ವಾಕಿಂಗ್‌ಗೆ ಹೋಗುತ್ತಿದ್ದ ಬಾಣಂತಿ ಮೇಲೆ ಸಾಕು ನಾಯಿ ದಾಳಿ!
ಸಾಫ್ಟ್‌ವೇರ್ ಎಂಜಿನಿಯರ್ ಮಹಿಳೆಯ ಮೇಲೆ ನೆರೆ ಮನೆಯವರ ಸಾಕು ನಾಯಿಯೊಂದು ದಾಳಿ ನಡೆಸಿರುವ ಘಟನೆ ಜನವರಿ 26ರಂದು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ. ಮಹಿಳೆ ವಾಕಿಂಗ್ ಗೆ ಹೋಗುತ್ತಿದ್ದಾಗ ಮಹಿಳೆ ಮೇಲೆ ನಾಯಿ ದಾಳಿ ನಡೆಸಿದ್ದು, ಇದರಿಂದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ವಾಕಿಂಗ್ (Walking) ಹೋಗುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್ (software engineer) ಮಹಿಳೆಯ ಮೇಲೆ ನೆರೆ ಮನೆಯವರ ಸಾಕು ನಾಯಿಯೊಂದು (Pet dog) ದಾಳಿ ನಡೆಸಿರುವ ಘಟನೆ ಜನವರಿ 26ರಂದು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ. ಪ್ರತಿ ದಿನ 31 ವರ್ಷದ ಮಹಿಳೆ ಮೇಲೆ ಬೆಳಗ್ಗೆ 6.54ರ ಸುಮಾರಿಗೆ ನೆರೆ ಮನೆಯವರ ಸಾಕು ನಾಯಿ ದಾಳಿ (dog attack) ನಡೆಸಿದೆ. ಆಕೆಯ ಕುತ್ತಿಗೆಯನ್ನು ಬಲವಾಗಿ ಕಚ್ಚಿದ್ದು, ಆಕೆಯ ರಕ್ಷಣೆಗೆ ಬಂದ ವ್ಯಕ್ತಿಯೊಬ್ಬರ ಮೇಲೂ ನಾಯಿ ದಾಳಿ ನಡೆಸಿದೆ. ಇದರ ಆತಂಕಕಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವ್ಯಕ್ತಿ ನಾಯಿಯ ಕುತ್ತಿಗೆ ಹಿಡಿದು ಎಳೆದುಕೊಂಡು ದೂರ ಹೋದಾಗ ಮಹಿಳೆ ಮನೆಯೊಂದರ ಒಳಗೆ ಹೋಗಿ ಗೇಟ್ ಮುಚ್ಚುವಲ್ಲಿ ಯಶಸ್ವಿಯಾದಳು. ಮಹಿಳೆಯ ಮುಖ, ಕೈ, ಕಾಲುಗಳಿಗೆ ಗಾಯಗಳಾಗಿದ್ದು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಳವಾದ ಗಾಯಗಳಾಗಿರುವುದರಿಂದ 50ಕ್ಕೂ ಹೆಚ್ಚು ಹೊಲಿಗೆಯನ್ನು ಹಾಕಲಾಗಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದರೂ, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮಹಿಳೆಯ ಕುತ್ತಿಗೆ ಕಚ್ಚಿದ್ದ ನಾಯಿ ತುಂಬಾ ಹೊತ್ತು ಬಿಡಲೇ ಇಲ್ಲ. ಆಕೆಯನ್ನು ರಕ್ಷಿಸಲು ಬಂದ ವ್ಯಕ್ತಿಯ ಮೇಲೂ ದಾಳಿ ನಡೆಸಿದೆ ಎಂದು ಪ್ರತ್ಯಕ್ಷದರ್ಶಿಗಳೊಬ್ಬರು ತಿಳಿಸಿದ್ದಾರೆ. ನಾಯಿ ಮಾಲೀಕ ಅಮರೇಶ್ ರೆಡ್ಡಿ ಅವರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಮಹಿಳೆಯ ಪತಿ ಆರೋಪಿಸಿ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆಗೆ ಸಂಬಂಧಿಸಿ ತನಿಖೆ ಆರಂಭಿಸಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದಾರೆ. ಸಾಕು ನಾಯಿಯನ್ನು ಹೇಗೆ ಮತ್ತು ಯಾವ ಪರಿಸ್ಥಿತಿಯಲ್ಲಿ ಬಿಡಲಾಗಿತ್ತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ ಸಾಕು ನಾಯಿಗಳ ದಾಳಿ ಪ್ರಕರಣಗಳು ಸಾರ್ವಜನಿಕ ಸುರಕ್ಷತೆ ಹಾಗೂ ಸಾಕು ಪ್ರಾಣಿಗಳ ನಿರ್ವಹಣೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯನ್ನು ಉಂಟು ಮಾಡಿದೆ.
ರಾಜ್ಯದ ವಿವಿಧೆಡೆ ಗುರುವಾರ 6 ಮಂದಿ ಮೇಲೆ ನಾಯಿ ದಾಳಿ ನಡೆಸಿದ್ದು, ಬೆಳಗಾವಿ ಜಿಲ್ಲೆ ಚಿಕ್ಕಬಾಗೇವಾಡಿಯಲ್ಲಿ ವೃದ್ಧರೊಬ್ಬರು, ಬೆಂಗಳೂರು ದಕ್ಷಿಣ ಜಿಲ್ಲೆ ಹಾರೋಹಳ್ಳಿಯಲ್ಲಿ 6 ವರ್ಷದ ಬಾಲಕಿ, ಕಲಬುರಗಿ ಜಿಲ್ಲೆಯ ಲಾಡ್ಲಾಪುರದಲ್ಲಿ ನಾಲ್ವರು ಬಾಲಕಿಯರು ಗಾಯಗೊಂಡಿದ್ದಾರೆ.