ನೀವು ತಿನ್ನುವ ‘ಹೆಲ್ದಿ’ ಬೆಳಗಿನ ತಿಂಡಿಯೇ ನಿಮ್ಮ 'ಶುಗರ್' ಹೆಚ್ಚಿಸುತ್ತಿದೆಯಾ? ಮಧುಮೇಹಿಗಳು ತಿಳಿಯಲೇಬೇಕಾದ ಸತ್ಯ
ಬೆಳಗಿನ ತಿಂಡಿ ದಿನದ ಅತ್ಯಂತ ಪ್ರಮುಖವಾದ ಊಟ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ, ನಿಮಗೆ ಮಧುಮೇಹ ಇದ್ದರೆ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಪ್ರಯತ್ನಿಸುತ್ತಿದ್ದರೆ, ಕೊಂಚ ಎಚ್ಚರ ಅಗತ್ಯ. ಮಾರುಕಟ್ಟೆಯಲ್ಲಿ ‘ಹೆಲ್ದಿ’ ಎಂದು ಪ್ರಚಾರ ಮಾಡುವ ಎಲ್ಲಾ ಆಹಾರಗಳೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ ಆಗಿರಬೇಕೆಂದಿಲ್ಲ.
-
ಪ್ರೊ.ಡಾ.ಅರವಿಂದ ಜೆ, ಡಾ. ಅರವಿಂದ್ಸ್ ಡಯಾಬಿಟಿಸ್ ಸೆಂಟರ್, ಬಸವೇಶ್ವರ ನಗರ, ಬೆಂಗಳೂರು
ಬೆಳಗಿನ ತಿಂಡಿ ದಿನದ ಅತ್ಯಂತ ಪ್ರಮುಖವಾದ ಊಟ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ, ನಿಮಗೆ ಮಧುಮೇಹ ಇದ್ದರೆ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಪ್ರಯತ್ನಿಸುತ್ತಿದ್ದರೆ, ಕೊಂಚ ಎಚ್ಚರ ಅಗತ್ಯ. ಮಾರುಕಟ್ಟೆಯಲ್ಲಿ ‘ಹೆಲ್ದಿ’ ಎಂದು ಪ್ರಚಾರ ಮಾಡುವ ಎಲ್ಲಾ ಆಹಾರಗಳೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ ಆಗಿರಬೇಕೆಂದಿಲ್ಲ.
ಬ್ರೇಕ್ಫಾಸ್ಟ್ ಸೀರಿಯಲ್ಸ್, ಗ್ರಾನೋಲಾ ಬಾರ್ಗಳು, ಯೋಗರ್ಟ್ ಡ್ರಿಂಕ್ಸ್, ಹಣ್ಣಿನ ಜ್ಯೂಸ್, ಸ್ಮೂಥಿಗಳು ಅಥವಾ ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಒಮ್ಮೆಲೇ ಏರುಪೇರಾಗಬಹುದು.
ಕಾರ್ಬೋಹೈಡ್ರೇಟ್ ಕೆಟ್ಟದ್ದಲ್ಲ, ಆದರೆ ಆಯ್ಕೆ ಸರಿಯಿರಲಿ
ಹಾಗೆಂದ ಮಾತ್ರಕ್ಕೆ ಕಾರ್ಬೋಹೈಡ್ರೇಟ್ಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದರ್ಥವಲ್ಲ. ಬದಲಿಗೆ, ನೀವು ಯಾವ ರೀತಿಯ ಕಾರ್ಬೋಹೈಡ್ರೇಟ್ ತಿನ್ನುತ್ತಿದ್ದೀರಿ, ಎಷ್ಟು ಪ್ರಮಾಣದಲ್ಲಿ ತಿನ್ನುತ್ತಿದ್ದೀರಿ ಹಾಗೂ ಅದರ ಜೊತೆಗೆ ಬೇರೇನು ಬೆರೆಸುತ್ತಿದ್ದೀರಿ ಎಂಬುದು ಇಲ್ಲಿ ಬಹಳ ಮುಖ್ಯ ವಾಗುತ್ತದೆ.
ಇದನ್ನೂ ಓದಿ: Health Tips: ಮಹಿಳೆಯರಿಗೆ ಫ್ರೊಟೀನ್ ಆಹಾರ ಏಕೆ ಅಗತ್ಯ!
ಉದಾಹರಣೆಗೆ: ಹಾಲಿನ ಜೊತೆ ಒಂದು ಬೌಲ್ 'ಸೀರಿಯಲ್ಸ್' ತಿನ್ನುವುದು ಮೇಲ್ನೋಟಕ್ಕೆ ಆರೋಗ್ಯಕರ ಆಯ್ಕೆಯಂತೆ ಕಾಣಬಹುದು. ಆದರೆ, ಹೆಚ್ಚು ಸೀರಿಯಲ್ಸ್ ತಿಂದಾಗ ದೇಹಕ್ಕೆ ಹೆಚ್ಚಿನ ಕಾರ್ಬೋಹೈಡ್ರೇಟ್ ಸೇರುತ್ತದೆ. ಜೊತೆಗೆ, ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಅಗತ್ಯವಿರುವ ನಾರಿನಂಶ ಮತ್ತು ಪ್ರೋಟೀನ್ ಅದರಲ್ಲಿ ಇರುವುದಿಲ್ಲ. ಹಣ್ಣಿನ ಜ್ಯೂಸ್ಗಳ ಕತೆಯೂ ಇದೇ; ಇವುಗಳಲ್ಲಿ ನೈಸರ್ಗಿಕ ಸಕ್ಕರೆಯ ಪ್ರಮಾಣ ವಿಪರೀತವಾಗಿರುತ್ತದೆ.
ಡಯಾಬಿಟಿಸ್ ಇರುವವರ ಬೆಳಗಿನ ತಿಂಡಿ ಹೇಗಿರಬೇಕು?
ಮಧುಮೇಹಿಗಳಿಗೆ ಸೂಕ್ತವಾದ ತಿಂಡಿಯಲ್ಲಿ ನಾರಿನಂಶ ಹೆಚ್ಚಿರುವ ಕಾರ್ಬೋಹೈಡ್ರೇಟ್ಗಳ ಜೊತೆಗೆ ಪ್ರೋಟೀನ್ ಮತ್ತು ಉತ್ತಮ ಕೊಬ್ಬಿನಂಶ ಇರಲೇಬೇಕು. ಇವು ಹೊಟ್ಟೆ ತುಂಬಿದ ಅನುಭವ ನೀಡುವುದರ ಜೊತೆಗೆ, ಸಕ್ಕರೆ ಮಟ್ಟ ಒಮ್ಮೆಲೇ ಏರಿಕೆಯಾಗದಂತೆ ತಡೆಯುತ್ತವೆ.
ಕೆಲವು ಉತ್ತಮ ಆಯ್ಕೆಗಳು ಇಲ್ಲಿವೆ
* ತರಕಾರಿಗಳನ್ನು ಬಳಸಿ ಮಾಡಿದ ಕಡಲೆಹಿಟ್ಟಿನ ಚಿಲ್ಲಾ ಜೊತೆಗೆ ಮೊಸರು.
* ಬೇಯಿಸಿದ ಮೊಟ್ಟೆ ಮತ್ತು ಗೋಧಿ ಬ್ರೆಡ್ (ಹೋಲ್ ವೀಟ್) ಜೊತೆಗೆ ತರಕಾರಿಗಳು
* ಕಡಿಮೆ ಪ್ರಮಾಣದ ಓಟ್ಸ್ಗೆ ಡ್ರೈ ಫ್ರೂಟ್ಸ್ ಸೇರಿಸಿ ಸೇವಿಸುವುದು.
ನಮ್ಮ ದೇಶಿ ತಿಂಡಿಗಳಲ್ಲೂ ಇರಲಿ ಕೊಂಚ ಬದಲಾವಣೆ
ನಮ್ಮ ದಿನನಿತ್ಯದ ಭಾರತೀಯ ತಿಂಡಿಗಳನ್ನು ಮಧುಮೇಹಿಗಳಿಗೆ ತಕ್ಕಂತೆ ಸುಲಭವಾಗಿ ಬದಲಾಯಿಸಿಕೊಳ್ಳಬಹುದು. ಇದಕ್ಕಾಗಿ ಆಹಾರದ ಪ್ರಮಾಣ ಮತ್ತು ತಯಾರಿಸುವ ವಿಧಾನದ ಬಗ್ಗೆ ಗಮನ ಹರಿಸಬೇಕು.
ಉದಾಹರಣೆಗೆ, ಅವಲಕ್ಕಿ ಅಥವಾ ಉಪ್ಪಿಟ್ಟಿಗೆ ಹೆಚ್ಚು ತರಕಾರಿಗಳನ್ನು ಸೇರಿಸುವುದು. ಇದರ ಜೊತೆಗೆ ಮೊಟ್ಟೆ, ಮೊಳಕೆ ಕಾಳುಗಳು, ಮೊಸರು ಅಥವಾ ಪ್ರೋಟೀನ್ ಇರುವ ಇತರ ಆಹಾರ ಗಳನ್ನು ಸೇರಿಸಿಕೊಂಡರೆ ನಿಮ್ಮ ತಿಂಡಿ ಸಮತೋಲಿತವಾಗುತ್ತದೆ.
ನೀವು ನೆನಪಿಡಬೇಕಾದ ಪ್ರಮುಖ ಅಂಶಗಳು
ಪ್ರಮಾಣದ ಬಗ್ಗೆ ಎಚ್ಚರವಿರಲಿ: ಆಹಾರ ಎಷ್ಟೇ ಆರೋಗ್ಯಕರವಾಗಿದ್ದರೂ, ಅದನ್ನು ಅತಿಯಾಗಿ ತಿಂದರೆ ಸಕ್ಕರೆ ಮಟ್ಟ ಹೆಚ್ಚಾಗುವುದು ಖಂಡಿತ. ಹಣ್ಣುಗಳನ್ನು ಜ್ಯೂಸ್ ಮಾಡಿಕೊಂಡು ಕುಡಿ ಯುವ ಬದಲು ಹಾಗೆಯೇ ಕಚ್ಚಿ ತಿನ್ನುವುದು ಹೆಚ್ಚು ಸೂಕ್ತ. ಹಣ್ಣುಗಳನ್ನು ತಿನ್ನುವಾಗಲೂ ಮಿತಿಯಿರಲಿ ಮತ್ತು ಅದರ ಜೊತೆಗೆ ಪ್ರೋಟೀನ್ ಇರುವ ಆಹಾರವಿದ್ದರೆ ಉತ್ತಮ.
ಲೇಬಲ್ ಓದುವ ಅಭ್ಯಾಸ ಬೆಳೆಸಿಕೊಳ್ಳಿ: ನಾವು ಮಾಡುವ ಬಹುದೊಡ್ಡ ತಪ್ಪೆಂದರೆ, ಪ್ಯಾಕೆಟ್ಗಳ ಮೇಲಿರುವ ‘ಶುಗರ್ ಫ್ರೀ’ (ಸಕ್ಕರೆ ಇಲ್ಲ), ‘ಮಲ್ಟಿಗ್ರೇನ್’ ಅಥವಾ ‘ಹೆಲ್ತಿ’ ಎಂಬ ಜಾಹೀರಾತುಗಳನ್ನು ಕುರುಡಾಗಿ ನಂಬುವುದು. ಯಾವುದೇ ಪ್ಯಾಕೆಟ್ ಆಹಾರ ಖರೀದಿಸುವ ಮುನ್ನ ಅದರ ಹಿಂದಿರುವ ಪೌಷ್ಟಿಕಾಂಶದ ಮಾಹಿತಿ ಓದುವುದನ್ನು ಮರೆಯದಿರಿ.
ಕೊನೆಯದಾಗಿ, ಪ್ರತಿಯೊಬ್ಬರ ದೇಹಪ್ರಕೃತಿಯೂ ಭಿನ್ನವಾಗಿರುತ್ತದೆ. ಆದ್ದರಿಂದ ಎಲ್ಲರಿಗೂ ಒಂದೇ ರೀತಿಯ ಬೆಳಗಿನ ತಿಂಡಿ ಸೂಕ್ತವಾಗುವುದಿಲ್ಲ. ನೀವು ತೆಗೆದುಕೊಳ್ಳುವ ಔಷಧಿ, ನಿಮ್ಮ ದೈಹಿಕ ಶ್ರಮ, ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಒಟ್ಟಾರೆ ಆರೋಗ್ಯದ ಆಧಾರದ ಮೇಲೆ ನಿಮ್ಮ ಆಹಾರದ ಆಯ್ಕೆ ಇರಬೇಕು.
ಯಾವುದೋ ಒಂದು ಆಹಾರ 'ಹೆಲ್ತಿ' ಎಂದು ಕೇವಲ ಅದನ್ನೇ ತಿನ್ನುವ ಬದಲು, ಎಲ್ಲ ಬಗೆಯ ಪೌಷ್ಟಿಕಾಂಶಗಳಿರುವ ಸಮತೋಲಿತ ಆಹಾರ ಸೇವನೆಗೆ ಒತ್ತು ನೀಡಿ. ಬೆಳಗಿನ ತಿಂಡಿಯ ಆಯ್ಕೆ ಯಲ್ಲಿ ನೀವು ಮಾಡುವ ಇಂತಹ ಸಣ್ಣಪುಟ್ಟ ಬದಲಾವಣೆಗಳೂ, ದಿನವಿಡೀ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ.