ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಿ.ಎಲ್.ಪಿ-1 ಚಿಕಿತ್ಸೆಯಲ್ಲಿ ಪೌಷ್ಟಿಕತೆ ಏಕೆ ಮುಖ್ಯವಾಗುತ್ತದೆ?

ಟೈಪ್ 2 ಮಧುಮೇಹ ಮತ್ತು ಬೊಜ್ಜಿನ ನಿರ್ವಹಣೆಯಲ್ಲಿ ಜಿ.ಎಲ್.ಪಿ-1 ಆಧರಿತ ಚಿಕಿತ್ಸೆಗಳು ಪ್ರಮುಖ ಆಯ್ಕೆಯಾಗಿ ಮಾರ್ಪಟ್ಟಿವೆ. ಜನರು ಬೇಗನೆ ಹೊಟ್ಟೆ ತುಂಬಿದಂತೆ ಭಾವಿಸುವಂತೆ ಮಾಡುವ ಮತ್ತು ಕಡಿಮೆ ಆಹಾರ ಸೇವಿಸುವಂತೆ ಪ್ರೇರೇಪಿಸುವ ಮೂಲಕ, ಈ ಚಿಕಿತ್ಸೆಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಆದರೆ ಈ ಪ್ರಯೋಜನಗಳ ಜೊತೆಗೆ ಪೌಷ್ಟಿಕಾಂಶದ ಕುರಿತಾದ ಒಂದು ಪ್ರಮುಖ ಅಂಶವನ್ನೂ ಗಮನಿಸಬೇಕಾಗುತ್ತದೆ.

ಜಿ.ಎಲ್.ಪಿ-1 ಚಿಕಿತ್ಸೆಯಲ್ಲಿ ಪೌಷ್ಟಿಕತೆ ಏಕೆ ಮುಖ್ಯವಾಗುತ್ತದೆ?

-

Profile
Ashok Nayak Nov 28, 2026 9:22 AM

ಜಿ.ಎಲ್.ಪಿ-1 ಚಿಕಿತ್ಸೆಗಳು ಮಧುಮೇಹ ಆರೈಕೆಯ ಸ್ವರೂಪವನ್ನೇ ಬದಲಾಯಿಸುತ್ತಿರುವ ಈ ಸಮಯದಲ್ಲಿ, ಪೌಷ್ಟಿಕಾಂಶವನ್ನು ಕಡೆಗಣಿಸುವಂತಿಲ್ಲ ಎನ್ನುತ್ತಾರೆ ತಜ್ಞರು.

ಈ ಮಧುಮೇಹ ಜಾಗೃತಿ ಮಾಸದಲ್ಲಿ ಮಧುಮೇಹದ ಕುರಿತಾದ ಚರ್ಚೆಗೆ ಹೊಸ ತಿರುವು ನೀಡುವ ಪ್ರಶ್ನೆಯೊಂದು ಎದುರಾಗಿದೆ: ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಔಷಧಿಗಳೇ ಹಸಿವನ್ನೂ ಕಡಿಮೆ ಮಾಡಿದಾಗ, ದೇಹದ ಪೌಷ್ಟಿಕಾಂಶದ ಸ್ಥಿತಿ ಏನಾಗುತ್ತದೆ?

ಜಿ.ಎಲ್.ಪಿ-1 ಚಿಕಿತ್ಸೆಯ ಸಮಯದಲ್ಲಿ ಪೌಷ್ಟಿಕಾಂಶ ಏಕೆ ಮುಖ್ಯ?

ಟೈಪ್ 2 ಮಧುಮೇಹ ಮತ್ತು ಬೊಜ್ಜಿನ ನಿರ್ವಹಣೆಯಲ್ಲಿ ಜಿ.ಎಲ್.ಪಿ-1 ಆಧರಿತ ಚಿಕಿತ್ಸೆಗಳು ಪ್ರಮುಖ ಆಯ್ಕೆಯಾಗಿ ಮಾರ್ಪಟ್ಟಿವೆ. ಜನರು ಬೇಗನೆ ಹೊಟ್ಟೆ ತುಂಬಿದಂತೆ ಭಾವಿಸುವಂತೆ ಮಾಡುವ ಮತ್ತು ಕಡಿಮೆ ಆಹಾರ ಸೇವಿಸುವಂತೆ ಪ್ರೇರೇಪಿಸುವ ಮೂಲಕ, ಈ ಚಿಕಿತ್ಸೆಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಆದರೆ ಈ ಪ್ರಯೋಜನಗಳ ಜೊತೆಗೆ ಪೌಷ್ಟಿಕಾಂಶದ ಕುರಿತಾದ ಒಂದು ಪ್ರಮುಖ ಅಂಶವನ್ನೂ ಗಮನಿಸಬೇಕಾಗುತ್ತದೆ. ಚಿಕಿತ್ಸೆಯ ಸಮಯದಲ್ಲಿ ಕ್ಯಾಲೋರಿ ಸೇವನೆಯು ಶೇ.16 ರಿಂದ ಶೇ.39 ರಷ್ಟು ಕಡಿಮೆಯಾಗಬಹುದು, ಆದರೆ ದೇಹಕ್ಕೆ ಅಗತ್ಯವಿರುವ ಪ್ರೊಟೀನ್, ವಿಟಮಿನ್‌ ಗಳು ಮತ್ತು ಖನಿಜಾಂಶಗಳ ಬೇಡಿಕೆಯು ಅದಕ್ಕೆ ತಕ್ಕಂತೆ ಕಡಿಮೆಯಾಗುವುದಿಲ್ಲ. ಚಿಕಿತ್ಸೆ ಪ್ರಾರಂಭಿಸಿದ ಮೊದಲ ವರ್ಷದಲ್ಲೇ, ಜಿ.ಎಲ್.ಪಿ-1 ಬಳಸುವ ಪ್ರತಿ ಐವರಲ್ಲಿ ಒಬ್ಬರಿಗಿಂತ ಹೆಚ್ಚು ಜನರಲ್ಲಿ ಪೌಷ್ಟಿಕಾಂಶದ ಕೊರತೆ ಕಂಡುಬಂದಿದೆ ಎಂದು ವ್ಯಾಪಕವಾದ ನೈಜ-ವಿಶ್ವದ ವಿಶ್ಲೇಷಣೆಯೊಂದು ತಿಳಿಸಿದೆ.

ಜಿ.ಎಲ್.ಪಿ-1 ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಪೌಷ್ಟಿಕಾಂಶದ ಕುರಿತಾದ ಪ್ರಮುಖ ಅಂಶಗಳು ಯಾವುವು?

ವಿಟಮಿನ್ ಡಿ, ಕಬ್ಬಿಣಾಂಶ ಮತ್ತು ವಿಟಮಿನ್ ಬಿ12 ಕೊರತೆ ವ್ಯಾಪಕವಾಗಿರುವ, ದೇಹದ ಸ್ನಾಯು ದ್ರವ್ಯರಾಶಿ ತುಲನಾತ್ಮಕವಾಗಿ ಕಡಿಮೆಯಿರುವ ಮತ್ತು ಸ್ನಾಯು ಕ್ಷೀಣತೆಯ ಪ್ರಮಾಣ ಹೆಚ್ಚಿರುವ ಭಾರತದಲ್ಲಿ ಇದು ವಿಶೇಷವಾಗಿ ಪ್ರಸ್ತುತವಾಗಿದೆ. ತಜ್ಞರು, ಎಂಡೋಕ್ರೈನಾಲಜಿಸ್ಟ್‌ ಗಳು ಮತ್ತು ಮಧುಮೇಹ ತಜ್ಞರು ಅಭಿವೃದ್ಧಿಪಡಿಸಿರುವ ಹಾಗೂ ಒಬೆಸಿಟಿ ಪಿಲ್ಲರ್ಸ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ನೂತನ ಏಷ್ಯನ್ ಇಂಡಿಯನ್ ಒಮ್ಮತದ ಶಿಫಾರಸಿನ ಪ್ರಕಾರ, ಪೌಷ್ಟಿಕಾಂಶ ವನ್ನು ಕೇವಲ ಪೂರಕ ಅಂಶವಾಗಿ ಪರಿಗಣಿಸದೆ, ಚಿಕಿತ್ಸೆಯ ಪ್ರಾರಂಭದಿಂದಲೇ ಔಷಧಿಯಷ್ಟೇ ಹೆಚ್ಚಿನ ಆದ್ಯತೆ ನೀಡಬೇಕು.

ಇದನ್ನೂ ಓದಿ: Health Tips: ಮಹಿಳೆಯರಿಗೆ ಫ್ರೊಟೀನ್ ಆಹಾರ ಏಕೆ ಅಗತ್ಯ!

ತಕ್ಕಡಿ ಮೀರಿ ಯಶಸ್ಸನ್ನು ಅಳೆಯುವುದು ಹೇಗೆ?

ತಜ್ಞರೆಲ್ಲರೂ ಒಮ್ಮತದಿಂದ ಒಂದು ಪ್ರಮುಖ ಅಂಶವನ್ನು ಪ್ರತಿಪಾದಿಸುತ್ತಾರೆ: ಯಶಸ್ಸನ್ನು ಕೇವಲ ತಕ್ಕಡಿಯಿಂದ ಮಾತ್ರ ನಿರ್ಧರಿಸಬಾರದು. ತೂಕ ಇಳಿಕೆಯಾದಾಗ ದೇಹದ ಕೇವಲ ಕೊಬ್ಬು ಮಾತ್ರವಲ್ಲದೆ, ಅಗತ್ಯವಿರುವ ಸ್ನಾಯುಗಳೂ ಕರಗುವ ಸಾಧ್ಯತೆಯಿರುತ್ತದೆ. "ಗುಣಮಟ್ಟದ" ತೂಕ ನಿರ್ವಹಣೆ ಎಂದರೆ, ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುವುದರ ಜೊತೆಗೆ ಸ್ನಾಯುಗಳನ್ನು ಉಳಿಸಿಕೊಳ್ಳುವುದು. ಇದಕ್ಕೆ ಕೇವಲ ಕಡಿಮೆ ಕ್ಯಾಲೋರಿಗಳನ್ನು ಸೇವಿಸಿದರೆ ಸಾಲದು, ಬದಲಾಗಿ ಸರಿಯಾದ ಪೌಷ್ಟಿಕಾಂಶಗಳ ಅಗತ್ಯವಿರುತ್ತದೆ.

ಕಡಿಮೆ ಪ್ರಮಾಣದ ಆಹಾರ ಸೇವನೆ ಮತ್ತು ಆಹಾರ ಸೇವಿಸುವ ಸಮಯದ ಇಳಿಕೆಯಿಂದಾಗಿ ದೇಹಕ್ಕೆ ಅಗತ್ಯವಿರುವ ಪ್ರೊಟೀನ್, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು, ಆರೋಗ್ಯಕರ ಕೊಬ್ಬು ಗಳು, ನಾರಿನಂಶ, ವಿಟಮಿನ್‌ಗಳು ಮತ್ತು ಖನಿಜಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯುವುದು ಕಷ್ಟಕರವಾಗಬಹುದು. ಇದರಿಂದಾಗಿ ಜನರು ಸೇವಿಸುವ ಆಹಾರದ ಗುಣಮಟ್ಟ ಮತ್ತು ಅದರ ಪೌಷ್ಟಿಕಾಂಶದ ಮೌಲ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಅತ್ಯಗತ್ಯವಾಗಿದೆ.

ಜನರಿಗೆ ಯಾವ ಸೂಕ್ಷ್ಮ ಮತ್ತು ಸ್ಥೂಲ ಪೋಷಕಾಂಶಗಳ ಅಗತ್ಯವಿದೆ?

ಕೇವಲ ಪ್ರೊಟೀನ್‌ ನಂತಹ ಒಂದೇ ಪೋಷಕಾಂಶದ ಮೇಲೆ ಅತಿಯಾಗಿ ಗಮನಹರಿಸದಂತೆ ಏಷ್ಯನ್ ಇಂಡಿಯನ್ ಕನ್ಸೆನ್ಸಸ್ ಎಚ್ಚರಿಸಿದೆ. ದೈನಂದಿನ ಶಕ್ತಿಯಲ್ಲಿ ಸುಮಾರು ಶೇ. 15–25 ರಷ್ಟು ಪ್ರೊಟೀನ್, ಶೇ. 45–60 ರಷ್ಟು ಸಂಕೀರ್ಣ ಕಾರ್ಬೋಹೈಡ್ರೇಟ್‌ ಗಳು ಮತ್ತು ಪ್ರಧಾನವಾಗಿ ಮೊನೊಅನ್‌ ಸ್ಯಾಚುರೇಟೆಡ್ ಫ್ಯಾಟಿ ಆಮ್ಲಗಳು ಒಳಗೊಂಡ ಶೇ. 15–30 ರಷ್ಟು ಆರೋಗ್ಯಕರ ಕೊಬ್ಬುಗಳಿರುವ ಸಮತೋಲಿತ ಸ್ಥೂಲ ಪೋಷಕಾಂಶಗಳ ಸೇವನೆಯನ್ನು ಸಮಿತಿಯು ಶಿಫಾರಸು ಮಾಡಿದೆ. ಸೂಕ್ಷ್ಮ ಪೋಷಕಾಂಶಗಳ ವಿಚಾರದಲ್ಲಿ, ಭಾರತೀಯರಲ್ಲಿ ಈಗಾಗಲೇ ಸಾಮಾನ್ಯವಾಗಿ ಕಂಡುಬರುವ ಕೊರತೆಗಳನ್ನು ನೀಗಿಸಲು ವಿಟಮಿನ್ ಡಿ, ಮೆಗ್ನೀಷಿಯಮ್, ವಿಟಮಿನ್ ಬಿ-ಕಾಂಪ್ಲೆಕ್ಸ್, ವಿಟಮಿನ್ ಸಿ ಮತ್ತು ಇ, ಸತು, ಕ್ರೋಮಿಯಂ, ಸೆಲೆನಿಯಮ್ ಮತ್ತು ಕ್ಯಾಲ್ಸಿಯಂ ಅತ್ಯಗತ್ಯವೆಂದು ಸಮಿತಿಯು ಗುರುತಿಸಿದೆ. ಕಡಿಮೆ ಪ್ರಮಾಣದ ಊಟದ ಮೂಲಕವೇ ತಮ್ಮ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಿಕೊಳ್ಳಲು ಕಷ್ಟಪಡುವವರಿಗೆ, ಕ್ಯಾಲೋರಿ-ನಿಯಂತ್ರಿತ ಆಹಾರ ಯೋಜನೆಯ ಭಾಗವಾಗಿ ಸಮತೋಲಿತ ಆಹಾರದ ಜೊತೆಗೆ, ಭಾಗಶಃ ಊಟಕ್ಕೆ ಪರ್ಯಾಯವಾಗಿ ಮಧುಮೇಹ-ನಿರ್ದಿಷ್ಟ ಪೌಷ್ಟಿಕಾಂಶದ ಸೂತ್ರಗಳನ್ನು ಬಳಸುವಂತೆ ಸಮಿತಿಯು ಒತ್ತಿ ಹೇಳಿದೆ. ಮುಖ್ಯವಾಗಿ, ಪೌಷ್ಟಿಕಾಂಶದ ಯೋಜನೆಗಳನ್ನು ಆರೋಗ್ಯ ತಜ್ಞರು ಪ್ರತಿಯೊಬ್ಬ ವ್ಯಕ್ತಿಯ ಅಗತ್ಯಕ್ಕೆ ತಕ್ಕಂತೆ ರೂಪಿಸಬೇಕು. ಸಮತೋಲಿತ ಆಹಾರ, ದೈಹಿಕ ಚಟುವಟಿಕೆ, ನಿರಂತರ ಮೇಲ್ವಿಚಾರಣೆ ಮತ್ತು ಸೂಕ್ತ ಮಾರ್ಗದರ್ಶನವನ್ನು ಒಳಗೊಂಡ ಸಮಗ್ರ ವಿಧಾನದ ಭಾಗವಾಗಿದ್ದಾಗ ಪೌಷ್ಟಿಕಾಂಶದ ಬೆಂಬಲವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ವ್ಯಾಯಾಮ ಮತ್ತು ಜೀವನಶೈಲಿಯ ನಿರ್ವಹಣೆ

ಕೇವಲ ಪೌಷ್ಟಿಕಾಂಶವೊಂದೇ ಸಾಕಾಗುವುದಿಲ್ಲ. ಸ್ನಾಯುಗಳ ದ್ರವ್ಯರಾಶಿ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಲು, ನಿಯಮಿತ ದೈಹಿಕ ಚಟುವಟಿಕೆ ಮತ್ತು ದೀರ್ಘಕಾಲ ಪಾಲಿಸಬಹುದಾದ ಆರೋಗ್ಯಕರ ಜೀವನಶೈಲಿಯ ಜೊತೆಗೆ ವಾರಕ್ಕೆ ಎರಡರಿಂದ ಮೂರು ಬಾರಿ ಪ್ರತಿರೋಧಕ ತರಬೇತಿ ಮಾಡುವಂತೆ ಸಮಿತಿಯು ಶಿಫಾರಸು ಮಾಡಿದೆ. ದಿನಕ್ಕೆ ನಾಲ್ಕರಿಂದ ಐದು ಬಾರಿ ಸ್ವಲ್ಪ ಸ್ವಲ್ಪವೇ ಆಹಾರ ಸೇವಿಸುವುದರಿಂದ ಅನೇಕ ರೋಗಿಗಳು ಅನುಭವಿಸುವ ಜೀರ್ಣಕ್ರಿಯೆಗೆ ಸಂಬಂಧಿಸಿದ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯವಾಗಬಹುದು. ಸಾಕಷ್ಟು ನೀರು ಕುಡಿಯುವುದು ಮತ್ತು ತೂಕ, ಸ್ನಾಯುಗಳ ಶಕ್ತಿ ಹಾಗೂ ರಕ್ತದಲ್ಲಿನ ಸಕ್ಕರೆಯ ಮಟ್ಟದ ನಿರಂತರ ಗಮನಿಸುವಿಕೆಯು ಈ ಸಮಗ್ರ ವಿಧಾನವನ್ನು ಪೂರ್ಣಗೊಳಿಸುತ್ತದೆ; ಇದನ್ನು ವೈದ್ಯಕೀಯ ಚಿಕಿತ್ಸೆಯಷ್ಟೇ ವ್ಯವಸ್ಥಿತವಾಗಿ ರೂಪಿಸಬೇಕು.

ಚಿಕಿತ್ಸೆಯು ಮುಗಿದ ನಂತರ ಏನಾಗುತ್ತದೆ?

ಚಿಕಿತ್ಸೆ ನಿಂತ ತಕ್ಷಣ ಪೌಷ್ಟಿಕಾಂಶದ ಬಗೆಗಿನ ಚರ್ಚೆಯೂ ಕೊನೆಗೊಳ್ಳಬಾರದು ಎಂದು ತಜ್ಞರು ಒತ್ತಿ ಹೇಳುತ್ತಾರೆ. ಜಿ.ಎಲ್.ಪಿ-1 ಆಧರಿತ ಚಿಕಿತ್ಸೆಯನ್ನು ನಿಲ್ಲಿಸುವ ವ್ಯಕ್ತಿಗಳು ಒಂದು ವರ್ಷದೊಳಗೆ ತಾವು ಈ ಹಿಂದೆ ಕಳೆದುಕೊಂಡಿದ್ದ ತೂಕದ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಮರಳಿ ಪಡೆಯುವ ಸಾಧ್ಯತೆಯಿರುತ್ತದೆ. ಜಿ.ಎಲ್.ಪಿ-1 ಚಿಕಿತ್ಸೆಯನ್ನು ನಿಲ್ಲಿಸಿದ ನಂತರವೂ, ಅಗತ್ಯವಿದ್ದರೆ ಮಧುಮೇಹ-ನಿರ್ದಿಷ್ಟ ಪೌಷ್ಟಿಕಾಂಶದ ಫಾರ್ಮುಲಾಗಳೊಂದಿಗೆ ನಿರಂತರ ಪೌಷ್ಟಿಕಾಂಶದ ಬೆಂಬಲವನ್ನು ಮುಂದುವರಿಸುವುದರಿಂದ, ಚಯಾಪಚಯ ಕ್ರಿಯೆಯ ಮರುಕಳಿಸುವಿಕೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯವಾಗಬಹುದು.

ಜ್ಯೋತಿದೇವ್ಸ್ ಡಯಾಬಿಟಿಸ್ ರಿಸರ್ಚ್ ಸೆಂಟರ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಗೂ ಈ ಒಮ್ಮತದ ವರದಿಯ ಸಹ-ಲೇಖಕ ಡಾ. ಜ್ಯೋತಿದೇವ್ ಕೇಶವದೇವ್ ಅವರು, "ಜಿ.ಎಲ್.ಪಿ-1 ಆಧರಿತ ಚಿಕಿತ್ಸೆಗಳ ಬಳಕೆ ವ್ಯಾಪಕವಾಗುತ್ತಿದ್ದಂತೆ, ಪೌಷ್ಟಿಕಾಂಶದ ಮೌಲ್ಯಮಾಪನ ಮತ್ತು ಸೂಕ್ತ ಪೌಷ್ಟಿಕಾಂಶದ ಕ್ರಮಗಳು ದೈನಂದಿನ ವೈದ್ಯಕೀಯ ಆರೈಕೆಯ ಅವಿಭಾಜ್ಯ ಅಂಗವಾಗಬೇಕಿದೆ. ಹಸಿವು ಕಡಿಮೆಯಾಗುವುದು ಮತ್ತು ಆಹಾರ ಸೇವನೆಯ ಪ್ರಮಾಣ ಇಳಿಕೆಯಾಗುವುದರಿಂದ, ವ್ಯಕ್ತಿಗಳಿಗೆ ತಮ್ಮ ದೇಹಕ್ಕೆ ಅಗತ್ಯವಿರುವ ಪ್ರೊಟೀನ್ ಮತ್ತು ಅತ್ಯಗತ್ಯ ಸೂಕ್ಷ್ಮ ಪೋಷಕಾಂಶಗಳನ್ನು ಪಡೆಯುವುದು ಕಷ್ಟಕರವಾಗಬಹುದು. ಈಗಾಗಲೇ ಪೌಷ್ಟಿಕಾಂಶದ ಕೊರತೆಯ ಅಪಾಯವಿರುವ ಮತ್ತು ತುಲನಾತ್ಮಕವಾಗಿ ಕಡಿಮೆ ಸ್ನಾಯು ಬಲವನ್ನು ಹೊಂದಿರುವ ಭಾರತೀಯ ಜನಸಂಖ್ಯೆಗೆ ಇದು ವಿಶೇಷವಾಗಿ ಅನ್ವಯಿಸುತ್ತದೆ. ಈ ಅಪಾಯಗಳನ್ನು ಆರಂಭದಲ್ಲೇ ಗುರುತಿಸುವುದರಿಂದ, ವೈದ್ಯರು ಪ್ರತಿಯೊಬ್ಬರಿಗೂ ವೈಯಕ್ತಿಕ ಪೌಷ್ಟಿಕಾಂಶದ ಮಾರ್ಗದರ್ಶನ ನೀಡಲು ಹಾಗೂ ಅವರ ಪೌಷ್ಟಿಕಾಂಶದ ಸ್ಥಿತಿ, ಸ್ನಾಯುಗಳ ಆರೋಗ್ಯ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ. ಕೇವಲ ತೂಕ ಇಳಿಸುವುದಷ್ಟೇ ಇದರ ಗುರಿಯಲ್ಲ; ಬದಲಾಗಿ, ಸ್ನಾಯುಗಳ ದ್ರವ್ಯರಾಶಿ ಮತ್ತು ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಆರೋಗ್ಯಕರ ಹಾಗೂ ದೀರ್ಘಕಾಲೀನ ತೂಕ ನಿರ್ವಹಣೆ ಮಾಡುವುದೇ ನಿಜವಾದ ಗುರಿಯಾಗಿದೆ" ಎನ್ನುತ್ತಾರೆ.

ಭಾರತದಲ್ಲಿನ ಅಬಾಟ್‌ ನ ಪೌಷ್ಟಿಕಾಂಶ ವ್ಯವಹಾರದ ವೈದ್ಯಕೀಯ ಮತ್ತು ವೈಜ್ಞಾನಿಕ ವ್ಯವಹಾರಗಳ ನಿರ್ದೇಶಕಿ ಹಾಗೂ ಈ ಒಮ್ಮತದ ವರದಿಯ ಸಹ-ಲೇಖಕಿ ಡಾ. ಪ್ರೀತಿ ಠಾಕೂರ್ ಅವರು, "ಭಾರತದ ಜಿ.ಎಲ್.ಪಿ-1 ಪಯಣವು ಕೇವಲ ಪಾಶ್ಚಿಮಾತ್ಯ ಮಾರುಕಟ್ಟೆಗಳನ್ನು ಅನುಕರಿಸಲು ಸಾಧ್ಯವಿಲ್ಲ. ಭಾರತೀಯ ರೋಗಿಗಳು ವಿಶಿಷ್ಟವಾದ ಪೌಷ್ಟಿಕಾಂಶದ ಅಗತ್ಯಗಳನ್ನು ಹೊಂದಿದ್ದು, ಔಷಧ ಚಿಕಿತ್ಸೆಯ ಜೊತೆಗೆ ಅವುಗಳಿಗೂ ಸಮಾನ ಗಮನ ನೀಡಬೇಕಾಗಿದೆ. ಇದಕ್ಕಾಗಿ ಮಧುಮೇಹ ಆರೈಕೆಯಲ್ಲಿ ಹೆಚ್ಚು ಸಮಗ್ರವಾದ ವಿಧಾನದ ಅಗತ್ಯವಿದೆ; ಅಲ್ಲಿ ವೈದ್ಯಕೀಯ ಚಿಕಿತ್ಸೆ, ಪೌಷ್ಟಿಕಾಂಶ ಮತ್ತು ಜೀವನಶೈಲಿಯ ಬೆಂಬಲವು ಒಟ್ಟಾಗಿ ಕೆಲಸ ಮಾಡುವುದರಿಂದ, ಜನರು ತಮ್ಮ ಸಂಪೂರ್ಣ ಚಿಕಿತ್ಸಾ ಅವಧಿಯಲ್ಲಿ ಪೌಷ್ಟಿಕಾಂಶದಿಂದ ಕೂಡಿರಲು, ಬಲಶಾಲಿಯಾಗಿರಲು ಮತ್ತು ಚಯಾಪಚಯ ಕ್ರಿಯೆಯಲ್ಲಿ ಆರೋಗ್ಯವಾಗಿರಲು ಸಹಾಯವಾಗುತ್ತದೆ” ಎನ್ನುತ್ತಾರೆ.

ಭಾರತದಲ್ಲಿ ಮಧುಮೇಹ ಮತ್ತು ಬೊಜ್ಜು ನಿರ್ವಹಣೆಯ ಸ್ವರೂಪವನ್ನು ಜಿ.ಎಲ್.ಪಿ-1 ಆಧರಿತ ಚಿಕಿತ್ಸೆಗಳು ಬದಲಾಯಿಸುತ್ತಿರುವ ಈ ಸಂದರ್ಭದಲ್ಲಿ, ತಜ್ಞರ ಸಂದೇಶ ಸ್ಪಷ್ಟವಾಗಿದೆ: ಔಷಧವು ಕೇವಲ ಚಿಕಿತ್ಸೆಯ ಒಂದು ಭಾಗವಷ್ಟೇ. ಸಮತೋಲಿತ ಪೌಷ್ಟಿಕಾಂಶ, ನಿಯಮಿತ ವ್ಯಾಯಾಮ ಮತ್ತು ದೀರ್ಘಕಾಲದವರೆಗೆ ಪಾಲಿಸಬಹುದಾದ ಆರೋಗ್ಯಕರ ಜೀವನಶೈಲಿಯ ಅಭ್ಯಾಸಗಳು ಕೂಡ ಅಷ್ಟೇ ಮುಖ್ಯವಾಗಿವೆ; ಇವು ಕೇವಲ ಚಿಕಿತ್ಸೆಯ ಆರಂಭದಲ್ಲಿ ಮಾತ್ರವಲ್ಲದೆ, ಚಿಕಿತ್ಸೆ ಮುಗಿದ ಬಹಳ ಸಮಯದ ನಂತರವೂ ಅತ್ಯಗತ್ಯವಾಗಿವೆ.

ಹಕ್ಕು ನಿರಾಕರಣೆ : ಈ ಮಾಹಿತಿಯು ಕೇವಲ ಸಾಮಾನ್ಯ ಶೈಕ್ಷಣಿಕ ಮತ್ತು ಅರಿವು ಮೂಡಿಸುವ ಉದ್ದೇಶಗಳಿಗಾಗಿ ಮಾತ್ರವಿದ್ದು, ಇದನ್ನು ವೈದ್ಯಕೀಯ ಸಲಹೆ ಎಂದು ಪರಿಗಣಿಸಬಾರದು. ನಿಮ್ಮ ಔಷಧ, ಆಹಾರ ಪದ್ಧತಿ ಅಥವಾ ಜೀವನಶೈಲಿಯ ಯೋಜನೆಯಲ್ಲಿ ಯಾವುದೇ ಬದಲಾವಣೆ ಗಳನ್ನು ಮಾಡುವ ಮೊದಲು ಯಾವಾಗಲೂ ನಿಮ್ಮ ವೈದ್ಯರು ಅಥವಾ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ. ಪೌಷ್ಟಿಕಾಂಶದ ಉತ್ಪನ್ನಗಳನ್ನು ಅಗತ್ಯವಿರುವ ಕಡೆಗಳಲ್ಲಿ ಸಮತೋಲಿತ ಆಹಾರ, ದೈಹಿಕ ಚಟುವಟಿಕೆ ಮತ್ತು ವೈದ್ಯಕೀಯ ನಿರ್ವಹಣೆಗೆ ಪೂರಕವಾಗಿ ಬಳಸಬೇಕೇ ಹೊರತು, ಅವುಗಳಿಗೆ ಬದಲಿಯಾಗಿ ಬಳಸಬಾರದು. ವ್ಯಕ್ತಿಯಿಂದ ವ್ಯಕ್ತಿಗೆ ಅಗತ್ಯಗಳು ಮತ್ತು ಫಲಿತಾಂಶಗಳು ಬದಲಾಗಬಹುದು.