Namma Metro: ನಮ್ಮ ಮೆಟ್ರೋಗೆ ಬಾಂಬ್ ಬೆದರಿಕೆ ಹಾಕಿದಾತನ ಬಂಧನ
Namma Metro Bomb threat: ನಮ್ಮ ಮೆಟ್ರೋಗೆ ಬಾಂಬ್ ಬೆದರಿಕೆ ಇಮೇಲ್ ಕಳಿಸಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ʼನಾನೂ ಕೂಡ ಟೆರರಿಸ್ಟ್ ಇದ್ದಂತೆʼ ಎಂದು ಉಲ್ಲೇಖಿಸಿ ಆತ ಕಳುಹಿಸಿದ್ದ ಬೆದರಿಕೆ ಇಮೇಲ್ ಆತಂಕ ಸೃಷ್ಟಿಸಿತ್ತು. ವಿಚಾರಣೆಯ ವೇಳೆ, ಈತ ಮಾನಸಿಕ ಅಸ್ವಸ್ಥನೂ ಹೌದು ಎಂದು ಗೊತ್ತಾಗಿದೆ.
ನಮ್ಮ ಮೆಟ್ರೋ -
ಬೆಂಗಳೂರು: ಬೆಂಗಳೂರು (Bengaluru) ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ (bomb threat) ಸಂದೇಶ ಕಳುಹಿಸಿದ ವ್ಯಕ್ತಿಯನ್ನು (Arrest) ಬಂಧಿಸಲಾಗಿದೆ. ಈತ 62 ವರ್ಷದವನಾಗಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ಗೊತ್ತಾಗಿದೆ. ಕಾಡುಗೋಡಿ ಬಳಿಯ ಬೆಲ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಆರೋಪಿಯು ನವೆಂಬರ್ 13ರಂದು ರಾತ್ರಿ 11. 25 ಕ್ಕೆ ಬಿಎಂಆರ್‌ಸಿಎಲ್‌ಗೆ ಬೆದರಿಕೆ ಇಮೇಲ್ ಕಳುಹಿಸಿದ್ದ.
ಕರ್ತವ್ಯದ ಸಮಯದ ನಂತರ ತನ್ನ ಮಾಜಿ ಪತ್ನಿಯನ್ನು ʼಮಾನಸಿಕವಾಗಿ ಹಿಂಸಿಸಿದರೆʼ ಇಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಒಂದನ್ನು ಸ್ಫೋಟಿಸುವುದಾಗಿ ಮೆಟ್ರೋ ನೌಕರರಿಗೆ ಈತ ಎಚ್ಚರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಶಂಕಿತನನ್ನು ಬಂಧಿಸಲಾಗಿದೆ. ಆತ ಮಾನಸಿಕ ಅಸ್ವಸ್ಥರೆಂದು ಕಂಡುಬಂದಿದ್ದು, ನಿಮ್ಹಾನ್ಸ್‌ಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಬಿಎಂಆರ್‌ಸಿಎಲ್ ಅಧಿಕಾರಿಯ ದೂರಿನ ಆಧಾರದ ಮೇಲೆ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 351 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ಆರಂಭಿಸಲಾಗಿದೆ ಎಂದು ಅವರು ಹೇಳಿದರು.
ಇಮೇಲ್‌ನಲ್ಲಿ, ಮೆಟ್ರೋ ಸಿಬ್ಬಂದಿಯಾದ ತನ್ನ ವಿಚ್ಛೇದಿತ ಪತ್ನಿಗೆ ಡ್ಯೂಟಿ ನಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ನಿಮ್ಮ ಒಂದು ಮೆಟ್ರೋ ನಿಲ್ದಾಣ ಬ್ಲಾಸ್ಟ್ ಮಾಡಬೇಕಾಗುತ್ತದೆ. ನಾನು ಉಗ್ರಗಾಮಿಯಂತೆ, ಅದರಲ್ಲೂ ಕನ್ನಡಿಗರ ವಿರುದ್ಧ ಎಂದು ಬೆದರಿಕೆ ಹಾಕಲಾಗಿದೆ. ಮೇಲ್ ಪರಿಶೀಲಿಸಿದ ಬಳಿಕ ಬಿಎಂಆರ್‌ಸಿಎಲ್ ಅಧಿಕಾರಿ ತಕ್ಷಣವೇ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Bomb threat: ನಮ್ಮ ಮೆಟ್ರೋಗೆ ಅಪರಿಚಿತನಿಂದ ಬಾಂಬ್ ಬೆದರಿಕೆ, ʼನಾನು ಉಗ್ರಗಾಮಿ ಇದ್ದಂತೆ...ʼ ಎಂದು ಇ-ಮೇಲ್