ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಕಾಶ್ಮೀರ ಎಂದಿಗೂ ನಮ್ಮದೇ; ಉಗ್ರರ ದಾಳಿಗೆ ನಟ ಯಶ್‌, ಶಿವಣ್ಣ, ಸುದೀಪ್‌ ಸೇರಿ ಪ್ರಮುಖ ನಟ, ನಟಿಯರ ಖಂಡನೆ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26ಕ್ಕೂ ಹೆಚ್ಚು ಪ್ರವಾಸಿಗರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಯನ್ನು ಸ್ಯಾಂಡಲ್‌ವುಡ್‌ ನಟರಾದ ಯಶ್‌, ಸುದೀಪ್‌, ಶಿವಣ್ಣ, ಧ್ರುವ ಸರ್ಜಾ, ನಟಿ ರಾಧಿಕಾ ಪಂಡಿತ್‌ ಸೇರಿ ಹಲವರು ಖಂಡಿಸಿದ್ದು, ದುಷ್ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಉಗ್ರರ ದಾಳಿಗೆ ನಟ ಯಶ್‌, ಸುದೀಪ್‌ ಸೇರಿ ಪ್ರಮುಖ ನಟ, ನಟಿಯರ ಖಂಡನೆ

Profile Prabhakara R Apr 23, 2025 4:54 PM

ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಉಗ್ರರ ಭೀಕರ ಗುಂಡಿನ ದಾಳಿಗೆ 26ಕ್ಕೂ ಹೆಚ್ಚು ಪ್ರವಾಸಿಗರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಗೆ‌ (Pahalgam Terror Attack) ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ರಾಜಕೀಯ, ಸಿನಿಮಾ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರು ಸಂತಾಪ ಸೂಚಿಸುತ್ತಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ನ ನಟರಾದ ಯಶ್‌ (Yash), ಕಿಚ್ಚ ಸುದೀಪ್‌ (Kiccha sudeep), ಶಿವರಾಜ್‌ಕುಮಾರ್‌, ಧ್ರುವ ಸರ್ಜಾ, ನಟಿ ರಾಧಿಕಾ ಪಂಡಿತ್‌ ಸೇರಿ ಹಲವರು ಘಟನೆಯನ್ನು ಖಂಡಿಸಿದ್ದು, ದುಷ್ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಮುಗ್ಧ ಜನರ ಮೇಲಿನ ದಾಳಿ ಸಹಿಸಲಾಗದು: ಯಶ್

ನಟ ಯಶ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ಪಹಲ್ಗಾಮ್‌ನಲ್ಲಿ ಮುಗ್ಧ ಜನರ ಹತ್ಯೆಯಿಂದ ತೀವ್ರ ದುಃಖಿತನಾಗಿದ್ದೇನೆ. ಮುಗ್ಧರ ಮೇಲಿನ ಈ ದಾಳಿಯನ್ನು ಸಹಿಸಲಾಗದು. ಈ ದುಃಖದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳ ಜತೆ ನಾವು ಮತ್ತು ದೇಶದ ಜನ ದೃಢವಾಗಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.



ಇದು ಬಲವಾದ ಪ್ರತಿಕ್ರಿಯೆ ನೀಡುವ ಸಮಯ: ಸುದೀಪ್‌

ನಟ ಸುದೀಪ್‌ ಮಾತನಾಡಿ, ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿ ಹೃದಯ ವಿದ್ರಾವಕವಾದುದು. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ, ನಮ್ಮ ರಾಷ್ಟ್ರದ ಚೈತನ್ಯದ ಮೇಲಿನ ದಾಳಿ. ಇದು ಸಂಯಮದ ಸಮಯವಲ್ಲ, ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆ ನೀಡುವ ಸಮಯ. ಈ ಹೇಡಿ ಕೃತ್ಯದ ಹಿಂದೆ ಇರುವವರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗಬೇಕು ಎಂದು ಎಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಟ್ಯಾಗ್‌ ಮಾಡಿ, ಒತ್ತಾಯಿಸಿದ್ದಾರೆ.



ಶಿವರಾಜ್‌ಕುಮಾರ್‌ ಪೋಸ್ಟ್

ಪಹಲ್ಗಾಮ್‌ ಘಟನೆ ಬಗ್ಗೆ ನಟ ಶಿವರಾಜ್‌ಕುಮಾರ್‌ ಟ್ವೀಟ್‌ ಮಾಡಿ, ʼಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಪಹಲ್ಗಾಮ್‌ನಲ್ಲಿ ನಡೆದ ದಾಳಿ ಕ್ಷಮಿಸಲಾರದ ಅಪರಾಧ. ಭಯೋತ್ಪಾದನೆ ಮಾಡುವ ಯಾರೇ ಆಗಿರಲಿ, ಅವರು ಬದುಕಲು ಅನರ್ಹ. ದಾಳಿಯಲ್ಲಿ ಮೃತರಾದವರಿಗೆ ನನ್ನ ಅಂತಿಮ ನಮನ, ಮೃತರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸುವೆ ಎಂದು ಹೇಳಿದ್ದಾರೆ.



ಜಮ್ಮು-ಕಾಶ್ಮೀರ ಎಂದಿಗೂ ನಮ್ಮದೇ ಎಂದ ಧ್ರುವ ಸರ್ಜಾ

ನಟ ಧ್ರುವ ಸರ್ಜಾ ಪ್ರತಿಕ್ರಿಯಿಸಿ, ಭಾರತಾಂಬೆಯ ಕಳಶದಂತಿರೋ ಜಮ್ಮು ಮತ್ತು ಕಾಶ್ಮೀರ ಎಂದಿಗೂ ನಮ್ಮದೇ. ಪಹಲ್ಗಾಮ್‌ನಲ್ಲಿ ಉಗ್ರರು, ಅಮಾಯಕರ ಮೇಲೆ ನಡೆಸಿದಂತ ಕೃತ್ಯ ಕ್ಷಮಿಸಲಾಗದು. ಎಲ್ಲಾ ಧರ್ಮದ ಸಾರ ಪ್ರೀತಿ ಹಾಗೂ ಅಹಿಂಸೆ. ಪ್ರೀತಿಯಿಂದ ಸಾಧಿಸಲಾಗದ್ದು ಹಿಂಸೆ ಹಾಗೂ ದ್ವೇಷದಿಂದ ಸಾಧಿಸಲು ಸಾಧ್ಯವೇ ಇಲ್ಲ. ಪ್ರಾಣ ಬಿಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ, ತಮ್ಮವರನ್ನು ಕಳೆದುಕೊಂಡವರ ಕುಟುಂಬಗಳಿಗೆ ದೇವರು ಧೈರ್ಯ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.



ಹೃದಯವಿದ್ರಾವಕ ಘಟನೆ ಆಘಾತ ತಂದಿದೆ: ನಟಿ ರಾಧಿಕಾ

ನಟಿ ರಾಧಿಕಾ ಪಂಡಿತ್‌ ಪ್ರತಿಕ್ರಿಯಿಸಿ, ಪಹಲ್ಗಾಮ್‌ನಲ್ಲಿ ಅಮಾಯಕ ಜೀವಗಳು ಬಲಿಯಾದ ಹೃದಯವಿದ್ರಾವಕ ಸುದ್ದಿಯಿಂದ ಆಘಾತವಾಗಿದೆ. ಈ ದುರಂತ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ, ನಿಮ್ಮ ದುಃಖದಲ್ಲಿ ನಾವು ಭಾಗಿಯಾಗುತ್ತೇವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Pahalgam Terror Attack: ಉಗ್ರರ ದಾಳಿ ಖಂಡಿಸಿ ಕಪ್ಪು ಬಣ್ಣದಲ್ಲಿ ಮುದ್ರಿತಗೊಂಡ ಕಾಶ್ಮೀರಿ ಪತ್ರಿಕೆಗಳು; ಫೋಟೋ ನೋಡಿ