ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Devendra Fadnavis Kannada Speech: ಕನ್ನಡದಲ್ಲೇ ಭಾಷಣ ಆರಂಭಿಸಿ ಕನ್ನಡ-ಮರಾಠಿ ಭಾಷೆಗಳ ನಡುವೆ ಸಹೋದರತ್ವದ ಸಂದೇಶ ನೀಡಿದ ಮಹಾರಾಷ್ಟ್ರ ಸಿಎಂ

ನಗರದ ಧರ್ಮನಾಥ ಭವನದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಕನ್ನಡದಲ್ಲೇ ತಮ್ಮ ಭಾಷಣ ಆರಂಭಿಸಿದ ಫಡ್ನವಿಸ್, ಕನ್ನಡ ಮತ್ತು ಮರಾಠಿ ಭಾಷೆಗಳು ಸಹೋದರಿಯರಿದ್ದಂತೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನೆರೆಯ ಸಹೋದರ ರಾಜ್ಯಗಳಾಗಿದ್ದು, ಎರಡೂ ರಾಜ್ಯಗಳ ಜನರ ನಡುವೆ ಪರಸ್ಪರ ಗೌರವ ಮತ್ತು ಸಾಮರಸ್ಯ ಇರಬೇಕು ಎಂದು ಹೇಳಿದರು.

ಕನ್ನಡದಲ್ಲೇ ಭಾಷಣ ಆರಂಭಿಸಿ ಸಹೋದರತ್ವದ ಸಂದೇಶ ನೀಡಿದ ಮಹಾರಾಷ್ಟ್ರ ಸಿಎಂ

-

Profile
Ashok Nayak Nov 28, 2026 7:41 PM

ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಬಿಜೆಪಿ ಪ್ರಜಾಪ್ರಭುತ್ವ ಉಳಿಸಿ ಸಮಾವೇಶದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್(Devendra Fadnavis) ಕಾಂಗ್ರೆಸ್ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಗರದ ಧರ್ಮನಾಥ ಭವನದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಕನ್ನಡದಲ್ಲೇ ತಮ್ಮ ಭಾಷಣ ಆರಂಭಿಸಿದ ಫಡ್ನವಿಸ್, ಕನ್ನಡ ಮತ್ತು ಮರಾಠಿ ಭಾಷೆಗಳು ಸಹೋದರಿಯರಿದ್ದಂತೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನೆರೆಯ ಸಹೋದರ ರಾಜ್ಯಗಳಾಗಿದ್ದು, ಎರಡೂ ರಾಜ್ಯಗಳ ಜನರ ನಡುವೆ ಪರಸ್ಪರ ಗೌರವ ಮತ್ತು ಸಾಮರಸ್ಯ ಇರಬೇಕು ಎಂದು ಹೇಳಿದರು.

ಬೆಳಗಾವಿಯ ನೆಲದಲ್ಲಿ ನಿಂತು ಭಾಷಾ ಸಾಮರಸ್ಯದ ಸಂದೇಶ ನೀಡಿದ ಅವರು, ಕನ್ನಡ ಮತ್ತು ಮರಾಠಿ ಭಾಷೆಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಬಾರದು. ಎರಡೂ ಭಾಷೆಗಳ ಸಂಸ್ಕೃತಿ, ಪರಂಪರೆ ಹಾಗೂ ಜನರ ಭಾವನೆಗಳಿಗೆ ಗೌರವ ನೀಡುವುದು ಅತ್ಯಂತ ಮುಖ್ಯ ಎಂದರು.

ಇದನ್ನೂ ಓದಿ: Devendra Fadnavis: "ತಂದೆಯಿದ್ದಾಗ ಉತ್ತರಾಧಿಕಾರಿ ಹುಡುಕುವುದಿಲ್ಲ"; ಮೋದಿ ನಿವೃತ್ತಿ ಕುರಿತು ಮಾತನಾಡಿದ್ದ ರಾವತ್‌ಗೆ ತಿರುಗೇಟು ಕೊಟ್ಟ ಫಡ್ನವೀಸ್‌

ಇದೇ ವೇಳೆ ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಫಡ್ನವಿಸ್, ಭಾರತದಲ್ಲಿ ದೊಡ್ಡ ಮಟ್ಟದ ನ್ಯಾರೇಟಿವ್ ಯುದ್ಧ ನಡೆಯುತ್ತಿದೆ ಎಂದು ಆರೋಪಿಸಿ ದರು. ಕಾಂಗ್ರೆಸ್, ರಾಹುಲ್ ಗಾಂಧಿ ಸೇರಿದಂತೆ ಕೆಲವು ರಾಜಕೀಯ ಶಕ್ತಿಗಳು ಸಂಘಟಿತವಾಗಿ ದೇಶದ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುತ್ತಿವೆ. ಇಂತಹ ವ್ಯವಸ್ಥಿತ ಪ್ರಚಾರ ವನ್ನು ತಡೆಯುವ ಅಗತ್ಯವಿದೆ ಎಂದು ಹೇಳಿದರು.

ದೇಶದಲ್ಲಿ ರಾಜಕೀಯ ಅಧಿಕಾರ ಮತ್ತು ಸರ್ಕಾರಗಳು ಬದಲಾಗುವುದು ಪ್ರಜಾಪ್ರಭುತ್ವದ ಸಹಜ ಪ್ರಕ್ರಿಯೆ. ಆದರೆ ಬಾಂಗ್ಲಾದೇಶ, ನೇಪಾಳ ಮತ್ತು ಪಾಕಿಸ್ತಾನದ ಮಾದರಿಯಲ್ಲಿ ಭಾರತದಲ್ಲಿಯೂ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂಬ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು. ಸ್ಥಳೀಯ ರಾಜಕೀಯ ನಾಯಕರು, ಸಂಘಟನೆಗಳು ಹಾಗೂ ವಿವಿಧ ಶಕ್ತಿಗಳನ್ನು ಬಳಸಿಕೊಂಡು ದೇಶದಲ್ಲಿ ಅಸ್ಥಿರತೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳನ್ನೂ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.

ರಾಹುಲ್ ಗಾಂಧಿ ಪ್ರತಿದಿನ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ ಫಡ್ನವಿಸ್, ಒಂದು ಸುಳ್ಳನ್ನು ನಿರಂತರವಾಗಿ ಹೇಳುತ್ತಾ ಹೋದರೆ ಅದನ್ನೇ ಸತ್ಯವೆಂದು ಜನರು ನಂಬುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಉದ್ದೇಶದಿಂದ ಇಂತಹ ಪ್ರಚಾರ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರ ನಾಯಕತ್ವದಿಂದ ಭಾರತ ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಏಷ್ಯಾ ಹಾಗೂ ವಿಶ್ವದಲ್ಲಿ ತಮ್ಮ ಪ್ರಾಬಲ್ಯ ವಿದೆ ಎಂದು ಭಾವಿ ಸುವ ಕೆಲವು ಶಕ್ತಿಗಳಿಗೆ ಭಾರತದ ಬೆಳವಣಿಗೆ ಮತ್ತು ಮೋದಿ ನಾಯಕತ್ವ ಆತಂಕ ಮೂಡಿಸಿದೆ ಎಂದು ಹೇಳಿದರು.

ಭಾರತದ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ಉಲ್ಲೇಖಿಸಿದ ಅವರು, ಹಿಂದೆ ಭಾರತವನ್ನು ಟೀಕಿಸುತ್ತಿದ್ದ ವಿಶ್ವಬ್ಯಾಂಕ್ ಕೂಡ ಇದೀಗ ದೇಶದ ಬಡತನ ನಿವಾರಣೆ ಮತ್ತು ಅಭಿವೃದ್ಧಿಯ ಬಗ್ಗೆ ಸಕಾರಾತ್ಮಕ ವರದಿಗಳನ್ನು ನೀಡುತ್ತಿದೆ ಎಂದು ತಿಳಿಸಿದರು. ನರೇಂದ್ರ ಮೋದಿ ಅವರ ನಾಯಕತ್ವ ದಲ್ಲಿ ಭಾರತ ವಿಶ್ವದ ಪ್ರಮುಖ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಮೂರನೇ ಸ್ಥಾನ ತಲುಪುವ ದಿಕ್ಕಿನಲ್ಲಿ ಸಾಗುತ್ತಿದೆ. 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರ ವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದರು.

ಸಂವಿಧಾನದ ವಿಚಾರದಲ್ಲಿ ರಾಹುಲ್ ಗಾಂಧಿಗೆ ತಿರುಗೇಟು

ಸಂವಿಧಾನದ ವಿಚಾರವನ್ನು ಪ್ರಸ್ತಾಪಿಸಿದ ಫಡ್ನವಿಸ್, ರಾಹುಲ್ ಗಾಂಧಿ ಕೆಂಪು ಬಣ್ಣದ ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡು ದೇಶಾದ್ಯಂತ ತಿರುಗಾಡುತ್ತಿದ್ದಾರೆ. ಆದರೆ ಸಂವಿಧಾನದ ಮೂಲ ಆಶಯ ಹಾಗೂ ಅದರ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು ಎಂದು ಟೀಕಿಸಿದರು. ಡಾ. ಬಿ.ಆರ್. ಅಂಬೇಡ್ಕರ್(Dr B R Ambedkar) ಅವರ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು, ಅದರ ಆಶಯಗಳನ್ನು ನಿಜ ಜೀವನದಲ್ಲಿ ಎಷ್ಟರಮಟ್ಟಿಗೆ ಪಾಲಿಸುತ್ತಿದ್ದಾರೆ ಎಂಬುದನ್ನು ಜನರು ಗಮನಿಸಬೇಕು ಎಂದರು.

ಸಂವಿಧಾನಾತ್ಮಕ ಸಂಸ್ಥೆಗಳು ಮತ್ತು ಸಂವಿಧಾನದ ಮೌಲ್ಯಗಳಿಗೆ ರಾಹುಲ್ ಗಾಂಧಿ ನಿರಂತರವಾಗಿ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D K Shivakumar) ಅವರನ್ನೇ ರಾಹುಲ್ ಗಾಂಧಿ ಹಿಂದೆ ಸರಿಸಿದ ಘಟನೆ ಇದಕ್ಕೆ ಉದಾಹರಣೆ ಎಂದು ಹೇಳಿದರು. ತಮ್ಮದೇ ಪಕ್ಷದ ಹಿರಿಯ ನಾಯಕರಿಗೆ ಗೌರವ ನೀಡದವರು ಸಂವಿಧಾನದ ಮೌಲ್ಯಗಳನ್ನು ಹೇಗೆ ಗೌರವಿಸುತ್ತಾರೆ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ವಿರುದ್ಧ ಘಜನಿ ವ್ಯಂಗ್ಯ

ಭಾಷಣದ ಮತ್ತೊಂದು ಹಂತದಲ್ಲಿ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ವ್ಯಂಗ್ಯವಾಡಿದ ದೇವೇಂದ್ರ ಫಡ್ನವಿಸ್, ಅವರ ಮಾತುಗಳು ಮತ್ತು ನಿಲುವುಗಳನ್ನು ಗಮನಿಸಿದರೆ ಘಜನಿಯಂತೆ ವರ್ತಿಸುತ್ತಾರೆ. ತಾವು ಹಿಂದೆ ಏನು ಹೇಳಿದ್ದಾರೆ ಎಂಬುದೇ ಅವರಿಗೆ ನೆನಪಿರುವುದಿಲ್ಲ ಎಂಬ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನಗಳಿಗೆ ರಾಹುಲ್ ಗಾಂಧಿ ಮುಖವಾಣಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ದೆಹಲಿಯಲ್ಲಿ ಕೇವಲ ಹತ್ತು ಯುವಕರು ಗದ್ದಲ ಸೃಷ್ಟಿಸಿದರೆ ದೇಶದ ವ್ಯವಸ್ಥೆಯೇ ಅಸ್ಥಿರವಾಗುತ್ತದೆ ಎಂಬಂತೆ ಬಿಂಬಿಸಲಾಗುತ್ತಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನಗಳನ್ನು ಅಷ್ಟು ಸುಲಭವಾಗಿ ನಡೆಯಲು ಬಿಡಲು ಸಾಧ್ಯವಿಲ್ಲ. ಇಂತಹ ಕುತಂತ್ರಗಳನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತದೆ ಎಂದು ಕಾಂಗ್ರೆಸ್ ನಿರಂತರವಾಗಿ ಅಪಪ್ರಚಾರ ಮಾಡುತ್ತಿದೆ. ಆದರೆ ಸಂವಿಧಾನದ ಬಗ್ಗೆ ನಿಜವಾದ ಕಾಳಜಿ ಹೊಂದಿರುವವರು ಅದರ ಆಶಯಗಳನ್ನು ಗೌರವಿಸಬೇಕು. ಭಾರತ್ ಜೋಡೋ ಯಾತ್ರೆ(Bharat Jodo Yatra) ಯ ಮೂಲಕವೂ ದೇಶದಲ್ಲಿ ಅಸ್ಥಿರತೆ ಮೂಡಿಸುವ ಪ್ರಯತ್ನ ನಡೆದಿದೆ ಎಂದು ಫಡ್ನವಿಸ್ ಆರೋಪಿಸಿದರು.

ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಉದ್ದೇಶದಿಂದ ನಡೆಯುತ್ತಿರುವ ಪ್ರಯತ್ನಗಳ ನಿಜವಾದ ಮುಖ ಈಗ ಬಹಿರಂಗವಾಗಿದೆ ಎಂದು ಹೇಳಿದ ಅವರು, ರಾಹುಲ್ ಗಾಂಧಿ ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲದಿದ್ದರೆ ಅದನ್ನು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.

ಸಂವಿಧಾನವನ್ನು ನಂಬುವುದಿಲ್ಲ, ಒಪ್ಪುವುದಿಲ್ಲ ಎಂದು ಅವರು ಹೇಳಿದರೆ ಜನರೇ ಅದಕ್ಕೆ ಉತ್ತರ ನೀಡುತ್ತಾರೆ. ಅಂತಹ ಹೇಳಿಕೆ ನೀಡಿದರೆ ಜನರಿಂದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ ಎಂದು ಕಟುವಾಗಿ ಟೀಕಿಸಿದರು.

ಒಟ್ಟಿನಲ್ಲಿ ಬೆಳಗಾವಿಯ ಬಿಜೆಪಿ ಸಮಾವೇಶದಲ್ಲಿ ಭಾಷಾ ಸಾಮರಸ್ಯದ ಸಂದೇಶದೊಂದಿಗೆ ಭಾಷಣ ಆರಂಭಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಬಳಿಕ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ರಾಜಕೀಯ ಆರೋಪಗಳ ಸುರಿಮಳೆಗೈದರು. ಮೋದಿ ಸರ್ಕಾರದ ಸಾಧನೆ, ಭಾರತದ ಜಾಗತಿಕ ಸ್ಥಾನಮಾನ, ಸಂವಿಧಾನದ ವಿಚಾರ ಮತ್ತು ದೇಶದ ರಾಜಕೀಯ ಸ್ಥಿರತೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.