ಜಮ್ಮು-ಕಾಶ್ಮೀರದಲ್ಲಿ ಉಗ್ರ ದಾಳಿಗೆ ಪೊಲೀಸ್ ಪೇದೆ ಬಲಿ: ಬೈಕ್‌ನಲ್ಲಿ ಬಂದು ಶೂಟ್ ಮಾಡುವ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ
ಶಂಕಿತ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪೇದೆಯ ಮೇಲೆ ಗುಂಡು ಹಾರಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುಂಡು ಹಾರಿಸುವ ಮೊದಲು ದುಷ್ಕರ್ಮಿ ಜನನಿಬಿಡ ಮಾರುಕಟ್ಟೆಯಲ್ಲಿ ನಿಯೋಜಿಸಲಾದ ಪೊಲೀಸ್ ತಂಡವನ್ನು ಸಮೀಪಿಸಿದ್ದಾನೆ. ಅಮರನಾಥ ಯಾತ್ರೆಯ ಭದ್ರತಾ ಕರ್ತವ್ಯಕ್ಕಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಭಯೋತ್ಪಾದಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆ -
ಶ್ರೀನಗರ, ಜು. 22: ಭಯೋತ್ಪಾದಕ ದಾಳಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu-Kashmir) ಪೊಲೀಸ್ ಪೇದೆ ಹುತಾತ್ಮರಾಗಿದ್ದು, ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಗಲು ಹೊತ್ತಿನಲ್ಲೇ ಈ ಉಗ್ರ ದಾಳಿ ನಡೆದಿದೆ. ಅನಂತ್‌ನಾಗ್‌ನ ಜನನಿಬಿಡ ಮಾರುಕಟ್ಟೆಯಲ್ಲಿ 35 ವರ್ಷದ ಹೆಡ್ ಕಾನ್‌ಸ್ಟೇಬಲ್ ಆಶಿಕ್ ಹುಸೇನ್ ಖುರೇಷಿ ಅವರ ಮೇಲೆ ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಗುಂಡು ಹಾರಿಸುತ್ತಿರುವುದನ್ನು ದೃಶ್ಯ ತೋರಿಸುತ್ತದೆ.
ಗುಂಡು ಹಾರಿಸುವ ಮೊದಲು ದುಷ್ಕರ್ಮಿ ಜನನಿಬಿಡ ಮಾರುಕಟ್ಟೆಯಲ್ಲಿ ನಿಯೋಜಿಸಲಾದ ಪೊಲೀಸ್ ತಂಡವನ್ನು ಸಮೀಪಿಸಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಪಟ್ಟಣದಲ್ಲಿ ಭಯೋತ್ಪಾದಕರು ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಾಲ್ ಚೌಕ್‌ನಲ್ಲಿ ಬುಧವಾರ (ಜುಲೈ 22) ಮಧ್ಯಾಹ್ನ 12.30ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಅಮರನಾಥ ಯಾತ್ರೆಯ ಭದ್ರತಾ ಕರ್ತವ್ಯಕ್ಕಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಖುರೇಷಿ ಅವರನ್ನು ತಕ್ಷಣವೇ ಅನಂತ್‌ನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಕಳೆದ ವರ್ಷದ ಪಹಲ್ಗಾಮ್ ದಾಳಿಯ ನಂತರ ಕಣಿವೆಯಲ್ಲಿ ನಡೆದ ಮೊದಲ ಭಯೋತ್ಪಾದಕ ದಾಳಿ ಇದಾಗಿದೆ.
ಇಲ್ಲಿದೆ ಸಿಸಿಟಿವಿ ವಿಡಿಯೊ:
Cctv Footage Anantnag firing Slain Policeman Ashiq Hussain from Budgam district pic.twitter.com/MhSA7U2ZGL
— Tajamul Fayyaz (@tajamul_122) July 22, 2026
ಲಷ್ಕರ್-ಎ-ತೊಯ್ಬಾದ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿದ್ದು, ಭಯೋತ್ಪಾದಕರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿವೆ. ಭದ್ರತಾ ಪಡೆಗಳು ಈಗಾಗಲೇ ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿವೆ. ದಾಳಿಕೋರನ ಬಳಿ ಅಸಾಲ್ಟ್ ರೈಫಲ್ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಎರಡು ಗುಂಡುಗಳು ಹತ್ತಿರದ ಅಂಗಡಿಗೂ ತಗುಲಿವೆ.
ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕರಿಗೆ ಆಶ್ರಯ; ಮುಸ್ಲಿಂ ಧರ್ಮಗುರುವಿನ ಬಂಧನ
ಅಮರನಾಥ ಯಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅನಂತನಾಗ್ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಕಳೆದ ನಾಲ್ಕು ದಿನಗಳಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಅನಂತ್‌ನಾಗ್‌ನ ಲಾಲ್ ಚೌಕ್ ಬಳಿ ಪೊಲೀಸ್ ಗಸ್ತು ತಿರುಗುತ್ತಿದ್ದ ವೇಳೆ ದಾಳಿ ನಡೆದಿದೆ. ಬೈಕ್‌ನಲ್ಲಿ ಬಂದ ಭಯೋತ್ಪಾದಕನೊಬ್ಬ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆ ಪ್ರದೇಶದಲ್ಲಿ ಗುಂಡು ಹಾರಿಸುವ ಶಬ್ಧ ಕೇಳಿಬಂದಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.
ದಾಳಿಯ ನಂತರ, ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರೆದು ದಾಳಿಕೋರನನ್ನು ಪತ್ತೆಹಚ್ಚಲು ಬೃಹತ್ ಶೋಧ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ರವಾನಿಸಲಾಗಿದೆ. ಪ್ರಮುಖ ಮಾರ್ಗಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ದಾಳಿಕೋರನನ್ನು ಗುರುತಿಸಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.