Road Accident: ಬಾಗಲಕೋಟೆಯಲ್ಲಿ ಭೀಕರ ಸರಣಿ ಅಪಘಾತ; ಮೂವರ ದುರ್ಮರಣ
Road Accident: ಜಮಖಂಡಿಯಿಂದ ವಿಜಯಪುರಕ್ಕೆ ಹೊರಟಿದ್ದ ಟಾಟಾ ಏಸ್ ವಾಹನ, ವಿಜಯಪುರದಿಂದ ಜಮಖಂಡಿಗೆ ಬರುತ್ತಿದ್ದ ಕಾರು ನಡುವೆ ಅಪಘಾತ ನಡೆದು, ಸರಣಿ ಅಪಘಾತ ಸಂಭವಿಸಿದೆ.
ಬಾಗಲಕೋಟೆ: ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ನಡೆದ ಸರಣಿ ಅಪಘಾತದಲ್ಲಿ (Road Accident) ಮೂವರು ದುರ್ಮರಣ ಹೊಂದಿದ್ದಾರೆ. ಟಾಟಾ ಏಸ್, ಕಾರು ಹಾಗೂ ಎರಡು ಬೈಕ್‌ಗಳ ನಡುವೆ ಅಪಘಾತ ನಡೆದಿದೆ.
ಕಾರಿನಲ್ಲಿದ್ದ ಜಮಖಂಡಿ ತಾಲೂಕಿನ ಜಂಬಗಿ ಬಿಕೆ ಗ್ರಾಮದ ನಿವಾಸಿ ಆನಂದ ಬಾಡಗಿ(26),
ಟಾಟಾ ಏಸ್‌ನಲ್ಲಿದ್ದ ಗೋಕಾಕ್ ತಾಲೂಕಿನ ಅರಬಾವಿ ನಿವಾಸಿ ಭೀಮಪ್ಪ ಗಂಟೆಣ್ಣವರ(42) ಹಾಗೂ ಬೈಕ್‌ನಲ್ಲಿದ್ದ ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಮಹಾಂತೇಶ್ ಹೊನ್ನಾಕಟ್ಟೆ(35) ಮೃತರು. ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜಮಖಂಡಿಯಿಂದ ವಿಜಯಪುರಕ್ಕೆ ಹೊರಟಿದ್ದ ಟಾಟಾ ಏಸ್ ವಾಹನ, ವಿಜಯಪುರದಿಂದ ಜಮಖಂಡಿಗೆ ಬರುತ್ತಿದ್ದ ಕಾರು ನಡುವೆ ಅಪಘಾತ ನಡೆದಿದ್ದು, ಈ ವೇಳೆ ಟಾಟಾ ಏಸ್ ವಾಹನದ ಹಿಂಬದಿಯಿದ್ದ ಎರಡೂ ಬೈಕಗಳು ಡಿಕ್ಕಿಯಾಗಿವೆ. ಇದರಿಂದ ಮೂವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಜಮಖಂಡಿ ಸಿಪಿಐ ಮಲ್ಲಪ್ಪ ಮಡ್ಡಿ , ಪಿ.ಎಸ್.ಐ ಗಂಗಾಧರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ | Viral Video: ಕುಡಿದ ಮತ್ತಿನಲ್ಲಿ ಮೊಬೈಲ್ ಟವರ್ ಏರಿದ ಭೂಪ ; ಯುವಕನ ಹುಚ್ಚಾಟಕ್ಕೆ ನೆಟ್ಟಿಗರು ಗರಂ
ಕಾರ್ಮಿಕರು ತೆರಳುತ್ತಿದ್ದ 407 ವಾಹನ ಪಲ್ಟಿ; ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ತುಮಕೂರು: ಜಿಲ್ಲೆಯ ಪಾವಗಡದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ 407 ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ರಾತ್ರಿ 9 ಗಂಟೆಯಲ್ಲಿ ಪಾವಗಡ ತಾಲೂಕಿನ ಬುಗುಡೂರು ಗ್ರಾಮದ ತಿರುವಿನ ಬಳಿ ನಡೆದಿದೆ. ಈ ಅಪಘಾತದಲ್ಲಿ ಹತ್ತಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತಕ್ಷಣವೇ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಬಿ.ಹೊಸಳ್ಳಿ ತಾಂಡ ಗ್ರಾಮದ ಲಂಬಾಣಿ ಸಮುದಾಯದ ಪುರುಷರು ಹಾಗೂ ಮಹಿಳಾ ಕಾರ್ಮಿಕರು ತಿರುಮಣಿ ಭಾಗದಲ್ಲಿ ಶುಕ್ರವಾರ ಸೆಂಟ್ರಿಂಗ್ ಕೆಲಸಕ್ಕೆ ತೆರಳಿ, ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಮರಳಿ ಬರುವ ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ 55 ವರ್ಷದ ತಿಪ್ಪ ನಾಯಕ್ ಅವರ ಒಂದು ಕೈ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಕ್ಷಮ್ಮ, ಅರುಣಾ, ಕಾವೇರಿ, ಶಾಂತಮ್ಮ, ಶಾಂತಾಬಾಯಿ, ಪ್ರಕಾಶ್, ದೇವಿ ಬಾಯಿ, ಸಕ್ಕಬಾಯಿ ಸೇರಿದಂತೆ ಹಲವರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳಿಗೆ ಪಾವಗಡ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎ.ಎಸ್.ಎಲ್. ಬಾಬು, ಡಾ. ರಾಜೇಶ್, ಡಾ. ಆಶಿಕ್ ಗೌಡ, ಕಲ್ಲೇಶ್ ಮತ್ತು ಅವರ ತಂಡ ತಕ್ಷಣವೇ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿದರು. ಈ ಘಟನೆಯ ಬಗ್ಗೆ ಮಾಹಿತಿ ತಿಳಿದು, ಪಾವಗಡ ವೃತ್ತ ನಿರೀಕ್ಷಕ ಸುರೇಶ್ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಘಟನೆ ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.