ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಬ್ಬಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹ: ಗೊಡಚಿಯಲ್ಲಿ ಬಂದ್ ಕಿಚ್ಚು; ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ರೈತರ ಆಕ್ರೋಶ

Belagavi Sugarcane Farmers Strike: ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂಬ ಆಕ್ರೋಶ ವ್ಯಕ್ತಪಡಿಸಿ, ರೈತ ಮುಖಂಡರ ನೇತೃತ್ವದಲ್ಲಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಬ್ಬಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರ ಹೋರಾಟ

ಬೆಳಗಾವಿಯ ಗೊಡಚಿಯಲ್ಲಿ ಪ್ರತಿಭಟನೆ ನಡೆಯಿತು -

Ramesh Ballamoole
Ramesh Ballamoole Oct 31, 2026 1:29 PM

ಗೊಡಚಿ, ಅ. 31: ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂಬ ಆಕ್ರೋಶ ವ್ಯಕ್ತಪಡಿಸಿ, ರೈತ ಮುಖಂಡರ ನೇತೃತ್ವದಲ್ಲಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ (Karnataka Bandh) ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ (Belagavi Sugarcane Farmers Strike). ಶನಿವಾರ (ಅಕ್ಟೋಬರ್‌ 31) ಬೆಳಗ್ಗೆಯಿಂದಲೇ ರೈತರು ಹಾಗೂ ರೈತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವ ಮೂಲಕ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಕಬ್ಬಿನ ಬೆಂಬಲ ಬೆಲೆ ವಿಚಾರವನ್ನು ಅ. 29ರೊಳಗೆ ಬಗೆಹರಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಭರವಸೆ ನೀಡಲಾಗಿತ್ತು. ಆದರೆ, ನಿಗದಿತ ಅವಧಿಯೊಳಗೆ ಬೆಂಬಲ ಬೆಲೆ ಘೋಷಿಸದೆ ಸಕ್ಕರೆ ಕಾರ್ಖಾನೆಗಳ ಕಾರ್ಯಾರಂಭಕ್ಕೆ ಅವಕಾಶ ನೀಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಖಂಡಿಸಿ ರೈತ ಮುಖಂಡರಾದ ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ್ ಗುರೂಜಿ ನೇತೃತ್ವದಲ್ಲಿ ರಾಜ್ಯ ಬಂದ್ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ನೀಡಲಾಗಿತ್ತು.

ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ವಿಫಲ: ಹಾವೇರಿ ಬಂದ್‌ಗೆ ವಿದ್ಯಾರ್ಥಿಗಳಿಂದಲೂ ಬೆಂಬಲ

ವಿದ್ಯಾರ್ಥಿಗಳಿಂದ ರೈತರ ಹೋರಾಟಕ್ಕೆ ಸಾಥ್

ಬೆಳಗ್ಗೆ 10 ಗಂಟೆಯಿಂದಲೇ ಗೊಡಚಿ ಗ್ರಾಮದ ರೈತರು ಹಾಗೂ ರೈತ ಸಂಘಟನೆಗಳ ಮುಖಂಡರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ವಿವಿಧ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವ ಮೂಲಕ ಬಂದ್‌ಗೆ ಬೆಂಬಲ ನೀಡುವಂತೆ ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು. ವಿದ್ಯಾರ್ಥಿಗಳೂ ರೈತರ ಹೋರಾಟಕ್ಕೆ ಸಾಥ್ ನೀಡಿದರು.

ರೈತ ಮುಖಂಡ ಪ್ರಕಾಶ್ ಪಾಟೀಲ್ ಮಾತನಾಡಿ, ʼʼಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆʼʼ ಎಂದು ಎಚ್ಚರಿಸಿದರು.

ರೈತ ಮುಖಂಡ ರುದ್ರಪ್ಪ ಜಂಬಗಿ ಮಾತನಾಡಿ, ʼʼಆರು ತಿಂಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಖಾಸುಮ್ಮನೆ ಕಾಲಹರಣ ಮಾಡುತ್ತ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ. ಬರೀ ಆಶ್ವಾಸನೆ ಹಾಗೂ ಆರೈಕೆಯ ಮಾತುಗಳಿಂದ ರೈತರ ಬದುಕು ಸಾಗುವುದಿಲ್ಲʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಕ್ಕೆ ಕರೆ

ಕಬ್ಬು ಬೆಳೆಗಾರರ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸುವುದರ ಜತೆಗೆ ಸೂಕ್ತ ಬೆಂಬಲ ಬೆಲೆಯನ್ನು ಘೋಷಿಸಬೇಕು ಎಂದು ಆಗ್ರಹಿಸಿದ ಅವರು, ಕರ್ನಾಟಕ ಬಂದ್‌ಗೆ ಪ್ರತಿಯೊಬ್ಬ ರೈತರೂ ಬೆಂಬಲ ನೀಡುವ ಮೂಲಕ ಹೋರಾಟವನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.

ಸಕ್ಕರೆ ಕೆ.ಜಿ.ಗೆ ₹50ಕ್ಕಿಂತ ಕಡಿಮೆ ದರಕ್ಕೆ ಮಾರಾಟವಾಗದಂತೆ ಭರವಸೆ ನೀಡುವವರೆಗೆ ಗೋಡೌನ್‌ಗಳ ಬಾಗಿಲು ತೆರೆಯುವುದಿಲ್ಲ: ರೈತ ಮುಖಂಡರ ಎಚ್ಚರಿಕೆ

ರೈತ ಮುಖಂಡರು ಭಾಗಿ

ರೈತ ಮುಖಂಡರಾದ ರುದ್ರಪ್ಪ ಜಂಬಗಿ, ಶಿವಯ್ಯ ಮಠಪತಿ, ಪ್ರಕಾಶ್ ಪಾಟೀಲ್, ಬಸವರಾಜ ಸಂಬಾಳ, ಅರ್ಜುನ್ ಗೊರವ್, ಕಾಳಪ್ಪ ಬಾವಣ್ಣವರ, ಮುತ್ತು ಬಾವಣ್ಣವರ, ಮುದಿರಯ್ಯ ಪೂಜಾರ್, ಶಿವು ಜೀವೋಜಿ, ಯಲ್ಲಪ್ಪ ಬಾವಣ್ಣವರ, ಈರಣ್ಣ ಪಾಕನಟ್ಟಿ, ಅಡಿವೆಪ್ಪಗೌಡ ಪಾಟೀಲ್, ಸೋಮಯ್ಯ ಗದ್ದನಕೇರಿಮಠ, ಮಂಜುನಾಥ ಕಾಮಣ್ಣವರ, ನಾರಾಯಣ ಪತ್ತಾರ್ ಮತ್ತಿತರರು ಪಾಲ್ಗೊಂಡರು.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.