ಕರ್ನಾಟಕ ಬಂದ್ ಆದರೆ ಯಾವೆಲ್ಲ ಸೇವೆ ಲಭ್ಯವಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ
Karnataka Bandh: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗಸ್ಟ್ 13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಆದರೆ ಈ ಬಂದ್‌ಗೆ ಕೆಲವು ಸಂಘಟನೆಗಳು ಬೆಂಬಲ ನೀಡಿದ್ದು, ಇನ್ನೂ ಕೆಲ ಕನ್ನಡ ಪರ ಹೋರಾಟಗಾರರು ಬಂದ್‌ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಆಗಸ್ಟ್ 13ರಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿದ್ದಾರೆ. ಆದರೆ ಈ ಬಂದ್‌ಗೆ ಕೆಲವು ಸಂಘಟನೆಗಳು ಬೆಂಬಲ ನೀಡಿದ್ದು, ಇನ್ನೂ ಕೆಲ ಕನ್ನಡ ಪರ ಹೋರಾಟಗಾರರು ಬಂದ್‌ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಬಂದ್ ನಡೆದರೆ ಯಾವೆಲ್ಲ ಸೇವೆ ಎಂದಿನಂತೆ ಇರಲಿದೆ, ಯಾವುದು ಲಭ್ಯವಿರುವುದಿಲ್ಲ ಎನ್ನುವ ಮಾಹಿತಿ ಇಲ್ಲಿದೆ.
ಬಹುತೇಕ ಸಾರಿಗೆ ಸಂಚಾರ ಎಂದಿನಂತೆ ನಡೆಯುವ ನಿರೀಕ್ಷೆ ಇದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ. ಖಾಸಗಿ ವಾಹನಗಳು ಕೂಡ ಸಾಮಾನ್ಯವಾಗಿ ಸಂಚರಿಸಲಿವೆ. ಖಾಸಗಿ ಸಾರಿಗೆ ಒಕ್ಕೂಟ ಈ ಬಾರಿಯ ಬಂದ್‌ಗೆ ಬೆಂಬಲ ನೀಡುತ್ತಿಲ್ಲ. ಜಲಾಶಯಗಳು ತುಂಬಿರುವುದರಿಂದ ಸದ್ಯ ಬಂದ್ ಮಾಡುವ ಪರಿಸ್ಥಿತಿ ಇಲ್ಲ ಎಂದು ಒಕ್ಕೂಟ ಹೇಳಿದೆ. ಮುಂದೆ ನೀರು ಕೊರತೆಯಾಗಿ ಬಂದ್ ಮಾಡುವ ಪರಿಸ್ಥಿತಿ ಬಂದರೆ, ಖಂಡಿತವಾಗಿ ಬಂದ್‌ಗೆ ಬೆಂಬಲಿಸುತ್ತೇವೆ ಎಂದು ಖಾಸಗಿ ಸಾರಿಗೆ ಒಕ್ಕೂಟ ತಿಳಿಸಿದೆ.
ಸರ್ಕಾರಿ ಶಾಲೆ, ಆಂಬುಲೆನ್ಸ್, ಆಸ್ಪತ್ರೆ, ತುರ್ತು ಸೇವೆಗಳು, ಮೆಟ್ರೋ, ಹಾಲು ತರಕಾರಿ ಮಾರಾಟ, ಮೆಡಿಕಲ್ ಶಾಪ್ ಎಂದಿನಂತೆ ತೆರೆದಿರುತ್ತವೆ. ಮಾಲ್, ಮಲ್ಟಿಫ್ಲೆಕ್ಸ್, ಓಲಾ, ಉಬರ್, ಬೀದಿ ಬದಿ ವ್ಯಾಪಾರ, ಎಪಿಎಂಸಿ, ಹೋಟೆಲ್, ರೆಸ್ಟೋರೆಂಟ್‌ಗಳು ಬಂದ್ ಆಗುತ್ತದೆ ಎಂದು ಹೇಳಲಾಗುತ್ತಿದ್ದರೂ, ಯಾವುದೇ ಅಧಿಕೃತ ಮಾಹಿತಿ ಇಲ್ಲ. ಬಂದ್ ನಡೆದರೂ ಬಹುತೇಕ ಎಲ್ಲಾ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿರಲಿದೆ.
ವಾಟಾಳ್ ನಾಗರಾಜ್ ಹೇಳಿದ್ದೇನು?
ಯಾರು ಬೆಂಬಲ ನೀಡಿದಿದ್ದರೂ ಸರಿ ಆಗಸ್ಟ್ 13ರಂದು ಕರ್ನಾಟಕ ಬಂದ್ ಮಾಡಿಯೇ ತೀರುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಮಾತನಾಡಿದ ಅವರು, ʼಆಗಸ್ಟ್ 13ರಂದು ಕರ್ನಾಟಕ ಬಂದ್ ಮಾಡಿಯೇ ಮಾಡ್ತೇವೆ. ಬಂದ್ ದಿನ ಪ್ರತಿಯೊಬ್ಬ ಜನರೂ ಬೀದಿಗೆ ಇಳಿಯಬೇಕು. ಅವತ್ತು ದೇವರಿಗೆ ಹರಕೆಯನ್ನ ಕಟ್ಟಿ, ಪ್ರತಿ ಮನೆಯವರು ಈಡುಗಾಯಿ ಒಡೆಯಬೇಕು. ಬಂದ್ ಯಶಸ್ವಿಯಾಗಬೇಕೆಂದು ಪ್ರತಿಯೊಬ್ಬರು ಪೂಜೆ ಮಾಡಿʼ ಎಂದು ಅವರು ಹೇಳಿದ್ದಾರೆ.