Vishwavani Health: ಆಹಾರ ಸೇವನೆಯ ವಿಧಾನದಲ್ಲಿದೆ ಆರೋಗ್ಯದ ಗುಟ್ಟು: ವಿಜ್ಞಾನ ಹೇಳೋದೇನು?
ಆರೋಗ್ಯವಾಗಿರಲು ಆಹಾರದ ಪ್ರಮಾಣ, ಆಹಾರದ ಗುಣಮಟ್ಟ, ಆಹಾರ ಸೇವಿಸುವ ಸಮಯ ಮಾತ್ರವಲ್ಲ ಆಹಾರ ಸೇವಿಸುವ ಅವಧಿ ಕೂಡ ಮುಖ್ಯವಾಗಿರುತ್ತದೆ. ಇದು ಜಪಾನಿಗರ ಆರೋಗ್ಯದ ಗುಟ್ಟು ಎನ್ನುತ್ತಾರೆ ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ. ಈ ಕುರಿತು ಅವರು 'ವಿಶ್ವವಾಣಿ ಹೆಲ್ತ್; ಯುಟ್ಯೂಬ್ ಚಾನಲ್‌ಗೆ ನೀಡಿರುವ ಮಾಹಿತಿ ಇಲ್ಲಿದೆ.
ಡಾ. ಸುತ್ತೂರು ಮಾಲಿನಿ -
ಬೆಂಗಳೂರು: ʼಊಟ ಬಲ್ಲವನಿಗೆ ರೋಗವಿಲ್ಲʼ ಎನ್ನುವ ಗಾದೆ ಮಾತು ಸುಮ್ಮನೆ ಬಂದಿಲ್ಲ. ಊಟ ಮಾಡುವ ವಿಧಾನದಲ್ಲಿ ಅಡಗಿದೆ ಆರೋಗ್ಯಪೂರ್ಣ ಬದುಕಿನ ಗುಟ್ಟು. ಊಟ ಮಾಡುವಾಗ ಸಾವಧಾನವಾಗಿ, ಗಮನಕೊಟ್ಟು ತಿನ್ನವುದು ಬಹಳ ಮುಖ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini) ಹೇಳಿದರು. ʼವಿಶ್ವವಾಣಿ ಹೆಲ್ತ್ʼ (Vishwavani Health) ಯುಟ್ಯೂಬ್ ಚಾನಲ್‌ನಲ್ಲಿ ಕೇಶವ್ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.
ಸಾಮಾನ್ಯವಾಗಿ ನಾವು ಶೇಕಡಾ 80ರಷ್ಟು ಊಟ ಮಾಡಿ ಮೇಲೆ ಏಳಬೇಕು ಎನ್ನುತ್ತಾರೆ ಹಿರಿಯರು. ಇದಕ್ಕೆ ಕಾರಣ ಕೂಡ ಇದೆ ಎಂದ ಅವರು ಜಪಾನಿಗರು ಎಂದರೆ ದೀರ್ಘಾಯುಷಿಗಳು ಎನ್ನಲಾಗುತ್ತದೆ. ಇದರ ಗುಟ್ಟಿರುವುದು ಅವರ ಆಹಾರ ಸೇವನೆಯ ಕ್ರಮದಲ್ಲಿ ಎಂದರು.
ಡಾ. ಸುತ್ತೂರು ಮಾಲಿನಿ ಅವರೊಂದಿಗಿನ ಸಂದರ್ಶನ:
ನಾವು ಎಷ್ಟು ವರ್ಷ ಬದುಕುತ್ತೇವೆ ಎನ್ನುವುದಕ್ಕಿಂತ ಬದುಕಿರುವವರೆಗೆ ಆರೋಗ್ಯವಾಗಿರಬೇಕು ಎನ್ನುವುದು ಮುಖ್ಯವಾಗುತ್ತದೆ. ಜಪಾನಿಗರು ಒತ್ತಡ ನಿವಾರಣೆ ಮಾಡೋಕೆ ಕಾಡಿನಲ್ಲಿ ವಾಕಿಂಗ್ ಮಾಡುವುದು ಅಭ್ಯಾಸ ಮಾಡಿಕೊಳ್ಳುತ್ತಾರೆ. ಇದಕ್ಕೆ ಸಂಬಂಧಿಸಿ ಅಲ್ಲಿ ಕಾನೂನು ಕೂಡ ಬಂದಿತ್ತು ಎಂದು ತಿಳಿಸಿದರು.
ಅನ್ನದೊಂದಿಗೆ ಎಣ್ಣೆ, ಚಟ್ನಿ ಪುಡಿ ಸೇವನೆ ಉತ್ತಮವೇ?
ನಮ್ಮ ಜನರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂದು ಗೊತ್ತಿದೆ. ಆದರೆ ಹೊಸತನ ಅವರನ್ನು ಆಕರ್ಷಿಸುತ್ತದೆ. ಹಳೆಯದು ಪುರಾತನ ಎನಿಸುತ್ತದೆ. ಆದರೆ ನಮ್ಮ ಆರೋಗ್ಯವಿರುವುದು ನಮ್ಮ ಹಳೆಯ ಆಹಾರ ಸೇವನೆಯ ಪದ್ದತಿಯಲ್ಲಿ. ಇನ್ನೂ ಸ್ವಲ್ಪ ಆಹಾರ ಬೇಕು ಎನ್ನುವಾಗಲೇ ಊಟ ಮುಕ್ತಾಯಗೊಳಿಸಬೇಕು ಎನ್ನುವುದು ಜಪಾನಿಗರ ಆಹಾರ ಸೇವನೆಯ ಗುಟ್ಟು. ಹಿಂದೆ ಎಲ್ಲ ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು. ಈ ಭಂಗಿಯಲ್ಲಿ ಊಟ ಮಾಡುವವರಿಗೆ ಬೊಜ್ಜು ಬರುವುದಿಲ್ಲ. ಯಾಕೆಂದರೆ ಆ ಭಂಗಿಯಲ್ಲಿ ಹೆಚ್ಚು ಆಹಾರ ಸೇವನೆ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.
ಸಾಮಾನ್ಯವಾಗಿ ಹೊಟ್ಟೆ ಖಾಲಿ ಇದ್ದಾಗ ಹಸಿವಾಗುತ್ತದೆ. ಇದಕ್ಕೆ ಗ್ರೆಲಿನ್ ಹಾರ್ಮೋನ್ ಕಾರಣವಾಗುತ್ತದೆ. ಅದು ಹೊಟ್ಟೆ ಖಾಲಿಯಾಗಿರುವ ಸೂಚನೆಯನ್ನು ಹೈಪೋತಲಾಮಿಸ್ ಗ್ರಂಥಿಗೆ ನೀಡುತ್ತದೆ. ಇದುವೇ ನಮಗೆ ಎಷ್ಟು ಎನರ್ಜಿ ಬೇಕು ಎನ್ನುವ ಸೂಚನೆಯನ್ನು ಕೂಡ ಕೊಡುತ್ತದೆ. ಈ ಸೂಚನೆ ಸಿಕ್ಕ ಮೇಲೆಯೇ ತೃಪ್ತಿಯನ್ನು ನೀಡುವ ಹಾರ್ಮೋನ್ ಬಿಡುಗಡೆಯಾಗುತ್ತದೆ ಎಂದರು.
ತೃಪ್ತಿ ಸಿಗುವ ಹಾರ್ಮೋನ್ ಬಿಡುಗಡೆಯಾಗಬೇಕಾದರೆ ಕನಿಷ್ಠ 30 ನಿಮಿಷ ಬೇಕು. ಅದಕ್ಕಾಗಿ ಆಹಾರವನ್ನು ನಿಧಾನವಾಗಿ ಸೇವಿಸಬೇಕು ಎನ್ನುತ್ತಾರೆ. ಆಹಾರ ಸೇವನೆಯ 20 ನಿಮಿಷಗಳ ಬಳಿಕ ಬಿಡುಗಡೆಯಾಗುವ ಲೆಪ್ಟಿನ್ ಹಾರ್ಮೋನ್ ನಮಗೆ ಇನ್ನು ಆಹಾರ ಸಾಕು ಎನ್ನುವ ಸೂಚನೆಯನ್ನು ನೀಡುತ್ತದೆ ಎಂದು ವಿವರಿಸಿದರು.
ದೇಹಕ್ಕೆ ಎಷ್ಟು ಬೇಕು ಅಷ್ಟೇ ತಿಂದರೆ ಬೊಜ್ಜು ಬರುವುದಿಲ್ಲ. ಒಬಿಸಿಟಿ ಬರಲು ಯಾವ ರೀತಿಯ ಆಹಾರ ಸೇವಿಸುತ್ತಿದ್ದೀರಿ ಎಂಬುದು ಮಾತ್ರವಲ್ಲ ಯಾವ ರೀತಿ ಆಹಾರ ಸೇವಿಸುತ್ತಿದ್ದೀರಿ ಎನ್ನುವುದು ಕೂಡ ಕಾರಣವಾಗಿರುತ್ತದೆ. ಅವಸರವಸರವಾಗಿ ಆಹಾರ ಸೇವನೆ ಮಾಡಿದಾಗ ನಾವು ಹೆಚ್ಚು ಆಹಾರ ಸೇವಿಸುತ್ತೇವೆ. ದೇಹಕ್ಕೆ ಸಾಕು ಎನ್ನುವ ಸಿಗ್ನಲ್ ಸಿಗಲು ಕನಿಷ್ಠ 20 ನಿಮಿಷ ಬೇಕೇಬೇಕು. ಅಷ್ಟರಲ್ಲಿ ನಾವು ನಮ್ಮ ದೇಹದ ಅವಶ್ಯಕತೆಗಿಂತ ಹೆಚ್ಚು ಸೇವಿಸಿರುತ್ತೇವೆ ಎಂದು ಅವರು ಹೇಳಿದರು.
ಮೊಣಕಾಲುಗಳನ್ನು ದುರ್ಬಲಗೊಳಿಸಬಹುದಾದ 8 ದಿನನಿತ್ಯದ ಅಭ್ಯಾಸಗಳು
ಚೆನ್ನಾಗಿ ಅಗೆದು ತಿನ್ನುವವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ದೇಹಾರೋಗ್ಯ ಚೆನ್ನಾಗಿ ಇರಬೇಕಾದರೆ ಆಹಾರ ತಿನ್ನುವ ಸಮಯ, ತಿನ್ನುವ ವಿಧಾನ, ಮನಸ್ಸಿನ ಸ್ಥಿತಿ ಕೂಡ ಕಾರಣವಾಗಿರುತ್ತದೆ. ಕೆಲವೊಮ್ಮೆ ಹೊಟ್ಟೆಯನ್ನು ಖಾಲಿ ಬಿಡುವುದು ಕೂಡ ಒಳ್ಳೆಯದು. ಇದರಿಂದ ಕೆಲವೊಂದು ಕಾಯಿಲೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಆಗ ದೇಹದಲ್ಲಿರುವ ಎನರ್ಜಿ ಸರಿಯಾದ ರೀತಿಯಲ್ಲಿ ಬಳಕೆಯಾಗಿ ದೇಹದಲ್ಲಿರುವ ವಿಷಕಾರಿ ಅಂಶಗಳು ನಾಶವಾಗಲು ಕಾರಣವಾಗುತ್ತದೆ ಎಂದು ಡಾ. ಸುತ್ತೂರು ಮಾಲಿನಿ ತಿಳಿಸಿದರು.