ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

VAO Recruitment 2026: 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ನೇಮಕಾತಿ ಕುರಿತ ಮಾಹಿತಿ ಇಲ್ಲಿದೆ

village administrative officer recruitment 2026: 572 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ಕುರಿತ ಸಂಪೂರ್ಣ ವಿವರ ಇಲ್ಲಿದೆ.

572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

-

Prabhakara R
Prabhakara R Jul 11, 2026 7:54 PM

ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಕಂದಾಯ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿನ ಕಲ್ಯಾಣ ಕರ್ನಾಟಕ (KK) ಮತ್ತು ಉಳಿಕೆ ಮೂಲ ವೃಂದದಲ್ಲಿ(RPC) ಖಾಲಿಯಿರುವ ಗ್ರೂಪ್-ಸಿ ವೃಂದದ ಒಟ್ಟು 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು (VAO Recruitment 2026) ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿಯ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಪ್ರಾರಂಭ: ಜುಲೈ 11, 2026
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 30, 2026
ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಜುಲೈ 31, 2026

ಶೈಕ್ಷಣಿಕ ವಿದ್ಯಾರ್ಹತೆ

ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ

ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ನಿರ್ದಿಷ್ಟ ಪಡಿಸಿರುವಂತೆ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷಗಳು ತುಂಬಿರಬೇಕು. ಇನ್ನು ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ಅದನ್ನು ಅಳವಡಿಸಿಕೊಂಡ ನಂತರ ಅಭ್ಯರ್ಥಿಗಳು ಈ ಕೆಳಕಂಡ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ: 40 ವರ್ಷ
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ: 43 ವರ್ಷ
ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ: 45 ವರ್ಷ

ಅರ್ಜಿ ಸಲ್ಲಿಸುವ ವಿಧಾನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ : https://cetonline.karnataka.gov.in/kea/ ನೀಡಲಾಗುವ ಲಿಂಕ್ ಅನ್ನು ಆಯ್ಕೆ ಮಾಡಿ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು. ಅಭ್ಯರ್ಥಿಗಳು ಕೇವಲ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ / ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.

ಅರ್ಜಿ ಶುಲ್ಕ:

ಸಾಮಾನ್ಯ ಮತ್ತು ಒಬಿಸಿ ವರ್ಗದ (ಪ್ರವರ್ಗ - 2ಎ 2ಬಿ 3ಎ 3ಬಿ) ಅಭ್ಯರ್ಥಿಗಳಿಗೆ: 750 ರೂ.
ಎಸ್‌ಸಿ, ಎಸ್‌ಟಿ, ಪ್ರವರ್ಗ 1, ಮಾಜಿ ಸೈನಿಕ, ತೃತೀಯ ಲಿಂಗ ಅಭ್ಯರ್ಥಿಗಳಿಗೆ: 500 ರೂ
ವಿಶೇಷ ಚೇತನ ಅಭ್ಯರ್ಥಿಗಳಿಗೆ: 250 ರೂ

ವೇತನ:

ಅಧಿಸೂಚನೆಯ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ 34,100 ರೂಪಾಯಿಯಿಂದ 67,600 ರೂಪಾಯಿವರೆಗೆ ವೇತನ ಶ್ರೇಣಿ ದೊರೆಯಲಿದೆ. ಇದರಲ್ಲಿ ಮೂಲ ವೇತನದ ಜೊತೆಗೆ ಸರ್ಕಾರಿ ನಿಯಮಗಳ ಪ್ರಕಾರ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ಇತರ ಸೌಲಭ್ಯಗಳು ದೊರೆಯುತ್ತವೆ.

ಲಿಖಿತ ಪರೀಕ್ಷೆ ದಿನಾಂಕ:

ಉಳಿಕೆ ಮೂಲ ವೃಂದ ಅಭ್ಯರ್ಥಿಗಳಿಗೆ: ಅಕ್ಟೋಬರ್ 04, 2026
ಕಲ್ಯಾಣ ಕರ್ನಾಟಕ ವಲಯದ ಅಭ್ಯರ್ಥಿಗಳಿಗೆ: ಅಕ್ಟೋಬರ್ 25, 2026

ಪರೀಕ್ಷಾ ವಿಧಾನ

ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು. ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮೂಲಕ ನಡೆಯಲಿದೆ. ಅದರಂತೆ, ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ. ಬೆಳಗ್ಗೆ 10.30 ರಿಂದ 12.30 ರವರೆಗೆ ಮೊದಲ ಪತ್ರಿಕೆ ಮತ್ತು ಮಧ್ಯಾಹ್ನ 2.30 ರಿಂದ 4.30 ರವರೆಗೆ ಎರಡನೇ ಪತ್ರಿಕೆ ನಡೆಯಲಿದೆ. ಇನ್ನೂ, ಪ್ರತಿ ಪತ್ರಿಕೆಗೆ 100 ಅಂಕಗಳು ಮತ್ತು 100 ಪ್ರಶ್ನೆಗಳಿರುತ್ತವೆ. ತಪ್ಪು ಉತ್ತರಕ್ಕೆ 0.25 ನೆಗೆಟಿವ್ ಅಂಕ ಕಡಿತ ಮಾಡಲಾಗುತ್ತದೆ. ಅದ್ರಲ್ಲೂ, ಪರೀಕ್ಷೆಯು ಆಫ್ ಲೈನ್ ಓಎಂಆರ್ ಮಾದರಿಯಲ್ಲಿ ನಡೆಯಲಿದ್ದು, ಮೆರಿಟ್ ಆಧಾರದಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

IBPS PO–2026: ಬ್ಯಾಂಕ್ ಅಧಿಕಾರಿಯಾಗುವ ಕನಸಿಗೆ ಇಲ್ಲಿದೆ ಸುವರ್ಣಾವಕಾಶ; ಪರೀಕ್ಷಾ ಮಾದರಿಯಲ್ಲಾದ ಮಹತ್ವದ ಬದಲಾವಣೆ ಗಮನಿಸಿ

ಕನ್ನಡ ಭಾಷಾ ಪರೀಕ್ಷೆ:

ಅಭ್ಯರ್ಥಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಥವಾ ರಾಜ್ಯ ಸರ್ಕಾರವು ಅದಕ್ಕೆ ತತ್ಸಮಾನವೆಂದು ಘೋಷಿಸಿದ ಯಾವುದೇ ಪರೀಕ್ಷೆಯಲ್ಲಿ ಅಥವಾ ಎಸ್.ಎಸ್.ಎಲ್.ಸಿ ಗಿಂತ ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಕನ್ನಡ ವಿಷಯವನ್ನು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಅಭ್ಯಸಿಸಿದ್ದರೆ ಅಥವಾ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಇಂತಹ ಪರೀಕ್ಷೆಗಳನ್ನು ಪಾಸು ಮಾಡಿದ್ದರೆ ಅಥವಾ ಆಯೋಗ ಅಥವಾ ಇನ್ನಿತರ ಯಾವುದೇ ಆಯ್ಕೆ ಪ್ರಾಧಿಕಾರವು ಈ ಹಿಂದೆ ನಡೆಸಿದ ಕನ್ನಡ ಭಾಷೆಯ ಪರೀಕ್ಷೆಯಲ್ಲಿ (ಕಡ್ಡಾಯ ಕನ್ನಡ ಪರೀಕ್ಷೆ) ಉತ್ತೀರ್ಣರಾಗಿದ್ದರೆ, ಅಂತಹ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಇಲ್ಲವಾದಲ್ಲಿ, ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಬಹು ಆಯ್ಕೆ ಮಾದರಿ ಪತ್ರಿಕೆಯಾಗಿದ್ದು, ಗರಿಷ್ಠ 150 ಅಂಕಗಳನ್ನು ಒಳಗೊಂಡಿರುತ್ತದೆ ಮತ್ತು ಅಭ್ಯರ್ಥಿಗಳು ಇದರಲ್ಲಿ ಅರ್ಹತೆ ಗಳಿಸಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಗೈರು ಹಾಜರಾದ / ಕನಿಷ್ಠ 50 ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಅರ್ಹರಾಗುವುದಿಲ್ಲ.

ವಿಎಒ ಆರ್‌ಪಿಸಿ ವೃಂದದ ಅಧಿಸೂಚನೆಗೆ ಇಲ್ಲಿ ಕ್ಲಿಕ್‌ ಮಾಡಿ

https://cetonline.karnataka.gov.in/kea/vaorpc2026

ವಿಎಒ ಕಲ್ಯಾಣ ಕರ್ನಾಟಕ ವೃಂದದ ಅಧಿಸೂಚನೆಗೆ ಇಲ್ಲಿ ಕ್ಲಿಕ್‌ ಮಾಡಿ

https://cetonline.karnataka.gov.in/kea/vaokk2026