BBMP: ಬೀದಿ ನಾಯಿಗಳಿಗೂ ಬಂತು ಕಾಲ; ಇನ್ಮುಂದೆ ಪ್ರತಿದಿನ ಸಿಗಲಿದೆ ಚಿಕನ್ ರೈಸ್
ಬೆಂಗಳೂರು ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡಲು ಬಿಬಿಎಂಪಿ ಮುಂದಾಗಿದೆ. ಹೌದು ಇನ್ನು ಪ್ರತಿ ದಿನ ಬೀದಿ ನಾಯಿಗಳಿಗೆ ಚಿಕನ್ ರೈಸ್ ಸಿಗಲಿದೆ. ಇದಕ್ಕಾಗಿ ಸುಮಾರು 2.8 ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಬೀದಿ ನಾಯಿಗಳು ದಾಳಿಯನ್ನು ತಡೆಯಲು ಈ ಯೋಜನೆ ರೂಪಿಸಿಲಾಗಿದೆಯಂತೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಬೆಂಗಳೂರು ಬೀದಿ ನಾಯಿಗಳಿಗೆ ರಾಜಯೋಗ ಕೂಡಿ ಬಂದಿದೆ. ಹೌದು, ಬಿಬಿಎಂಪಿ (BBMP) ಬೀದಿ ನಾಯಿಗಳಿಗೆ ಇನ್ನುಮುಂದೆ ಪ್ರತಿದಿನ ಚಿಕನ್ ರೈಸ್ ನೀಡಲು ಮುಂದಾಗಿದೆ. ಬಿಬಿಎಂಪಿಯ 8 ವಲಯಗಳಲ್ಲಿ ಬೀದಿ ನಾಯಿಗಳಿಗೆ ಊಟ ಹಾಕಲು ಸುಮಾರು 2.8 ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಈ ಕುರಿತು ಬಿಬಿಎಂಪಿ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದ್ದಾರೆ. ಬಿಬಿಎಂಪಿಯ 8 ವಲಯದ ಪೈಕಿ ತಲಾ 400ರಿಂದ 500 ಬೀದಿ ನಾಯಿಗಳಿಗೆ ಪ್ರತಿ ದಿನ ಚಿಕನ್ ರೈಸ್ ಭಾಗ್ಯ ಸಿಗಲಿದೆ. ಈ ಪ್ರಕಾರ ದಿನಕ್ಕೆ 5 ಸಾವಿರ ಬೀದಿ ನಾಯಿಗಳಿಗೆ ಚಿಕನ್ ರೈಸ್ ಒದಗಿಸಲಾಗುತ್ತದೆ.
ಬಿಬಿಎಂಪಿ ಈ ಹಿಂದೆ ‘ಕುಕುರ್ ತಿಹಾರ್’ ಎಂಬ ಹೆಸರಿನಲ್ಲಿ ಇದೇ ಮಾದರಿಯ ಯೋಜನೆ ಜಾರಿಗೆ ತರಲು ಮುಂದಾಗಿತ್ತು. ಆದರೆ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹಿಂಪಡೆಯಲಾಗಿತ್ತು. ಇದೀಗ ಮತ್ತೊಮ್ಮೆ ಬಿಬಿಎಂಪಿ ಯೋಜನೆ ಪರಿಚಯಿಲಿದೆ. ಸದ್ಯ ಈ ಯೋಜನೆಗೂ ವಿರೋಧ ವ್ಯಕ್ತವಾಗಿ ಭಾರಿ ವಿವಾದ ಸೃಷ್ಟಿಸಿದೆ.
“ಈಗಾಗಲೇ ಕ್ರಿಯಾ ಯೋಜನೆ ಆಯುಕ್ತರಿಗೆ ಸಲ್ಲಿಸಿದ್ದೇವೆ. ಅನುಮೋದನೆ ದೊರೆತ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಅದಾದ ಮೇಲೆ ಯಾವ ಪ್ರಮಾಣವನ್ನು ನಮ್ಮ ಪಶುವೈದ್ಯರು ಸೂಚಿಸುತ್ತಾರೋ ಆ ಪ್ರಮಾಣದಲ್ಲಿ ಆಹಾರವನ್ನು ನಾಯಿಗಳಿಗೆ ನೀಡಲಾಗುತ್ತದೆ” ಎಂದು ಸುರಾಲ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Assault case: ಒಳಮೀಸಲಾತಿ ಸಮೀಕ್ಷೆ ವೇಳೆ ನಾಗರಿಕರಿಗೆ ಹಲ್ಲೆ, ಬಿಬಿಎಂಪಿ ಸಿಬ್ಬಂದಿ ಅಮಾನತು
ಕಾರಣವೇನು?
ಇತ್ತೀಚೆಗೆ ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸುವ ಪ್ರಕರಣ ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ. ಹೊಟ್ಟೆ ತುಂಬಿಸುವುದರಿಂದ ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಲಾರವು. ಈಗಾಗಲೇ ಈ ಸಂಬಂಧ ಕೆಲವು ವಾರ್ಡ್ಗಳಲ್ಲಿ ಊಟ ನೀಡಿ ಪ್ರಯೋಗ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಡ್ಡರ್ಗಳಿಗೆ ಷರತ್ತು
ಬೀದಿ ನಾಯಿಗಳಿಗೆ 700ರಿಂದ 750 ಕ್ಯಾಲೊರಿಯ ಆಹಾರ ಸಿದ್ಧಪಡಿಸುವುದಕ್ಕಾಗಿ ಮೆನು ಈಗಾಗಲೇ ಸಿದ್ಧವಾಗಿದೆಯಂತೆ. ಬಿಡ್ಡರ್ಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಅಡುಗೆ ಮನೆ ಹೊಂದಿರಬೇಕು. ಅಲ್ಲಿ ಆಹಾರ ತಯಾರಿಸಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳ ಆಯ್ಕೆ ಮಾಡಬೇಕು. ನಂತರ ಆ ಜಾಗವನ್ನು ಸ್ವಚ್ಛಗೊಳಿಸಿ ವರದಿ ಸಲ್ಲಿಸಬೇಕು. ಎಷ್ಟು ನಾಯಿಗಳಿಗೆ ಆಹಾರ ನೀಡಲಾಗಿದೆ ಎಂಬ ಮಾಹಿತಿ ನೀಡಬೇಕು ಎಂದು ಬಿಬಿಎಂಪಿ ಷರತ್ತು ವಿಧಿಸಿದೆ. ದಿನಕ್ಕೆ ಒಂದು ಬಾರಿ ಬೀದಿ ನಾಯಿಗೆ ಆಹಾರ ನೀಡುವುದಕ್ಕೆ ಯೋಜನೆ ರೂಪಿಸಲಾಗಿದ್ದು, ಪ್ರತಿ ನಾಯಿಗೆ 22.42 ರೂ. ವೆಚ್ಚ ಮಾಡಲಾಗುತ್ತಿದೆ.
ಬೆಂಗಳೂರಲ್ಲಿ ಅಂದಾಜು 2.80 ಲಕ್ಷ ಬೀದಿ ನಾಯಿಗಳಿವೆ. ಈ ಪೈಕಿ ಶೇ. 2ರಷ್ಟು ನಾಯಿಗಳಿಗೆ ಮಾತ್ರ ಚಿಕ್ಕನ್ ರೈಸ್ ಭಾಗ್ಯ ಸಿಗಲಿದೆ. ಈ ಯೋಜನೆ ಯಶಸ್ವಿಯಾದರೆ ವಿಸ್ತರಿಸುವ ಪ್ಲ್ಯಾನ್ ಕೂಡ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.