ಪರಿಶಿಷ್ಟರ ಮೀಸಲು ರದ್ದು: ನೇಮಕ ಪ್ರಕ್ರಿಯೆಗೆ ಗ್ರಹಣ: 56,432 ಹುದ್ದೆ ಭರ್ತಿ ಪ್ರಕ್ರಿಯೆ ನನೆಗುದಿಗೆ
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಕಾಯಿದೆಯನ್ನು ಹೈಕೋರ್ಟ್ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಸರಕಾರ ಇತ್ತೀಚೆಗೆ ಆರಂಭಿಸಿರುವ ಸಾವಿರಾರು ಹುದ್ದೆಗಳ ಭರ್ತಿ ಪ್ರಕ್ರಿಯೆ ಮತ್ತೊಮ್ಮೆ ನನೆಗುದಿಗೆ ಬೀಳುವ ಆತಂಕ ವ್ಯಕ್ತವಾಗಿದೆ. 2022ರಲ್ಲಿ ಜಾರಿಗೆ ತಂದಿದ್ದ ಕಾಯ್ದೆಯಡಿ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸ ಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಲಾಗಿತ್ತು
-
ಬೆಂಗಳೂರು: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ (Reservation)ಹೆಚ್ಚಳಕ್ಕೆ ಸಂಬಂಧಿಸಿದ ಕಾಯಿದೆಯನ್ನು ಹೈಕೋರ್ಟ್(High Court) ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಸರಕಾರ ಇತ್ತೀಚೆಗೆ ಆರಂಭಿಸಿರುವ ಸಾವಿರಾರು ಹುದ್ದೆಗಳ ಭರ್ತಿ ಪ್ರಕ್ರಿಯೆ ಮತ್ತೊಮ್ಮೆ ನನೆಗುದಿಗೆ ಬೀಳುವ ಆತಂಕ ವ್ಯಕ್ತವಾಗಿದೆ. 2022ರಲ್ಲಿ ಜಾರಿಗೆ ತಂದಿದ್ದ ಕಾಯ್ದೆಯಡಿ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸ ಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಲಾಗಿತ್ತು. ಇದರಿಂದ ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ.50ರಿಂದ 56ಕ್ಕೆ ಏರಿಕೆಯಾಗಿತ್ತು.
ಈ ಹೆಚ್ಚಳವನ್ನು ಹೈಕೋರ್ಟ್ ರದ್ದು ಮಾಡಿರುವುದರಿಂದ ಸರಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಸುಮಾರು 56,432 ಸರಕಾರಿ ಹುದ್ದೆಗಳ ಭವಿಷ್ಯದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಬಿಬಿಎಂಪಿಯ 92 ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿ ಸೇರಿದಂತೆ ವಿವಿಧ ನೇಮಕಾತಿಗಳಲ್ಲಿ ಸರಕಾರ ಯಾವ ನಿಲುವು ತೆಗೆದು ಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: SC-ST Reservation: ರಾಜ್ಯದ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ರದ್ದು ಮಾಡಿದ ಹೈಕೋರ್ಟ್
ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದು, ತೀರ್ಪಿಗೆ ತಡೆಯಾಜ್ಞೆ ಕೋರುವುದು ಹಾಗೂ ನೇಮಕಾತಿಗಳ ಕುರಿತು ಸ್ಪಷ್ಟನೆ ನೀಡುವುದು ಸರಕಾರದ ಮುಂದಿರುವ ಸಾಧ್ಯತೆಗಳಾಗಿವೆ. ಮೀಸಲು ಹೆಚ್ಚಳವನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವ ಪ್ರಸ್ತಾಪವೂ ಚರ್ಚೆ ಯಲ್ಲಿದೆ. ಆದರೆ, ಈ ಅನುಸೂಚಿಯಲ್ಲಿರುವ ಕಾನೂನುಗಳಿಗೂ ಕೆಲವು ಸಂದಭ ಗಳಲ್ಲಿ ನ್ಯಾಯಾಂಗ ಪರಿಶೀಲನೆ ಅನ್ವಯಿಸಬಹುದು.
ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲು ಜಾರಿಯಲ್ಲಿದ್ದು, 1994ರಲ್ಲಿ ಅಲ್ಲಿನ ಮೀಸಲಾತಿ ಕಾಯಿದೆಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸಲಾಗಿತ್ತು. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಮೀಸಲು ಹೆಚ್ಚಳ ರದ್ದಾಗಿರುವ ಕುರಿತು ರಾಜಕೀಯ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
![]()
ಕರ್ನಾಟಕದ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಮಾಣ ಶೇ.24.1 ರಷ್ಟಿದೆ. ಜನಗಣತಿ ಹಾಗೂ ವಿವಿಧ ಆಯೋಗಗಳ ವರದಿಗಳ ಆಧಾರದ ಮೇಲೆ ಮೀಸಲಾತಿ ಪ್ರಮಾಣ ನಿರ್ಧರಿಸುವುದು ಅಗತ್ಯವಾಗಿದೆ. ಮೀಸಲು ಹೆಚ್ಚಳದ ನಿರ್ಧಾರಕ್ಕೆ ಸಂವಿಧಾನಾತ್ಮಕ ರಕ್ಷಣೆ ದೊರೆಯುವಂತೆ ಮಾಡುವುದು ಅತ್ಯಗತ್ಯ.
- ಕೆ.ಎಚ್. ಮುನಿಯಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ