ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂಡಾಶಯದ ಕ್ಯಾನ್ಸರ್: ಈ ಮೌನ ರೋಗವನ್ನು ಮಹಿಳೆಯರು ಎಂದಿಗೂ ನಿರ್ಲಕ್ಷಿಸುವಂತಿಲ್ಲ

ಅಂಡಾಶಯದ ಕ್ಯಾನ್ಸರ್ ಅಂಡಾಶಯ ಅಥವಾ ಫಾಲೋಪಿಯನ್ ಟ್ಯೂಬ್‌ಗಳಲ್ಲಿ (ಅಂಡನಾಳ) ಪ್ರಾರಂಭವಾಗುತ್ತದೆ. ಆದರೆ ಸ್ತನ ಕ್ಯಾನ್ಸರ್‌ಗೆ ಸ್ವಯಂ-ಪರೀಕ್ಷಾ ವಿಧಾನಗಳು ಅಥವಾ ಗರ್ಭ ಕಂಠದ ಕ್ಯಾನ್ಸರ್‌ಗೆ ಸ್ಕ್ರೀನಿಂಗ್ ಪರೀಕ್ಷೆ ಇರುವಂತೆ, ಅಂಡಾಶಯದ ಕ್ಯಾನ್ಸರ್‌ಗೆ ಸರಾಸರಿ ಅಪಾಯದಲ್ಲಿರುವ ಮಹಿಳೆಯರಿಗೆ ಯಾವುದೇ ಸುಲಭವಾದ ಪತ್ತೆ ಪರೀಕ್ಷೆ ಇಲ್ಲ.

ಈ ಮೌನ ರೋಗವನ್ನು ಮಹಿಳೆಯರು ಎಂದಿಗೂ ನಿರ್ಲಕ್ಷಿಸುವಂತಿಲ್ಲ

-

Ashok Nayak Ashok Nayak Sep 24, 2025 11:46 AM

ಡಾ. ನಂದೀಶ್ ಕುಮಾರ್ ಜೀವಂಗಿ, ಹಿರಿಯ ಸಲಹೆಗಾರರು, ವೈದ್ಯಕೀಯ ಆಂಕೊಲಾಜಿ (ಕ್ಯಾನ್ಸರ್ ಚಿಕಿತ್ಸಾ ವಿಭಾಗ), ಎಚ್‌ಸಿಜಿ ಕ್ಯಾನ್ಸರ್ ಸೆಂಟರ್, ಕಲಬುರಗಿ.

ಮಹಿಳೆಯರು ಕೆಲಸ, ಮನೆ ಮತ್ತು ತಮ್ಮ ಪ್ರೀತಿಪಾತ್ರರ ಆರೈಕೆಯನ್ನು ಹೇಗೆ ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಈ ಜಂಜಾಟದಲ್ಲಿ ಅನೇಕ ಮಹಿಳೆಯರು ಹೊಟ್ಟೆ ಉಬ್ಬರ, ಅನಿಯಮಿತ ಮುಟ್ಟು ಅಥವಾ ನಿರಂತರ ಆಯಾಸದಂತಹ ಆರೋಗ್ಯ ಸಮಸ್ಯೆಗಳನ್ನು ಬದಿಗೊತ್ತುತ್ತಾರೆ. ಇವುಗಳನ್ನು ದೈನಂದಿನ ಜೀವನದ ಭಾಗ ಅಥವಾ ಒತ್ತಡದ ಪರಿಣಾಮ ಎಂದು ಭಾವಿಸಲಾಗುತ್ತದೆ. ಆದರೆ, ಕೆಲವೊಮ್ಮೆ ಈ ಸಣ್ಣ ಲಕ್ಷಣಗಳು ಅಂಡಾಶಯದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯ ಮುನ್ಸೂಚನೆಯಾಗಿರಬಹುದು. ಇದನ್ನು ಸಾಮಾನ್ಯವಾಗಿ "ಗೊತ್ತಾಗದಂತೆ ಕೊಲ್ಲುವ ರೋಗ " (silent killer) ಎಂದು ಕರೆಯಲಾಗುತ್ತದೆ, ಏಕೆಂದರೆ ಇದು ಯಾವುದೇ ಸ್ಪಷ್ಟ ಎಚ್ಚರಿಕೆಗಳಿಲ್ಲದೆ ಸದ್ದಿಲ್ಲದೆ ಬೆಳೆಯುತ್ತದೆ ಮತ್ತು ಸಾಮಾನ್ಯವಾಗಿ ತಡವಾಗಿ ಪತ್ತೆಯಾಗುತ್ತದೆ ಅನೇಕ ಮಹಿಳೆಯರು ವೈದ್ಯರ ಬಳಿ ತಲುಪುವಷ್ಟರಲ್ಲಿ, ರೋಗವು ಈಗಾಗಲೇ ಹರಡಿರುತ್ತದೆ.

ಈ ಕಾರಣಕ್ಕಾಗಿಯೇ ಜಾಗೃತಿ ಅತ್ಯಗತ್ಯ. ಕುಟುಂಬಗಳು, ತಾಯಂದಿರು, ಸಹೋದರಿಯರು, ಹೆಣ್ಣುಮಕ್ಕಳು ಮತ್ತು ಆರೈಕೆ ಮಾಡುವವರು ರೋಗಲಕ್ಷಣಗಳನ್ನು ತಿಳಿದುಕೊಳ್ಳಬೇಕು ಮತ್ತು ಅಸಾಮಾನ್ಯವೆನಿಸಿದರೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು.

ಅಂಡಾಶಯದ ಕ್ಯಾನ್ಸರ್ ಪತ್ತೆಹಚ್ಚುವುದು ಏಕೆ ಕಷ್ಟ?

ಅಂಡಾಶಯದ ಕ್ಯಾನ್ಸರ್ ಅಂಡಾಶಯ ಅಥವಾ ಫಾಲೋಪಿಯನ್ ಟ್ಯೂಬ್‌ಗಳಲ್ಲಿ (ಅಂಡನಾಳ) ಪ್ರಾರಂಭವಾಗುತ್ತದೆ. ಆದರೆ ಸ್ತನ ಕ್ಯಾನ್ಸರ್‌ಗೆ ಸ್ವಯಂ-ಪರೀಕ್ಷಾ ವಿಧಾನಗಳು ಅಥವಾ ಗರ್ಭ ಕಂಠದ ಕ್ಯಾನ್ಸರ್‌ಗೆ ಸ್ಕ್ರೀನಿಂಗ್ ಪರೀಕ್ಷೆ ಇರುವಂತೆ, ಅಂಡಾಶಯದ ಕ್ಯಾನ್ಸರ್‌ಗೆ ಸರಾಸರಿ ಅಪಾಯದಲ್ಲಿರುವ ಮಹಿಳೆಯರಿಗೆ ಯಾವುದೇ ಸುಲಭವಾದ ಪತ್ತೆ ಪರೀಕ್ಷೆ ಇಲ್ಲ.

ಇದನ್ನೂ ಓದಿ: Health Tips: ಆಹಾರಕ್ಕೂ ಅಂಟಿವೆಯಲ್ಲ ಮಿಥ್ಯೆಗಳು!

ರೋಗಲಕ್ಷಣಗಳು ತುಂಬಾ ಸೂಕ್ಷ್ಮ:

* ನಿರಂತರ ಹೊಟ್ಟೆ ಉಬ್ಬರ

* ಕೆಳಹೊಟ್ಟೆಯಲ್ಲಿ ಅಸ್ವಸ್ಥತೆ ಅಥವಾ ನೋವು

* ಜೀರ್ಣಕ್ರಿಯೆಯಲ್ಲಿ ತೊಂದರೆ

* ನಿರಂತರ ಆಯಾಸ

ಈ ಲಕ್ಷಣಗಳು ಸಾಮಾನ್ಯ ಹೊಟ್ಟೆಯ ಅಥವಾ ಆರೋಗ್ಯ ಸಮಸ್ಯೆಗಳಂತೆ ಕಾಣುವುದರಿಂದ, ಅನೇಕ ಮಹಿಳೆಯರು ಅವುಗಳನ್ನು ನಿರ್ಲಕ್ಷಿಸುತ್ತಾರೆ. ಇದೇ ಕಾರಣಕ್ಕೆ ಅಂಡಾಶಯದ ಕ್ಯಾನ್ಸರ್ ಸಾಮಾನ್ಯವಾಗಿ ಕೊನೆಯ ಹಂತಗಳಲ್ಲಿ ಮಾತ್ರ ಪತ್ತೆಯಾಗುತ್ತದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ಪ್ರಕಾರ, ಭಾರತದಲ್ಲಿ ಹೆಚ್ಚಿನ ಅಂಡಾಶಯದ ಕ್ಯಾನ್ಸರ್ ಪ್ರಕರಣಗಳು ರೋಗವು ಅಂಡಾಶಯಗಳನ್ನು ಮೀರಿ ಹರಡಿದ ನಂತರವೇ ಪತ್ತೆಯಾಗುತ್ತವೆ. ಕುಟುಂಬದ ಇತಿಹಾಸವೂ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಅಂಡಾಶಯ ಅಥವಾ ಸ್ತನ ಕ್ಯಾನ್ಸರ್ ಇದ್ದರೆ, ಅಪಾಯ ಹೆಚ್ಚಾಗಿರುತ್ತದೆ. ಆದರೂ, ಸಣ್ಣ ನಗರಗಳು ಮತ್ತು ಗ್ರಾಮೀಣ ಪ್ರದೇಶ ಗಳಲ್ಲಿನ ಅನೇಕ ಮಹಿಳೆಯರಿಗೆ ಈ ಅಪಾಯದ ಬಗ್ಗೆ ಅರಿವಿಲ್ಲ.

ವಿಳಂಬವಾದರೆ ಅಪಾಯ ಕಟ್ಟಿಟ್ಟ ಬುತ್ತಿ

ಅಂಡಾಶಯದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದು ಚಿಕಿತ್ಸೆಯ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಮೊದಲ ಹಂತಗಳಲ್ಲಿ, ಇದು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸು ತ್ತದೆ ಮತ್ತು ರೋಗಿಗಳು ಬದುಕುಳಿಯುವ ಸಾಧ್ಯತೆಗಳು ಗಮನಾರ್ಹವಾಗಿ ಸುಧಾರಿಸುತ್ತವೆ. ಆದರೆ, ರೋಗನಿರ್ಣಯವು ತಡವಾದಾಗ, ಕ್ಯಾನ್ಸರ್ ಹೊಟ್ಟೆಯೊಳಗೆ ಹರಡಿ, ಚಿಕಿತ್ಸೆಯನ್ನು ಅತ್ಯಂತ ಕಠಿಣಗೊಳಿಸುತ್ತದೆ. ಆಗ, ದೊಡ್ಡ ಶಸ್ತ್ರಚಿಕಿತ್ಸೆಗಳು ಮತ್ತು ದೀರ್ಘಾವಧಿಯ ಕೀಮೋಥೆರಪಿ ಅವಧಿಗಳು ಅನಿವಾರ್ಯವಾಗುತ್ತವೆ.

ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿನ ಮಹಿಳೆಯರ ಪಾಲಿಗೆ ಈ ವಿಳಂಬವು ಕೆಲವೊಮ್ಮೆ ಇನ್ನೂ ಹೆಚ್ಚಿನ ಸಂಕಷ್ಟಕ್ಕೆ ದೂಡುತ್ತದೆ. ಕ್ಯಾನ್ಸರ್ ತಜ್ಞರಿರುವ ಸುಸಜ್ಜಿತ ಆಸ್ಪತ್ರೆಗಳು ದೂರ ದಲ್ಲಿರುವುದು, ಪ್ರಯಾಣದ ವೆಚ್ಚ, ಆರ್ಥಿಕ ಅಡಚಣೆಗಳು ಮತ್ತು ರೋಗಲಕ್ಷಣಗಳು ತೀರಾ ಗಂಭೀರವಾಗುವವರೆಗೂ ವೈದ್ಯರನ್ನು ಸಂಪರ್ಕಿಸದಿರುವ ಮನೋಭಾವ – ಇವೆಲ್ಲವೂ ಸಮಸ್ಯೆ ಯನ್ನು ಮತ್ತಷ್ಟು ಜಟಿಲಗೊಳಿಸುತ್ತವೆ. ಅಷ್ಟರಲ್ಲಿ, ಚಿಕಿತ್ಸೆಯು ದುಸ್ತರವಾಗುವುದಲ್ಲದೆ, ಕುಟುಂಬಗಳು ತೀವ್ರ ಮಾನಸಿಕ ಒತ್ತಡ ಮತ್ತು ಅಸಹಾಯಕ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಇಂದು ಲಭ್ಯವಿರುವ ಚಿಕಿತ್ಸಾ ಆಯ್ಕೆಗಳು

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕ್ಯಾನ್ಸರ್ ಆರೈಕೆಯು ಗಣನೀಯವಾಗಿ ಮುಂದುವರಿದಿದೆ. ಶಸ್ತ್ರಚಿಕಿತ್ಸೆಯು ಪ್ರಮುಖ ಚಿಕಿತ್ಸಾ ವಿಧಾನವಾಗಿದ್ದು, ವೈದ್ಯರು ಸಾಧ್ಯವಾದಷ್ಟು ಕ್ಯಾನ್ಸರ್ ಗಡ್ಡೆಯನ್ನು ತೆಗೆದುಹಾಕುತ್ತಾರೆ. ಇದರ ನಂತರ, ಸಾಮಾನ್ಯವಾಗಿ ಉಳಿದಿರುವ ಕ್ಯಾನ್ಸರ್ ಕೋಶ ಗಳನ್ನು ನಾಶಮಾಡಲು ಕೀಮೋಥೆರಪಿಯನ್ನು ನೀಡಲಾಗುತ್ತದೆ.

ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸವಿರುವ ಅಥವಾ ಕೆಲವು ಆನುವಂಶಿಕ ಬದಲಾವಣೆಗಳನ್ನು ಹೊಂದಿರುವ ಮಹಿಳೆಯರಿಗೆ, 'ಟಾರ್ಗೆಟೆಡ್ ಥೆರಪಿ' (ಉದಾಹರಣೆಗೆ, PARP ಇನ್ಹಿಬಿಟರ್‌ಗಳು) ನಂತಹ ಹೊಸ ಔಷಧಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತಿವೆ. ಈ ಚಿಕಿತ್ಸೆಗಳು ಕೇವಲ ಕ್ಯಾನ್ಸರ್ ಕೋಶಗಳ ಮೇಲೆ ಮಾತ್ರ ದಾಳಿ ಮಾಡುತ್ತವೆ ಮತ್ತು ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಅಡ್ಡಪರಿಣಾಮಗಳು ಕಡಿಮೆ. ಅನೇಕ ಆಸ್ಪತ್ರೆಗಳು ಈಗ 'ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸೆಗಳನ್ನು' (minimally invasive surgeries) ಬಳಸುತ್ತಿವೆ. ಇದರರ್ಥ, ಸಣ್ಣದಾದ ಗಾಯ, ಕಡಿಮೆ ನೋವು ಮತ್ತು ಶೀಘ್ರ ಚೇತರಿಕೆ. ಹೆಚ್ಚಿನ ಮಹಿಳೆಯರು ಕುಟುಂಬದ ಜವಾಬ್ದಾರಿಗಳನ್ನು ಸಹ ನಿರ್ವಹಿಸುವುದರಿಂದ, ತ್ವರಿತ ಚೇತರಿಕೆಯು ಅವರಿಗೆ ಬಹಳ ಮುಖ್ಯವಾಗುತ್ತದೆ.

ಪೋಷಕ ಆರೈಕೆಯು (Supportive care) ಚಿಕಿತ್ಸೆಯ ಮತ್ತೊಂದು ಪ್ರಮುಖ ಭಾಗ. ಪೌಷ್ಟಿಕಾಂಶದ ಸಲಹೆ, ಮಾನಸಿಕ ಸಮಾಲೋಚನೆ ಮತ್ತು ಪುನರ್ವಸತಿ ಸೇವೆಗಳು ಮಹಿಳೆಯರು ಚಿಕಿತ್ಸೆಯ ಸಮಯದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಲು ಸಹಾಯ ಮಾಡುತ್ತವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೂಡ, ನಿಯಮಿತ ಸ್ತ್ರೀರೋಗ ತಪಾಸಣೆಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಇದು ಅಪಾಯಕಾರಿ ಹಂತ ತಲುಪುವ ಮೊದಲೇ ಆರಂಭಿಕ ಎಚ್ಚರಿಕೆಯ ಚಿಹ್ನೆಗಳನ್ನು ಪತ್ತೆಹಚ್ಚಲು ಸಹಕಾರಿ.

ಮಹಿಳೆಯರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು

ಅಂಡಾಶಯದ ಕ್ಯಾನ್ಸರ್ ಅನ್ನು ಯಾವಾಗಲೂ ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಮಹಿಳೆಯರು ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ತಮ್ಮ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಬಹುದು:

ಹೆಚ್ಚು ತರಕಾರಿಗಳು, ಹಣ್ಣುಗಳು ಮತ್ತು ಇಡೀ ಧಾನ್ಯಗಳನ್ನು ಒಳಗೊಂಡಿರುವ ತಾಜಾ, ಮನೆಯಲ್ಲಿ ತಯಾರಿಸಿದ ಊಟವನ್ನು ಸೇವಿಸಿ.

ದೈನಂದಿನ ನಡಿಗೆ ಅಥವಾ ಲಘು ವ್ಯಾಯಾಮ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ವೈದ್ಯರ ಸಲಹೆ ಇಲ್ಲದೆ ಹಾರ್ಮೋನ್ ಔಷಧಗಳ ಅನಗತ್ಯ ಬಳಕೆಯನ್ನು ತಪ್ಪಿಸಿ.

ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸವಿದ್ದರೆ, ಆನುವಂಶಿಕ ಸಮಾಲೋಚನೆ (genetic counselling) ಮತ್ತು ನಿಯಮಿತ ತಜ್ಞರ ತಪಾಸಣೆಗಳ ಬಗ್ಗೆ ವೈದ್ಯರಲ್ಲಿ ವಿಚಾರಿಸಿ.

ನಿಮ್ಮ ದೇಹದ ಬಗ್ಗೆ ಗಮನವಿರಲಿ. ಹೊಟ್ಟೆ ಉಬ್ಬರ, ನೋವು ಅಥವಾ ನಿರಂತರ ಆಯಾಸವು ವಾರಗಟ್ಟಲೆ ಮುಂದುವರಿದರೆ, ಅದನ್ನು ನಿರ್ಲಕ್ಷಿಸಬೇಡಿ, ತಕ್ಷಣ ವೈದ್ಯರನ್ನು ಭೇಟಿ ಮಾಡಿ.

ಎಲ್ಲಕ್ಕಿಂತ ಹೆಚ್ಚಾಗಿ, ಮನೆಯಲ್ಲಿ ಆರೋಗ್ಯದ ಬಗ್ಗೆ ಮುಕ್ತವಾಗಿ ಸಂಭಾಷಿಸುವುದನ್ನು ಪ್ರೋತ್ಸಾ ಹಿಸಿ. ತಾಯಂದಿರು, ಹೆಣ್ಣುಮಕ್ಕಳು ಮತ್ತು ಸಹೋದರಿಯರು ಪರಸ್ಪರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಮೌನವನ್ನು ಮುರಿಯಿರಿ

ಅಂಡಾಶಯದ ಕ್ಯಾನ್ಸರ್ ಮೂಕವಾಗಿರಬಹುದು, ಆದರೆ ಅದನ್ನು ಸೋಲಿಸಲು ಸಾಧ್ಯವಿದೆ. ಹೆಚ್ಚುತ್ತಿರುವ ಜಾಗೃತಿ, ಸುಧಾರಿತ ಚಿಕಿತ್ಸಾ ವಿಧಾನಗಳು ಮತ್ತು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವುದರಿಂದ, ಬದುಕುಳಿಯುವವರ ಪ್ರಮಾಣವು ಸುಧಾರಿಸುತ್ತಿದೆ. ಎಲ್ಲ ಕುಟುಂಬಗಳಿಗೆ ನೀಡುವ ಸಂದೇಶ ಸರಳ. ದೀರ್ಘಕಾಲ ಕಾಡುವ ಸಣ್ಣಪುಟ್ಟ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಆರಂಭಿಕ ಹಂತದಲ್ಲೇ ವೈದ್ಯಕೀಯ ಸಲಹೆ ಪಡೆಯಿರಿ. ನಿಮ್ಮ ಪ್ರೀತಿಪಾತ್ರರು ನಿಯಮಿತ ಆರೋಗ್ಯ ತಪಾಸಣೆಗೆ ಹೋಗಲು ಪ್ರೋತ್ಸಾಹಿಸಿ ಮತ್ತು ಬೆಂಬಲ ನೀಡಿ. ಒಂದು ಸಮಯೋಚಿತ ನಿರ್ಧಾರವು ಕೇವಲ ಒಂದು ಜೀವವನ್ನು ಉಳಿಸುವುದಲ್ಲದೆ, ಇಡೀ ಕುಟುಂಬದ ಸಂತೋಷವನ್ನು ಕಾಪಾಡುತ್ತದೆ.