ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anganwadi Workers Protest: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಂದ ಅನಿರ್ದಿಷ್ಟಾವಧಿ ಮುಷ್ಕರ

ಅಂಗನವಾಡಿ ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಯಕರ್ತೆಯರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ವೇತನ ಹೆಚ್ಚಳ, ಉದ್ಯೋಗ ಭದ್ರತೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡುವಂತೆ ಸರ್ಕಾರದ ಬಳಿ ಬೇಡಿಕೆಯಿಟ್ಟಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ.

ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ ಕಾರ್ಯಕರ್ತೆಯರಿಂದ ಧರಣಿ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ -

Priyanka P
Priyanka P Dec 2, 2025 2:05 PM

ಬೆಂಗಳೂರು, ಡಿ. 2: ಕರ್ನಾಟಕದಾದ್ಯಂತದ ಲಕ್ಷಾಂತರ ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರು(Anganwadi workers), ಮಧ್ಯಾಹ್ನದ ಬಿಸಿಯೂಟದ ಕಾರ್ಯಕರ್ತೆಯರು (Mid-Day Meal workers) ಮತ್ತು ಆಶಾ ಕಾರ್ಯಕರ್ತೆಯರು ಸೋಮವಾರ (ಡಿಸೆಂಬರ್ 1) ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ (Anganwadi Workers Protest). ಕೇಂದ್ರ ಸರ್ಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿರುವುದರಿಂದ ಅಂಗನವಾಡಿ ಕೇಂದ್ರಗಳು ಮತ್ತು ಮಧ್ಯಾಹ್ನದ ಬಿಸಿಯೂಟ (Mid-Day Meal) ಸೇವೆಗಳ ಮೇಲೆ ಪರಿಣಾಮ ಬೀರಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾರ್ಮಿಕರು ಮತ್ತು ಸಹಾಯಕರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರಿಂದ ಮಲ್ಲೇಶ್ವರಂ ಪೊಲೀಸ್ ಠಾಣೆ ಮತ್ತು ಬೆನ್ಸನ್ ಟೌನ್ ಬಳಿಯ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲಾಯಿತು. ಅದೇ ರೀತಿ ಮಂಡ್ಯ, ಹುಬ್ಬಳ್ಳಿ, ತುಮಕೂರು ಮತ್ತು ಇತರ ಜಿಲ್ಲೆಗಳಲ್ಲೂ ಪ್ರತಿಭಟನೆಗಳನ್ನು ನಡೆಸಲಾಗಿದೆ.

ಅಂಗನವಾಡಿ ನೌಕರರ ಬೇಡಿಕೆಗಳಿಗೆ ಒತ್ತಾಯಿಸಿ ಶೋಭಾ ಕರಂದ್ಲಾಜೆ ಮನೆ ಮುಂದೆ ಪ್ರತಿಭಟನೆ

ʼʼಈ ಮುಷ್ಕರ ನಡೆಸುವುದು ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು. ಅಂಗನವಾಡಿಗಳು, ಮಧ್ಯಾಹ್ನದ ಊಟ ಮತ್ತು ಆರೋಗ್ಯ ಸೇವೆಗಳ ಮೇಲೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪರಿಣಾಮ ಬೀರಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಈ ಕಾರ್ಮಿಕರು ಸಹ ಸರಿಯಾಗಿ ವೇತನ ನೀಡದ ಕಾರಣ ಬೆಲೆ ತೆರುತ್ತಿದ್ದಾರೆʼʼ ಎಂದು ಕರ್ನಾಟಕ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್‌ನ ಅಧ್ಯಕ್ಷೆ ಎಸ್ ವರಲಕ್ಷ್ಮೀ ಹೇಳಿದರು.

ʼʼನಾವು ಕೇಂದ್ರ ಸರ್ಕಾರವನ್ನು- ವೇತನ, ಕೈಗಾರಿಕಾ ಸಂಬಂಧ, ಸಾಮಾಜಿಕ ಭದ್ರತೆ, ವೃತ್ತಿಪರ ಸುರಕ್ಷತೆ ಮತ್ತು ಆರೋಗ್ಯ ಮತ್ತು ಕೆಲಸದ ಷರತ್ತುಗಳ ಕುರಿತ ನಾಲ್ಕು ಹೊಸ ಕಾರ್ಮಿಕ ನೀತಿಗಳನ್ನು ಸೇರಿಸಬೇಕು ಎಂದು ಆಗ್ರಹಿಸುತ್ತೇವೆ. ಈ ಎಲ್ಲ ಕಾರ್ಮಿಕರನ್ನು ವಿವಿಧ ಯೋಜನೆಗಳಡಿ ನೇಮಿಸಲಾಗಿದ್ದು, ಇದು ಸರ್ಕಾರವು ಗೌರವಧನದ ಹೆಸರಿನಲ್ಲಿ ಅವರಿಗೆ ಕಡಿಮೆ ಸಂಬಳವನ್ನು ನೀಡಲು ಅನುವು ಮಾಡಿಕೊಡುತ್ತದೆ. ಸರ್ಕಾರವು ಅವರಿಗೆ ಭವಿಷ್ಯ ನಿಧಿ ಮತ್ತು ಇಎಸ್‌ಐನಂತಹ ಎಲ್ಲ ಪ್ರಯೋಜನಗಳನ್ನು ಒದಗಿಸಬೇಕು ಮತ್ತು ಉದ್ಯೋಗ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕುʼʼ ಎಂದು ಅವರು ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಮುಂದೆ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಲಿನಿ ಮೇಸ್ತ ಮಾತನಾಡಿ, ʼʼಮಧ್ಯಾಹ್ನ ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ ಬಜೆಟ್ ಹೆಚ್ಚಿಸಬೇಕು. ಮಧ್ಯಾಹ್ನ ಬಿಸಿಯೂಟ ಕಾರ್ಮಿಕರ ವೇತನ 4,700 ರೂ. ಆಗಿದ್ದು, ಅದರಲ್ಲಿ ಕೇಂದ್ರ ಸರ್ಕಾರ 600 ರೂ. ಪಾವತಿಸುತ್ತದೆ. ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸುತ್ತದೆʼʼ ಎಂದು ವಿವರಿಸಿದರು.

ʼʼ2009ರಿಂದ ಅವರ ಸಂಬಳ ಹೆಚ್ಚಿಲ್ಲ. ಅದೇ ರೀತಿ 2018ರಿಂದ ಅಂಗನವಾಡಿ ಕಾರ್ಯಕರ್ತೆಯರ ಸಂಬಳವೂ ಹೆಚ್ಚಿಲ್ಲ. ಅವರ ಸಂಬಳ 11,500 ರೂ.ಯಿಂದ 12,000 ರೂ.ಗಳಾಗಿದ್ದು, ಇದರಲ್ಲಿ ಕೇಂದ್ರದ ಪಾಲು 2,700 ರೂ., ಸಹಾಯಕಿಯರ ಸಂಬಳ 7,000 ರೂ. ಮತ್ತು ಕೇಂದ್ರವು 2,000 ರೂ. ನೀಡುತ್ತದೆ. ನೀತಿಗಳು ಕಾರ್ಮಿಕರ ಪರವಾಗಿ ಇಲ್ಲ. ಇದು ಅವರ ಉದ್ಯೋಗ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆʼʼ ಎಂದು ಅವರು ಹೇಳಿದರು.