ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagalkot News: ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಖಾರದ ಪುಡಿ ಎರಚಿ, ಪೈಪ್‌ನಿಂದ ಹೊಡೆದ ಶಿಕ್ಷಕ ದಂಪತಿ!

ಬಾಗಲಕೋಟೆಯಲ್ಲಿ ವಸತಿಶಾಲೆಯ ಮಾಲೀಕ ಹಾಗೂ ಶಿಕ್ಷಕ ಅಕ್ಷಯ್ ಎಂಬಾತ ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಬಾಲಕನನ್ನು ಪ್ಲಾಸ್ಟಿಕ್ ಪೈಪ್‌ನಿಂದ ರಕ್ತ ಹೆಪ್ಪುಗಟ್ಟುವಂತೆ ಥಳಿಸಲಾಗಿದೆ, ಆ ಸಂದರ್ಭದಲ್ಲಿ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ, ಚಿತ್ರಹಿಂಸೆ ನೀಡಲಾಗಿದೆ.

ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆಗೈದ ಶಿಕ್ಷಕ!

ಬಾಲಕನ ಮೇಲೆ ಹಲ್ಲೆ ನಡೆಸಿದ ಶಿಕ್ಷಕ ಅಕ್ಷಯ್. -

Prabhakara R
Prabhakara R Dec 20, 2025 6:37 PM

ಬಾಗಲಕೋಟೆ, ಡಿ.20: ಬುದ್ಧಿಮಾಂದ್ಯ ಬಾಲಕನಿಗೆ ಖಾರದ ಪುಡಿ ಎರಚಿ, ಬೆಲ್ಟ್‌ ಹಾಗೂ ಪೈಪ್‌ನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಅಮಾನವೀಯ ಕೃತ್ಯ ಬಾಗಲಕೋಟೆಯ (Bagalkot News) ನವನಗರದಲ್ಲಿನ ದಿವ್ಯಜ್ಯೋತಿ ಬುದ್ಧಿಮಾಂದ್ಯ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಕ ದಂಪತಿ ಸೇರಿ ನಾಲ್ವರನ್ನು ನವನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬುದ್ಧಿಮಾಂದ್ಯ ಬಾಲಕನ ಮೇಲೆ ವಸತಿಶಾಲೆಯ ಮಾಲೀಕ ಹಾಗೂ ಶಿಕ್ಷಕ ಅಕ್ಷಯ್ ಎಂಬಾತ ಹಲ್ಲೆ ನಡೆಸಿದ್ದಾನೆ. ಬುದ್ಧಿಮಾಂದ್ಯ ಬಾಲಕನೊಬ್ಬನನ್ನು ಪ್ಲಾಸ್ಟಿಕ್ ಪೈಪ್‌ನಿಂದ ರಕ್ತ ಹೆಪ್ಪುಗಟ್ಟುವಂತೆ ಥಳಿಸಲಾಗಿದೆ, ಆ ಸಂದರ್ಭದಲ್ಲಿ ಆತನ ಕಣ್ಣಿಗೆ ಖಾರದಪುಡಿ ಎರಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈತ ಉಳಿದ ವಿದ್ಯಾರ್ಥಿಗಳ ಮೇಲೂ ಇದೇ ರೀತಿ ದೌರ್ಜನ್ಯ ನಡೆಸಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಜಿಲ್ಲಾ ಪೊಲೀಸರು ತನಿಖೆ ನಡೆಸಿದ್ದು ಅಕ್ಷಯ್ ಹಾಗೂ ಆತನ ಪತ್ನಿ ಸೇರಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಸುಮಾರು ಮೂರು ತಿಂಗಳ ಹಿಂದೆ ಶಿಕ್ಷಕ ಅಕ್ಷಯ್, ಬಾಲಕರಿಗೆ ತೀವ್ರವಾಗಿ ಹೊಡೆಯುತ್ತಿದ್ದ. ಹಲವಾರು ದಿನಗಳಿಂದ ಮಕ್ಕಳಿಗೆ ಆತ ನೀಡುತ್ತಿದ್ದ ಚಿತ್ರಹಿಂಸೆಯನ್ನು ನೋಡಿ ಕೆಲಸಗಾರನೊಬ್ಬ ಬೇಸತ್ತಿದ್ದ. ಮೂರು ತಿಂಗಳ ಹಿಂದೆ ಬುದ್ಧಿಮಾಂದ್ಯ ಬಾಲಕ ದೀಪಕ್ ರಾಥೋಡ್‌ಗೆ ಶಿಕ್ಷಕ ಹೊಡೆಯುವಾಗ ಕೆಲಸಗಾರ ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದ. ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಕೂಡಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ದೀಪಕ್ ರಾಥೋಡ್‌ಗೆ ಹೊಡೆಯುವಾಗ ರಾಥೋಡ್ ಕಣ್ಣಿಗೆ ಖಾರದಪುಡಿ ಎರಚಿದ್ದು ಅಕ್ಷಯ್ ಪತ್ನಿ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ, ಅಕ್ಷಯ್ ಆ ಕೆಲಸಗಾರರನ್ನು ಕಾರಣಾಂತರಗಳಿಂದ ಕೆಲಸದಿಂದ ತೆಗೆದು ಹಾಕಿದ್ದ. ಆನಂತರವೇ ಆತನ ಹಿಂಸಾಚಾರದ ವಿಡಿಯೋ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

ಗಾಂಜಾ ಬಗ್ಗೆ ದೂರು ನೀಡಿದ್ದಕ್ಕೆ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು

ಶಿಕ್ಷಕ ಅಕ್ಷಯ್ ಹಾಗೂ ಆತನ ಪತ್ನಿ ಆನಂದಿ ಮೂಲತಃ ಮಹಾರಾಷ್ಟ್ರದವರು. ಈ ದಂಪತಿ ಬಾಗಲಕೋಟೆಯ ನವನಗರದಲ್ಲಿ ದಿವ್ಯಜ್ಯೋತಿ ಬುದ್ಧಿಮಾಂದ್ಯರ ವಸತಿ ಶಾಲೆ ನಡೆಸುತ್ತಿದ್ದರು. ಇದು ಎನ್‌ಜಿಒ ಸಂಸ್ಥೆಯಾಗಿದ್ದು, ನೋಂದಣಿ ಸಂದರ್ಭದಲ್ಲಿ ಸರ್ಕಾರಕ್ಕೆ ಶುಲ್ಕ ಕಟ್ಟಲಾಗಿತ್ತು. ಆದರೆ, ಮತ್ತೆ ಆ ನೋಂದಾವಣಿಯನ್ನು ನವೀಕರಿಸಿರಲಿಲ್ಲ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಾಗೂ ಶಿಕ್ಷಣ ಇಲಾಖೆಯ ಪರವಾನಗಿಯನ್ನೂ ಪಡೆದಿರಲಿಲ್ಲ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ, ಮಕ್ಕಳ ಪಾಲಕರು ಶಾಲೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದದು, ಶಿಕ್ಷಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.