ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karnataka SIR: ಎಸ್‌ಐಆರ್‌; ಕರ್ನಾಟಕ ಮತದಾರರ ಪಟ್ಟಿಯಿಂದ 84.3 ಲಕ್ಷ ಮಂದಿ ಔಟ್‌, 5 ಲಕ್ಷಕ್ಕೂ ಹೆಚ್ಚು ನಕಲಿ ವೋಟರ್ಸ್ ಪತ್ತೆ!

ಇದುವರೆಗೆ ಎಸ್‌ಐಆರ್ ಅರ್ಜಿ ವಾಪಸ್ ಕೊಡದೇ ಇರುವವರು ಆಗಸ್ಟ್ 8ರ ಒಳಗಾಗಿ ಬಿಎಲ್‌ಒಗಳ ಸಹಾಯ ಪಡೆದು ಅರ್ಜಿ ಸಲ್ಲಿಸಬೇಕಾಗಿದೆ. ರಾಜ್ಯಾದ್ಯಂತ ಈವರಗೆರೆ ಒಟ್ಟು 5,54,32,314 ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಈ ಪೈಕಿ 4,26,75,861 ಅರ್ಜಿಗಳನ್ನು ವಾಪಸ್ ಸ್ವೀಕರಿಸಿ ಡಿಜಿಟೈಸೇಷನ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.

ಎಸ್‌ಐಆರ್‌; ಕರ್ನಾಟಕ ಮತದಾರರ ಪಟ್ಟಿಯಿಂದ 84.3 ಲಕ್ಷ ಮಂದಿ ಔಟ್‌!

-

Prabhakara R
Prabhakara R Jul 29, 2026 8:22 PM

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (Karnataka SIR) ಪ್ರಕ್ರಿಯೆಯಲ್ಲಿ 84,31,612 ಮತದಾರರನ್ನು ಮೊದಲ ಕರಡು ಮತದಾರರ ಪಟ್ಟಿಯಿಂದ ಹೊರಗಿಡಲು ಗುರುತಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ವಿ. ಅನ್ಬುಕುಮಾರ್ (CEO Anbu Kumar) ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಶೇಕಡಾ 76.99 ರಷ್ಟು ಗಣತಿ ನಮೂನೆಗಳ ಡಿಜಿಟಲೀಕರಣ ನಡೆದಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

ಮತದಾರರ ನೋಂದಣಾಧಿಕಾರಿಗಳು ಹಾಗೂ ಬಿಎಲ್‌ಒಗಳು ಎಸ್‌ಐಆರ್ (SIR) ಕಾರ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

ಈ ನಡುವೆ ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದ ಅವರು, ಯಾವುದೇ ಲೋಪದೋಷವಿಲ್ಲದಂತೆ ಕಾರ್ಯ ನಿರ್ವಹಿಸಲು ನಿರ್ದೇಶನ ನೀಡಿದ್ದಾರೆ. ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಎಸ್‌ಐಆರ್ ಕಾರ್ಯ ನಡೆಸಲು, ತಂಡಗಳಾಗಿ ಕಾರ್ಯ ನಿರ್ವಹಿಸಿ ಪ್ರಕ್ರಿಯೆಗೆ ವೇಗ ನೀಡಲು ತಿಳಿಸಿದ್ದಾರೆ. ಜೊತೆಗೆ, ಬಿಎಲ್‌ಒಗಳ ಬಾಕಿ ಸಂಭಾವನೆಯನ್ನು ತಕ್ಷಣವೇ ಬಿಡುಗಡೆಗೊಳಿಸಲು ಸೂಚನೆ ನೀಡಿದ್ದಾರೆ.

ಪ್ರತಿಯೊಬ್ಬ ಮತದಾರರನ ಸ್ಥಳ ಮಹಜರು ಮಾಡಲಾಗಿದ್ದು, ಮೃತರ ಡೆತ್ ಸರ್ಟಿಫಿಕೇಟ್ ಸಂಗ್ರಹಿಸಿ, ಸಂಬಂಧಪಟ್ಟವರಿಂದ ಸಹಿ ಕೂಡ ಪಡೆಯಲಾಗಿದೆ. ಹೀಗಾಗಿ ಈ 84 ಲಕ್ಷಕ್ಕೂ ಅಧಿಕ ಜನರನ್ನು ಮೊದಲ ಕರಡು ಪಟ್ಟಿಯಲ್ಲಿ ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಒಟ್ಟು 1.3 ಕೋಟಿ ಮತದಾರರಿದ್ದಾರೆ. ಆದರೆ ಇದುವರೆಗೆ ಕೇವಲ 47.97 ಲಕ್ಷ ಜನ ಮಾತ್ರ ಅರ್ಜಿ ವಾಪಸ್ ಕೊಟ್ಟಿದ್ದಾರೆ. ಬರೋಬ್ಬರಿ 39.38 ಲಕ್ಷ (ಸುಮಾರು 40%) ಮತದಾರರ ಸುಳಿವೇ ಸಿಕ್ಕಿಲ್ಲ. ಇನ್ನೂ 16.57 ಲಕ್ಷ ಮತದಾರರು ಅರ್ಜಿ ವಾಪಸ್ ನೀಡಬೇಕಿದೆ ಎಂದು ಹೇಳಿದರು.

ಮತದಾರ ಪಟ್ಟಿಯಿಂದ ಕೈಬಿಡುವ 84.31 ಲಕ್ಷ ಮಂದಿ ಯಾರು?

  • ಶಾಶ್ವತವಾಗಿ ಸ್ಥಳಾಂತರಗೊಂಡವರು: 51,74,968
  • ಮೃತಪಟ್ಟವರು: 14,99,799
  • ನಾಪತ್ತೆಯಾಗಿರುವವರು: 11,61,231
  • ನಕಲಿ/ಎರಡು ಕಡೆ ಮತ ಇರುವವರು: 5,62,572
  • ಇತರರು (ಸಹಿ ಮಾಡಲು ನಿರಾಕರಿಸಿದವರು): 33,042

ಆಗಸ್ಟ್ 8ರೊಳಗೆ ಎಸ್‌ಐಆರ್‌ ಅರ್ಜಿ ಸಲ್ಲಿಸಿ

ಇದುವರೆಗೆ ಎಸ್‌ಐಆರ್ ಅರ್ಜಿ ವಾಪಸ್ ಕೊಡದೇ ಇರುವವರು ಆಗಸ್ಟ್ 8ರ ಒಳಗಾಗಿ ಬಿಎಲ್‌ಒಗಳ ಸಹಾಯ ಪಡೆದು ಅರ್ಜಿ ಸಲ್ಲಿಸಬೇಕಾಗಿದೆ. ಸುಮಾರು 29 ಲಕ್ಷ ಮತದಾರರು '2002ರ ಮಾಹಿತಿ ಇಲ್ಲ' ಎಂಬ ಕಾರಣ ನೀಡಿ ಅರ್ಜಿ ವಾಪಸ್ ಕೊಟ್ಟಿದ್ದಾರೆ. ಆದಾಗ್ಯೂ, ಮಾಹಿತಿ ಲಭ್ಯವಿಲ್ಲದಿದ್ದರೂ ಬಿಎಲ್‌ಒಗಳ ನೆರವಿನಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಶಾಶ್ವತವಾಗಿ ಸ್ಥಳಾಂತರಗೊಂಡಿರುವ 51.74 ಲಕ್ಷ ಮತದಾರರು ಪ್ರಸ್ತುತ ಕರ್ನಾಟಕದ ಯಾವುದೇ ಕ್ಷೇತ್ರದಲ್ಲಿ ವಾಸವಿದ್ದು, ದೇಶದ ಬೇರೆ ಎಲ್ಲೂ ಮತ ಹೊಂದಿರದಿದ್ದರೆ ಫಾರ್ಮ್-6 ಮೂಲಕ ಸೂಕ್ತ ವಿಳಾಸದ ದಾಖಲೆ ನೀಡಿ ಅರ್ಜಿ ಸಲ್ಲಿಸಬಹುದು. ಅವರು ಕರ್ನಾಟಕದಲ್ಲಿ ವಾಸ ಮಾಡುತ್ತಿರುವುದಕ್ಕೆ ಸರಿಯಾದ ದಾಖಲೆ ಸಲ್ಲಿಸಿದರೆ ಅವರ ಹೆಸರನ್ನು ಪರಿಗಣಿಸಲಾಗುತ್ತದೆ, ಇಲ್ಲವಾದಲ್ಲಿ ಅಂತಿಮ ಪಟ್ಟಿಯಿಂದಲೂ ಅವರನ್ನು ಹೊರಗಿಡಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕರ್ನಾಟಕ ಸೇರಿ ವಿವಿಧೆಡೆಗಳ ಎಸ್‌ಐಆರ್‌ ಅವಧಿ ವಿಸ್ತರಿಸಿದ ಚುನಾವಣಾ ಆಯೋಗ; ರಾಜ್ಯದಲ್ಲಿ ಆಗಸ್ಟ್ 8ರವರೆಗೆ ಮನೆ-ಮನೆ ಭೇಟಿ

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯ ಪ್ರಗತಿ

ರಾಜ್ಯಾದ್ಯಂತ ಈವರಗೆರೆ ಒಟ್ಟು 5,54,32,314 ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಈ ಪೈಕಿ 4,26,75,861 ಅರ್ಜಿಗಳನ್ನು ವಾಪಸ್ ಸ್ವೀಕರಿಸಿ ಡಿಜಿಟೈಸೇಷನ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಪ್ರಸ್ತುತ ಎಸ್‌ಐಆರ್ ಕಾರ್ಯವು ಶೇ. 76.99 ರಷ್ಟು ಪ್ರಗತಿ ಸಾಧಿಸಿದೆ. ಇನ್ನು 43,24,841 ಮತದಾರರ ಮಾಹಿತಿ ಸಿಗಬೇಕಿದ್ದು, ಆಗಸ್ಟ್ 08ರ ನಂತರ ಇವರ ಬಗ್ಗೆ ಸಂಪೂರ್ಣ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಇದರ ಜೊತೆಗೆ 3.22 ಲಕ್ಷ ಆನ್‌ಲೈನ್ ಅರ್ಜಿಗಳು, 2,283 ಫಾರ್ಮ್ 6A ಅರ್ಜಿಗಳು ಹಾಗೂ 7.73 ಲಕ್ಷ ಫಾರ್ಮ್ 7 ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.