ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತೆಯರ ಪ್ರಮಾಣ ಹೆಚ್ಚಾದಷ್ಟೂ ಆತ್ಮವಂಚನೆಯ ಪ್ರಮಾಣ ಕಡಿಮೆ ಆಗುತ್ತದೆ: ಕೆ.ವಿ.ಪ್ರಭಾಕರ್
KV Prabhakar: ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತೆಯರ ಪ್ರಮಾಣ ಹೆಚ್ಚಾದಷ್ಟೂ ಆತ್ಮವಂಚನೆಯ ಪ್ರಮಾಣ ಕಡಿಮೆ ಆಗುತ್ತದೆ. ಏಕೆಂದರೆ, ಅಭಿವ್ಯಕ್ತಿ ಎನ್ನುವುದು ಮಹಿಳೆಯರ ಚೈತನ್ಯದಲ್ಲಿಯೇ ಇದೆ. ಪತ್ರಕರ್ತೆಯರು ಸಹಜವಾಗಿ ಅಭಿವ್ಯಕ್ತಿಗೊಂಡಷ್ಟು ಸಮಾಜ ಸ್ವಾಸ್ಥವಾಗಿರುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.
ಸುಶೀಲ ಸುಬ್ರಮಣ್ಯ ಮತ್ತು ಎಂ.ಎಚ್. ನೀಳಾ ಅವರಿಗೆ ಸಿದ್ದರಾಮಯ್ಯ ದತ್ತಿ ಪ್ರಶಸ್ತಿ ಪ್ರದಾನ. -
ಬೆಂಗಳೂರು, ನ.28: ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತೆಯರ ಪ್ರಮಾಣ ಹೆಚ್ಚಾದಷ್ಟೂ ಆತ್ಮವಂಚನೆಯ ಪ್ರಮಾಣ ಕಡಿಮೆಯಾಗಿ ವಿದ್ಯಮಾನಗಳನ್ನು ಅಂತಃಕರಣದಿಂದ ಕಾಣುವ ಪ್ರಮಾಣವೂ ಹೆಚ್ಚಾಗುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ (KV Prabhakar) ಅಭಿಪ್ರಾಯಪಟ್ಟರು. ಕರ್ನಾಟಕ ಪತ್ರಕರ್ತೆಯರ ಸಂಘ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಶ್ರೀ ಸಿದ್ದರಾಮಯ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ’ ವನ್ನು ಉದ್ಘಾಟಿಸಿ, ಸುಶೀಲ ಸುಬ್ರಮಣ್ಯ ಮತ್ತು ಎಂ.ಎಚ್. ನೀಳಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತೆಯರ ಪ್ರಮಾಣ ಹೆಚ್ಚಾದಷ್ಟೂ ಆತ್ಮವಂಚನೆಯ ಪ್ರಮಾಣ ಕಡಿಮೆ ಆಗುತ್ತದೆ. ಏಕೆಂದರೆ, ಅಭಿವ್ಯಕ್ತಿ ಎನ್ನುವುದು ಮಹಿಳೆಯರ ಚೈತನ್ಯದಲ್ಲಿಯೇ ಇದೆ. ಪತ್ರಕರ್ತೆಯರು ಸಹಜವಾಗಿ ಅಭಿವ್ಯಕ್ತಿಗೊಂಡಷ್ಟು ಸಮಾಜ ಸ್ವಾಸ್ಥವಾಗಿರುತ್ತದೆ ಎಂದರು.
ಪತ್ರಕರ್ತೆಯರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲೇ ನಾನೊಂದು ಮಾತು ಹೇಳಿದ್ದೆ, ಇಡೀ ವಿಶ್ವಕ್ಕೆ ಕೋವಿಡ್ ಆವರಿಸಿದಾಗ ಈ ಸಂದರ್ಭವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಮಾನವೀಯವಾಗಿ ನಿರ್ವಹಿಸಿದ್ದು ಮಹಿಳಾ ಅಧ್ಯಕ್ಷರು ಇರುವ ದೇಶಗಳು ಮಾತ್ರ ಎಂದು ಸ್ಮರಿಸಿದರು.
ಇವತ್ತಿನವರೆಗೂ ಯುದ್ಧವನ್ನು ರೋಚಕವಾಗಿ, ವಿಜೃಂಭಿಸಿ ಬರೆದ ಪತ್ರಕರ್ತೆಯನ್ನು ನಾನು ನೋಡಿಲ್ಲ. ಹೀಗಾಗಿ ಪತ್ರಕರ್ತೆಯರ ಅಭಿವ್ಯಕ್ತಿ ಹೆಚ್ಚೆಚ್ಚು ಸಮಾಜಮುಖಿ ಆಗಿರುತ್ತದೆ ಎಂದರು. ಆರಂಭದಲ್ಲಿ ಬೆರಳೆಣಿಕೆಯಷ್ಟು ಪತ್ರಕರ್ತೆಯರು ಇದ್ದರು. ಈಗ ಅವರ ಸಂಖ್ಯೆ ಸಮಾಧಾನಕರ ಮಟ್ಟದಲ್ಲಿ ಹೆಚ್ಚಳಗೊಂಡಿದೆ. ಕನ್ನಡ ಪತ್ರಿಕೋದ್ಯಮವನ್ನು ಕಟ್ಟಿ ಬೆಳೆಸುವಲ್ಲಿ ಪತ್ರಕರ್ತೆಯರು ಸಮ ಸಮವಾದ ಶ್ರಮವನ್ನು ಹಾಕಿದ್ದಾರೆ ಎಂದರು.
ಪತ್ರಕರ್ತೆಯರು ಈಚಿನ ದಿನಗಳಲ್ಲಿ ಪುರವಣಿ, ಪಾಕ್ಷಿಕ, ಮಾಸಿಕಗಳಿಗೆ ಸೀಮಿತಗೊಳ್ಳುತ್ತಿದ್ದಾರೆ. ಎಲ್ಲ ವಿಭಾಗಗಳಲ್ಲೂ ಅದರಲ್ಲಿಯೂ ರಾಜಕೀಯ ವರದಿಗಾರಿಕೆಯಲ್ಲಿ ಮುದ್ರಣ ಕ್ಷೇತ್ರದ ಪತ್ರಕರ್ತೆಯರ ಸಂಖ್ಯೆ ಹೆಚ್ಚಳಗೊಳ್ಳಬೇಕಿದೆ. ನಾನು ಮುದ್ರಣ ಮಾಧ್ಯಮದಿಂದ ಬಂದವನಾಗಿ ಈ ಮಾತನ್ನು ಪುನರ್ ಉಚ್ಚರಿಸಲು ಇಷ್ಟಪಡುತ್ತೇನೆ. ರಾಜಕೀಯ ವಿಡಂಬನೆಗಳ ಮೂಲಕ ರಾಜಕಾರಣಿಗಳನ್ನು ತಿದ್ದುವ ಅವಕಾಶಗಳನ್ನು ಪತ್ರಕರ್ತೆಯರು ಕೇಳಿ ಪಡೆದುಕೊಳ್ಳಬೇಕು. ತಮ್ಮ ಸಾಮರ್ಥ್ಯವನ್ನು ಅರಿತು ತಮಗೇನು ಬೇಕು ಎಂಬುದನ್ನು ಕೇಳಿ ಪಡೆದುಕೊಳ್ಳುವುದಕ್ಕೆ ಪತ್ರಕರ್ತೆಯರು ಎಂದಿಗೂ ಹಿಂಜರಿಯಬಾರದು ಎಂದರು.
ಕುಟುಂಬದೊಳಗೆ ಇರುವ ರಾಜಕಾರಣವನ್ನು ಬಹಳ ಚೆನ್ನಾಗಿ ಅರಿತ ಮಹಿಳೆಯರು ಪತ್ರಕರ್ತೆಯರಾದರೆ, ಅದರಲ್ಲೂ ರಾಜಕೀಯ ವಿಶ್ಲೇಷಕಿಯರಾದರೆ ರಾಜಕೀಯ ಸೂಕ್ಷ್ಮಗಳನ್ನು, ಒಳಸುಳಿಗಳನ್ನು ಇತರರಿಗಿಂತ ಸಶಕ್ತವಾಗಿ ಅಂದಾಜು ಮಾಡಬಲ್ಲರು. ಮಹಿಳೆಯರು ಒಂದು ದೇಶದ ಚುಕ್ಕಾಣಿ ಹಿಡಿದು ಯುದ್ಧಗಳಿಗೆ ಕರೆ ಕೊಟ್ಟ ಉದಾಹರಣೆ ಇಲ್ಲ. ಆದರೆ, ಎದುರಾದ ಯುದ್ಧವನ್ನು ದಿಟ್ಟತನದಿಂದ ಸಮರ್ಥವಾಗಿ ನಿರ್ವಹಿಸಿದ ಉದಾಹರಣೆಗಳು ಕಿತ್ತೂರು ರಾಣಿ ಚನ್ನಮ್ಮನಿಂದ ಇಂದಿರಾಗಾಂಧಿ ಅವರ ವರೆಗೂ ಇದೆ ಎಂದರು.
ಮಹಿಳೆಯರಿಗಿರುವ ಈ ಕೌಶಲವನ್ನು ಪತ್ರಿಕಾರಂಗ ಸಶಕ್ತವಾಗಿ ಬಳಸಿಕೊಳ್ಳಬೇಕಿದೆ. ರಾಜಕೀಯ ವರದಿಗಾರಿಕೆ, ವಿಡಂಬನಾ ಶೈಲಿ ಬರಹ, ವ್ಯಂಗ್ಯಚಿತ್ರ ರಚನೆಗಳಲ್ಲಿ ರಾಜ್ಯದಾದ್ಯಂತ ಇರುವ ಪತ್ರಕರ್ತೆಯರ ಪ್ರತಿಭೆಯನ್ನು ಒರೆಗೆ ಹಚ್ಚುವಂತಾಗಬೇಕು. ಇದಕ್ಕೆ ಕರ್ನಾಟಕ ಪತ್ರಕರ್ತೆಯರ ಸಂಘವೇ ರಾಜ್ಯಮಟ್ಟದಲ್ಲಿ ಪ್ರತಿಭಾ ಅನ್ವೇಷಣೆ ಮಾಡುವಂತಾಗಲಿ. ಆ ಮೂಲಕ ರಾಜ್ಯಕ್ಕೆ ರಾಜಕೀಯ ವಿಶ್ಲೇಷಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಿಗುವಂತಾಗಲಿ ಎಂದು ಕರೆ ನೀಡಿದರು.
ಸುದ್ದಿ ಹುಡುಕಿಕೊಂಡು ಹೋಗುವ ಪರಿಪಾಠ ಇಲ್ಲವಾಗಿ ಸುದ್ದಿಯೇ ಹುಡುಕಿಕೊಂಡು ಬರಲಿ ಎನ್ನುವ ಮನಸ್ಥಿತಿ ಪತ್ರಿಕಾ ವೃತ್ತಿಗೆ ಅಪಾಯ ತಂದೊಡ್ಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾಜಕ್ಕೆ ಶಾಪವಾಗಬಾರದು ಎಂದರು.
ಹಿರಿಯ ಪತ್ರಕರ್ತೆ ಪೂರ್ಣಿಮಾ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ವಿಶೇಷ ಉಪನ್ಯಾಸ ನೀಡಿದ ಪುಷ್ಪಾ ಗಿರಿಮಾಜಿ, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಪದಾಧಿಕಾರಿಗಳಾದ ಮಂಜುಶ್ರೀ, ವಾಣಿಶ್ರೀ, ಗೊರೂರು ಪಂಕಜ, ಹಲಿಮತ್ ಸಾಧಿಯಾ, ಶೀಲಾ ಸಿ. ಶೆಟ್ಟಿ, ಮಿನಿ ತೇಜಸ್ವಿ ಹಾಗೂ ಪ್ರಶಸ್ತಿ ಪುರಸ್ಕೃತರಾದ ಸುಶೀಲಾ ಸುಬ್ರಮಣ್ಯ ಮತ್ತು ಎಂ.ಎಚ್.ನೀಳಾ ಅವರು ಉಪಸ್ಥಿತರಿದ್ದರು.
ಪ್ರಶಸ್ತಿಗೆ ಘನತೆ ತಂದ ನೀಳಾ ಮತ್ತು ಸುಶೀಲ ಸುಬ್ರಮಣ್ಯ
ಇವತ್ತು ಪ್ರಶಸ್ತಿ ಪುರಸ್ಕೃತರಾಗುತ್ತಿರುವ ಇಬ್ಬರು ಸಾಧಕಿಯರು ಪ್ರಶಸ್ತಿಯ ಘನತೆಯನ್ನು ಹೆಚ್ಚಿಸಿದ್ದಾರೆ. 40 ವರ್ಷಗಳಿಂದ ಏಕಾಂಗಿಯಾಗಿ ಆರ್ಥಿಕ ವಿಚಾರ ಹಾಗೂ ವಿಶ್ಲೇಷಣೆಗಳನ್ನು ಒಳಗೊಂಡ ʼಸದರನ್ ಎಕನಾಮಿಸ್ಟ್ʼ ಪತ್ರಿಕೆಯನ್ನು ಹೊರತರುತ್ತಿರುವ ಹಿರಿಯ ಚೇತನ ಸುಶೀಲಾ ಸುಬ್ರಹ್ಮಣ್ಯ ಅವರದ್ದು 91ರ ಏರು ವಯಸ್ಸು. ಅಧ್ಯಯನ ಕೇಂದ್ರ, ಪುಸ್ತಕ ಪ್ರಕಟಣೆಯಲ್ಲಿ ತೊಡಗಿರುವ ಸುಶೀಲಾ ಅವರ ಲವಲವಿಕೆ, ಜೀವನ ಪ್ರೀತಿ, ವೃತ್ತಿ ಬದ್ಧತೆ ಸದಾ ಆದರ್ಶನೀಯ. ಇವರಿಗೆ ಮುಖ್ಯಮಂತ್ರಿ ದತ್ತಿ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಗೊಂದು ಕಳೆ ಬಂದಿದೆ.
ʼಶಾಲೆಯ ಅಂಗಳದಲ್ಲಿ ತಾರಾಲಯʼ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ
ಹಾಗೆಯೇ ಪ್ರಜಾವಾಣಿಯ ನೀಳಾ ಎಂ.ಎಚ್. ಚಿಕ್ಕಮಗಳೂರಿನ ಜಿಲ್ಲಾ ವರದಿಗಾರ್ತಿಯಾಗಿದ್ದುಕೊಂಡು ನಕ್ಸಲ್‌ಪೀಡಿತ ಪ್ರದೇಶಗಳಿಗೆ ತೆರಳಿ ಬಹು ಸೂಕ್ಷ್ಮ ವರದಿ ನೀಡುವುದು ಸಣ್ಣ ವಿಚಾರವಲ್ಲ. ಅದು 25 ವರ್ಷಗಳ ಹಿಂದೆ. ಜನರ ಆಶೋತ್ತರವನ್ನು ಅರಿತು, ಸ್ಥಾಪಿತ ಹಿತಾಸಕ್ತಿಗಳ ವಿರುದ್ದ ಬರೆಯುವುದು ಪ್ರವಾಹದ ವಿರುದ್ಧ ಈಜಿದಂತೆ. ಅವರ ವೃತ್ತಿಬದ್ಧತೆಯೂ ಕಿರಿಯ ಪತ್ರಕರ್ತೆಯರಿಗೆ ಮಾದರಿಯಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದರು.