ಶಾಸಕರ ಮೇಲೆ ಮೊಟ್ಟೆ ಎಸೆತ; ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರು
ಹಿಂಸೆಗೆ ಪ್ರಚೋದನೆ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕವನ್ನು ಗೂಂಡಾ ರಾಜ್ಯದತ್ತ ತಳ್ಳುವ ಪ್ರಯತ್ನವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಸದ್ಯದಲ್ಲೇ ಗೂಂಡಾ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.
-
ಬೆಂಗಳೂರು: ಬಿಜೆಪಿ ಶಾಸಕರಾದ ಬಿ.ಪಿ. ಹರೀಶ್, ಅಶ್ವತ್ಥನಾರಾಯಣ, ಸಿ.ಕೆ. ರಾಮಮೂರ್ತಿ ಹಾಗೂ ಬೆಂಗಳೂರು ಉತ್ತರ ಜಿಲ್ಲೆ ಬಿಜೆಪಿ ಅಧ್ಯಕ್ಷ ಎಸ್. ಹರೀಶ್ ಅವರ ಮೇಲೆ ಮೊಟ್ಟೆ ಎಸೆದು, ಹಲ್ಲೆ ಮಾಡಿರುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬಿಜೆಪಿ ನಾಯಕರು ದೂರು ಸಲ್ಲಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆಯಿಂದ ಪಾದಯಾತ್ರೆಯಲ್ಲಿ ಕಮೀಷನರ್ ಕಚೇರಿಗೆ ಬಿಜೆಪಿ ನಾಯಕರು (BJP Leaders) ತೆರಳಿ ದೂರು ನೀಡಿದ್ದಾರೆ.
ಕಾಂಗ್ರೆಸ್‌ನವರು ಗೂಂಡಾಗಿರಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಚೇರಿ ಎದುರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಬಿಜೆಪಿ ನಾಯಕರು ದೂರು ನೀಡಿದ್ದಾರೆ. ಈ ವೇಳೆ ಆಯುಕ್ತರ ಕಚೇರಿ ಎದುರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ದೂರಿನಲ್ಲಿ ಏನಿದೆ?
ಹರಿಹರ ಶಾಸಕ ಬಿ.ಪಿ. ಹರೀಶ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದು ಹಲ್ಲೆ ಮಾಡಿದ್ದಾರೆ. ಅನೇಕ ಮೊಟ್ಟೆಗಳಿಂದ ಹರೀಶ್ ತಲೆಗೆ ಹೊಡೆದು ಅವರನ್ನು ಎತ್ತಿಕೊಂಡು ಹೋಗುವ ಸಾಹಸಕ್ಕೆ ಕೈ ಹಾಕಿದ್ದಾರೆ. ಅಲ್ಲದೇ ನಮ್ಮನ್ನು ಬಂಧಿಸಿ ಕರೆತರುತ್ತಿದ್ದ ಬಸ್ಸಿಗೆ ದೊಣ್ಣೆ, ರಾಡ್‌ನಿಂದ ಹೊಡೆದಿದ್ದಾರೆ. ಬಸ್ಸಿನಲ್ಲಿ ಒಟ್ಟಿಗೆ ಸೇರಿ ಧಿಕ್ಕಾರ ಹಾಕಿದರೂ ಕೂಡ ನಮ್ಮ ಕಾರ್ಯಕರ್ತ ಪ್ರಶಾಂತ್‌ಗೆ ರಾಡ್‌ನಿಂದ ಹೊಡೆದಿದ್ದಾರೆ.
ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಅವರಿಗೆ ಮೊಟ್ಟೆಯಿಂದ, ಶಾಸಕ ಸಿಕೆ ರಾಮಮೂರ್ತಿ ಅವರಿಗೆ ರಾಡ್‌ನಿಂದ ಹೊಡೆದಿದ್ದಾರೆ. ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಹರೀಶ್ ಅವರಿಗೆ ದೊಣ್ಣೆ ಮತ್ತು ಪೈಪ್‌ಗಳಿಂದ ಹೊಡೆದಿದ್ದಾರೆ. ಕಾರ್ಯಕರ್ತ ಪವನ್ ಮೇಲೆ ಹಲ್ಲೆ ಮಾಡಿದ್ದಾರೆ. ಮೆರವಣಿಗೆ ಹೋಗುತ್ತಿದ್ದಾಗ ಕೆಲವರ ಮೇಲೆ ಹಲ್ಲೆಯಾಗಿದೆ. ಹೀಗಾಗಿ ತಕ್ಷಣ ಕಾನೂನು ಕ್ರಮ ತೆಗೆದುಕೊಂಡು ಆರೋಪಿಗಳನ್ನು ಬಂಧಿಸಬೇಕು ಎಂದು ಬಿಜೆಪಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗೂಂಡಾ ಕಾಂಗ್ರೆಸ್ ಪಕ್ಷಕ್ಕೆ ಜನ ತಕ್ಕಪಾಠ ಕಲಿಸಲಿದ್ದಾರೆ: ಬಿಜೆಪಿ
ಶಾಸಕರ ಮೇಲೆ ಮೊಟ್ಟೆ ಎಸೆದ ಘಟನೆಗೆ ರಾಜ್ಯ ಬಿಜೆಪಿ ಆಕ್ರೋಶ ಹೊರಹಾಕಿದೆ. ರಾಜ್ಯದ ಕೊತ್ವಾಲ್ ಶಿಷ್ಯಂದಿರಾದ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷರ ನಾಯಕತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಶಾಸಕರ ಮೇಲೆ ಮೊಟ್ಟೆ, ರಾಡ್ ಹಾಗೂ ದೊಣ್ಣೆಗಳಿಂದ ದಾಳಿ ನಡೆಸಿರುವ ಘಟನೆ ತೀವ್ರ ಖಂಡನೀಯ.
ಪ್ರತಿಪಕ್ಷದ ಧ್ವನಿಯನ್ನು ಪ್ರಜಾಪ್ರಭುತ್ವದಲ್ಲಿ ಹೋರಾಟದಿಂದ ಎದುರಿಸಬೇಕೇ ಹೊರತು ಹಿಂಸೆಯಿಂದಲ್ಲ. ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಹಿಂಸಾತ್ಮಕ ಸಂಸ್ಕೃತಿ ಬೆಳೆಸುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ.
ಹಿಂಸೆಗೆ ಪ್ರಚೋದನೆ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕವನ್ನು ಗೂಂಡಾ ರಾಜ್ಯದತ್ತ ತಳ್ಳುವ ಪ್ರಯತ್ನವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಸದ್ಯದಲ್ಲೇ ಗೂಂಡಾ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ತಕ್ಕಪಾಠ ಕಲಿಸಲಿದ್ದಾರೆ.
ರಾಹುಲ್ ಗಾಂಧಿಯವರು ದೇಶದ ಯುವಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆಂದು ಆಕ್ಷೇಪಿಸಿ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನದಲ್ಲಿ ಸಾಗುತ್ತಿದ್ದ ವೇಳೆ ಕಾಂಗ್ರೆಸ್ ಕಚೇರಿಯಲ್ಲಿ ಮಚ್ಚು, ಲಾಂಗು, ಮೊಟ್ಟೆಗಳನ್ನು ಸಂಗ್ರಹಿಸಿಟ್ಟುಕೊಂಡು ಮಾಜಿ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ್, ಶಾಸಕರಾದ ಸಿ.ಕೆ ರಾಮಮೂರ್ತಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಶಾಸಕರಾದ ಬಿ.ಪಿ ಹರೀಶ್ ಅವರಿಗೆ ಮೊಟ್ಟೆಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಪಕ್ಷದ ಜಿಲ್ಲಾಧ್ಯಕ್ಷರು, ಪ್ರಮುಖರು ಹಾಗೂ ಕಾರ್ಯಕರ್ತರ ಮೇಲೆಯೂ ಹಲ್ಲೆ ನಡೆಸಿರುವುದನ್ನು ಖಂಡಿಸಿ ಬಿಜೆಪಿ ನಿಯೋಗವು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ. ಪೊಲೀಸರು ಈ ಕೂಡಲೇ ಕಾಂಗ್ರೆಸ್ ಗೂಂಡಾಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದೆ.