Radha Krishna Adiga's Book: ಬೆಂಗಳೂರಿನಲ್ಲಿ ʼರಾಧಾಕೃಷ್ಣ ಅಡಿಗ: ಇಡ್ಲಿ ಕಾಫಿ ಪರಂಪರೆ-ಪಯಣ' ಪುಸ್ತಕ ಲೋಕಾರ್ಪಣೆ
ದಕ್ಷಿಣ ಕನ್ನಡದ ಪುಟ್ಟ ಊರಿನಿಂದ ದಶಕಗಳ ಹಿಂದೆ ಬೆಂಗಳೂರಿಗೆ ವಲಸೆ ಬಂದು ಹೊಟೇಲ್ ಉದ್ಯಮದಲ್ಲಿ ಸ್ಮರಣೀಯ ಪರಂಪರೆ ಹುಟ್ಟುಹಾಕಿದ ಹೋಟೆಲ್ ಉದ್ಯಮಿ ರಾಧಾಕೃಷ್ಣ ಅಡಿಗ ಅವರ ಕುರಿತ ಅಪೂರ್ವ ಕಥನ ʼರಾಧಾಕೃಷ್ಣ ಅಡಿಗ- ಇಡ್ಲಿ ಕಾಫಿ ಪರಂಪರೆ- ಪಯಣʼ ಪುಸ್ತಕದಲ್ಲಿದೆ.
ಬೆಂಗಳೂರು: ಹೋಟೆಲ್ ಉದ್ಯಮಿ, 'ಬ್ರಾಹ್ಮಣರ ಕಾಫಿ ಬಾರ್' ಮಾಲೀಕರ ಕುರಿತ 'ರಾಧಾಕೃಷ್ಣ ಅಡಿಗ: ಇಡ್ಲಿ ಕಾಫಿ ಪರಂಪರೆ-ಪಯಣ' ಪುಸ್ತಕವನ್ನು (Radha Krishna Adiga's Book) ಉಚ್ಚ ನ್ಯಾಯಾಲಯದ ನ್ಯಾಯಾಧೀಶ ದೇವದಾಸ್ ಅವರು ಬೆಂಗಳೂರಿನ ಜಯನಗರದ ಆರ್.ವಿ. ಟೀಚರ್ಸ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು. ಈ ವೇಳೆ ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ ಗರುಡಾಚಾರ್, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಖ್ಯಾತ ಹೋಮಿಯೋಪಥಿ ತಜ್ಞ ಡಾ.ಬಿ.ಟಿ.ರುದ್ರೇಶ್, ಗ್ರಂಥಕರ್ತ ವಿನಾಯಕ ಭಟ್ ತದ್ದಲಸೆ ಹಾಗೂ ಬ್ರಾಹ್ಮಣರ ಕಾಫಿ ಬಾರ್ ಮಾಲೀಕ ರಾಧಾಕೃಷ್ಣ ಅಡಿಗ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಅಡಿಗ ಅವರು ಮಾತನಾಡಿ, ಬ್ರಾಹ್ಮಣರ ಕಾಫಿ ಬಾರ್ 60 ವರ್ಷ ತುಂಬಿರುವುದು ಸಂತಸವಾಗುತ್ತಿದೆ. ಸಣ್ಣ ಕಾರು ಶೆಡ್‌ನಲ್ಲಿ ಆರಂಭಿಸಿದ ಹೋಟೆಲ್, ನಮ್ಮ ತಂದೆ-ತಾಯಿ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆದಿದೆ. ನನ್ನ ಬಗ್ಗೆ ಪುಸ್ತಕ ಬರಬೇಕು ಹಾಗೂ ಡಾಕ್ಟರೇಟ್ ಪಡೆಯಬೇಕು ಎಂಬ ಕನಸು ಚಿಕ್ಕಂದಿನಿಂದಲೇ ಇತ್ತು. ಇವೆರಡೂ ಗ್ರಾಹಕರ ಸಹಕಾರದಿಂದ ಸಾಧ್ಯವಾಗಿದೆ. ಇದಕ್ಕಾಗಿ ಧನ್ಯವಾದ ಸಲ್ಲಿತ್ತೇನೆ ಎಂದು ತಿಳಿಸಿದರು.
ಈ ಪುಸ್ತಕವನ್ನು ಲೋಕಾರ್ಪಣೆ ಮಾಡಬೇಕು ಎಂದು ಮನವಿ ಮಾಡಿದಾಗ ನ್ಯಾಯಾಧೀಶ ದೇವದಾಸ್ ಅವರು ಖುಷಿಯಿಂದ ಒಪ್ಪಿಕೊಂಡರು. ಇನ್ನು ಈ ಪುಸ್ತಕ ಬರಲು ವಿಶ್ವೇಶ್ವರ ಭಟ್ ಪ್ರಮುಖ ಕಾರಣ, ಅವರು ಹಲವು ಸಲಹೆಗಳನ್ನು ನೀಡಿದ್ದಾರೆ. ಹಾಗೆಯೇ ಸುದರ್ಶನ್ ಅವರನ್ನು ಭೇಟಿಯಾದಾಗ ಅವರು ಪುಸ್ತಕ ಬರೆಯಲು ವಿನಾಯಕ ಭಟ್ ತದ್ದಲಸೆ ಅವರನ್ನು ಕಳುಹಿಸಿಕೊಟ್ಟರು. ಇದರಿಂದ ಆರೇಳು ತಿಂಗಳಲ್ಲಿ ಪುಸ್ತಕ ಸಿದ್ಧವಾಯಿತು. ಈ ಪುಸ್ತಕ ಪ್ರಕಟವಾಗಲು ಕಾರಣರಾದ ಎಲ್ಲರಿಗೂ ಚಿರಋಣಿಯಾಗಿರುವೆ ಎಂದು ಹೇಳಿದರು.