ರಾಜಿ ಸಂಧಾನದ ನಡುವೆ ಇಂದು 30 ಶಾಸಕರ ಪ್ರತ್ಯೇಕ ಸಭೆ : ಮುನಿದವರ ಮನವೊಲಿಕೆ
ಹೆಚ್ಚು ಶಾಸಕರು ಸಭೆ ನಡೆಸಲು ಮುಂದಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅಸಮಾಧಾನಿತ ಹಿರಿಯ ಶಾಸಕರನ್ನು ಖುದ್ದು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜೀನಾಮೆ ಬೆದರಿಕೆ ಹಾಕಿದ್ದ ಶಾಸಕರು ಬುಧವಾರ ತಮ್ಮ ಹೇಳಿಕೆ ಬದಲಿಸಿದ್ದಾರೆ.
-
ಅಸಮಾಧಾನಿತರ ಜತೆ ಡಿಕೆ, ಬಿಕೆ, ಸುರ್ಜೇವಾಲ ಮಾತುಕತೆ
ಶಿವಗಣ ಭರ್ತಿಯಾಗಿ ಮೂರು ದಿನ ಕಳೆದರೂ, ಕಾಂಗ್ರೆಸ್ ಪಾಳಯದಲ್ಲಿನ ಬಂಡಾಯದ ಕಿಡಿ ಆರುವಂತೆ ಕಾಣುತ್ತಿಲ್ಲ. ರಾಜೀನಾಮೆ ಕೊಟ್ಟರೆ ಎರಡನೇ ನಿಮಿಷಕ್ಕೆ ಅಂಗೀಕರಿಸುವುದಾಗಿ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಎಚ್ಚರಿಕೆಯ ಬಳಿಕ ಶಾಸಕರ ರಾಜೀನಾಮೆ ನಿಯಂತ್ರಣಕ್ಕೆ ಬಂದಿದ್ದರೂ, ಬಂಡಾಯ ಸಭೆಗಳಿಗೆ ಬ್ರೇಕ್ ಬಿದ್ದಿಲ್ಲ. ಈ ಎಲ್ಲದರ ನಡುವೆ ಗುರುವಾರ 30ಕ್ಕೂ ಹೆಚ್ಚು ಶಾಸಕರು ಸಭೆ ನಡೆಸಲು ಮುಂದಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅಸಮಾಧಾನಿತ ಹಿರಿಯ ಶಾಸಕರನ್ನು ಖುದ್ದು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜೀನಾಮೆ ಬೆದರಿಕೆ ಹಾಕಿದ್ದ ಶಾಸಕರು ಬುಧವಾರ ತಮ್ಮ ಹೇಳಿಕೆ ಬದಲಿಸಿದ್ದಾರೆ.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ತಾವು ಶಾಸಕ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ. ರಾಜೀನಾಮೆ ನೀಡುವುದಾಗಿ ಹೇಳಿದ್ದ ಬೇಳೂರು ಗೋಪಾಲಕೃಷ್ಣ ಇಂದು ಯೂಟರ್ನ್ ಹೊಡೆದಿದ್ದಾರೆ. ಆದರೆ ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಿದ್ದ ಬಸವಗೌಡ ದದ್ದಲ, ಶರತ್ ಬಚ್ಚೇಗೌಡ, ಗುಬ್ಬಿ ಶ್ರೀನಿವಾಸ್ ಅಸಮಾಧಾನವಿಲ್ಲ ಎನ್ನುವ ಮಾತನ್ನು ಹೇಳಿ ದ್ದರೂ, ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಗಮನಿಸಿದರೆ, ಪಕ್ಷದಲ್ಲಿ ಎಲ್ಲವೂ ಸರಿಹೋಗಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.
ಇದನ್ನೂ ಓದಿ: Cabinet Expansion: ರೇಟ್ ಫಿಕ್ಸ್ ಆಗದೆ ಡೇಟ್ ಫಿಕ್ಸ್ ಆಗಲಿಲ್ಲ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ವಿಜಯೇಂದ್ರ ಆರೋಪ
ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಿಎಂ ಡಿಕೆಶಿ ಅವರು ಸಂಜೆ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಮತ್ತು ಪುತ್ರ ಶಾಸಕ ಪ್ರಿಯ ಕೃಷ್ಣ ಅವರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರು. ಬೇಳೂರು ಗೋಪಾಲ ಕೃಷ್ಣ ಸೇರಿ ದಂತೆ ಹಲವು ಅಸಮಾಧಾನಿತರನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಭೇಟಿಯಾಗಿ ಚರ್ಚೆ ನಡೆಸಿ ದ್ದಾರೆ. ಇದಿಷ್ಟೇ ಅಲ್ಲದೇ, ಕರ್ನಾಟಕದಲ್ಲಿಯೂ ಬೀಡುಬಿಟ್ಟಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಶಾಸಕರು, ಅಸಮಾಧಾನಿತರನ್ನು ಕರೆಸಿಕೊಂಡು ಸಂತೈಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಅಸಮಾಧಾನಿತರ ಸಭೆ: ರಾಜೀನಾಮೆ ನೀಡಿದರೂ ಡೋಂಟ್ ಕೇರ್ ಎನ್ನುವ ಸಂದೇಶ ರವಾನಿಸಿದ್ದ ಸಿಎಂ ಹಾಗೂ ಹೈಕಮಾಂಡ್‌ಗೆ ಪ್ರತಿ ಸಂದೇಶ ನೀಡಲು ಮುಂದಾಗಿರುವ ಅಸಮಾಧಾ ನಿತ ಶಾಸಕರು, ಗುರುವಾರ ಬೆಂಗಳೂರಿನಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಕಾಂಗ್ರೆಸ್ಸಿನ 30ಕ್ಕೂ ಹೆಚ್ಚು ಶಾಸಕರು ಈ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದ್ದು, ಸಭೆಯಲ್ಲಿ ಮುಂದಿನ ನಡೆಯ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಸಭೆಯಲ್ಲಿ ಮುಂದಿನ ರಾಜಕೀಯ ಕಾರ್ಯತಂತ್ರ, ಪಕ್ಷದ ನಾಯಕತ್ವದೊಂದಿಗೆ ನಡೆಸ ಬೇಕಾದ ಮಾತುಕತೆ ಹಾಗೂ ಒಗ್ಗಟ್ಟಿನ ನಿಲುವಿನ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಎಚ್ಕೆಪಿ ನಿವಾಸಕ್ಕೆ ಸುರ್ಜೇವಾಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಒಡನಾಡಿ ಎಚ್. ಕೆ ಪಾಟೀಲ್ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗದಿದ್ದರೂ ವಿಧಾನಸಭಾಧ್ಯಕ್ಷ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ ಅಂತಿಮವಾಗಿ ಸಂಪುಟ ಹಾಗೂ ಸ್ಪೀಕರ್ ಎರಡೂ ಅವಕಾಶ ಸಿಗದಿರುವುದರಿಂದ ತೀವ್ರ ಬೇಸರ ಗೊಂಡಿದ್ದಾರೆ. ಆದ್ದರಿಂದ ಎಚ್.ಕೆ. ಪಾಟೀಲ್ ಅವರನ್ನು ಸಮಾಧಾನಪಡಿಸಲು ಸುರ್ಜೇವಾಲ ಅವರು ಗುರುವಾರ ಸಂಜೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಅದಕ್ಕೂ ಮೊದಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ದಿನೇಶ್ ಗುಂಡೂರಾವ್, ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ನಾಯಕರು ಚರ್ಚೆ ನಡೆಸಿದ್ದರು.
ಕೆಲವರ ಖಾತೆ ಬದಲಾವಣೆ?: ಈ ಎಲ್ಲ ಗೊಂದಲಗಳ ನಡುವೆಯೂ ಖಾತೆ ಹಂಚಿಕೆ ಪ್ರಕ್ರಿಯೆ ಕೊನೆ ಹಂತಕ್ಕೂ ತಲುಪಿದೆ. ಯಾರಿಗೆ ಯಾವ ಇಲಾಖೆ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲವಾದರೂ, ಹಾಲಿ ಸಚಿವರ ಖಾತೆ ಹಂಚಿಕೆ ಬಗ್ಗೆಯೂ ಕೆಲ ಬದಲಾವಣೆಯಾಗುವ ಸಾಧ್ಯತೆಯಿದೆ. ಪ್ರಮುಖ ವಾಗಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರ ಖಾತೆಗಳು ಬದಲಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಇಬ್ಬರು ಈ ಹಿಂದೆ ತಮ್ಮ ಖಾತೆಗಳನ್ನು ಬದಲಾಯಿಸಿ ಎನ್ನುವ ಒತ್ತಡವನ್ನು ಪಕ್ಷದ ವರಿಷ್ಠರ ಮೇಲೆ ಹಾಕಿದ್ದರು.
ಪೂರ್ಣ ಪ್ರಮಾಣದ ಸಚಿವ ಸಂಪುಟದವರೆಗೆ ಖಾತೆ ಬದಲಾವಣೆಯ ಭರವಸೆ ನೀಡಿದ್ದರು. ಆದ್ದರಿಂದ ಈ ಅವಧಿಯಲ್ಲಿ ಬದಲಾವಣೆ ಮಾಡಲು ತೀರ್ಮಾನಿಸಿದ್ದಾರೆ ಎಂದು ಮೂಲ ಗಳು ತಿಳಿಸಿವೆ. ಈಗಿರುವ ಮಾಹಿತಿ ಪ್ರಕಾರ ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಖಾತೆ ನೀಡುವ ಸಾಧ್ಯತೆಯಿದೆ. ಇನ್ನು ರಾಮಲಿಂಗಾರೆಡ್ಡಿ ಅವರಿಗೆ ಈಗಿರುವ ಖಾತೆಯೊಂದಿಗೆ ಹೆಚ್ಚುವರಿಯಾಗಿ ಮುಜರಾಯಿ ಖಾತೆ ಇಲ್ಲವೇ, ಪೌರಾಡಳಿತ ಇಲಾಖೆಯೊಂದಿಗೆ ಮುಜರಾಯಿಯನ್ನು ಹೆಚ್ಚುವರಿ ಯಾಗಿ ನೀಡಬಹುದು ಎನ್ನುವ ಮಾತುಗಳು ಕೇಳಿಬಂದಿದೆ.
ಹಂಗಾಮಿ ಸ್ಪೀಕರ್ ಸ್ಥಾನಕ್ಕೆ ಒಪ್ಪದ ಟಿಬಿಜೆ: ಈ ನಡುವೆ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಅಸಮಾಧಾನಗೊಂಡಿರುವ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರನ್ನು ರಾಜ್ಯ ಪಾಲರ ಥಾರ್ವ ಚಂದ್ ಗೆಹ್ಲೋಥ್ ಅವರು ಹಂಗಾಮಿ ಸ್ಪೀಕರ್ ಅನ್ನಾಗಿ ನೇಮಿಸಿದ್ದರು. ಆದರೆ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲವೆಂದು ಅಸಮಾಧಾನಗೊಂಡು, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಕ್ಕೆ ಸಜ್ಜಾಗಿದ್ದ ಟಿ.ಬಿ. ಜಯಚಂದ್ರ ಅವರು ಇದೀಗ ತಮಗೆ ಹಂಗಾಮಿ ಸ್ಪೀಕರ್ ಹುದ್ದೆ ಬೇಡ ಎನ್ನುವ ಮಾತನ್ನು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಹೀಗಾದರೆ, ರಾಜ್ಯ ಪಾಲರು ಮತ್ತೊಬ್ಬ ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಬೇಕಾಗುತ್ತದೆ.
ನಿಗಮ ಮಂಡಳಿಗಳಿಗೆ ರಾಜೀನಾಮೆ ಪರ್ವ
ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲವೆಂದು ಅಸಮಾಧಾನಗೊಂಡಿರುವ ಹಲವು ಶಾಸಕರು ಈಗಾ ಗಲೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ಕೆಎಎಸ್‌ಆರ್ ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುಬ್ಬಿ ಶ್ರೀನಿವಾಸ್ ಈ ಹಿಂದೆ ಹೇಳಿದ್ದರು. ಇದೀಗ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಶರತ್ ಬಚ್ಚೇಗೌಡ, ವಾಲ್ಮೀಕಿ ಅಭಿವೃದ್ಧಿ ಮಂಡಳಿ ಯ ಅಧ್ಯಕ್ಷ ಸ್ಥಾನಕ್ಕೆ ಬಸವಗೌಡ ದದ್ದಲ್ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ನಿಗಮ ಮಂಡಳಿ ಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಸುಳಿವು ಸಿಕ್ಕಿರುವುದರಿಂದ ಸಂಪುಟದಲ್ಲಿಯೂ ಸ್ಥಾನವಿಲ್ಲ, ಇತ್ತ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವೂ ಬದಲಾದರೆ ಎನ್ನುವ ಆತಂಕದಿಂದ ಕೆಲ ನಾಯಕರು ಈ ರೀತಿ ರಾಜೀನಾಮೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
![]()
ಕಾಂಗ್ರೆಸ್‌ನಲ್ಲಿ ನಾಯಕತ್ವ ಅಥವಾ ಸಾಮರ್ಥ್ಯಕ್ಕೆ ಕೊರತೆ ಇಲ್ಲ. ಸಾಮಾಜಿಕ ನ್ಯಾಯ, ಅನುಭವ ಮತ್ತು ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ಹೈಕಮಾಂಡ್ ಸಕಲ ಪ್ರಯತ್ನ ಮಾಡಿದೆ. ಅಸಮಾಧಾನ ಇರುವುದು ಸಹಜ, ವರಿಷ್ಠರು ವೈಯಕ್ತಿಕವಾಗಿ ಎಲ್ಲರೊಂದಿಗೆ ಮಾತನಾಡುತ್ತಿದ್ದಾರೆ. ಒಂದೊಮ್ಮೆ ಯಾರಾದರೂ ರಾಜೀನಾಮೆ ನೀಡಿದರೆ ಅದನ್ನು ಸ್ವೀಕರಿಸಲು ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಸಿದ್ಧರಿzರೆ. ಪಕ್ಷದಿಂದ ನಾವೇ ಹೊರತು, ನಮ್ಮಿಂದ ಪಕ್ಷವಲ್ಲ.
-ಪ್ರಿಯಾಂಕ್ ಖರ್ಗೆ, ಗೃಹ ಸಚಿವ