ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

9 ಗಂಟೆಯ ಕಲಾಪ 4 ಬಾರಿ ಮುಂದೂಡಿಕೆ; ದಿನದಾಂತ್ಯಕ್ಕೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ

ಲೋಕಸಭೆಯಲ್ಲಿ ಬುಧವಾರ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಮಸೂದೆಯನ್ನು ಅಂಗೀಕರಿಸಲಾಗಿದೆ. 9 ಗಂಟೆಯಲ್ಲಿ 4 ಬಾರಿ ಮುಂದೂಡಲ್ಪಟ್ಟ ಮಸೂದೆಯ ಕುರಿತು ಬಿರುಸಿನ ಚರ್ಚೆ ನಡೆಯಿತು. ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾಷಣದಿಂದ ಮಸೂದೆ ಅಂಗೀಕಾರಕ್ಕೆ ಅಡ್ಡಿಯಾದರೂ ಕೇಂದ್ರ ಸರ್ಕಾರವು ವಿರಾಮದ ಸಮಯದಲ್ಲಿ ಉನ್ನತ ಮಟ್ಟದ ಕಾರ್ಯತಂತ್ರ ಸಭೆಗಳನ್ನು ನಡೆಸಿ ಮಸೂದೆಯನ್ನು ಅಂಗೀಕರಿಸುವಂತೆ ಮಾಡಿತು.

ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಮಸೂದೆ ಅಂಗೀಕಾರ

ಸಂಗ್ರಹ ಚಿತ್ರ -

ನವದೆಹಲಿ: ಸುಮಾರು 9 ಗಂಟೆ ಗಂಭೀರ ಚರ್ಚೆಯ ಬಳಿಕ ಬುಧವಾರ ಕೇಂದ್ರ ಸರ್ಕಾರವು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಮಸೂದೆಯನ್ನು (paper leak bill) ಅಂಗೀಕಾರ ಮಾಡಿದೆ. ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆಯನ್ನು (Public Examinations (Prevention of Unfair Means) Amendment Bill) ಲೋಕಸಭೆಯಲ್ಲಿ (Loka sabha) ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರವು ವಿಪಕ್ಷಗಳ ಅಡ್ಡಿಯ ನಡುವೆಯೂ ಅಂಗೀಕಾರ ಮಾಡುವಲ್ಲಿ ಯಶಸ್ವಿಯಾಯಿತು. ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಮತ್ತು ಪರೀಕ್ಷೆ ವೇಳೆ ನಡೆಯುವ ಅಕ್ರಮಗಳನ್ನು ತಡೆಯಲು ಕಾನೂನನ್ನು ಬಲಪಡಿಸುವ ಗುರಿಯನ್ನು ಇದು ಹೊಂದಿದೆ.

9 ಗಂಟೆಯಲ್ಲಿ 4 ಬಾರಿ ಮುಂದೂಡಲ್ಪಟ್ಟ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಮಸೂದೆಯನ್ನು ಮಂಡಿಸಲು ಸಂಸತ್ತಿನಲ್ಲಿ ಅಧಿವೇಶನ ಪ್ರಾರಂಭವಾಗುವುದಕ್ಕೂ ಮೊದಲೇ ಪ್ರತಿಭಟನೆಗಳು ನಡೆಯಿತು. ಅಖಿಲೇಶ್ ಯಾದವ್ ನೇತೃತ್ವದಲ್ಲಿ ಸಮಾಜವಾದಿ ಪಕ್ಷದ ಸಂಸದರು ಅಯೋಧ್ಯೆ ರಾಮ ಮಂದಿರಕ್ಕಾಗಿ ಸಂಗ್ರಹಿಸಿರುವ ದೇಣಿಗೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಧ್ವನಿ ಎತ್ತಿದರು. ಈ ನಡುವೆ ಬಿಜೆಪಿ ಸಂಸದರು ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯುವಲ್ಲಿ ಆಡಳಿತ ವಿಫಲವಾಗಿವೆ ಎಂದು ಆರೋಪಿಸಿ ಪ್ರತಿಭಟಿಸಿದರು.

ಸಿಜೆಪಿಯಿಂದ ಮತ್ತೆ ಪ್ರತಿಭಟನೆಯ ಬೆದರಿಕೆ: ದೆಹಲಿಯ ಜಂತರ್ ಮಂತರ್‌ನಲ್ಲಿ ಭಾರಿ ಭದ್ರತೆ

ಸಮಾಜವಾದಿ ಪಕ್ಷದ ಪ್ರತಿಭಟನೆಗೆ ಇಂಡಿಯಾ ಒಕ್ಕೂಟದ ಸಂಪೂರ್ಣ ಬೆಂಬಲ ಕಾಣಲಿಲ್ಲ. ಸಮಾಜವಾದಿ ಪಕ್ಷ ಮಾತ್ರ ರಾಮ ಮಂದಿರ ದೇಣಿಗೆ ವಿಷಯವನ್ನು ಪ್ರಸ್ತಾಪಿಸಿದರೆ ಇತರ ಹಲವಾರು ವಿರೋಧ ಪಕ್ಷಗಳು ವಿಭಿನ್ನ ರಾಜಕೀಯ ವಿಷಯಗಳ ಕುರಿತು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದವು.

ಸಂಸತ್ತಿನ ಪ್ರವೇಶದ್ವಾರದ ಬಳಿ ಸುಮಾರು ಒಂದು ಗಂಟೆ ಪ್ರದರ್ಶನಗಳ ಬಳಿಕ ಸಂಸದರು ಸಂಸತ್ತಿನೊಳಗೆ ಪ್ರವೇಶಿಸಿದರು. ಕಲಾಪಗಳ ಆರಂಭ ವಿರೋಧ ಪಕ್ಷಗಳ ಗದ್ದಲದೊಂದಿಗೆ ಪ್ರಾರಂಭವಾಯಿತು. ವಿರೋಧ ಪಕ್ಷದ ಸದಸ್ಯರು ಜೋರಾಗಿ ಕೂಗಿ ಪ್ರತಿಭಟನೆ ನಡೆಸಿದ್ದರಿಂದ ಪದೇ ಪದೇ ಕಲಾಪಕ್ಕೆ ಅಡ್ಡಿ ಪಡಿಸಿದ್ದರಿಂದ ಸದನವು ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು.

ಮತ್ತೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸದನ ಆರಂಭವಾದಾಗಲೇ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಕುರಿತು ಚರ್ಚೆ ಪ್ರಾರಂಭಿಸಲಾಯಿತು. ಆಡಳಿತ, ವಿರೋಧ ಪಕ್ಷದ ಸದಸ್ಯರು, ಹಲವು ಸ್ವತಂತ್ರ ಸಂಸದರು ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾತನಾಡಲು ಪ್ರಾರಂಭಿಸಿದಾಗ ಅವರ ಮಾತಿಗೆ ವಿರೋಧಗಳು ವ್ಯಕ್ತವಾಗಿ ಪದೇ ಪದೇ ಅಡ್ಡಿ ಉಂಟಾಯಿತು.

ರಾಹುಲ್ ಗಾಂಧಿ ಅವರು ಶಾಸನಕ್ಕೆ ನೇರವಾಗಿ ಸಂಬಂಧಿಸದ ಹಲವಾರು ವಿಷಯಗಳನ್ನು ಉಲ್ಲೇಖಿಸಿದರು. ಹೀಗಾಗಿ ಸ್ಪೀಕರ್ ಓಂ ಬಿರ್ಲಾ ಅವರು ಹಲವು ಬಾರಿ ಮಧ್ಯಪ್ರವೇಶಿಸಿ ವಿಷಯಗಳನ್ನು ಶಾಸನಕ್ಕೆ ಸೀಮಿತಗೊಳಿಸುವಂತೆ ವಿನಂತಿಸಿದರು. ಆದರೂ ರಾಹುಲ್ ಗಾಂಧಿ ಅದನ್ನು ನಿರ್ಲಕ್ಷಿಸಿ ತಮ್ಮ ಮಾತನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಎದ್ದು ನಿಂತು ಪುರಾವೆಗಳಿಲ್ಲದೆ ಸದನದಲ್ಲಿ ಗಂಭೀರ ಸ್ವರೂಪದ ಆರೋಪಗಳನ್ನು ಮಾಡದಂತೆ ಹೇಳಿದರು. ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಇದರಿಂದ ಸ್ಪೀಕರ್ ಮತ್ತೆ ಸದನವನ್ನು ಮಧ್ಯಾಹ್ನ 1:57ಕ್ಕೆ 2.30 ರವರೆಗೆ ಮುಂದೂಡಿದರು.

ಸದನ ಮುಂದೂಡಲ್ಪಟ್ಟಿದ್ದರೂ ಸಂಸತ್ತಿನೊಳಗೆ ಮುಚ್ಚಿದ ಬಾಗಿಲಿನ ಸಭೆಗಳು ನಡೆದವು. ಮೊದಲ ಸಭೆ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯಲ್ಲಿ ನಡೆದಿದ್ದು, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಭಾಗವಹಿಸಿದ್ದರು. ಇದರ ಬಳಿಕ ಸ್ಪೀಕರ್ ಓಂ ಬಿರ್ಲಾ ಮತ್ತು ಕಿರಣ್ ರಿಜಿಜು ನಡುವೆ ಸಭೆ ನಡೆಯಿತು. ಇದರಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಭಾಗವಹಿಸಿದರು. ಅನಂತರ ಕಿರಣ್ ರಿಜಿಜು ಮತ್ತೊಂದು ಸುತ್ತಿನ ಚರ್ಚೆಯನ್ನು ಅಮಿತ್ ಶಾ ಅವರೊಂದಿಗೆ ನಡೆಸಿದರು.

ಈ ಸಭೆಯಲ್ಲಿ ಕೇಂದ್ರ ಸರ್ಕಾರವು ಶಾಸನವನ್ನು ವಿಳಂಬ ಮಾಡದೇ ಅಂಗೀಕರಿಸಲು ನಿರ್ಣಯಿಸಿತು. ಸದನ ಮತ್ತೆ 2.30ಕ್ಕೆ ಪ್ರಾರಂಭವಾದಾಗ ವಿಪಕ್ಷಗಳು ಪ್ರತಿಭಟನೆಗಳನ್ನು ಮುಂದುವರಿಸಿದರು. ಹೀಗಾಗಿ ಮತ್ತೆ ಕಲಾಪವನ್ನು 3 ಗಂಟೆಯವರೆಗೆ ಮುಂದೂಡಲಾಯಿತು.

ಅನಂತರ ಸಭೆ ಆರಂಭವಾದಾಗ ಸಚಿವ ಜಿತೇಂದ್ರ ಸಿಂಗ್ ಅವರು ಸುಮಾರು 30 ನಿಮಿಷಗಳ ಕಾಲ ತಮ್ಮ ಭಾಷಣವನ್ನು ಮಂಡಿಸಿ ಪ್ರಸ್ತಾವಿತ ಶಾಸನವನ್ನು ಸಮರ್ಥಿಸಿಕೊಂಡರು. ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆ ದಂಧೆಗಳನ್ನು ತಡೆಯಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಬಲವಾದ ಕಾನೂನು ನಿಬಂಧನೆಗಳು ಅಗತ್ಯವಾಗಿವೆ ಎಂಬ ಸರ್ಕಾರದ ನಿಲುವನ್ನು ಪುನರುಚ್ಚರಿಸಿದರು.

ಬಳಿಕ ಸ್ಪೀಕರ್ ಓಂ ಬಿರ್ಲಾ ಅವರು ಮಧ್ಯಾಹ್ನ 3.30 ರ ಸುಮಾರಿಗೆ ಮಸೂದೆಯನ್ನು ಮತಕ್ಕೆ ಹಾಕಿದರು. ವಿರೋಧ ಪಕ್ಷಗಳ ಪ್ರತಿಭಟನೆ ಹೊರತಾಗಿಯೂ ಸದನದಲ್ಲಿ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ಅನ್ನು ಅಂಗೀಕರಿಸಲಾಯಿತು. ಈ ಮೂಲಕ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಂಡಿತು.

ಭೀಕರ ಪ್ರವಾಹಕ್ಕೆ ತತ್ತರಿಸಿದ ಅಸ್ಸಾಂ; ಸಾವಿನ ಸಂಖ್ಯೆ 78ಕ್ಕೆ ಏರಿಕೆ, 3 ಲಕ್ಷಕ್ಕೂ ಅಧಿಕ ಜನರ ಜೀವನ ಅಸ್ತವ್ಯಸ್ತ

ಈ ಮಸೂದೆಯು ಪರೀಕ್ಷೆಗೆ ಸಂಬಂಧಿಸಿದ ಅಪರಾಧಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ತ್ವರಿತ ನ್ಯಾಯಾಲಯ ಸ್ಥಾಪನೆ, ಅಪರಾಧಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ, 10 ಕೋಟಿ ರೂಪಾಯಿ ದಂಡ ವಿಧಿಸುವುದನ್ನು ಒಳಗೊಂಡಿದೆ. ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಯನ್ನು ಮುಂದೆ ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಬಳಿಕ ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಲಾಗುತ್ತದೆ.