ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಪೋಲೊ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ: ನಲಿ-ಕಲಿ ಕನ್ನಡ ಕಲಿಕಾ ಕಾರ್ಯಕ್ರಮಕ್ಕೆ ಚಾಲನೆ

ಆರೋಗ್ಯ ಸೇವೆಯಲ್ಲಿ ಸಾಂತ್ವನದ ಪ್ರತಿಯೊಂದು ಮಾತು ಕೂಡ ಮಹತ್ವದ್ದಾಗಿದೆ. ಸಿಬ್ಬಂದಿ ಮೂಲ ಕನ್ನಡವನ್ನು ಕಲಿಯುವುದರಿಂದ ರೋಗಿಗಳು ಮತ್ತು ಅವರ ಕುಟುಂಬದವರೊಂದಿಗೆ ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಸಂವಹನ ನಡೆಸಲು ಸಾಧ್ಯವಾಗುತ್ತದೆ. ಇದು ಸ್ಪಷ್ಟ ಸಂಭಾಷಣೆಗೆ ಸಹಕಾರಿಯಾಗಿದ್ದು, ಹೆಚ್ಚು ಆತ್ಮೀಯ ಆರೈಕೆ ಅನುಭವವನ್ನು ಸೃಷ್ಟಿಸುತ್ತದೆ.

ಅಪೋಲೊ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

-

Profile
Ashok Nayak Nov 25, 2026 8:20 PM

ಬೆಂಗಳೂರು: ಅಪೋಲೊ ಆಸ್ಪತ್ರೆ ಬನ್ನೇರುಘಟ್ಟ ರಸ್ತೆ ಬೆಂಗಳೂರು ಹಾಗೂ ಅಪೋಲೊ ಬೆಂಗಳೂರು ಕನ್ಸಲ್ಟೆಂಟ್ ಫೋರಂ ಸಂಸ್ಥೆಗಳು ಜಂಟಿಯಾಗಿ ನಗರದ ಅಪೋಲೊ ಆಸ್ಪತ್ರೆಯಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದವು. ದ.ರಾ. ಬೇಂದ್ರೆ ವೇದಿಕೆಯಲ್ಲಿ ನಡೆದ ಈ ಸಮಾರಂಭದಲ್ಲಿ ವೈದ್ಯರು, ಸಿಬ್ಬಂದಿ ಮತ್ತು ಅವರ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡ ನಾಡಿನ ಹಬ್ಬವನ್ನು ಆಚರಿಸಲಾಯಿತು.

ಈ ವರ್ಷದ ರಾಜ್ಯೋತ್ಸವದ ಮುಖ್ಯ ಉದ್ದೇಶ - ನಲಿ-ಕಲಿ: ಕನ್ನಡ ಕಲಿ

ಈ ಬಾರಿಯ ಆಚರಣೆಯ ಪ್ರಮುಖ ಆಕರ್ಷಣೆ 'ನಲಿ-ಕಲಿ - ಕನ್ನಡ ಕಲಿ' ಕಾರ್ಯಕ್ರಮವಾಗಿತ್ತು. ಆಸ್ಪತ್ರೆಯಲ್ಲಿ ಕನ್ನಡ ಕಲಿಕೆಯನ್ನು ಸರಳ, ಪ್ರಾಯೋಗಿಕ ಮತ್ತು ಅರ್ಥಪೂರ್ಣವಾಗಿಸುವ ಉದ್ದೇಶದಿಂದ ಈ ಉಪಕ್ರಮವನ್ನು ಆರಂಭಿಸಲಾಗಿದೆ.

ಆರೋಗ್ಯ ಸೇವೆಯಲ್ಲಿ ಸಾಂತ್ವನದ ಪ್ರತಿಯೊಂದು ಮಾತು ಕೂಡ ಮಹತ್ವದ್ದಾಗಿದೆ. ಸಿಬ್ಬಂದಿ ಮೂಲ ಕನ್ನಡವನ್ನು ಕಲಿಯುವುದರಿಂದ ರೋಗಿಗಳು ಮತ್ತು ಅವರ ಕುಟುಂಬದವರೊಂದಿಗೆ ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಸಂವಹನ ನಡೆಸಲು ಸಾಧ್ಯವಾಗುತ್ತದೆ. ಇದು ಸ್ಪಷ್ಟ ಸಂಭಾಷಣೆಗೆ ಸಹಕಾರಿಯಾಗಿದ್ದು, ಹೆಚ್ಚು ಆತ್ಮೀಯ ಆರೈಕೆ ಅನುಭವವನ್ನು ಸೃಷ್ಟಿಸುತ್ತದೆ. ಕೆಲವೇ ಪರಿಚಿತ ಪದಗಳು ಸಹ ರೋಗಿಗೆ ಸಾಂತ್ವನ, ವಿಶ್ವಾಸ ಮತ್ತು ಧೈರ್ಯವನ್ನು ನೀಡಬಲ್ಲವು. ಜೊತೆಗೆ ಸಹೋದ್ಯೋಗಿಗಳ ನಡುವೆ ಉತ್ತಮ ಸಂಪರ್ಕ ಮತ್ತು ತಂಡದ ಕೆಲಸವನ್ನು ಬಲಪಡಿಸುತ್ತದೆ.

ಇದನ್ನೂ ಓದಿ: Rajyotsava Award 2026: ಎಐ,‌ ತಂತ್ರಜ್ಞಾನದ ಭಾಷೆಯಾಗಿ ಕನ್ನಡ ಬಳಕೆಯಾಗಬೇಕು: ಸಿಎಂ ಡಿ.ಕೆ.ಶಿವಕುಮಾರ್‌

ಕನ್ನಡ ಕಲಿ. ಉತ್ತಮವಾಗಿ ಸಂವಹನ ನಡೆಸಿ. ರೋಗಿಗಳಿಗೆ ಉತ್ತಮವಾಗಿ ಆರೈಕೆ ಮಾಡಿ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್(Vijay Prakash) ಅವರು ಕನ್ನಡ ನಮ್ಮ ಗುರುತು, ನಮ್ಮ ಹೆಮ್ಮೆ. ಮನೆಯಲ್ಲಿ, ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಿದಾಗಲೇ ಭಾಷೆ ಜೀವಂತವಾಗಿರುತ್ತದೆ ಎಂದು ಹೇಳಿದರು.

ಕನ್ನಡ ಹಾಡುಗಳನ್ನು ಹಾಡುವ ಮೂಲಕ, ಕನ್ನಡ ಸಾಹಿತ್ಯವನ್ನು ಓದುವ ಮೂಲಕ ಮುಂದಿನ ಪೀಳಿಗೆಗೆ ಭಾಷೆಯ ಬಗ್ಗೆ ಪ್ರೀತಿ ಬೆಳೆಸಬೇಕು ಎಂದು ಕರೆ ನೀಡಿದರು. ಕರ್ನಾಟಕದ ಸಂಸ್ಕೃತಿ ಮತ್ತು ಸಂಗೀತ ಪರಂಪರೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು. ಆಸ್ಪತ್ರೆಯ ಕನ್ನಡೇತರ ಸಿಬ್ಬಂದಿಗೆ ಕನ್ನಡ ಕಲಿಸುವ ನಲಿ-ಕಲಿ ಕಾರ್ಯಕ್ರಮಕ್ಕೆ ವಿಜಯ್ ಪ್ರಕಾಶ್ ಚಾಲನೆ ನೀಡಿದರು.

ಅಪೋಲೊ ಆಸ್ಪತ್ರೆ ಕರ್ನಾಟಕ ವಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಕ್ಷಯ್ ಒಲೆಟಿ ಮಾತನಾಡಿ ಅಪೋಲೊದಲ್ಲಿ ರೋಗಿಗಳೊಂದಿಗೆ ಕನ್ನಡದಲ್ಲೇ ಸಂವಹನ ನಡೆಸಲು ನಾವು ವಿಶೇಷ ಒತ್ತು ನೀಡುತ್ತಿದ್ದೇವೆ. ಕನ್ನಡ ಭಾಷೆ ರೋಗಿ ಮತ್ತು ವೈದ್ಯರ ನಡುವೆ ವಿಶ್ವಾಸ ಬೆಳೆಸುವ ಸೇತುವೆ ಯಾಗಿದೆ ಎಂದು ಹೇಳಿದರು. ಸಿಬ್ಬಂದಿ ಕನ್ನಡವನ್ನು ಹೆಮ್ಮೆಯಿಂದ ಬಳಸುವಂತಹ ವಾತಾವರಣ ವನ್ನು ಸಂಸ್ಥೆಯಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಎಬಿಸಿಎಫ್ ಸಂಸ್ಥೆಯ ಅಧ್ಯಕ್ಷ ಡಾ. ಪ್ರಶಾಂತ್ ಅರಸ್ ಮಾತನಾಡಿ ರಾಜ್ಯೋತ್ಸವ ಆಚರಣೆ ಕೇವಲ ಹಬ್ಬವಲ್ಲ, ನಮ್ಮೆಲ್ಲರನ್ನು ಒಗ್ಗೂಡಿಸುವ ವೇದಿಕೆ. ವೈದ್ಯರು ಮತ್ತು ಸಿಬ್ಬಂದಿಯಲ್ಲಿರುವ ಸುಪ್ತ ಪ್ರತಿಭೆಗಳಿಗೆ ಇದೊಂದು ಉತ್ತಮ ಅವಕಾಶ ಎಂದು ಹೇಳಿದರು. ಪ್ರತಿ ವರ್ಷ ಈ ಕಾರ್ಯಕ್ರಮ ದಿಂದ ತಂಡದಲ್ಲಿನ ಒಗ್ಗಟ್ಟು ಮತ್ತು ಸ್ನೇಹ ಭಾವ ಮತ್ತಷ್ಟು ಗಟ್ಟಿಯಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಆಯೋಜಿಸಿದ್ದ ಎಬಿಸಿಎಫ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ಅಪೋಲೊ ಆಸ್ಪತ್ರೆಯ ಹಿರಿಯ ನರರೋಗ ತಜ್ಞ ಡಾ. ಸೂರ್ಯನಾರಾಯಣ ಶರ್ಮ ಮಾತನಾಡಿ ಸಿಬ್ಬಂದಿಯ ಮಕ್ಕಳ ಸಾಧನೆಯನ್ನು ಗುರುತಿಸಿ ಗೌರವಿಸುವುದು ನಮ್ಮ ಸಂಸ್ಥೆಯ ಹೆಮ್ಮೆಯ ಸಂಪ್ರದಾಯ. ಹತ್ತನೇ ತರಗತಿಯಲ್ಲಿ ಶೇಕಡ 95ಕ್ಕಿಂತ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಸಿಬ್ಬಂದಿಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು. ಜೊತೆಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಗಳಲ್ಲಿ ವಿಜೇತರಾದ ಸಿಬ್ಬಂದಿಗೆ ಬಹುಮಾನ ನೀಡಿ ಗೌರವಿಸಲಾಯಿತು ಎಂದು ತಿಳಿಸಿದರು.

ಸಮಾರಂಭದಲ್ಲಿ ಮಿಮಿಕ್ರಿ ಗೋಪಿ ಅವರ ಹಾಸ್ಯ ಕಾರ್ಯಕ್ರಮ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿತು. ಕೆಮೆಲಿಯನ್ಸ್ ಬ್ಯಾಂಡ್ ತಂಡದ ಕೊಳಲು ಮತ್ತು ವಯಲಿನ್ ವಾದನ ಸಭಿಕರ ಮನಸೂರೆಗೊಂಡಿತು.