ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಥಣಿಯ ಬಸವೇಶ್ವರ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸಲು ಸಿಎಂ ಸೂಚನೆ

CM Siddaramaiah: ಅಥಣಿಯ ಬಸವೇಶ್ವರ ಏತ ನೀರಾವರಿ ಯೋಜನೆಗೆ 2017ರಲ್ಲಿ ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಚಾಲನೆ ನೀಡಲಾಗಿತ್ತು. ಈ ಯೋಜನೆಗೆ ಇದುವರೆಗೆ ರೂ. 1158 ಕೋಟಿ ವೆಚ್ಚ ಮಾಡಲಾಗಿದ್ದು, ಶೇ.90ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಸವೇಶ್ವರ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸಿ: ಸಿಎಂ

ಮಲಪ್ರಭಾ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸಿಎಂ ಸಿದ್ದರಾಮಯ್ಯಗೆ ಪದಾಧಿಕಾರಿಗಳ ಮನವಿ. -

Prabhakara R
Prabhakara R Dec 10, 2025 8:00 PM

ಬೆಳಗಾವಿ, ಡಿ.10: ಜಿಲ್ಲೆಯ ಕಾಗವಾಡ ತಾಲೂಕಿನ ಬಸವೇಶ್ವರ (ಕೆಂಪವಾಡ) ಹಾಗೂ ರಾಮದುರ್ಗಾ ತಾಲೂಕಿನ ವೀರಭದ್ರೇಶ್ವರ ಮತ್ತು ಸಾಲಾಪುರ ಏತ ನೀರಾವರಿ ಯೋಜನೆಗಳ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸುವರ್ಣಸೌಧದಲ್ಲಿ ಬುಧವಾರ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ (ಕಾಗವಾಡ) 22 ಬರಪೀಡಿತ ಗ್ರಾಮಗಳ 27,462 ಹೆಕ್ಟೇರ್‌ ಪ್ರದೇಶಗಳಿಗೆ ನೀರು ಒದಗಿಸುವ ಬಸವೇಶ್ವರ ಏತ ನೀರಾವರಿ ಯೋಜನೆಗೆ 2017ರಲ್ಲಿ ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಚಾಲನೆ ನೀಡಲಾಗಿತ್ತು. ಈ ಯೋಜನೆಗೆ ಇದುವರೆಗೆ ರೂ. 1158 ಕೋಟಿ ವೆಚ್ಚ ಮಾಡಲಾಗಿದ್ದು, ಶೇ.90ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಜೂನ್‌ ಅಂತ್ಯದವರೆಗೆ ಕಾಮಗಾರಿಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಯೋಜನೆ ಪೂರ್ಣಗೊಳಿಸಲು 652 ಎಕ್ರೆ ಜಮೀನು ಭೂ ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಯೋಜನೆಯನ್ನು ಪೂರ್ಣಗೊಳಿಸಿ ರೈತರ ಹೊಲಗಳಿಗೆ ನೀರು ಹರಿಸಲು ಅಗತ್ಯವಿರುವ ಅನುದಾನವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಅವರು ಹೇಳಿದರು.

ರಾಮದುರ್ಗಾ ತಾಲೂಕು, ಮುಧೋಳ ತಾಲೂಕು ಹಾಗೂ ಬಾದಾಮಿ ತಾಲೂಕಿನ ಒಟ್ಟು 22 ಗ್ರಾಮಗಳ ಬರಪೀಡಿತ ಗ್ರಾಮಗಳಿಗೆ ನೀರು ಪೂರೈಸುವ ಸಾಲಾಪುರ ಏತ ನೀರಾವರಿ ಯೋಜನೆ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇದನ್ನು ಪೂರ್ಣಗೊಳಿಸಲು ಅನುದಾನ ಒದಗಿಸಲಾಗುವುದು.

ಇದೇ ರೀತಿ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಒಟ್ಟು 34 ಬರಪೀಡಿತ ಗ್ರಾಮಗಳಿಗೆ ನೀರು ಒದಗಿಸುವ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

ಮಲಪ್ರಭಾ ಶುಗರ್‌ ಫ್ಯಾಕ್ಟರಿ ಪುನಶ್ಚೇತನಕ್ಕೆ ಸಿಎಂಗೆ ಮನವಿ

ಬೆಳಗಾವಿ: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುವರ್ಣ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸನ್ಮಾನಿಸಿದರು. ಇದೇ ವೇಳೆ ಸಕ್ಕರೆ ಕಾರ್ಖಾನೆಯ ಪುನಶ್ಚೇತನ ಕುರಿತಂತೆ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧ್ಯಕ್ಷರಾದ ಚನ್ನರಾಜ ಹಟ್ಟಿಹೊಳಿ ಹಾಗೂ ಉಪಾಧ್ಯಕ್ಷರಾದ ಶಿವನಗೌಡ ಪಾಟೀಲ ಸೇರಿ ಮಂಡಳಿ ಪದಾಧಿಕಾರಿಗಳು ಸಿಎಂಗೆ ಮನವಿ ಮಾಡಿದರು.

ಹೊಸ ಕೈಗಾರಿಕಾ ನೀತಿಯಿಂದ ರಾಜ್ಯದಲ್ಲಿ 93,925 ಉದ್ಯೋಗ ಸೃಷ್ಟಿ: ಎಂ.ಬಿ.ಪಾಟೀಲ್

ಈ ಬಗ್ಗೆ ಚನ್ನರಾಜ ಹಟ್ಟಿಹೊಳಿ ಪ್ರತಿಕ್ರಿಯಿಸಿ, ಎಂ.ಕೆ.ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನ ಕುರಿತಂತೆ ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಿತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಾಬಾಸಾಹೇಬ್ ಪಾಟೀಲ ಅವರೊಂದಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್, ಸಚಿವರಾದ ಶಿವಾನಂದ್ ಪಾಟೀಲ, ಶ್ರೀ ಸತೀಶ್ ಅಣ್ಣ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಮನವಿಗೆ ಸ್ಪಂದಿಸುವಂತೆ ವಿನಂತಿಸಲಾಯಿತು ಎಂದು ತಿಳಿಸಿದ್ದಾರೆ.