ಸಿಎಂ ʼಡಿಕೆ ಸಬ್‌ಕೆʼ ಸಾಥ್
ಭಾನುವಾರ ರಜೆ ದಿನವಾದರೂ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಪುತ್ರ ಯತೀಂದ್ರ ಸೇರಿದಂತೆ, ಸಿದ್ದರಾಮಯ್ಯ ಆಪ್ತ ವಲಯದಲ್ಲಿರುವ ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದಾರೆ. ಕುಮಾರಕೃಪಾ ಅತಿಥಿಗೃಹದಲ್ಲಿ ಈ ಮೂರು ಸಚಿವರನ್ನು ಪ್ರತ್ಯೇಕವಾಗಿ ಭೇಟಿ ಯಾಗಿರುವ ಅವರು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
-
ಭಾನುವಾರವೂ ಸಚಿವರೊಂದಿಗೆ ಸರಣಿ ಸಭೆ, ಎಲ್ಲರ ವಿಶ್ವಾಸ ಸಂಪಾದಿಸಲು ಸಿಎಂ ಯತ್ನ
ಸಿದ್ದರಾಮಯ್ಯ ಆಪ್ತರಾದ ಜಾರ್ಜ್, ಸತೀಶ್, ಯತೀಂದ್ರ ಜತೆಗೆ ಪ್ರತ್ಯೇಕ ಮಾತುಕತೆ
ಸಚಿವ ಪಟ್ಟ ಕೊಡಿ: ಡಿಕೆಶಿ ಭೇಟಿ ಮಾಡಿ, ಸಚಿವ ಸ್ಥಾನಕ್ಕೆ ಜಮೀರ್ ಅಹ್ಮದ್ ಮನವಿ?
ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಡೀ ಪಕ್ಷವನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದಾಗಿ ಒಂದಿಲ್ಲೊಂದು ರೀತಿಯಲ್ಲಿ ಸಂದೇಶ ರವಾನಿಸುತ್ತಿ ರುವ ಡಿ.ಕೆ.ಶಿವಕುಮಾರ್ ಭಾನುವಾರ ಇದಕ್ಕೆ ಪೂರಕ ಎನ್ನುವಂತೆ ಹಲವು ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ.
ಭಾನುವಾರ ರಜೆ ದಿನವಾದರೂ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಪುತ್ರ ಯತೀಂದ್ರ ಸೇರಿದಂತೆ, ಸಿದ್ದರಾಮಯ್ಯ ಆಪ್ತ ವಲಯದಲ್ಲಿರುವ ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದಾರೆ. ಕುಮಾರಕೃಪಾ ಅತಿಥಿಗೃಹದಲ್ಲಿ ಈ ಮೂರು ಸಚಿವರನ್ನು ಪ್ರತ್ಯೇಕವಾಗಿ ಭೇಟಿಯಾಗಿರುವ ಅವರು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಭೇಟಿಗಳನ್ನು ಔಪಚಾರಿಕ ಭೇಟಿಯೆಂದೇ ಹೇಳಲಾಗಿದೆಯಾದರೂ, ಇದರ ಹಿಂದೆ ಎಲ್ಲ ನಾಯಕರನ್ನು ಒಟ್ಟಿಗೆ ಕರೆದೊಯ್ಯುವ ಆಲೋಚನೆಯಿದೆ. ಖಾತೆ ಹಂಚಿಕೆಯ ಸಮಯದಲ್ಲಿ ಆಗಿರುವ ಕೆಲ ಭಿನ್ನಾಭಿಪ್ರಾಯಗಳನ್ನು ತೊಡೆದುಕೊಳ್ಳಲೂ ಡಿಕೆ ಯತ್ನಿಸುತ್ತಿದ್ದಾರೆ. ಈ ವೇಳೆ ತಮ್ಮ ತಮ್ಮ ಇಲಾಖೆಗಳಲ್ಲಿ ಯಾವೆಲ್ಲ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದು ಎನ್ನುವ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ.
ಜಮೀರ್ ಡಿಕೆ ಭೇಟಿ: ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಭಾನುವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ದಾವಣಗೆರೆ ದಕ್ಷಿಣ ಉಪಚುನಾವಣೆ ವಿಷಯದಲ್ಲಿ ಜಮೀರ್ ಅವರ ನಡೆ ಹಾಗೂ ಆಡಿಯೋ ತೀವ್ರ ವಿವಾದಕ್ಕೆ ಕಾರಣವಾಗಿದೆ. ನಕಲಿ ಆಡಿಯೋ ಎಂದಿದ್ದರೂ, ಸಿದ್ದರಾಮಯ್ಯ ಅವರು ಜಮೀರ್ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದ್ದರಿಂದ ಇದೀಗ ಡಿ.ಕೆ.ಸುರೇಶ್ ಮೂಲಕ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಸಂಪುಟಕ್ಕೆ ಸೇರಿಸಿಕೊಳ್ಳು ವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಮೂರು ದಿನಗಳಲ್ಲಿ ಎರಡನೇ ಬಾರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಸಿದ್ದರಾಮ ಯ್ಯ ಅವರು ಸಂಪುಟಕ್ಕೆ ಸೇರಿಸುವ ಬಗ್ಗೆ ಯಾವುದೇ ಭರವಸೆ ನೀಡದೇ ಇರುವುದರಿಂದ ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದಾದ ಬಳಿಕ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಸಂಪುಟದಲ್ಲಿ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆ: 23ರ ಬಳಿಕ ದಿಲ್ಲಿಗೆ?
ಇನ್ನು ಜುಲೈ ಎರಡನೇ ಅಥವಾ ಮೂರನೇ ವಾರದಿಂದ ಮಳೆಗಾಲದ ಅಧಿವೇಶನ ಶುರುವಾಗುತ್ತದೆ. ಆದ್ದರಿಂದ ಅದಕ್ಕೂ ಮೊದಲು ಸಂಪುಟ ವಿಸ್ತರಣೆ ಮಾಡಬೇಕು ಎನ್ನುವ ಲೆಕ್ಕಾಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರಿದ್ದಾರೆ. ಆದ್ದರಿಂದ 21ಕ್ಕೆ ಬಿ.ಕೆ.ಹರಿಪ್ರಸಾದ್ ಅವರ ಪದಗ್ರಹಣ ಕಾರ್ಯಕ್ರಮದ ಬಳಿಕ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ಮೂರು ಮಂದಿ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ವೇಳೆ ಯಾರಿಗೆಲ್ಲ ಅವಕಾಶ ನೀಡಬೇಕು ಎನ್ನುವ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿ, ನಿರ್ಧರಿಸಲಾಗುತ್ತದೆ.
ಬಿಡಿಎ ಕೊಡಲು ಒಪ್ಪದ ಮುಖ್ಯಮಂತ್ರಿ
ಈ ನಡುವೆ ಬೆಂಗಳೂರು ನಗರಾಭಿವೃದ್ಧಿ ಖಾತೆ ವಿಷಯದಲ್ಲಿ ಕೃಷ್ಣಬೈರೇಗೌಡ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಬಗ್ಗಿದಂತೆ ಕಾಣುತ್ತಿಲ್ಲ. ಬಿಡಿಎ ಹಾಗೂ ಬಿಎಂಆರ್‌ಡಿಎಲ್ ಖಾತೆ ನೀಡುವುದಕ್ಕೆ ಕೃಷ್ಣಬೈರೇಗೌಡ ಅವರು ಆಗ್ರಹಿಸಿದ್ದರೂ, ಈ ವಿಷಯದಲ್ಲಿ ಯಾವುದೇ ಬದಲಾವಣೆ ಸದ್ಯಕ್ಕಂತೂ ಇಲ್ಲ ಎನ್ನುವ ಸ್ಪಷ್ಟನೆಯನ್ನು ಡಿಕೆಶಿ ನೀಡಿದ್ದಾರೆ. ಇಷ್ಟೆಲ್ಲ ಪ್ರಹಸನದ ಬಳಿಕ ಖಾತೆಯನ್ನು ಪುನರ್ ಹಂಚಿಕೆ ಮಾಡಿದರೆ ಸಾರ್ವಜನಿಕ ವಲಯದಲ್ಲಿ ಕೆಟ್ಟ ಸಂದೇಶ ರವಾನೆ ಯಾಗಲಿದೆ. ಇದರೊಂದಿಗೆ ಪ್ರತಿಪಕ್ಷಗಳಿಗೂ ಇದೊಂದು ಆಹಾರವಾಗುತ್ತದೆ. ಆದ್ದರಿಂದ ಸದ್ಯದ ಮಟ್ಟಿಗೆ ಯಾವುದೇ ಬದಲಾವಣೆಯಿಲ್ಲದೇ ಖಾತೆ ವಹಿಸಿಕೊಳ್ಳಿ ಎಂದು ಡಿಕೆ ಸೂಚನೆ ನೀಡಿದ್ದಾರೆ. ಆದರೆ ಬಿಡಿಎ, ಬಿಎಂಆರ್‌ಡಿಎಲ್ ಇಲ್ಲದೇ ಖಾತೆ ಪಡೆದರೆ ಭವಿಷ್ಯದಲ್ಲಿ ‘ಹೊರೆ’ಯಾಗುತ್ತದೆ ಎನ್ನುವ ಕಾರಣಕ್ಕೆ ಬೈರೇಗೌಡರು ಪಟ್ಟು ಸಡಿಲಿಸುತ್ತಿಲ್ಲ ಎನ್ನಲಾಗಿದೆ.