ್ತಡಭರಿತ ಜೀವನಶೈಲಿಯಿಂದ ಹೊರಬರಲು ಹಾಗೂ ಆರೋಗ್ಯಕರ ಜೀವನ ನಡೆಸಲು ಲಕ್ಷಾಂತರ ಜನರು ಯೋಗವನ್ನು ತಮ್ಮ ದಿನಚರಿಯ ಭಾಗವನ್ನಾಗಿಸಿಕೊಂಡಿದ್ದಾರೆ.
ಭಾರತದ ಪ್ರಾಚೀನ ಪರಂಪರೆಯ ಅಮೂಲ್ಯ ಕೊಡುಗೆಯಾದ ಯೋಗವು ಸುಮಾರು 6,000 ವರ್ಷಗಳ ಇತಿಹಾಸವನ್ನು ಹೊಂದಿದೆ. ಇದು ಕೇವಲ ವ್ಯಾಯಾಮವಲ್ಲ; ಮನಸ್ಸು, ದೇಹ ಮತ್ತು ಆತ್ಮದ ನಡುವಿನ ಸಮತೋಲನವನ್ನು ಸಾಧಿಸುವ ಜೀವನ ವಿಧಾನವಾಗಿದೆ. ಯೋಗ ದಿನದ ಅಂಗವಾಗಿ ವಿಶ್ವದ ಅನೇಕ ದೇಶಗಳಲ್ಲಿ ಯೋಗಾಭ್ಯಾಸ, ಧ್ಯಾನ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಿಚಾರ ಸಂಕಿರಣಗಳು ನಡೆಯುತ್ತವೆ.
ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆ
2014ರಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗ ದಿನ ಆಚರಣೆಯ ಪ್ರಸ್ತಾವನೆ ಮಂಡಿಸಿದ್ದರು. ಬಳಿಕ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ 177 ರಾಷ್ಟ್ರಗಳು ಈ ಪ್ರಸ್ತಾವನೆಗೆ ಬೆಂಬಲ ಸೂಚಿಸಿದ್ದು, ಇದು ಐತಿಹಾಸಿಕ ಸಾಧನೆಯಾಗಿ ಗುರುತಿಸಲ್ಪಟ್ಟಿತು. ಅದರ ಫಲವಾಗಿ 2015ರ ಜೂನ್ 21ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ನವದೆಹಲಿಯ ರಾಜಪಥದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿ 84 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿ 21 ಯೋಗಾಸನಗಳನ್ನು ಅಭ್ಯಾಸ ಮಾಡಿದ್ದರು.
ಜೂನ್ 21ರ ವಿಶೇಷತೆ ಏನು?
ಜೂನ್ 21 ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ದೀರ್ಘ ದಿನವಾಗಿದ್ದು, ಇದನ್ನು ಬೇಸಗೆ ಆಯನ ಸಂಕ್ರಾಂತಿ ದಿನ ಎಂದು ಕರೆಯಲಾಗುತ್ತದೆ. ಯೋಗ ಪರಂಪರೆಯ ಪ್ರಕಾರ ಈ ದಿನವು ಆಧ್ಯಾತ್ಮಿಕ ಸಾಧನೆಗೆ ವಿಶೇಷ ಮಹತ್ವ ಹೊಂದಿದೆ. ಇದೇ ಸಮಯದಿಂದ ದಕ್ಷಿಣಾಯಣ ಪ್ರಾರಂಭವಾಗುತ್ತದೆ ಎಂದು ನಂಬಲಾಗುತ್ತದೆ. ಆಧ್ಯಾತ್ಮಿಕ ಬೆಳವಣಿಗೆಗೆ ಪ್ರಕೃತಿಯ ಬೆಂಬಲ ಹೆಚ್ಚಾಗುವ ಅವಧಿಯ ಆರಂಭವಾಗಿ ಇದನ್ನು ಪರಿಗಣಿಸಲಾಗುತ್ತದೆ.
ಯೋಗದ ಮಹತ್ವ
ಯೋಗವು ಕೇವಲ ದೇಹದ ಆರೋಗ್ಯವನ್ನು ಕಾಪಾಡುವುದಲ್ಲ; ಮನಸ್ಸಿನ ಏಕಾಗ್ರತೆ, ಭಾವನಾತ್ಮಕ ಸಮತೋಲನ ಮತ್ತು ಆತ್ಮೀಯ ಶಾಂತಿಯನ್ನು ಬೆಳೆಸಲು ಸಹಕಾರಿಯಾಗಿದೆ. ಇದು ವ್ಯಕ್ತಿಯನ್ನು ಪ್ರಕೃತಿಯೊಂದಿಗೆ ಮತ್ತು ತನ್ನ ಅಂತರಂಗದೊಂದಿಗೆ ಸಂಪರ್ಕಿಸುವ ಮಾರ್ಗವಾಗಿದೆ. ಆರೋಗ್ಯಕರ ಜೀವನಶೈಲಿ ರೂಪಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ಸಮಗ್ರ ಯೋಗಕ್ಷೇಮವನ್ನು ಹೆಚ್ಚಿಸಲು ಯೋಗ ಪ್ರಮುಖ ಪಾತ್ರ ವಹಿಸುತ್ತದೆ.
ಗಿನ್ನಿಸ್ ದಾಖಲೆ ನಿರ್ಮಿಸಿದ್ದ ಮೊದಲ ಯೋಗ ದಿನ
2015ರ ಮೊದಲ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಎರಡು ಗಿನ್ನಿಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿತ್ತು. ಸುಮಾರು 35,985 ಜನರು ಒಂದೇ ಸ್ಥಳದಲ್ಲಿ ಯೋಗಾಭ್ಯಾಸ ನಡೆಸುವ ಮೂಲಕ ಅತಿದೊಡ್ಡ ಯೋಗ ತರಗತಿಯ ದಾಖಲೆ ನಿರ್ಮಿಸಲಾಯಿತು. ಜೊತೆಗೆ 84 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸುವ ಮೂಲಕ ಮತ್ತೊಂದು ದಾಖಲೆಯೂ ಸೃಷ್ಟಿಯಾಯಿತು. ಈ ಐತಿಹಾಸಿಕ ಸಂದರ್ಭದ ನೆನಪಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ 10 ರೂಪಾಯಿ ಸ್ಮಾರಕ ನಾಣ್ಯವನ್ನೂ ಬಿಡುಗಡೆ ಮಾಡಿತ್ತು.
2026ರ ಯೋಗ ದಿನದ ಥೀಮ್
2026ರ 12ನೇ ಅಂತಾರಾಷ್ಟ್ರೀಯ ಯೋಗ ದಿನದ ಅಧಿಕೃತ ಥೀಮ್ ʼಆರೋಗ್ಯಪೂರ್ಣ ವಯಸ್ಸಿಗೆ ಯೋಗʼ (Yoga for Healthy Ageing). ಎಲ್ಲ ವಯೋಮಾನದ ಜನರು ಆರೋಗ್ಯಕರವಾಗಿ ವಯಸ್ಸಾಗಲು, ದೈಹಿಕ ಚಟುವಟಿಕೆಯನ್ನು ಉಳಿಸಿಕೊಳ್ಳಲು, ಮಾನಸಿಕ ಸ್ಥೈರ್ಯವನ್ನು ಬೆಳೆಸಿಕೊಳ್ಳಲು ಹಾಗೂ ಸ್ವಾವಲಂಬಿ ಜೀವನಶೈಲಿಯನ್ನು ಅನುಸರಿಸಲು ಯೋಗ ಹೇಗೆ ಸಹಕಾರಿಯಾಗಿದೆ ಎಂಬುದನ್ನು ಈ ವರ್ಷದ ಥೀಮ್ ಒತ್ತಿಹೇಳುತ್ತದೆ.
ಯೋಗವು ಮಾನವ ಜೀವನದಲ್ಲಿ ಆರೋಗ್ಯ, ಸಂತೋಷ ಮತ್ತು ಸಮತೋಲನವನ್ನು ತರಬಲ್ಲ ಶಕ್ತಿಯುತ ಸಾಧನವಾಗಿದ್ದು, ವಿಶ್ವ ಯೋಗ ದಿನವು ಅದರ ಮಹತ್ವವನ್ನು ಮತ್ತೊಮ್ಮೆ ನೆನಪಿಸುವ ದಿನವಾಗಿದೆ.