ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾಡಗೀತೆಯ ಜೈನರುದ್ಯಾನಕ್ಕೆ ಬೌದ್ಧರು, ಮುಂದೆ ಇನ್ನಾರು?

ಕುವೆಂಪು ಅವರ ಜನ್ಮಶತಮಾನೋತ್ಸವದ ಸಮಯದಲ್ಲಿ (2004)ರಲ್ಲಿ ಕೊಳಲು ಕವನ ಸಂಕಲನ ದ ಈ ಪದ್ಯವನ್ನು ನಾಡಗೀತೆಯನ್ನಾಗಿ ಅಧಿಕೃತವಾಗಿ ಅಳವಡಿಸಿಕೊಳ್ಳಲಾಗಿದೆ. ಅದಕ್ಕೂ ಮುಂಚೆ ಯೇ ಈ ಗೀತೆಯನ್ನು ಶಾಲೆ ಗಳಲ್ಲಿ ಹಾಡಲಾಗುತ್ತಿತ್ತು. 2004ರ ನಂತರ ಅಂದರೆ ಕಳೆದ 22 ವರ್ಷ ಗಳಲ್ಲಿ ಮೂರು ಬಾರಿ ಸಾಹಿತ್ಯಕ್ಕೆ ಪರಿಷ್ಕರಣೆ ಮಾಡಲಾಗಿದೆ.

ನಾಡಗೀತೆಯ ಜೈನರುದ್ಯಾನಕ್ಕೆ ಬೌದ್ಧರು, ಮುಂದೆ ಇನ್ನಾರು?

-

ರಂಜಿತ್ ಎಚ್. ಅಶ್ವತ್ಥ ಬೆಂಗಳೂರು

ಪಟ್ಟಿ ವಿಸ್ತರಿಸುತ್ತಲೇ ಹೋದರೆ ಕುವೆಂಪು ರಚಿತ ಗೀತೆಯ ಬದಲು ಸರಕಾರಿಗಾನವಾಗದೇ: ತಜ್ಞರ ಪ್ರಶ್ನೆ

‘ನಾಡಗೀತೆ ರಚಿಸುವ ಸಮಯದಲ್ಲಿ ಯಾವ ಶಬ್ದವಿರಬೇಕು, ಯಾವುದಿರಬಾರದು ಎನ್ನುವುದನ್ನು ಆಲೋಚಿಸಿಯೇ ರಚಿಸಲಾಗಿದೆ. ಅದರಲ್ಲಿ ಒಂದು ಶಬ್ದವನ್ನು ಸೇರಿಸುವ ಅಥವಾ ತೆಗೆಯುವ ಹಕ್ಕು ಯಾರಿಗೂ ಇಲ್ಲ’ ಎನ್ನುವುದು ರಾಷ್ಟ್ರಕವಿ ಕುವೆಂಪು ಅವರ ಅಭಿಪ್ರಾಯವಾಗಿತ್ತು. ಆದರೆ ರಾಷ್ಟ್ರ ಕವಿ ಕುವೆಂಪು ವಿರಚಿತ ‘ಜಯಭಾರತ ಜನನಿಯ ತನುಜಾತೆ’ ಆಯ್ಕೆಯಾಗಿ ನಾಡಗೀತೆಯನ್ನಾಗಿ ಅಳವಡಿಸಿಕೊಂಡ ದಿನದಿಂದಿರುವ ಗೊಂದಲ, ಅಳವಡಿಸಿಕೊಂಡು ಎರಡು ದಶಕ ಕಳೆಯುತ್ತಾ ಬಂದರೂ ಮುಂದುವರಿದಿದೆ. ಸರಕಾರಗಳು ಬದಲಾದಂತೆಲ್ಲ ನಾಡಗೀತೆಯಲ್ಲಿ ‘ಪರಿಷ್ಕರಣೆ’ಗೆ ಮುಂದಾಗುವುದು ಸಾಹಿತ್ಯವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಜೆಪಿ ಸರಕಾರದ ಅಂತಿಮ ಅವಧಿಯಲ್ಲಿ ಯಾವ ಧಾಟಿಯಲ್ಲಿ ನಾಡಗೀತೆ ಹಾಡಬೇಕು ಎನ್ನುವ ವಿವಾದ ಸೃಷ್ಟಿಯಾಗಿ ಕೊನೆಗೆ ಹೈಕೋರ್ಟ್ ಮೆಟ್ಟಿಲೇರಿ, ಇತ್ಯರ್ಥವಾಗಿದೆ. ಆದರೀಗ ನಾಡಗೀತೆ ಯಲ್ಲಿರುವ ‘ಪಾರಸಿಕ ಜೈನರುದ್ಯಾನ’ ಸಾಲಿಗೆ ಬೌದ್ಧ ಎನ್ನುವುದನ್ನು ಸೇರಿಸಬೇಕು ಎನ್ನುವ ಶಿಫಾರಸನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿ ಮಾಡಿದೆ. ಒಂದು ಸರಕಾರ ಈ ಪರಿಷ್ಕರಣೆಗೆ ಮುಂದಾದರೆ ಮೂರನೇ ಬಾರಿಗೆ ನಾಡಗೀತೆಯ ಸಾಹಿತ್ಯಕ್ಕೆ ‘ಸರ್ಜರಿ’ ಮಾಡಿದಂತಾಗುತ್ತದೆ.

ಕುವೆಂಪು ಅವರ ಜನ್ಮಶತಮಾನೋತ್ಸವದ ಸಮಯದಲ್ಲಿ (2004)ರಲ್ಲಿ ಕೊಳಲು ಕವನ ಸಂಕಲನ ದ ಈ ಪದ್ಯವನ್ನು ನಾಡಗೀತೆಯನ್ನಾಗಿ ಅಧಿಕೃತವಾಗಿ ಅಳವಡಿಸಿಕೊಳ್ಳಲಾಗಿದೆ. ಅದಕ್ಕೂ ಮುಂಚೆ ಯೇ ಈ ಗೀತೆಯನ್ನು ಶಾಲೆ ಗಳಲ್ಲಿ ಹಾಡಲಾಗುತ್ತಿತ್ತು. 2004ರ ನಂತರ ಅಂದರೆ ಕಳೆದ 22 ವರ್ಷ ಗಳಲ್ಲಿ ಮೂರು ಬಾರಿ ಸಾಹಿತ್ಯಕ್ಕೆ ಪರಿಷ್ಕರಣೆ ಮಾಡಲಾಗಿದೆ.

ಇದನ್ನೂ ಓದಿ: Ranjith H Ashwath Column: ಜೇಡರ ಬಲೆಯಂತಿರುವ ನದಿ ಜೋಡಣೆ ಆಲೋಚನೆ

ಇದರೊಂದಿಗೆ ಯಾವ ಧಾಟಿಯಲ್ಲಿ ನಾಡ ಗೀತೆ ಹಾಡಬೇಕು ಎನ್ನುವ ವಿಷಯದಲ್ಲಿ ಹತ್ತು ಹಲವು ಗೊಂದಲಗಳನ್ನು ನೋಡಿದ್ದೇವೆ. ಮಹತ್ವದ ನಾಡಗೀತೆಯ ವಿಷಯದಲ್ಲಿ ಈ ರೀತಿ ಪದೇಪದೆ ತೀರ್ಮಾನ ಮಾಡುವ ಅಥವಾ ಶಿಫಾರಸು ಮಾಡುವ ಅಗತ್ಯವೇನಿದೆ ಎನ್ನುವ ಪ್ರಶ್ನೆಗಳು ಶುರುವಾಗಿದೆ.

ಕುವೆಂಪು ಅವರ ಮೂಲ ಕವಿತೆಯಲ್ಲಿಯೇ ‘ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ. ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರು ದ್ಯಾನ’ ಎನ್ನುವ ಮೂಲಕ ಸಕಲ ಜಾತಿ, ಧರ್ಮವನ್ನು ಪ್ರಸ್ತಾಪಿಸಿದ್ದಾರೆ. ಹೀಗಿರುವಾಗ, ಇದೀಗ ಬೌದ್ಧ ಎನ್ನುವ ಪದ ಸೇರಿಸಬೇಕು ಎನ್ನುವ ಹೊಸ ಶಿಫಾರಸು ಮಾಡಲಾಗಿದೆ.

ಒಂದು ವೇಳೆ ‘ಬೌದ್ಧ’ ಸೇರಿಸಬೇಕು ಎಂದರೆ, ‘ಜೈನ’ ಪದವನ್ನು ಹೇಗೆ ಸಂಯೋಜಿಸುವುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ತುಸು ವ್ಯತ್ಯಾಸ ವಾದರೂ ಸ್ವರ ತಪ್ಪುತ್ತದೆ. ಆಗ ಪುನಃ ರಾಗ ಸಂಯೋಜನೆ ಮಾಡಬೇಕಾಗುತ್ತದೆ.

ಇದರಿಂದ ಮತ್ತಷ್ಟು ಗೊಂದಲವೇ ಹೊರತು ಮತ್ತೇನು ಅಲ್ಲ. ಇಂದು ಬೌದ್ಧ ಧರ್ಮವನ್ನು ಸೇರಿಸಿದರೆ ಮುಂದೆ ಲಿಂಗಾಯತರು ನಮ್ಮ ಜಾತಿಯ ಹೆಸರನ್ನು ಸೇರಿಸಿ ಎನ್ನಬಹುದು. ಒಕ್ಕಲಿಗರು ಕೆಂಪೇಗೌಡರ ಹೆಸರನ್ನು ಸೇರಿಸಿ ಎನ್ನಬಹುದು. ಈ ರೀತಿ ಎಲ್ಲವನ್ನು ಸೇರಿಸುತ್ತಾ ಹೋದರೆ ನಾಡ ಗೀತೆಯ ಪಾವಿತ್ರ್ಯತೆ ಏನಾಗಲಿದೆ ಎನ್ನುವುದು ಅನೇಕರ ಪ್ರಶ್ನೆಯಾಗಿದೆ.

ಬಿಳಿಮಲೆ ಸಮಿತಿಯ ಶಿಫಾರಸೇನು?: ನಾಡಗೀತೆಯಲ್ಲಿ ‘ಬೌದ್ಧ’ ಪದ ಸೇರ್ಪಡೆ ಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿ ಸರಕಾ ರಕ್ಕೆ ಕೆಲ ದಿನಗಳ ಹಿಂದೆ ಶಿಫಾರಸು ಮಾಡಿತ್ತು. ಹಂಪ ನಾಗರಾಜಯ್ಯ, ಬರಗೂರು ರಾಮಚಂದ್ರಪ್ಪ, ಎಸ್.ಜಿ.ಸಿದ್ಧರಾ ಮಯ್ಯ, ಕೆ.ವಿ.ಚಿದಾನಂದ, ಎಂ.ಎಸ್.ಆಶಾದೇವಿ, ಸಿ.ಎಸ್.ದ್ವಾರಕಾನಾಥ್, ಮೂಡ್ನಾಕೂಡು ಚಿನ್ನಸ್ವಾಮಿ, ಕಾಳೇಗೌಡ ನಾಗವಾರ ಅವರನ್ನು ಒಳಗೊಂಡ ಸಮಿತಿಯು, ಪದ ಸೇರ್ಪಡೆಗೆ ಒಮ್ಮತದ ತೀರ್ಮಾನ ಕೈಗೊಂಡಿದೆ. ನಾಡಗೀತೆಯಲ್ಲಿನ ‘ಪಾರಸಿಕ ಜೈನರುದ್ಯಾನ’ ಎಂಬ ಸಾಲುಗಳನ್ನು, ‘ಪಾರಸಿಕ ಜೈನ ಬೌದ್ಧರುದ್ಯಾನ’ ಎಂದು ಮಾರ್ಪಾಡು ಮಾಡಲು ಶಿಫಾರಸು ಮಾಡಿತ್ತು. ಈ ಶಿಫಾರಸು ಮಾಡುವ ಜತೆಗೆ ಈ ಹಿಂದೆ ಕುವೆಂಪು ಅವರು ರಚಿಸುವ ಸಮಯದಲ್ಲಿ ‘ಬೌದ್ಧ’ ಎನ್ನುವ ಪದವಿತ್ತು.

ಆದರೆ ಕಾಲಾನಂತರ ಅದನ್ನು ತೆಗೆಯಲಾಗಿದೆ. ಆದ್ದರಿಂದ ಬೌದ್ಧ ಪದವನ್ನು ಮತ್ತೊಮ್ಮೆ ಸೇರಿಸ ಬೇಕು ಎನ್ನುವ ಶಿಫಾರಸನ್ನು ಮಾಡಲಾಗಿದೆ. ಆದರೆ ‘ಜಯಭಾರತ ಜನನಿಯ ತನುಜಾತೆ’ಯನ್ನು ಕುವೆಂಪು ಅವರ ‘ಕೊಳಲು’ ಕವನ ಸಂಕಲನದಿಂದ ಪಡೆಯಲಾಗಿದೆ. ಆ ಕವನ ಸಂಕಲನದಲ್ಲಿ ಬೌದ್ಧ ಎನ್ನುವ ಪದವೇ ಇಲ್ಲ.

ಬಳಿಕ ನಾಡಗೀತೆಯೆಂದು ಅಧಿಕೃತವಾಗಿ ಘೋಷಿಸಿದ ಬಳಿಕವೂ, ಎರಡು ಬಾರಿ ಪರಿಷ್ಕರಣೆ ಮಾಡಲಾಗಿದೆ. ಆ ವೇಳೆಯೂ ಈ ಪದದ ಪ್ರಸ್ತಾಪವಿರಲಿಲ್ಲ. ಒಂದು ಧರ್ಮ, ಸಮುದಾಯಗಳು ನಾಡಗೀತೆಯಲ್ಲಿ ತಮ್ಮ ಜಾತಿ, ಧರ್ಮದ ಹೆಸರು ಇರಲಿ ಎಂದು ಒತ್ತಡ ಹೇರಿದಾಗಲೆಲ್ಲ ಪರಿಷ್ಕರಣೆ ಮಾಡುತ್ತಾ ಹೋದರೆ ನಾಡಗೀತೆಯ ಮೂಲಸ್ವರೂಪ, ಅದರ ಘನತೆ ಏನಾಗಲಿದೆ? ಎನ್ನುವ ಆತಂಕ ಸಾರ್ವಜನಿಕರ ವಲಯದಲ್ಲಿ ಶುರುವಾಗಿದೆ.

ಎರಡು ಬಾರಿ ಸಾಹಿತ್ಯ ಪರಿಷ್ಕರಣೆ: ಈ ಹಿಂದೆ ಎರಡು ಬಾರಿ ನಾಡಗೀತೆಯ ಸಾಹಿತ್ಯದಲ್ಲಿ ಸಣ್ಣ ಪುಟ್ಟ ಬದಲಾವಣೆ ಯಾಗಿದೆ. ಮೊದಲಿಗೆ ಬಸವೇಶ್ವರರಿಹ ದಿವ್ಯಾರಣ್ಯ ಎನ್ನುವ ಸಾಲಿಗೆ ‘ಮಧ್ವ’ರ ದಿವ್ಯಾರಣ್ಯ ಎಂದು ಸೇರಿಸಲಾಯಿತು. ಇದೇ ರೀತಿ ಕಬ್ಬಿಗರುದಿಸಿದ ಮಂಗಳ ಧಾಮ ಬದಲಿಗೆ ಕುಮಾರವ್ಯಾಸರ ಮಂಗಳಧಾಮ ಎಂದು ಸೇರಿಸಲಾಯಿತು. ಇನ್ನು ಸ್ವರ ಸಂಯೋಜನೆ ವಿಷಯ ದಲ್ಲಿಯೂ ಹಲವು ಗೊಂದಲಗಳಿವೆ.

ಪರಿಷ ರಣೆಗೆ ಕುವೆಂಪು, ತೇಜಸ್ವಿ ಒಪ್ಪಿರಲಿಲ್ಲ 2004ರಲ್ಲಿ ಕುವೆಂಪು ಜನ್ಮ ಶತಮಾನೋತ್ಸದ ಸಮತ ದಲ್ಲಿ ನಾಡಗೀತೆಯನ್ನಾಗಿ ಅಧಿಕೃತವಾಗಿ ಘೋಷಿಸಲಾಯಿತು. ಆ ಸಮಯದಲ್ಲಿ ಕುವೆಂಪು ವಿರಚಿತ ನಾಡಗೀತೆಯಲ್ಲಿ ಕೆಲ ಪದಗಳನ್ನು ಸೇರಿಸುವುದು, ತೆಗೆಯುವ ಕೆಲಸವನ್ನು ಸರಕಾರ ಮಾಡಿದಾಗ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ತೀವ್ರವಾಗಿ ವಿರೋಧಿಸಿದ್ದರು. ಕುವೆಂಪು ಅವರು ರಚಿಸಿರುವ ‘ಜಯಭಾರತ ಜನನಿಯ ತನುಜಾತೆ’ಯ ಕವಿತೆಯನ್ನು ಪೂರ್ಣಪ್ರಮಾಣದಲ್ಲಿ ಅಥವಾ ಆಯ್ದ ಚರಣಗಳನ್ನು ಪಡೆದು ನಾಡಗೀತೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕುವೆಂಪು ಅವರ ಬರೆದಿರುವ ಶಬ್ದಗಳ ಹೊರತಾಗಿ ಬೇರೆ ಶಬ್ದಗಳನ್ನು ಸೇರಿಸಲು ಅಥವಾ ಪದ್ಯದ ಒಂದು ಶಬ್ದ, ಸಾಲು ತೆಗೆದು ಹಾಕಲು ನಮ್ಮ ಸಮ್ಮತಿ ಇಲ್ಲ ಎನ್ನುವ ವಿರೋಧವನ್ನು ವ್ಯಕ್ತಪಡಿಸಿ ಸರಕಾರಕ್ಕೆ ಪತ್ರ ಬರೆದಿದ್ದರು.

ಇದಕ್ಕೂ ಮೊದಲು ಕುವೆಂಪು ಅವರಿದ್ದ ಸಮಯದಲ್ಲಿ ‘ಮಧ್ವ’ ಶಬ್ದ ಸೇರಿಸಬೇಕೆಂದು ಕೆಲವರು ಪ್ರಸ್ತಾಪಿಸಿದಾಗಲೂ ಹೊಸ ಶಬ್ದ ಸೇರಿಸಲು ಒಪ್ಪಿರಲಿಲ್ಲ. ಇದು ಪರಿಪೂರ್ಣವಾಗಿದೆ ಎನ್ನುವ ಮಾತುಗಳನ್ನು ಆಡಿದ್ದರು ಎಂದು ಸಭೆಯಲ್ಲಿದ್ದವರು ಹೇಳುತ್ತಾರೆ. ಹೀಗಿರುವಾಗ ಸ್ವತಃ ಕುವೆಂಪು ಅವರೇ ಬದಲಾಯಿಸುವುದು ಬೇಡ ಎನ್ನುವ ಮಾತುಗಳನ್ನು ಆಡಿರುವಾಗ, ಅವರ ಪುತ್ರ ಅಧಿಕೃತ ವಾಗಿಯೇ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿದಾಗ ಈ ರೀತಿ ಪದೇಪದೆ ಪರಿಷ್ಕರಣೆಯ ಪ್ರಸ್ತಾಪ ಬರುವುದು ಸರಿಯಲ್ಲ ಎನ್ನುವ ಮಾತುಗಳು ಸಾಹಿತ್ಯ ವಲಯದಲ್ಲಿ ಕೇಳಿಬರುತ್ತಿದೆ.

ವಿರೋಧಗಳೇನು?

ನಾಡಗೀತೆಗೆಂದು ಕುವೆಂಪು ಅವರ ಪದ್ಯವನ್ನು ಪದೇಪದೆ ಬದಲಿಸುವುದು ಮೂಲಕ್ಕೆ ಮಾಡುವ ಅಪಚಾರ

ಪದ, ವಾಕ್ಯಗಳನ್ನು ಬದಲಿಸಲು ಈ ಹಿಂದೆ ಸ್ವತಃ ಲೇಖಕ ಕುವೆಂಪು, ಅವರ ಪುತ್ರ ತೇಜಸ್ವಿಯವರೇ ಬಲವಾಗಿ ವಿರೋಧಿಸಿದ್ದರು

‘ಸರ್ವಜನಾಂಗದ ಶಾಂತಿಯ ತೋಟ’ ಎಂದಿರುವಾಗ, ಪ್ರತಿ ಜಾತಿ, ಧರ್ಮದ ಹೆಸರು ಪ್ರತ್ಯೇಕವಾಗಿ ಏಕೆ ಬೇಕು?

ಏಕಾಏಕಿ ಶಿಫಾರಸು ಮಾಡುವ ಮೊದಲು, ಸಂಗೀತ, ಸಾಹಿತ್ಯ ಕ್ಷೇತ್ರದ ಇನ್ನು ಹಲವ ರೊಂದಿಗೆ ಚರ್ಚಿಸಿಲ್ಲವೇಕೆ?

image

ತಾವು ಸೇರಿಸದೇ ಇರುವ ಶಬ್ದವನ್ನು ಸೇರಿಸಲು ಯಾರಿಗೂ ಹಕ್ಕಿಲ್ಲ ಎನ್ನುವುದು ಕುವೆಂಪು ಅವರ ನಿಲುವಾಗಿತ್ತು. ನಾನು ಬರೆದಿರುವುದು ನಾಡಗೀತೆ, ಒಂದು ಜಾತಿ, ಧರ್ಮವನ್ನು ನೋಡಿಕೊಂಡು ಬರೆದಿಲ್ಲ ಎನ್ನುವ ನಿಲುವನ್ನು ಹೊಂದಿದ್ದರು. ಪುರುಷೋತ್ತಮ ಬಿಳಿಮಲೆ ಅವರ ಅಭಿಪ್ರಾಯಕ್ಕೆ ನನ್ನ ವಿರೋಧವಿದೆ.

-ಡಾ.ವೈ.ಕೆ.ಮುದ್ದುಕೃಷ್ಣ, ಅಧ್ಯಕ್ಷರು, ಕರ್ನಾಟಕ ಸುಗಮ ಸಂಗೀತ ಪರಿಷತ್ತು