Cauvery Water Dispute: ಕಾವೇರಿ ನೀರು ಹಂಚಿಕೆ ವಿವಾದ; ಆ.2ಕ್ಕೆ ಸರ್ವಪಕ್ಷಗಳ ಸಭೆ ಕರೆದ ಸಿಎಂ ಡಿ.ಕೆ.ಶಿವಕುಮಾರ್
ಈಗಾಗಲೇ ರಾಜ್ಯ ಸರ್ಕಾರ CWRC ಆದೇಶ ಪ್ರಶ್ನಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ-CWMAಗೆ ಮೇಲ್ಮನವಿ ಸಲ್ಲಿಸಿದೆ. ಇಂದು ದೆಹಲಿಯಲ್ಲಿ CWMA ಸಭೆ ನಿಗದಿಯಾಗಿದೆ. ಸಭೆಯ ತೀರ್ಮಾನ ವ್ಯತಿರಿಕ್ತವಾಗಿ ಬಂದಲ್ಲಿ ಕಾವೇರಿ ಕೊಳ್ಳದ ಭಾಗದಲ್ಲಿ ರೈತರ ಪ್ರತಿಭಟನೆ ಮತ್ತೆ ಭುಗಿಲೇಳುವ ಸಾಧ್ಯತೆ ಇದೆ.
ಸಿಎಂ ಡಿ.ಕೆ.ಶಿವಕುಮಾರ್. -
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು (Cauvery Water Dispute) ಹರಿಸುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿರುವ ಹಿನ್ನೆಲೆಯಲ್ಲಿ ರೈತ ಮತ್ತು ಕನ್ನಡಪರ ಸಂಘಟನೆಗಳಿಂದ ಆಕ್ರೋಶ ಭುಗಿಲೆದ್ದಿದೆ. ಹೀಗಾಗಿ ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ಮುಂದಾಗಿರುವ ರಾಜ್ಯ ಸರ್ಕಾರ, ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕಾನೂನು ಹಾಗೂ ರಾಜಕೀಯ ಹೋರಾಟದ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಲು ಆಗಸ್ಟ್ 2ರಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಸರ್ವಪಕ್ಷ ಸಭೆ (All-Party Meeting) ಕರೆದಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರ CWRC ಆದೇಶ ಪ್ರಶ್ನಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ-CWMAಗೆ ಮೇಲ್ಮನವಿ ಸಲ್ಲಿಸಿದೆ. ಇಂದು ದೆಹಲಿಯಲ್ಲಿ CWMA ಸಭೆ ನಿಗದಿಯಾಗಿದೆ. ಸಭೆಯ ತೀರ್ಮಾನ ವ್ಯತಿರಿಕ್ತವಾಗಿ ಬಂದಲ್ಲಿ ಕಾವೇರಿ ಕೊಳ್ಳದ ಭಾಗದಲ್ಲಿ ರೈತರ ಪ್ರತಿಭಟನೆ ಮತ್ತೆ ಭುಗಿಲೇಳುವ ಸಾಧ್ಯತೆ ಇದೆ.
ಇನ್ನು ಸರ್ವಪಕ್ಷ ಸಭೆಯಲ್ಲಿ ಕಾವೇರಿ ನೀರು ಹಂಚಿಕೆ ಕುರಿತ ಇತ್ತೀಚಿನ ಬೆಳವಣಿಗೆಗಳು, ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ಪ್ರಾಧಿಕಾರಗಳ ಮುಂದೆ ಅನುಸರಿಸಬೇಕಾದ ಕಾನೂನು ಹಾದಿ, ರೈತರ ಹಿತಾಸಕ್ತಿ ಮತ್ತು ರಾಜ್ಯದ ನೀರಿನ ಪರಿಸ್ಥಿತಿ ಕುರಿತು ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆಯಿದೆ.
ಸರ್ವಪಕ್ಷಗಳ ಸಭೆ ಬಗ್ಗೆ ಸಿಎಂ ಹೇಳಿದ್ದೇನು?
ಸರ್ವಪಕ್ಷ ಸಭೆ ಬಗ್ಗೆ ದೆಹಲಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸಿ, ಕಾವೇರಿ ನೀರಿನ ವಿಚಾರವಾಗಿ ಬರುವ ಭಾನುವಾರ (ಆಗಸ್ಟ್ 2) ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕಾವೇರಿ ಜಲಾನಯನ ಪ್ರದೇಶದ ಸಂಸದರು, ಶಾಸಕರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. “ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮುಂದೆ ಮೇಲ್ಮನವಿ ಸಲ್ಲಿಸಿದ್ದು, ಮುಂದೆ ಈ ವಿಚಾರವನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಸರ್ವಪಕ್ಷ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಈ ವಿಚಾರವಾಗಿ ಸಂಸದರು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸೋಮಣ್ಣ, ಜಗದೀಶ್ ಶೆಟ್ಟರ್, ಬೊಮ್ಮಾಯಿ ಅವರ ಜೊತೆ ಚರ್ಚೆ ಮಾಡಿದ್ದು, ಅವರು ರಾಜ್ಯದ ಹಿತಕ್ಕಾಗಿ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
“ಕರ್ನಾಟಕ ಕಾಂಗ್ರೆಸ್ ನಾಯಕರ ಬದಲು ದೆಹಲಿ ಸರ್ಕಾರವನ್ನು ಭೇಟಿ ಮಾಡಿ ಎಂದು ತಮಿಳುನಾಡು ಸಿಎಂ ವಿಜಯ್ ಅವರಿಗೆ ಡಿಎಂಕೆ ನಾಯಕ ಅನ್ಬುಮಣಿ ಸಲಹೆ ನೀಡಿರುವ ಬಗ್ಗೆ ಕೇಳಿದಾಗ, “ಆ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ನಮಗೆ ಪರಸ್ಪರ ಕಿತ್ತಾಟ ಮಾಡಲು ಇಷ್ಟವಿಲ್ಲ. ನೆಲದ ಕಾನೂನು ಇದೆ. ನಾವು ಪರಸ್ಪರ ಗೌರವಿಸಬೇಕು. ಇಡೀ ದೇಶ ಒಂದಾಗಿ ಕೆಲಸ ಮಾಡಬೇಕು” ಎಂದರು.
ನಮ್ಮಲ್ಲಿ ತಮಿಳುನಾಡಿಗೆ ಬಿಡುವಷ್ಟು ಕಾವೇರಿ ನೀರಿಲ್ಲ: ಸಚಿವ ಎಂ.ಬಿ. ಪಾಟೀಲ್
ಸಚಿವ ಸಂಪುಟ ವಿಸ್ತರಣೆ ಕುರಿತು ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, “ಯಡಿಯೂರಪ್ಪನವರು ಕೂಡ ಸಚಿವ ಸಂಪುಟ ರಚನೆ ಮಾಡದೇ ಅಧಿಕಾರ ಮಾಡಿರಲಿಲ್ಲವೇ? ಆಗ ಅಪ್ಪ-ಮಗ ಅಧಿಕಾರವನ್ನು ಅನುಭವಿಸಲಿಲ್ಲವೇ?” ಎಂದು ಮರುಪ್ರಶ್ನಿಸಿದರು.