Kitchen Tips: ದ್ರಾಕ್ಷಿಯನ್ನು ಸ್ವಚ್ಛ ಮಾಡುವುದು ಕಷ್ಟವೇ? ಇಲ್ಲಿದೆ ಸಿಂಪಲ್ ಟಿಪ್ಸ್
How to Clean Grapes: ದ್ರಾಕ್ಷಿಯಂಥ ಹಣ್ಣುಗಳನ್ನು ತಂದರೆ, ʻಗುಳುಂʼ ಮಾಡುವುದು ಎಷ್ಟು ಇಷ್ಟವೋ, ಅದನ್ನು ತೊಳೆದು ಸ್ವಚ್ಛ ಮಾಡುವುದು ಅಷ್ಟೇ ಕಷ್ಟ. ಅದರಲ್ಲೂ ಅತಿಯಾಗಿ ಕೀಟನಾಶಕ ಸಿಂಪಡಿಸಿಕೊಳ್ಳುವ ಮತ್ತು ಗೊಂಚಲಾಗಿ ತೂಗುವ ದ್ರಾಕ್ಷಿಯಂಥ ಹಣ್ಣುಗಳನ್ನು ಚೆನ್ನಾಗಿ ತೊಳೆಯದಿದ್ದರೆ ಅದರ ಕಶ್ಮಲಗಳೆಲ್ಲ ಸೇರುವುದು ನಮ್ಮದೇ ಹೊಟ್ಟೆಗೆ. ಹಾಗಾದರೆ ದ್ರಾಕ್ಷಿಯನ್ನು ತೊಳೆದು ಸ್ವಚ್ಛಗೊಳಿಸುವುದು ಹೇಗೆ?
ಸಾಂದರ್ಭಿಕ ಚಿತ್ರ -
ದೆಹಲಿ, ಏ. 23: ಮಾರುಕಟ್ಟೆಯಲ್ಲಿ ತೂಗುತ್ತಿರುವ ರಸಭರಿತ ಹಣ್ಣು-ತರಕಾರಿಗಳನ್ನು ಹೊತ್ತು ತರುವುದು ಎಷ್ಟೋ ಜನರಿಗೆ ಬಹಳ ಪ್ರಿಯವಾದ ಸಂಗತಿ. ತಂದ ಮೇಲೆ ಅವುಗಳನ್ನು ತೊಳೆದು ಶುಚಿಗೊಳಿಸುವುದು ರೇಜಿಗೆಯ ಕೆಲಸ. ಅದರಲ್ಲೂ ದ್ರಾಕ್ಷಿಯಂಥ (Grapes) ಹಣ್ಣುಗಳನ್ನು ತಂದರೆ, ʻಗುಳುಂʼ ಮಾಡುವುದು ಎಷ್ಟು ಇಷ್ಟವೋ, ಅದನ್ನು ತೊಳೆದು ಸ್ವಚ್ಛ ಮಾಡುವುದು ಅಷ್ಟೇ ಕಷ್ಟ. ಅದರಲ್ಲೂ ಅತಿಯಾಗಿ ಕೀಟನಾಶಕ ಸಿಂಪಡಿಸಿಕೊಳ್ಳುವ ಮತ್ತು ಗೊಂಚಲಾಗಿ ತೂಗುವ ದ್ರಾಕ್ಷಿಯಂಥ ಹಣ್ಣುಗಳನ್ನು ಚೆನ್ನಾಗಿ ತೊಳೆಯದಿದ್ದರೆ ಅದರ ಕಶ್ಮಲಗಳೆಲ್ಲ ಸೇರುವುದು ನಮ್ಮದೇ ಹೊಟ್ಟೆಗೆ. ಹಾಗಾದರೆ ದ್ರಾಕ್ಷಿಯಂಥವನ್ನು ತೊಳೆದು ಸ್ವಚ್ಛಗೊಳಿಸುವುದು ಹೇಗೆ?
ನಾವು ಸೇವಿಸುವ ಹಣ್ಣು-ತರಕಾರಿಗಳೆಲ್ಲವೂ ಸ್ಥಳೀಯವಾಗಿ ಬೆಳೆಯುವಂಥದ್ದಾದರೆ ಕೊಳೆ, ದೂಳು, ರೋಗಾಣುಗಳು ಮತ್ತು ಸಂರಕ್ಷಕಗಳಿಗೆ ಹೆಚ್ಚು ಒಡ್ಡಿಕೊಳ್ಳುವ ಮುನ್ನವೇ ಉತ್ಪನ್ನಗಳನ್ನು ಖರೀದಿಸುವ ಸಾಧ್ಯತೆಯಾದರೂ ಇರಬಹುದು. ಆದರೆ ಕೆಲವು ಪ್ರದೇಶಗಳಲ್ಲಿ ಕೆಲವು ಬೆಳೆಗಳು ಬೆಳೆಯುವುದಿಲ್ಲ. ಸೇಬು, ದ್ರಾಕ್ಷಿ, ಕಿತ್ತಳೆಯಂಥವು ಎಲ್ಲೋ ಬೆಳೆದು ಎಲ್ಲಿಗೋ ಹೋಗಿ ಮಾರಾಟ ವಾಗುವಂಥವು. ಆಗ ಸಂರಕ್ಷಕಗಳನ್ನು ಬಳಕೆ ಮಾಡುವುದು ಸಾಮಾನ್ಯ. ಮಾವಿನಂಥ ಬೆಳೆಗಳ ಹಾಗೆ ಬೆಳೆಯುವಾಗಲೇ ಕೀಟನಾಶಗಳ ಅಭಿಷೇಕ ಮಾಡಿಸಿಕೊಂಡಿದ್ದರಂತೂ, ಅವುಗಳ ಶೇಷ ತೆಗೆಯುವುದು ದೊಡ್ಡ ಸಾಹಸ. ಇವುಗಳನ್ನು ತಿನ್ನುವ ಮುನ್ನ ಏನು ಮಾಡಬಹುದು?
ಹರಿಯುವ ನೀರು: ಹಣ್ಣು ಹರಿಯುವ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸುವುದು ಎಲ್ಲಕ್ಕಿಂತ ಸುಲಭ ಮತ್ತು ಸುರಕ್ಷಿತವಾದ ಸ್ವಚ್ಛತಾ ಮಾರ್ಗ. ಆದರೆ ದ್ರಾಕ್ಷಿಯ ಗೊಂಚಲಿನಲ್ಲಿ ತೂಗುವ ಎಲ್ಲಾ ಹಣ್ಣುಗಳನ್ನೂ ನಲ್ಲಿಯಡಿ ಹಿಡಿದು, ತೊಳೆದು ಶುಚಿ ಮಾಡುವುದು ಆಗದ ಕೆಲಸ. ಹಾಗೆ ಮಾಡಲು ಪ್ರಯತ್ನಿಸಿದರೆ ಹಣ್ಣುಗಳೆಲ್ಲ ಉದುರಿ ಚೆಲ್ಲಾಪಿಲ್ಲಿಯಾಗುವುದು ನಿಶ್ಚಿತ. ಆದರೆ ಸ್ವಚ್ಛವಾಗಿ ತೊಳೆಯುವುದರಿಂದಲೇ ಬಹಳಷ್ಟು ರಾಸಾಯನಿಕ ಶೇಷ ಮತ್ತು ಕೊಳೆ-ಕಶ್ಮಲಗಳನ್ನು ನಿವಾಳಿಸಬಹುದು ಎನ್ನುವುದೂ ಸತ್ಯ ತಾನೆ?
ನೆನೆಸಿಡಿ: ದೊಡ್ಡದೊಂದು ಪಾತ್ರೆಯಲ್ಲಿ ನೀರು ತುಂಬಿ ಹತ್ತಿಪ್ಪತ್ತು ನಿಮಿಷಗಳ ಕಾಲ ದ್ರಾಕ್ಷಿಯನ್ನು ಗೊಂಚಲಿನಲ್ಲೇ ನೆನೆಸಿಡಿ. ನಂತರ ಚಮಚವೊಂದನ್ನು ಹಾಕಿ ದ್ರಾಕ್ಷಿಗಳನ್ನು ಲಘುವಾಗಿ ಕಲಕಿ ಅಥವಾ ಕೈ ಹಾಕಿ ಕದಡಿ. ನೀರು ಬಸಿದು, ಇನ್ನೊಂದೆರಡು ಬಾರಿ ಹೀಗೆಯೇ ಮಾಡಿ. ದ್ರಾಕ್ಷಿ ಬೆಳೆಗೆ ರಾಸಾಯನಿಕಗಳ ಸೇಚನೆ ಮಾಮೂಲಿಯಾದ್ದರಿಂದ, ಈ ಕ್ರಮಗಳ ಮೂಲಕ ನೀರಿನಲ್ಲಿ ಕರಗಬಹುದಾದ ರಾಸಾಯನಿಕಗಳನ್ನೆಲ್ಲ ತೆಗೆಯಬಹುದು. jತೆಗೆ ದೂಳು, ಕೊಳೆ, ಸಣ್ಣ ಕೀಟಗಳನ್ನೆಲ್ಲ ಸ್ವಚ್ಛ ಮಾಡಬಹುದು.
ಉಪ್ಪು, ಸೋಡಾ, ವಿನೇಗರ್: ನೀರಿನಲ್ಲಿ ದ್ರಾಕ್ಷಿಗಳನ್ನು ನೆನೆಸುವಾಗ ಒಂದು ಚಮಚ ಉಪ್ಪು ಹಾಕಿ ಹತ್ತಿಪ್ಪತ್ತು ನಿಮಿಷಗಳ ಕಾಲ ನೆನೆಸಿ. ಇದರಿಂದ ಹಲವು ರೀತಿಯ ರೋಗಾಣುಗಳನ್ನು ನಾಶ ಮಾಡಬಹುದು. ಉಪ್ಪಿನ ಬದಲಿಗೆ, ಅಡುಗೆ ಸೋಡಾ ಹಾಕುವ ಕ್ರಮವೂ ಉಪಯುಕ್ತ. ಇದರಿಂದಲೂ ಹಲವು ರೀತಿಯ ಬ್ಯಾಕ್ಟೀರಿಯಗಳನ್ನು ನಾಶಪಡಿಸಬಹುದು. ಮೊದಲಿಗೆ ಹಣ್ಣು-ತರಕಾರಿಗಳನ್ನು ನೆನೆಸುವ ಹಂತದಲ್ಲಿ ವಿನೇಗರ್ ಹಾಕುವ ಕ್ರಮವೂ ಉಪಯುಕ್ತ.
ಚೆನ್ನಾಗಿ ಜಾಲಾಡಿಸಿ: ಆದರೆ ನೀರಿನಲ್ಲಿ ಉಪ್ಪು, ಅಡುಗೆ ಸೋಡಾ, ವಿನೇಗರ್ ಮುಂತಾದ ಯಾವುದನ್ನೇ ಹಾಕಿದರೂ, ನಂತರ ಮೂರ್ನಾಲ್ಕು ಬಾರಿ ಮತ್ತೆ ಮತ್ತೆ ಹಣ್ಣು-ತರಕಾರಿಗಳನ್ನು ತೊಳೆಯಬೇಕಾಗುತ್ತದೆ. ಹಾಗಿಲ್ಲದಿದ್ದರೆ ಉಪ್ಪಿನ ರುಚಿ, ವಿನೇಗರ್‌ನ ಹುಳಿಯಂಶ ಅಥವಾ ಸೋಡಾದ ಒಗರುಗಳೆಲ್ಲ ದ್ರಾಕ್ಷಿಯಂಥ ಗೊಂಚಲುಗಳ ಪದರುಗಳಲ್ಲಿ ಉಳಿಯುವುದು ಖಚಿತ. ಹಾಗಾಗಿ ಮತ್ತೆ ಮತ್ತೆ ನೀರಿನಲ್ಲಿ ನೆನೆಸಿ ಜಾಲಾಡಿಸಿ ತೊಳೆಯಿರಿ.
ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇದೆಯೇ? ಇದಕ್ಕೆ ಕಾರಣವೇನು?
ಅರಿಶಿನ: ಸಾವಯವ ಉತ್ಪನ್ನಗಳನ್ನು ಖರೀದಿಸಿದರೂ, ಹರಿಯುವ ನೀರಲ್ಲಿ ಅಥವಾ ನೆನೆಸಿಯಾದರೂ ತೊಳೆಯುವುದು ಉತ್ತಮ. ಬೇರೆ ರಾಸಾಯನಿಕಗಳು ಇಲ್ಲದಿದ್ದರೂ, ದೂಳು, ಮಣ್ಣಿನಂಥ ಕೊಳೆಗಳು, ಸಣ್ಣ ಕೀಟಗಳು ಮತ್ತು ರೋಗಾಣುಗಳು ಇದಕ್ಕೆ ತಪ್ಪುವುದಿಲ್ಲ. ಒಂದೊಮ್ಮೆ ಸೋಡಾ ಅಥವಾ ವಿನೇಗರ್ ಹಾಕುವುದು ಇಷ್ಟವಿಲ್ಲದಿದ್ದರೆ, ಅರಿಶಿನ ಪುಡಿಯ ನೀರಲ್ಲಿ ನೆನೆಸುವುದು ಸಹ ಪರಿಣಾಮಕಾರಿ ಮಾರ್ಗ. ಇದರಿಂದಲೂ ಹಣ್ಣುಗಳನ್ನು ರೋಗಾಣು ಮತ್ತು ಕೀಟಗಳಿಂದ ಮುಕ್ತವಾಗಿಸಬಹುದು.
ಈ ಉತ್ಪನ್ನಗಳನ್ನು ತಕ್ಷಣ ತಿನ್ನುವುದಕ್ಕಲ್ಲದೆ, ಫ್ರಿಜ್‌ನಲ್ಲಿ ಇರಿಸಿಕೊಳ್ಳುವುದಕ್ಕೆ ಸ್ವಚ್ಛ ಮಾಡುತ್ತಿದ್ದೀರಿ ಎಂದಾದರೆ, ಸ್ವಚ್ಛತೆಯ ನಂತರ ಶುಭ್ರ ಹತ್ತಿಯ ಬಟ್ಟೆಯ ಮೇಲೆ ಇವುಗಳನ್ನೆಲ್ಲ ಹರವಿಡಿ. ತಂಪಾದ, ನೆರಳಿನಂಥ ಸ್ಥಳದಲ್ಲಿ ಇವುಗಳನ್ನು ಒಂದೆರಡು ತಾಸುಗಳವರೆಗೆ ಆರಲು ಬಿಡಬಹುದು. ಆರಿದ ನಂತರ ಗಾಳಿಯಾಡುವಂಥ ಮೆಶ್ ಬ್ಯಾಗ್‌ಗಳಲ್ಲಿ ಅಥವಾ ಕಂಟೇನರ್‌ಗಳಲ್ಲಿ ಹಾಕಿ ಫ್ರಿಜ್‌ನಲ್ಲಿಡಿ. ಬೇಕಾದಾಗ ಉಪಯೋಗಿಸಿ