ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Save Bedti Aghanashini: ಬೇಡ್ತಿ ಬಿಡೆವು, ಅಘನಾಶಿನಿ ಕೊಡೆವು; ನದಿ ಜೋಡಣೆ ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಧರಣಿ

Bedti-Varada River Interlinking Project: ಪಶ್ಚಿಮ ಘಟ್ಟ ಉಳಿಸಿ-ಉತ್ತರ ಕನ್ನಡ ಜಿಲ್ಲೆ ಉಳಿಸಿ, ಬೇಡ್ತಿ ಬಿಡೆವು-ಅಘನಾಶಿನಿ ಕೊಡೆವು ಎಂದು ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಬೇಡ್ತಿ- ವರದಾ ನದಿ ಜೋಡಣೆ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಲಾಗಿದೆ.

ಬೇಡ್ತಿ ಬಿಡೆವು, ಅಘನಾಶಿನಿ ಕೊಡೆವು; ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಧರಣಿ

-

Prabhakara R
Prabhakara R Oct 10, 2026 5:40 PM

ಬೆಂಗಳೂರು: ಬೇಡ್ತಿ (ಗಂಗಾವಳಿ)- ವರದಾ ನದಿ ಜೋಡಣೆ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳನ್ನು (Save Bedti Aghanashini) ಕೈಬಿಡಬೇಕು ಎಂದು ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಬೃಹತ್ ಧರಣಿ ನಡೆಯಿತು. ಬೇಡ್ತಿ ಬಿಡೆವು, ಅಘನಾಶಿನಿ ಕೊಡೆವು, ನದಿ ತಿರುವು ಬೇಡವೇ ಬೇಡ- ಡಿಪಿಆರ್‌ ನಿಲ್ಲಲಿ, ಬೇಡ್ತಿ-ಅಘನಾಶಿನಿ ಉಳಿಸಿ ನಮ್ಮ ಭವಿಷ್ಯ ಉಳಿಸಿ ಎಂಬ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

Save Bedti Aghanashini

ನದಿ ಹರಿವನ್ನು ಬದಲಿಸುವ ಪ್ರಯತ್ನ ಕಾನೂನು, ಮಾನವೀಯತೆಗೆ ವಿರುದ್ಧ: ಸಂತೋಷ್ ಹೆಗ್ಡೆ

ಸಮಾವೇಶದಲ್ಲಿ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್ ಹೆಗ್ಡೆ ಮಾತನಾಡಿ, ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಪರಿಸರ ರಕ್ಷಿಸುವ ಹೊಣೆ ಇದೆ. ಸರ್ಕಾರ ಒಂದೇ ಜಿಲ್ಲೆಗೆ ಸೇರಿದ್ದಲ್ಲ, ಇಡೀ ರಾಜ್ಯಕ್ಕೆ ನ್ಯಾಯ ದೊರಕಿಸುವ ಸಂಸ್ಥೆಯಾಗಿರಬೇಕು. ಇನ್ನು ಬೇಡ್ತಿ, ಅಘನಾಶಿನಿ ನೀರಿನ ಹಕ್ಕನ್ನು ಒಂದು ಜಾಗದ ಜನರು ಹೊಂದಿರುವಾಗ, ಇತರರು ಯಾವುದೇ ನ್ಯಾಯಾಂಗದ ಸಲಹೆ, ಚರ್ಚೆ ಇಲ್ಲದೆ ತಮಗೂ ಆ ನೀರಿನಲ್ಲಿ ಹಕ್ಕಿದೆ ಎಂದು ಹೇಳಿಕೊಳ್ಳುವ ಪರಿಸ್ಥಿತಿಗೆ ನಾವು ಬಂದಿದ್ದೇವೆ. ಬೇಡ್ತಿ, ಅಘನಾಶಿನಿ ನದಿಗಳ ನೀರು ಆ ಭಾಗದ ಜನರಿಗೆ ಸಾಲುತ್ತದೋ ಇಲ್ಲವೋ ಎಂಬುವುದನ್ನು ತಿಳಿದುಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆದರೆ, ಕೆಲ ಬಲಶಾಲಿಗಳ ಒತ್ತಡಕ್ಕೆ ಮಣಿದು ನದಿಯ ಹರಿವನ್ನು ಬದಲಿಸುವ ಪ್ರಯತ್ನ ಮಾಡುವುದು ಬರೀ ಕಾನೂನಿಗೆ ವಿರುದ್ಧ ಮಾತ್ರವಲ್ಲ ಮಾನವೀಯತೆಗೂ ವಿರುದ್ಧವಾಗಿದೆ ಎಂದರು.

ಈ ಯೋಜನೆಯನ್ನು ಕೈಗೊಳ್ಳುವ ಮೊದಲು ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳು, ಪರಿಸರ ತಜ್ಞರನ್ನು ಒಟ್ಟುಗೂಡಿಸಿ, ಆ ಭಾಗದ ಜನರಿಗೆ ನದಿ ನೀರು ಸಾಕಾಗುತ್ತೋ ಇಲ್ಲವೋ ಎಂದು ಅಧ್ಯಯನ ಮಾಡಲು ಒಂದು ಸಮಿತಿಯನ್ನು ರಚಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.



ನದಿ ಸೇರಿಸುವ ಕಲ್ಪನೆ ಚೆಂದ, ಆದ್ರೆ ಆಗೋದು ಸರ್ವನಾಶ: ಜಯಂತ್‌ ಕಾಯ್ಕಿಣಿ

ಚಿತ್ರಸಾಹಿತಿ ಜಯಂತ್‌ ಕಾಯ್ಕಿಣಿ ಅವರು ಮಾತನಾಡಿ, ನಾವು ಈ ಭೂಮಿ ನಮಗೆ ಸೇರಿದ್ದು ಎಂದು ಬೇಕಾಬಿಟ್ಟಿ ದಾದಾಗಿರಿ ಮಾಡುತ್ತೇವೆ. ಅಭಿವೃದ್ಧಿ ಹೆಸರಲ್ಲಿ ಮಾಡದ ಹಾನಿಗಳಿಲ್ಲ. ಹೀಗಾಗಿ ನಾವು ಎಚ್ಚರಗೊಳ್ಳಬೇಕಾದ ಕಾಲ ಇದಾಗಿದೆ. ಅಂಕೋಲಾ ಹತ್ತಿರದ ಹೊಸೂರಿನಲ್ಲಿ ಏನಾಯಿತು ಎಂಬುವುದು ಎಲ್ಲರಿಗೂ ಗೊತ್ತಿದೆ. ರಸ್ತೆಗಾಗಿ ಕೇಕ್‌ ಕಟ್‌ ಮಾಡಿದ ಹಾಗೆ ಪರ್ವತವನ್ನು ಕತ್ತರಿಸಿದ್ದರಿಂದ ಭೂಕುಸಿತವಾಗಿ ಮೂರು ಟ್ರಕ್‌ಗಳು ಕಣ್ಮರೆಯಾದವು. ಈ ರೀತಿ ಪ್ರಕೃತಿಯ ಮುಂದೆ ಮನುಷ್ಯ ಏನೂ ಅಲ್ಲ. ಈ ನದಿಗಳನ್ನು ಸೇರಿಸುವ ಕಲ್ಪನೆಯುವ ಪೇಪರ್‌ ಮೇಲೆ ಚೆಂದ, ಇದರಿಂದ ಸರ್ವನಾಶ ಆಗುತ್ತದೆ.

ನಮ್ಮ ಉತ್ತರ ಕನ್ನಡ ಜಿಲ್ಲೆ ನದಿಗಳಿಂದ ತುಂಬಿದೆ. ಪ್ರತಿ ನದಿಗೂ ಅದರದೇ ಆದ ಲಯ ಇದೆ, ಆದರದೇ ಆದ ಓಘ ಇದೆ. ಈ ನದಿ ಜೋಡಣೆ ಯೋಜನೆ ಖಂಡಿತವಾಗಿ ಬರಬಾರದು ಎಂದು ಆಗ್ರಹಿಸಿದರು.

Save Bedti Aghanashini (1)

ಬೇಡ್ತಿ, ಅಘನಾಶಿನಿ ನದಿ ತಿರುವಿಗೆ ಅವಕಾಶ ನೀಡಲ್ಲ: ಶಾಸಕ ಭೀಮಣ್ಣ ನಾಯ್ಕ

ನಮ್ಮ ಜಿಲ್ಲೆಯ ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ ಅವೈಜ್ಞಾನಿಕವಾಗಿದೆ. ಇವತ್ತು ಆಡಳಿತ ಪಕ್ಷದ ಶಾಸಕನಾಗಿ ಯಾವುದೇ ಅಂಜಿಕೆ ಇಲ್ಲದೆ ಮಾತುಗಳನ್ನಾಡುವೆ. ಕೇಂದ್ರ ಅಥವಾ ರಾಜ್ಯ ಸರ್ಕಾರ ಇರಬಹುದು, ಈ ಯೋಜನೆ ಆರಂಭಿಸುವ ಮೊದಲು ಅಲ್ಲಿಯ ಸ್ಥಿತಿಗತಿ ಅರಿಯಬೇಕಾಗಿತ್ತು. ಸರ್ಕಾರಗಳು ಈವರೆಗೆ ಯಾವುದೇ ಡಿಪಿಆರ್‌ ಮಾಡದಿದ್ದರೆ, ಈ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಬೇಡ್ತಿ, ಅಘನಾಶಿನಿ ನದಿಗಳಲ್ಲಿ ಬಹಳ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಆ ನೀರು ಉತ್ತರ ಕನ್ನಡ ಜಿಲ್ಲೆಯ ಜನರಿಗೇ ಸಾಕಾಗುತ್ತಿಲ್ಲ. ಹೀಗಾಗಿ ಈ ನದಿ ತಿರುವು ಯೋಜನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಸಮಾವೇಶದಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರ ತಜ್ಞ ಪ್ರೊ. ಎ.ಎನ್. ಯಲ್ಲಪ್ಪ ರೆಡ್ಡಿ, ಡಾ.ಗಿರಿಧರ ಕಜೆ, ತೇಜಸ್ವಿನಿ ಅನಂತಕುಮಾರ ಸೇರಿ ಸಾವಿರಾರು ಮಂದಿ ಧರಣಿಯಲ್ಲಿ ಭಾಗಿಯಾಗಿದ್ದರು.