ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೂವರನ್ನು ಮದುವೆಯಾಗಿ ಲಕ್ಷಾಂತರ ರೂ. ವಂಚಿಸಿದ ಕಿಲೇಡಿ; ಗಂಡಂದಿರಿಂದ ದೂರು

Doddaballapur News: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ತಾಲೂಕಿನ ಅಣಬೆ ಗ್ರಾಮದ ಮಹಿಳೆಯೊಬ್ಬಳು ಮೂವರ ಜತೆ ಮದುವೆಯಾಗಿ, ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ದೊಡ್ಡಬಳ್ಳಾಪುರ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮೂವರನ್ನು ಮದುವೆಯಾಗಿ ಲಕ್ಷಾಂತರ ರೂ. ವಂಚಿಸಿದ ಕಿಲೇಡಿ

ಆರೋಪಿ ಮಹಿಳೆ ಸುಧಾರಾಣಿ -

Prabhakara R
Prabhakara R Jan 30, 2026 3:36 PM

ದೊಡ್ಡಬಳ್ಳಾಪುರ: ಪ್ರೀತಿ, ಮದುವೆ ಹೆಸರಲ್ಲಿ ಮಹಿಳೆಯೊಬ್ಬಳು ಮೂವರು ಪುರುಷರನ್ನು ನಂಬಿಸಿ, ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ (Doddaballapur News) ತಾಲೂಕಿನ ಅಣಬೆ ಗ್ರಾಮದ ಮಹಿಳೆಯೊಬ್ಬಳು, ಹಣವಿರುವವರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಳು ಎಂದು ಎನ್ನಲಾಗಿದೆ.

ಸುಧಾರಾಣಿ ಎಂಬ ಮಹಿಳೆ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಮೊದಲ ಹಾಗೂ ಎರಡನೇ ಪತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈಗಾಗಲೇ ಮೂವರನ್ನು ಮದುವೆಯಾಗಿರುವ ಈಕೆ, ತನ್ನ ಇಬ್ಬರು ಪತಿಯರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ.

ಸುಧಾರಾಣಿ ಮೊದಲು ವೀರೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳೂ ಇದ್ದರು. ಆದರೆ, ದಾಂಪತ್ಯ ಜೀವನದ ನಡುವೆಯೇ ಪತಿಗೆ ‘ಕಾರು ಮತ್ತು ಬುಲೆಟ್ ಬೈಕ್‌ ಓಡಿಸಲು ಬರಲ್ಲ’ ಎಂಬ ಕ್ಷುಲ್ಲಕ ಕಾರಣ ನೀಡಿ, ಮಕ್ಕಳನ್ನು ಹಾಗೂ ವೀರೆಗೌಡರನ್ನು ತೊರೆದು ಹೋಗಿದ್ದಳು.

ಎರಡನೇ ಗಂಡನಿಗೆ 20 ಲಕ್ಷ ರೂ. ವಂಚನೆ

ಮೊದಲ ಪತಿಯಿಂದ ದೂರವಾದ ಸುಧಾರಾಣಿ, ನಂತರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅನಂತಮೂರ್ತಿ ಎಂಬಾತನನ್ನು ಸಂಪರ್ಕಿಸಿದ್ದಳು. ಗಂಡ ತೀರಿಹೋಗಿದ್ದಾರೆ ಎಂದು ಸುಳ್ಳು ಹೇಳಿ ಆತನನ್ನು ನಂಬಿಸಿ, ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದಳು. ಸುಮಾರು ಒಂದೂಕಾಲು ವರ್ಷಗಳ ಕಾಲ ಅನಂತಮೂರ್ತಿ ಜತೆ ಸಂಸಾರ ಮಾಡಿದ್ದಳು. ಈ ಅವಧಿಯಲ್ಲಿ ವಿವಿಧ ಕಾರಣಗಳನ್ನು ನೀಡಿ ಸುಮಾರು 15 ರಿಂದ 20 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಳು ಎಂದು ಆರೋಪಿಸಲಾಗಿದೆ.

ಪೊಲೀಸರ ಮೊರೆ ಹೋದ ಸಂತ್ರಸ್ತ ಗಂಡಂದಿರು

ಅನಂತಮೂರ್ತಿಯಿಂದ ಹಣ ಪಡೆದ ನಂತರ ಆತನನ್ನೂ ತೊರೆದಿರುವ ಸುಧಾರಾಣಿ, ಇದೀಗ ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮೊದಲ ಪತಿ ವೀರೆಗೌಡ ಮತ್ತು ಎರಡನೇ ಪತಿ ಅನಂತಮೂರ್ತಿ ಒಟ್ಟಾಗಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.

ಒಂದೇ ಮಹಿಳೆ ಜತೆ ಇಬ್ಬರಿಗೆ ಅನೈತಿಕ ಸಂಬಂಧ; ಗಲಾಟೆ ವೇಳೆ ಅಡುಗೆ ಗುತ್ತಿಗೆದಾರನ ಕೊಲೆ

ಈಕೆ ಕೇವಲ ಹಣಕ್ಕಾಗಿ ಶ್ರೀಮಂತರನ್ನು ಮತ್ತು ಅಮಾಯಕರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾಳೆ. ಇಂತಹ ಮಹಿಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಪತಿಯರು ಒತ್ತಾಯಿಸಿದ್ದಾರೆ. ಸದ್ಯ ದೊಡ್ಡಬಳ್ಳಾಪುರ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.