ಬೆಂಗಳೂರಿನಲ್ಲಿ ನಿತ್ಯ 70 ಸಾವಿರ ಲೀಟರ್ ಸಂಸ್ಕರಿಸಿದ ನೀರು ಪೂರೈಕೆ: ಬೋಸಾನ್ ವೈಟ್‌ವಾಟರ್ ಮತ್ತು ಜಲಮಂಡಳಿ ಸಹಭಾಗಿತ್ವ
ಟೈಟಾನ್ ಕಂಪನಿ ಲಿಮಿಟೆಡ್‌ನ ‘ಡಿಸೈನ್ ಇಂಪ್ಯಾಕ್ಟ್ ಅವಾರ್ಡ್ಸ್’ ಉಪಕ್ರಮದ ಅಡಿಯಲ್ಲಿ ಸಲ್ಲಿಕೆ ಯಾದ 500ಕ್ಕೂ ಹೆಚ್ಚು ಅರ್ಜಿಗಳಲ್ಲಿ, ಬೋಸಾನ್ ವೈಟ್‌ವಾಟರ್ ಆಯ್ಕೆಯಾದ 6 ಉತ್ಸಾಹಿ ಅನುದಾನಿಗಳಲ್ಲಿ ಒಂದಾಗಿದೆ. ಈ ಪ್ರಾಯೋಗಿಕ ಯೋಜನೆಯ ಅನುಷ್ಠಾನಕ್ಕಾಗಿ ಬೋಸಾನ್‌ಗೆ ಮೊದಲ ಹಂತದಲ್ಲಿ 50 ಲಕ್ಷ ರೂ.ಗಳ ಅನುದಾನ ಲಭ್ಯವಾಗಿದ್ದು, ವಿಲ್‌ಗ್ರೋ ಮತ್ತು ಸತ್ವ ಕನ್ಸಲ್ಟಿಂಗ್ ಸಂಸ್ಥೆಗಳಿಂದ ಹೆಚ್ಚುವರಿ ಬೆಂಬಲವೂ ಲಭಿಸಿದೆ
-
* ಕಾಡುಬೀಸನಹಳ್ಳಿ ಎಸ್‌ಟಿಪಿಯಲ್ಲಿ ಪ್ರಾಯೋಗಿಕ ಯೋಜನೆಗೆ ಚಾಲನೆ
* ಹೊರವರ್ತುಲ ರಸ್ತೆಯ (ORR) ಕೈಗಾರಿಕೆಗಳಿಗೆ ಲಭ್ಯವಾಗಲಿದೆ ಉನ್ನತ ಗುಣಮಟ್ಟದ ನೀರು
* ಟೈಟಾನ್ ಕಂಪನಿಯ ‘ಡಿಸೈನ್ ಇಂಪ್ಯಾಕ್ಟ್ ಅವಾರ್ಡ್ಸ್’ ಅಡಿಯಲ್ಲಿ ಯೋಜನೆಗೆ ಅನುದಾನ
ಬೆಂಗಳೂರು: ಎಸ್‌ಟಿಪಿ ಮೂಲಕ ಸಂಸ್ಕರಿಸಿದ ನೀರನ್ನು ಅತ್ಯುನ್ನತ ಗುಣಮಟ್ಟದ (ಕುಡಿಯುವ ಮಟ್ಟದ) ನೀರನ್ನಾಗಿ ಪರಿವರ್ತಿಸುವ ನೀರು ನಿರ್ವಹಣಾ ಸಂಸ್ಥೆಯಾದ ‘ಬೋಸಾನ್ ವೈಟ್ ವಾಟರ್’, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಹಯೋಗ ದೊಂದಿಗೆ ಪ್ರಾಯೋಗಿಕ ಯೋಜನೆಯೊಂದನ್ನು ಘೋಷಿಸಿದೆ. ಮಾರತಹಳ್ಳಿ ಸಮೀಪದ ಕಾಡು ಬೀಸನಹಳ್ಳಿ ಸರ್ಕಾರಿ ಎಸ್‌ಟಿಪಿ (ತ್ಯಾಜ್ಯ ನೀರು ಸಂಸ್ಕರಣಾ ಘಟಕ) ಆವರಣದಲ್ಲಿ ಈ ಮಹತ್ವದ ಯೋಜನೆ ಜಾರಿಗೆ ಬರಲಿದೆ.
ಟೈಟಾನ್ ಕಂಪನಿ ಲಿಮಿಟೆಡ್‌ನ ‘ಡಿಸೈನ್ ಇಂಪ್ಯಾಕ್ಟ್ ಅವಾರ್ಡ್ಸ್’ ಉಪಕ್ರಮದ ಅಡಿಯಲ್ಲಿ ಸಲ್ಲಿಕೆಯಾದ 500ಕ್ಕೂ ಹೆಚ್ಚು ಅರ್ಜಿಗಳಲ್ಲಿ, ಬೋಸಾನ್ ವೈಟ್‌ವಾಟರ್ ಆಯ್ಕೆಯಾದ 6 ಉತ್ಸಾಹಿ ಅನುದಾನಿಗಳಲ್ಲಿ ಒಂದಾಗಿದೆ. ಈ ಪ್ರಾಯೋಗಿಕ ಯೋಜನೆಯ ಅನುಷ್ಠಾನಕ್ಕಾಗಿ ಬೋಸಾನ್‌ಗೆ ಮೊದಲ ಹಂತದಲ್ಲಿ 50 ಲಕ್ಷ ರೂ.ಗಳ ಅನುದಾನ ಲಭ್ಯವಾಗಿದ್ದು, ವಿಲ್‌ಗ್ರೋ ಮತ್ತು ಸತ್ವ ಕನ್ಸಲ್ಟಿಂಗ್ ಸಂಸ್ಥೆಗಳಿಂದ ಹೆಚ್ಚುವರಿ ಬೆಂಬಲವೂ ಲಭಿಸಿದೆ.
ಈ ಪ್ರಾಯೋಗಿಕ ಯೋಜನೆಯು ಸರ್ಕಾರದ 50 ಎಂಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿಯಿಂದ ಸಂಸ್ಕರಿಸಿದ ನೀರನ್ನು ಪಡೆಯಲಿದ್ದು, ಅದನ್ನು ಬೋಸಾನ್ ವೈಟ್‌ವಾಟರ್‌ನ ವಿಶೇಷ 11-ಹಂತದ ಮರುಬಳಕೆ ವ್ಯವಸ್ಥೆಯ ಮೂಲಕ ಮತ್ತಷ್ಟು ಶುದ್ಧೀಕರಿಸಲಾಗುತ್ತದೆ. ಈ ಘಟಕವು ಪ್ರತಿದಿನ 70,000 ಲೀಟರ್‌ಗಳಷ್ಟು ಉನ್ನತ ಗುಣಮಟ್ಟದ ನೀರನ್ನು ಉತ್ಪಾದಿಸಲಿದೆ.
ಹೊರವರ್ತುಲ ರಸ್ತೆಯ (ORR) ಸುತ್ತಮುತ್ತಲಿನ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ, ಪ್ರಮುಖವಾಗಿ ಕೂಲಿಂಗ್ ಟವರ್‌ಗಳ (Cooling Towers) ಬಳಕೆಗೆ ಈ ನೀರನ್ನು ಪೂರೈಸುವ ಗುರಿ ಹೊಂದಲಾಗಿದೆ. ಈ ಕ್ರಮದಿಂದ ನಗರದ ಅಮೂಲ್ಯ ಸಿಹಿನೀರಿನ ಮೇಲಿನ ಅವಲಂಬನೆ ಕಡಿಮೆಯಾಗುವುದಲ್ಲದೆ, ತ್ಯಾಜ್ಯ ನೀರು ಅನಗತ್ಯವಾಗಿ ಕೆರೆಗಳಿಗೆ ಸೇರುವುದನ್ನು ತಪ್ಪಿಸಬಹು ದಾಗಿದೆ.
ಜಲಮಂಡಳಿ ಅಧ್ಯಕ್ಷರು ಹೇಳಿದ್ದೇನು?
ಈ ಕುರಿತು ಪ್ರತಿಕ್ರಿಯಿಸಿರುವ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, “ಸಂಸ್ಕರಿಸಿದ ತ್ಯಾಜ್ಯ ನೀರಿನಿಂದ ಉತ್ತಮ ಗುಣಮಟ್ಟದ ನೀರನ್ನು ಮರುಪಡೆಯುವ ಹಾಗೂ ಅದನ್ನು ಐಟಿ ಪಾರ್ಕ್‌ಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಕಟ್ಟಡಗಳ ದ್ವಿತೀಯ ಹಂತದ ಬಳಕೆಗೆ ಪೂರೈಸುವ ಬೋಸಾನ್‌ನ ಈ ಪ್ರಯತ್ನ ಶ್ಲಾಘನೀಯ. ಇದು ಇಂತಹ ಮೊದಲ ವಿನೂತನ ಯೋಜನೆಯಾಗಿದೆ. ಜಲಮಂಡಳಿ ಯಾವಾಗಲೂ ನೀರಿನ ಮರುಬಳಕೆಯ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತದೆ,” ಎಂದು ತಿಳಿಸಿದರು.
ಬೋಸಾನ್ ವೈಟ್‌ವಾಟರ್‌ನ ಸಹ-ಸ್ಥಾಪಕ ವಿಕಾಸ್ ಬ್ರಹ್ಮಾವರ್ ಮಾತನಾಡುತ್ತಾ, “ಬೆಂಗಳೂರು ನಗರವು ಹೇಗೆ ನಿಜವಾದ ‘ಚಕ್ರೀಯ ಜಲ ಆರ್ಥಿಕತೆ’ಯತ್ತ ಸಾಗಬಹುದು ಎಂಬುದಕ್ಕೆ ಈ ಯೋಜನೆ ಸಾಕ್ಷಿಯಾಗಿದೆ. ದಿನಕ್ಕೆ 70,000 ಲೀಟರ್ ಗುಣಮಟ್ಟದ ನೀರನ್ನು ಮರುಬಳಕೆ ಮಾಡುವ ಮೂಲಕ ನಾವು ಸಿಹಿನೀರನ್ನು ಉಳಿಸುವುದಲ್ಲದೆ, ಸಂಸ್ಕರಿಸಿದ ನೀರು ನಗರದೊಳಗೆ ಉಪಯುಕ್ತ ವಾಗುವಂತೆ ನೋಡಿಕೊಳ್ಳುತ್ತಿದ್ದೇವೆ. ಈ ಮಾದರಿಯನ್ನು ವಿಸ್ತರಿಸಿದರೆ ಭವಿಷ್ಯದಲ್ಲಿ ನಗರದ ನೀರು ನಿರ್ವಹಣೆಯಲ್ಲಿ ಮಹತ್ತರ ಬದಲಾವಣೆ ತರಬಹುದು,” ಎಂದು ಅಭಿಪ್ರಾಯ ಪಟ್ಟರು.
ಈ ಯೋಜನೆಗೆ ಜಲಮಂಡಳಿ ಸ್ಥಳಾವಕಾಶ ನೀಡಿದ್ದು, ಮರುಬಳಕೆಯ ನೀರಿನ ಮಾರಾಟಕ್ಕೆ ಬೆಂಬಲ ನೀಡಲಿದೆ. ಆರಂಭಿಕ ಹಂತದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಇತರ ಎಸ್‌ಟಿಪಿಗಳಿಗೂ ಈ ಮಾದರಿ ಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ. ಅಲ್ಲದೆ, ಎಸ್‌ಟಿಪಿಗಳಿಂದ ನೇರವಾಗಿ ಕೈಗಾರಿಕೆಗಳಿಗೆ ಕೊಳವೆ ಮಾರ್ಗಗಳ ಮೂಲಕ ನೀರು ಪೂರೈಸುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ. ಕೇಂದ್ರೀಕೃತ ತ್ಯಾಜ್ಯ ನೀರು ಸಂಸ್ಕರಣಾ ವ್ಯವಸ್ಥೆ ಹೊಂದಿರುವ ಜಗತ್ತಿನ ಯಾವುದೇ ನಗರಗಳಿಗೆ ಈ ಯೋಜನೆ ಒಂದು ಮಾದರಿಯಾಗಬಲ್ಲದು.
ಬೋಸಾನ್ ವೈಟ್‌ವಾಟರ್ ಬಗ್ಗೆ:
2011ರಲ್ಲಿ ಸ್ಥಾಪನೆಯಾದ ಬೋಸಾನ್ ವೈಟ್‌ವಾಟರ್, ತನ್ನದೇ ಆದ ಪ್ರತ್ಯೇಕ 11-ಹಂತದ ಶುದ್ಧೀಕರಣ ಪ್ರಕ್ರಿಯೆಯ ಮೂಲಕ ತ್ಯಾಜ್ಯ ನೀರನ್ನು ಉನ್ನತ ಗುಣಮಟ್ಟದ ಕುಡಿಯುವ ಮಟ್ಟದ ನೀರನ್ನಾಗಿ ಪರಿವರ್ತಿಸುತ್ತದೆ. ಐಒಟಿ (IoT) ಆಧಾರಿತ ನಿರಂತರ ಗುಣಮಟ್ಟದ ತಪಾಸಣಾ ವ್ಯವಸ್ಥೆ ಯನ್ನು ಹೊಂದಿರುವ ಈ ಕಂಪನಿ, ಗೃಹಬಳಕೆ, ವಾಣಿಜ್ಯ ಸಂಕೀರ್ಣಗಳು ಮತ್ತು ಕೈಗಾರಿಕೆಗಳಿಗೆ ಸುಸ್ಥಿರ ನೀರಿನ ಪರಿಹಾರಗಳನ್ನು ಒದಗಿಸುತ್ತಿದೆ.