ಗಮನ ಸೆಳೆಯುತ್ತಿವೆ ಗಣೇಶ್ ಮೂರ್ತಿಗಳು
ಬೈಲಹೊಂಗಲದಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮನೆಗಳಲ್ಲಿ ಪ್ರತಿಷ್ಠಾಪಿಸಲು ಸಿದ್ಧವಾಗಿರುವ ವೈವಿಧ್ಯಮಯ ಗಣೇಶ ಮೂರ್ತಿಗಳು ಹಬ್ಬದ ಕಳೆ ಹೆಚ್ಚಿಸಿವೆ. ನಗರದ ಕಲಾವಿದ ಆನಂದ ಬಡಿಗೇರ ಅವರ ಕಲಾಕುಂಚದಲ್ಲಿ ಮೂಡಿಬಂದಿರುವ ಈ ವಿಶಿಷ್ಟ ಗಣೇಶ ಮೂರ್ತಿಗಳು ಕಲಾಭಿಮಾನಿಗಳು ಹಾಗೂ ಭಕ್ತರನ್ನು ಆಕರ್ಷಿಸುತ್ತಿವೆ.
-
ಶರೀಫ ನದಾಫ
ಬೈಲಹೊಂಗಲ: ಒಂದೆಡೆ ಆಕಳ ಮೇಲೆ ಕುಳಿತ ಗಣೇಶ... ಮತ್ತೊಂದೆಡೆ ಗುರು ರಾಘವೇಂದ್ರರ ವೇಷದಲ್ಲಿರುವ ವಿನಾಯಕ... ಇನ್ನೊಂದೆಡೆ ಶ್ರೀನಿವಾಸನ ಅವತಾರದಲ್ಲಿ ನಿಂತಿರುವ ಲಂಭೋದರ... ಮತ್ತೊಂದು ಕಡೆ ಅಶ್ವಾರೂಢನಾಗಿ ಕಂಗೊಳಿಸುತ್ತಿರುವ ವಕ್ರತುಂಡ... ಹೀಗೆ ವಿವಿಧ ರೂಪ, ಭಂಗಿ ಹಾಗೂ ಕಲ್ಪನೆಗಳಲ್ಲಿ ಮೂಡಿಬಂದಿರುವ ಗಣೇಶ ಮೂರ್ತಿಗಳು ಈ ಬಾರಿ ಬೈಲಹೊಂಗಲದಲ್ಲಿ ಭಕ್ತರ ಗಮನ ಸೆಳೆಯುತ್ತಿವೆ.
ಬೈಲಹೊಂಗಲದಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮನೆಗಳಲ್ಲಿ ಪ್ರತಿಷ್ಠಾಪಿಸಲು ಸಿದ್ಧವಾಗಿರುವ ವೈವಿಧ್ಯಮಯ ಗಣೇಶ ಮೂರ್ತಿಗಳು ಹಬ್ಬದ ಕಳೆ ಹೆಚ್ಚಿಸಿವೆ. ನಗರದ ಕಲಾವಿದ ಆನಂದ ಬಡಿಗೇರ ಅವರ ಕಲಾಕುಂಚದಲ್ಲಿ ಮೂಡಿಬಂದಿರುವ ಈ ವಿಶಿಷ್ಟ ಗಣೇಶ ಮೂರ್ತಿಗಳು ಕಲಾಭಿಮಾನಿಗಳು ಹಾಗೂ ಭಕ್ತರನ್ನು ಆಕರ್ಷಿಸುತ್ತಿವೆ.
ಇದನ್ನೂ ಓದಿ: Bailahongala News: ದೊರೆತ ಕಾಲಾವಕಾಶದಲ್ಲಿ ಅನುದಾನಗಳ ಸದ್ಬಳಕೆ ಮಾಡಿದ್ದೇನೆ: ಈರಣ್ಣ ಕಡಾಡಿ
ಪ್ರತಿ ವರ್ಷದಂತೆ ಈ ವರ್ಷವೂ ಆನಂದ ಬಡಿಗೇರ ಕುಟುಂಬವು ಸುಮಾರು 350ಕ್ಕೂ ಹೆಚ್ಚು ವಿಭಿನ್ನ ಮಾದರಿಯ ಗಣೇಶ ಮೂರ್ತಿಗಳನ್ನು ತಯಾರಿಸಿದೆ. ವಿಠ್ಠಲ, ಸತ್ಯನಾರಾಯಣ, ಆಕಳ ಮೇಲೆ ಕುಳಿತ ಗಣಪತಿ, ಬಾಲ ಗಣಪತಿ, ಮಾರ್ಬಲ್ ಶೈಲಿಯ ಗಣೇಶ, ಪರಿಸರ ಸ್ನೇಹಿ ಗಣೇಶ, ನವಿಲಿನ ಮೇಲೆ ಕುಳಿತ ಗಣಪತಿ, ಅಶ್ವಾರೂಢ ಗಣೇಶ, ಗುರು ರಾಘವೇಂದ್ರರ ವೇಷದ ಗಣಪತಿ, ಸರಸ್ವತಿ, ರಾಮ-ಕೃಷ್ಣ ಹಾಗೂ ಶಿವನ ಅವತಾರದಲ್ಲಿರುವ ಗಣೇಶ ಸೇರಿದಂತೆ ಹಲವು ಬಗೆಯ ಮೂರ್ತಿಗಳು ನೋಡುಗರ ಮನಸೂರೆಗೊಳ್ಳುತ್ತಿವೆ.
ವಿಶೇಷವೆಂದರೆ, ಪರಿಸರ ಕಾಳಜಿಯೊಂದಿಗೆ ಸಂಪೂರ್ಣ ಜೇಡಿ ಮಣ್ಣಿನಿಂದಲೇ ಈ ಮೂರ್ತಿ ಗಳನ್ನು ತಯಾರಿಸಲಾಗಿದ್ದು, ಬಣ್ಣಗಳಲ್ಲಿಯೂ ಪರಿಸರ ಸ್ನೇಹಿ ವಿಧಾನಕ್ಕೆ ಆದ್ಯತೆ ನೀಡಲಾಗಿದೆ. ಹೀಗಾಗಿ ವಿವಿಧ ಬಣ್ಣ ಹಾಗೂ ವಿನ್ಯಾಸಗಳ ಗಣೇಶ-ಗೌರಿ ಮೂರ್ತಿಗಳ ನಡುವೆ ಜೇಡಿ ಮಣ್ಣಿನ ಈ ಪರಿಸರ ಸ್ನೇಹಿ ಮೂರ್ತಿಗಳು ವಿಶೇಷವಾಗಿ ಗಮನ ಸೆಳೆಯುತ್ತಿವೆ.
ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭಕ್ತರು ತಮಗೆ ಇಷ್ಟವಾದ ಮೂರ್ತಿಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಸುಮಾರು 1000 ರಿಂದ 2000ರವರೆಗೆ ವಿವಿಧ ಗಾತ್ರ ಹಾಗೂ ವಿನ್ಯಾಸಗಳ ಗಣೇಶ ಮೂರ್ತಿಗಳು ಲಭ್ಯವಿವೆ.
ಹಬ್ಬಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಲಾವಿದರು ಈಗ ಗಣೇಶ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಣ್ಣಗಾರಿಕೆ, ಅಲಂಕಾರ ಹಾಗೂ ಸಣ್ಣಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಿ ಮೂರ್ತಿಗಳನ್ನು ಭಕ್ತರ ಮನೆಗಳಿಗೆ ಕಳುಹಿಸಲು ಸಿದ್ಧಪಡಿಸ ಲಾಗುತ್ತಿದೆ. ಆನಂದ ಬಡಿಗೇರಅವರು ಕಳೆದ 20 ವರ್ಷಗಳಿಂದ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿ ದ್ದಾರೆ. ಅವರಿಗೆ ಕುಟುಂಬದ ಸದಸ್ಯರು ಸಾಥ ನೀಡಿದ್ದಾರೆ.