ಸಕ್ಕರೆ ಬಿಟ್ಟು ಬೆಲ್ಲ ತಿನ್ನುತ್ತಿದ್ದೀರಾ? ಇದರಿಂದ ನಿಜಕ್ಕೂ ತೂಕ ಇಳಿಯುತ್ತಾ? ವೈದ್ಯರು ನೀಡುವ ಸಲಹೆ ಇಲ್ಲಿದೆ
Jaggery vs Sugar: ತೂಕ ಇಳಿಸಿಕೊಳ್ಳುವ ಭರದಲ್ಲಿ ಸಕ್ಕರೆಯ ಬದಲು ಬೆಲ್ಲವನ್ನು ಬಳಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಸಕ್ಕರೆಗೆ ಹೋಲಿಸಿದರೆ ಬೆಲ್ಲವು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ತೂಕ ಇಳಿಕೆಗೆ ಹೆಚ್ಚು ಸಹಾಯ ಮಾಡುತ್ತದೆ ಎಂಬುದು ಕೇವಲ ತಪ್ಪು ಕಲ್ಪನೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಈ ಎರಡೂ ಆಹಾರ ಪದಾರ್ಥಗಳು ದೇಹದ ಮೇಲೆ ಬೀರುವ ನಿಜವಾದ ಪರಿಣಾಮವೇನು ಇಲ್ಲಿದೆ ನೋಡಿ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಪ್ರತಿದಿನ ನಾವು ಸೇವಿಸುವ ಚಹಾ, ಕಾಫಿ ಅಥವಾ ಸಿಹಿ ತಿಂಡಿಗಳಲ್ಲಿ ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸುವುದು ಆರೋಗ್ಯಕರ ಎಂಬ ನಂಬಿಕೆ ಬಹುತೇಕರಲ್ಲಿದೆ. ತೂಕ ಇಳಿಸಿಕೊಳ್ಳಲು ಬಯಸುವವರು ಬಿಳಿ ಸಕ್ಕರೆಯನ್ನು ಬಿಟ್ಟು ಬೆಲ್ಲದ ಮೊರೆ ಹೋಗುತ್ತಾರೆ (Jaggery vs Sugar). ಆದರೆ ಸಕ್ಕರೆಗೆ ಹೋಲಿಸಿದರೆ ಬೆಲ್ಲ ನಿಜಕ್ಕೂ ಅಷ್ಟು ಉತ್ತಮವೇ? ಇದರಿಂದ ತೂಕ ಇಳಿಯುತ್ತದೆಯೇ ಅಥವಾ ಇದು ಕೇವಲ ತಪ್ಪು ಕಲ್ಪನೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ.
ಸಕ್ಕರೆ ಮತ್ತು ಬೆಲ್ಲದ ನಡುವಿನ ವ್ಯತ್ಯಾಸವನ್ನು ಅನೇಕರು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಸಿಹಿ ಸೇವನೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ವೈಜ್ಞಾನಿಕವಾಗಿ ನೋಡಿದಾಗ ಇವೆರಡರ ನಡುವಿನ ಅಂತರವು ನಾವು ಅಂದುಕೊಂಡಷ್ಟು ದೊಡ್ಡದಲ್ಲ. ತೂಕ ಇಳಿಸುವ ಭರದಲ್ಲಿ ಬೆಲ್ಲವನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯದ ಮೇಲೆ ಪರಿಣಾಮಗಳನ್ನು ಉಂಟುಮಾಡಬಹುದು. ಹೀಗಾಗಿ ಬೆಲ್ಲಕ್ಕೂ ಸಕ್ಕರೆಗೂ ಇರುವ ಅಸಲಿ ವ್ಯತ್ಯಾಸವೇನು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ.
ಬೆಲ್ಲ ಎಂದರೇನು ಮತ್ತು ಸಕ್ಕರೆಗಿಂತ ಇದು ಹೇಗೆ ಭಿನ್ನ?
ಬಿಳಿ ಸಕ್ಕರೆಯನ್ನು ತಯಾರಿಸಲು ಕಬ್ಬಿನ ರಸವನ್ನು ಅತ್ಯಂತ ಹೆಚ್ಚು ಸಂಸ್ಕರಿಸಿ ಅದರಲ್ಲಿರುವ ಎಲ್ಲ ನೈಸರ್ಗಿಕ ಅಂಶಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ತಯಾರಿಸಲಾಗುತ್ತದೆ. ಆದರೆ ಬೆಲ್ಲವನ್ನು ತಯಾರಿಸಲು ಕಬ್ಬಿನ ರಸವನ್ನು ಅಥವಾ ತಾಳೆ ರಸವನ್ನು ಸಾಂಪ್ರದಾಯಿಕ ವಿಧಾನದಲ್ಲಿ ಕುದಿಸಿ, ಯಾವುದೇ ಹಾನಿಕಾರಕ ರಾಸಾಯನಿಕಗಳಿಲ್ಲದೆ ತಯಾರಿಸಲಾಗುತ್ತದೆ. ಇದೇ ಕಾರಣಕ್ಕೆ ಬೆಲ್ಲದಲ್ಲಿ ಕಬ್ಬಿನಲ್ಲಿರುವ ಕೆಲವು ನೈಸರ್ಗಿಕ ಖನಿಜಾಂಶಗಳು ಹಾಗೇ ಉಳಿದುಕೊಳ್ಳುತ್ತವೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಪ್ರಕಾರ ನೈಸರ್ಗಿಕ ಸಿಹಿಕಾರಕವು ಈ ಪೌಷ್ಟಿಕಾಂಶಗಳನ್ನು ಹೊಂದಿವೆ.
- ಶಕ್ತಿ: 383 ಕಿಲೋ ಕ್ಯಾಲೋರಿ
- ಕಾರ್ಬೋಹೈಡ್ರೇಟ್: 98-99 ಗ್ರಾಂ
- ಪ್ರೋಟೀನ್: 0.4 ಗ್ರಾಂ
- ಕೊಬ್ಬು: 0.1 ಗ್ರಾಂ
- ಕ್ಯಾಲ್ಸಿಯಂ: 40-100 ಮಿಗ್ರಾಂ
- ಕಬ್ಬಿಣ: 11 ಮಿಗ್ರಾಂ
- ಮೆಗ್ನೀಸಿಯಮ್: 70-90 ಮಿಗ್ರಾಂ
- ಪೊಟ್ಯಾಸಿಯಮ್: 1050 ಮಿಗ್ರಾಂ
- ರಂಜಕ: 20-90 ಮಿಗ್ರಾಂ
- ಸೋಡಿಯಂ: 19-30 ಮಿಗ್ರಾಂ
ಬೆಲ್ಲ ತಿಂದರೆ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತಾ?
ಸಕ್ಕರೆಗಿಂತ ಬೆಲ್ಲ ಆರೋಗ್ಯದ ದೃಷ್ಟಿಯಿಂದ ಉತ್ತಮ ಏಕೆ?
ಅಗತ್ಯ ಖನಿಜಾಂಶಗಳು: ಬೆಲ್ಲದಲ್ಲಿ ಕಬ್ಬಿಣಾಂಶ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಆ್ಯಂಟಿಆಕ್ಸಿಡೆಂಟ್ಗಳ ಸಣ್ಣ ಪ್ರಮಾಣವಿರುತ್ತದೆ. ಇದು ರಕ್ತಹೀನತೆಯನ್ನು ತಡೆಯಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ: ಊಟದ ನಂತರ ಸಣ್ಣ ತುಂಡು ಬೆಲ್ಲವನ್ನು ತಿನ್ನುವುದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.
ಶ್ವಾಸಕೋಶದ ಶುದ್ಧೀಕರಣ: ಬೆಲ್ಲವು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಮತ್ತು ಉಸಿರಾಟದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಇದು ಹೆಚ್ಚು ಪ್ರಯೋಜನಕಾರಿ.
ಯಕೃತ್ತು ಶುದ್ಧೀಕರಣ: ದೇಹದಿಂದ ಹಾನಿಕಾರಕ ಕಲ್ಮಶಗಳನ್ನು ಹೊರಹಾಕುವ ಮೂಲಕ ಲಿವರ್ ಅನ್ನು ಸ್ವಾಭಾವಿಕವಾಗಿ ಶುದ್ಧೀಕರಿಸಲು ಬೆಲ್ಲ ನೆರವಾಗುತ್ತದೆ.
ಬಿಳಿ ಸಕ್ಕರೆಗೆ ಹೋಲಿಸಿದರೆ ಬೆಲ್ಲವು ಖನಿಜಾಂಶಗಳ ದೃಷ್ಟಿಯಿಂದ ಉತ್ತಮ ಆಯ್ಕೆಯಾಗಿದೆ. ಆದರೆ ತೂಕ ಇಳಿಸುವುದೇ ನಿಮ್ಮ ಗುರಿಯಾಗಿದ್ದರೆ, ಬೆಲ್ಲವನ್ನು ಮಿತವಾಗಿ ಬಳಸಬೇಕು. ಯಾವುದೇ ಸಿಹಿಯಾದರೂ ಅತಿ ಹೆಚ್ಚು ಸೇವನೆ ಆರೋಗ್ಯಕ್ಕೆ ಹಾನಿಕರ.