Actor Vinod Prabhakar: ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ಏರುಪೇರು; ಐಸಿಯುನಲ್ಲಿ ಚಿಕಿತ್ಸೆ
ಇತ್ತೀಚೆಗೆ ತಮ್ಮ ಬಹುನಿರೀಕ್ಷಿತ 'ಬಲರಾಮ' ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಟ ವಿನೋದ್ ಪ್ರಭಾಕರ್ ತೊಡಗಿಸಿಕೊಂಡಿದ್ದರು. ಈ ನಡುವೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಸದ್ಯ ಅವರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ನಟ ವಿನೋದ್ ಪ್ರಭಾಕರ್ -
ಬೆಂಗಳೂರು: ಸ್ಯಾಂಡಲ್‌ವುಡ್ ನಟ ವಿನೋದ್ ಪ್ರಭಾಕರ್ (Actor Vinod Prabhakar) ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿದ್ದಾಗ ರಕ್ತದೊತ್ತಡ ಹೆಚ್ಚಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ತಕ್ಷಣ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ನಾಗರಭಾವಿಯ ಖಾಸಗಿ ಆಸ್ಪತ್ರೆಯ ಕಾರ್ಡಿಯೋ ಕೇರ್ ವಿಭಾಗದಲ್ಲಿ ನಟನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ತಮ್ಮ ಬಹುನಿರೀಕ್ಷಿತ 'ಬಲರಾಮ' ಚಿತ್ರದ ಪ್ರಚಾರ ಕಾರ್ಯಗಳಲ್ಲಿ ವಿನೋದ್ ಪ್ರಭಾಕರ್ ತೊಡಗಿಸಿಕೊಂಡಿದ್ದರು. ಈ ನಡುವೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
'ಬಲರಾಮನ ದಿನಗಳು' ಚಿತ್ರಕ್ಕೆ ಧ್ವನಿಯಾದ 'ಆಲ್ ಓಕೆ' ಅಲೋಕ್; ಸಖತ್ ಖುಷಿಯಾದ ನಟ ವಿನೋದ್ ಪ್ರಭಾಕರ್
ಜೂನ್ 26ಕ್ಕೆ ‘ಬಲರಾಮನ ದಿನಗಳು’ ಸಿನಿಮಾ ಬಿಡುಗಡೆ
ನಟ ವಿನೋದ್ ಪ್ರಭಾಕರ್ ಅವರ ನಟನೆಯ ‘ಬಲರಾಮನ ದಿನಗಳು’ ಸಿನಿಮಾವು ಜೂನ್ 26ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ‘ಆ ದಿನಗಳು’ ಚಿತ್ರದ ಮೂಲಕ ಕಲ್ಟ್ ಕ್ಲಾಸಿಕ್ ಸಿನಿಮಾ ಕೊಟ್ಟಿದ್ದ ಖ್ಯಾತ ನಿರ್ದೇಶಕ ಕೆ. ಎಂ. ಚೈತನ್ಯ ಮತ್ತೊಮ್ಮೆ ‘ಬಲರಾಮನ ದಿನಗಳು’ ಸಿನಿಮಾದ ಮೂಲಕ ಅಂಡರ್‌ವರ್ಲ್ಡ್ ಕಥಾಹಂದರ ಹಿಡಿದು ಮರಳಿದ್ದಾರೆ.
ಪದ್ಮಾವತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಈ ಭಾರಿ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟೀಸರ್ ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿವೆ.
ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ಹಾಗೂ ಆಶೀಶ್ ವಿದ್ಯಾರ್ಥಿ ಅಭಿನಯಿಸಿದ್ದಾರೆ. ಇವರ ಜೊತೆಗೆ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿ ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.