ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಸನ್‌ರೈಸರ್ಸ್‌ ಎದುರು ಸೋತರೂ ಅಗ್ರ ಸ್ಥಾನವನ್ನು ಉಳಿಸಿಕೊಂಡ ಆರ್‌ಸಿಬಿ!

RCB vs SRH Match Highlights: ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಹೈಸ್ಕೋರಿಂಗ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 55 ರನ್‌ಗಳ ಸೋಲು ಅನುಭವಿಸಿತು. ಈ ಸೋಲಿನ ಹೊರತಾಗಿಯೂ 2026ರ ಐಪಿಎಲ್‌ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿತು. ಆ ಮೂಲಕ ಗುಜರಾತ್‌ ಟೈಟನ್ಸ್‌ ಎದುರು ಮೊದಲನೇ ಕ್ವಾಲಿಫೈಯರ್‌ ಆಡಲಿದೆ.

ಎಸ್‌ಆರ್‌ಎಚ್‌ ಎದುರು ಸೋತರೂ ಅಗ್ರ ಸ್ಥಾನವನ್ನು ಉಳಿಸಿಕೊಂಡ ಆರ್‌ಸಿಬಿ!

ಸನ್‌ರೈಸರ್ಸ್‌ ಎದುರು ರಾಯಲ್‌ ಚಾಲೆಂಜರ್ಸ್‌ಗೆ ಸೋಲು. -

Profile
Ramesh Kote May 22, 2026 11:43 PM

ಹೈದರಾಬಾದ್‌: ಸನ್‌ರೈಸರ್ಸ್‌ ಹೈದರಾಬಾದ್‌ (SRH) ಎದುರು ಹೈಸ್ಕೋರಿಂಗ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ 55 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿತು ಹಾಗೂ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟನ್ಸ್‌ ಎದುರು ಮೇ 26 ರಂದು ಧರ್ಮಶಾಲಾದಲ್ಲಿ ಕಾದಾಟ ನಡೆಸಲಿದೆ. ಇನ್ನು ಈ ಪಂದ್ಯವನ್ನು ಗೆದ್ದರೂ ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಎಸ್‌ಆರ್‌ಎಚ್‌ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿಯೂ ಉಳಿಯುವ ಮೂಲಕ ಎಲಿಮಿನೇಟರ್‌ ಪಂದ್ಯವನ್ನು ಆಡಲಿದೆ.

ಶುಕ್ರವಾರ ಇಲ್ಲಿನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಹೈದರಾಬಾದ್‌ ನೀಡಿದ್ದ 256 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ತಂಡ, ಪವರ್‌ಪ್ಲೇನಲ್ಲಿ ಮಾತ್ರ ಆಕ್ರಮಣಕಾರಿ ಆಟವನ್ನು ಆಡಿತು. ವೆಂಕಟೇಶ್‌ ಅಯ್ಯರ್‌ (44 ರನ್‌), ವಿರಾಟ್‌ ಕೊಹ್ಲಿ (15) ಹಾಗೂ ದೇವದತ್‌ ಪಡಿಕ್ಕಲ್‌ (21) ಅವರು ವಿಕೆಟ್‌ ಒಪ್ಪಿಸಿದ ಬಳಿಕ ಆರ್‌ಸಿಬಿ ಲೆಕ್ಕಾಚಾರದ ಪ್ರಕಾರ ಬ್ಯಾಟ್‌ ಮಾಡಿತು. ಅಗ್ರ ಎರಡು ಸ್ಥಾನಗಳನ್ನು ಉಳಿಸಿಕೊಳ್ಳಲು ಆರ್‌ಸಿಬಿ 166 ರನ್‌ಗಳನ್ನು ಕಲೆ ಹಾಕಬೇಕಿತ್ತು. ಆದರೆ ಎಸ್‌ಆರ್‌ಎಚ್‌ ಅಗ್ರ ಎರಡಕ್ಕೆ ಪ್ರವೇಶಿಸಲು 90 ರನ್‌ಗಳ ಅಂತರದಲ್ಲಿ ಗೆಲುವು ಪಡೆಯಬೇಕಾಗಿತ್ತು.

IPL 2026: ಆರ್‌ಸಿಬಿ ಎದುರು 5 ಸಿಕ್ಸರ್‌ ಸಿಡಿಸಿ ವಿಶೇಷ ದಾಖಲೆ ಬರೆದ ಅಭಿಷೇಕ್‌ ಶರ್ಮಾ!

ಈ ಲೆಕ್ಕಾಚಾರ ಗಮನದಲ್ಲಿಟ್ಟುಕೊಂಡು ನಾಯಕ ರಜತ್‌ ಪಾಟಿದಾರ್‌ ಹಾಗೂ ಕೃಣಾಲ್‌ ಪಾಂಡ್ಯ ಅಪಾಯಕಾರಿ ಬ್ಯಾಟಿಂಗ್‌ಗೆ ಕೈ ಹಾಕಲಿಲ್ಲ. ಈ ಇಬ್ಬರೂ 57 ಎಸೆತಗಳಲ್ಲಿ 84 ರನ್‌ ಗಳಿಸಿದರು. ಪಾಟಿದಾರ್‌ 39 ಎಸೆತಗಳಲ್ಲಿ 56 ರನ್‌ ಗಳಿಸಿದ ಬಳಿಕ ಔಟ್‌ ಆದರು. ಕೊನೆಯವರೆಗೂ ಅಜೇಯರಾಗಿ ಉಳಿದ ಕೃಣಾಲ್‌ ಪಾಂಡ್ಯ 31ಎಸೆತಗಳಲ್ಲಿ 41 ರನ್‌ ಗಳಿಸಿದರು. ಕೊನೆಯಲ್ಲಿ ಟಿಮ್‌ ಡೇವಿಡ್‌ 7 ಎಸೆತಗಳಲ್ಲಿ ಅಜೇಯ15 ರನ್‌ ಗಳಿಸಿದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಿಗೆ 4 ವಿಕೆಟ್‌ಗಳಿಗೆ 200 ರನ್‌ಗಳನ್ನು ಕಲೆ ಹಾಕಿತು.



ಗೆದ್ದರೂ ಎಸ್ಆರ್‌ಎಚ್‌ಗೆ ಭಾರಿ ನಿರಾಶೆ

ಇನ್ನು ಎದುರಾಳಿ ತಂಡದ ಪರ ಇಶಾನ್‌ ಮಾಲಿಂಗ ಮಾರಕ ದಾಳಿ ನಡೆಸಿ ಎರಡು ವಿಕೆಟ್‌ ಪಡೆದರು. ಎಸ್‌ಆರ್‌ಎಚ್‌ ತಂಡ ಕೂಡ ಆರ್‌ಸಿಬಿಯನ್ನು ಬೇಗ ಕಟ್ಟಿ ಹಾಕಿ 90 ರನ್‌ಗಳಿಗೂ ಹೆಚ್ಚಿನ ಅಂತರದಲ್ಲಿ ಗೆಲ್ಲಲು ಸಾಕಷ್ಟು ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ.



255 ರನ್‌ ಕಲೆ ಹಾಕಿದ ಎಸ್‌ಆರ್‌ಎಚ್‌

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ನಿರೀಕ್ಷೆಯಂತೆ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿತು. ಅಭಿಷೇಕ್‌ ಶರ್ಮಾ, ಹೆನ್ರಿಚ್‌ ಕ್ಲಾಸೆನ್‌ ಹಾಗೂ ಇಶಾನ್‌ ಕಿಶನ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 255 ರನ್‌ಗಳ ಬೃಹತ್‌ ಮೊತ್ತವನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಆರ್‌ಸಿಬಿಗೆ 256 ರನ್‌ಗಳ ಬೃಹತ್‌ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಯಿತು.



ಅಭಿಷೇಕ್‌ ಶರ್ಮಾ ಅರ್ಧಶತಕ

ಇನಿಂಗ್ಸ್‌ ಆರಂಭಿಸಿದ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್‌ ಮೊದಲನೇ ವಿಕೆಟ್‌ಗೆ 45 ರನ್‌ಗಳನ್ನು ಕಲೆ ಹಾಕಿದರು. 16 ಎಸೆತಗಳಲ್ಲಿ 26 ರನ್‌ ಗಳಿಸಿದ ಬಳಿಕ ಟ್ರಾವಿಸ್‌ ಹೆಡ್‌, ರಸಿಖ್‌ ಸಲಾಮ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಆದರೆ, ಒಂದು ತುದಿಯಲ್ಲಿ ಸ್ವಲ್ಪ ಸಮಯ ಸ್ಪೋಟಕ ಬ್ಯಾಟ್‌ ಮಾಡಿದ ಅಭಿಷೇಕ್‌ ಶರ್ಮಾ ಕೇವಲ 22 ಎಸೆತಗಳಲ್ಲಿ 56 ರನ್‌ಗಳನ್ನು (5 ಸಿಕ್ಸರ್‌, 4 ಬೌಂಡರಿ) 254.55ರ ಸ್ಟ್ರೈಕ್‌ ರೇಟ್‌ನಲ್ಲಿ ಸಿಡಿಸಿದರು. ನಂತರ ಸುಯಶ್‌ ಶರ್ಮಾಗೆ ಔಟ್‌ ಆದರು. ನಾಲ್ಕನೇ ಕ್ರಮಾಂಕದಲ್ಲಿ ಅಬ್ಬರಿಸಿದ ಹೆನ್ರಿಚ್‌ ಕ್ಲಾಸೆನ್‌ ಕೇವಲ 24 ಎಸೆತಗಳಲ್ಲಿ 51 ರನ್‌ ಸಿಡಿಸಿ ತಂಡದ ರನ್‌ ವೇಗವನ್ನು ಹೆಚ್ಚಿಸಿ ವಿಕೆಟ್‌ ಒಪ್ಪಿಸಿದರು.



ಇಶಾನ್‌ ಕಿಶನ್‌ ಅಬ್ಬರ

ಎಸ್‌ಆರ್‌ಎಚ್‌ ಬ್ಯಾಟ್ಸ್‌ಮನ್‌ಗಳ ಅಬ್ಬರದ ನಡುವೆ ಆರ್‌ಸಿಬಿ ಬೌಲರ್‌ಗಳ ತಂತ್ರ ಕೆಲಸ ಮಾಡಲಿಲ್ಲ. ಎಷ್ಟೇ ಪರಿಣಾಮಕಾರಿಯಾಗಿ ಬೌಲ್‌ ಮಾಡಿದರೂ ಪಿಚ್‌ ನೆರವು ನೀಡಲಿಲ್ಲ. ಆದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಬ್ಯಾಟ್‌ ಮಾಡಿದ ಇಶಾನ್‌ ಕಿಶನ್‌, ತಮ್ಮ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದರು. ಅವರು ಆಡಿದ 46 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 79 ರನ್‌ಗಳನ್ನು ಚಚ್ಚಿದರು. ಇದರ ಜೊತೆಗೆ ಹೆನ್ರಿಚ್‌ ಕ್ಲಾಸೆನ್‌ ಅವರ ಜೊತೆಗೆ 113 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಇನ್ನು ಕೊನೆಯಲ್ಲಿ ನಿತೀಶ್‌ಕುಮಾರ್‌ ರೆಡ್ಡಿ 12 ಎಸೆತಗಳಲ್ಲಿ 29 ರನ್‌ಗಳನ್ನು ಗಳಿಸಿದರು.

ಆರ್‌ಸಿಬಿ ಪರ ರಸಿಖ್‌ ದಾರ್‌ ಸಲಾಮ್‌ ಎರಡು ವಿಕೆಟ್‌ ಪಡೆದರೆ, ಕೃಣಾಲ್‌ ಪಾಂಡ್ಯ ಹಾಗೂ ಸುಯಶ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದರು.

ಸ್ಕೋರ್‌ ವಿವರ

ಸನ್‌ರೈಸರ್ಸ್‌ ಹೈದರಾಬಾದ್‌: 20 ಓವರ್‌ಗಳಿಗೆ 255-4 (ಇಶಾನ್‌ ಕಿಶನ್‌ 79, ಅಭಿಷೇಕ್‌ ಶರ್ಮಾ 56, ಹೆನ್ರಿಚ್‌ ಕ್ಲಾಸೆನ್‌ 51; ರಸಿಖ್‌ ಸಲಾಮ್‌ 52 ಕ್ಕೆ 2)

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಿಗೆ 200-4 (ರಜತ್‌ ಪಾಟಿದಾರ್‌ 50, ವೆಂಕಟೇಶ್‌ ಅಯ್ಯರ್‌ 44, ಕೃಣಾಲ್‌ ಪಾಂಡ್ಯ 41*; ಇಶಾನ್‌ ಮಾಲಿಂಗ 33 ಕ್ಕೆ 2)