ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CM Siddaramaiah: ಹಿಂದುಳಿದವರು-ದಲಿತರು BJP, RSS, ABVP ಸೇರೋದು ಯಾಕೆ?: ಸಿಎಂ ಸಿದ್ದರಾಮಯ್ಯ ಬೇಸರ

Havanur Report Golden Jubilee: ನಮ್ಮ ಸರ್ಕಾರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವರದಿಯನ್ನು ಒಪ್ಪಿಕೊಂಡು ಜಾರಿ ಮಾಡಲು ಸಿದ್ಧವಿದೆ. ಮೀಸಲಾತಿ ಪ್ರಮಾಣವನ್ನು ಶೇ. 70-75 ಕ್ಕೆ ಹೆಚ್ಚಿಸುವ ಬಗ್ಗೆಯೂ ಆಸಕ್ತಿ ಹೊಂದಿದೆ. ನನಗೆ ಕೊನೆಯ ಉಸಿರು ಇರುವವರೆಗೂ, ನಾನು ರಾಜಕಾರಣದಲ್ಲಿ ಇರುವವರೆಗೂ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹಿಂದುಳಿದವರು-ದಲಿತರು BJP, RSS, ABVP ಸೇರೋದು ಯಾಕೆ?: ಸಿಎಂ ಬೇಸರ

ಬೆಂಗಳೂರಿನಲ್ಲಿ ಎಲ್.ಜಿ. ಹಾವನೂರು ವರದಿಯ ಸುವರ್ಣ ಮಹೋತ್ಸವ ನಡೆಯಿತು. -

Profile
Siddalinga Swamy Nov 19, 2025 7:35 PM

ಬೆಂಗಳೂರು, ನ.19: ಹಿಂದುಳಿದವರು-ದಲಿತರು ತಮ್ಮ ವಿರೋಧಿಗಳಾದ ಬಿಜೆಪಿ-ಆರ್‌ಎಸ್‌ಎಸ್‌-ಎಬಿವಿಪಿ (BJP-RSS-ABVP) ಸೇರ್ತಾರಲ್ಲಾ ಇವರಿಗೆ ಏನು ಹೇಳೋದು. ಬಿಜೆಪಿ-ಆರ್‌ಎಸ್‌ಎಸ್‌ ಸಿದ್ಧಾಂತ ಹಿಂದುಳಿದವರ ಶತ್ರು ಎಂದು ಗೊತ್ತಿದ್ದೂ ಹೋಗಿ ಹೋಗಿ ಅಲ್ಲಿಗೇ ಸೇರ್ತಾರಲ್ಲ ಇದಕ್ಕೆ ಏನು ಮಾಡೋದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬೇಸರ ವ್ಯಕ್ತಪಡಿಸಿದರು. ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಎಲ್.ಜಿ. ಹಾವನೂರು ವರದಿಯ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇವರು, ಧರ್ಮದ ಹೆಸರಲ್ಲಿ ಸಾಯ್ತಾ ಇರೋರೆಲ್ಲಾ ನಮ್ಮ ಹಿಂದುಳಿದವರೇ. ಸ್ವಾರ್ಥಕ್ಕಾಗಿ ಬಿಜೆಪಿ-ಆರ್‌ಎಸ್‌ಎಸ್‌ ಸೇರಿ ಇವರೇ ಮೂಲ ಆರ್‌ಎಸ್‌ಎಸ್‌ನವರಿಗಿಂತ, ಇವರೇ ಹೆಡ್ಗೇವಾರ್ ರೀತಿ ಮಾತಾಡ್ತಾರೆ ಎಂದು ವ್ಯಂಗ್ಯವಾಡಿದರು.

ಹಾವನೂರು ವರದಿಯನ್ನು ದೇವರಾಜ ಅರಸರು ಹಿಂದುಳಿದವರ ಬೈಬಲ್ ಎಂದು ಕರೆದಿದ್ದಾರೆ. ಸುಪ್ರೀಂಕೋರ್ಟ್ ಕೂಡ ಹಾವನೂರು ವರದಿಯನ್ನು ಅಪಾರವಾಗಿ ಮೆಚ್ಚಿಕೊಂಡಿದೆ ಎಂದು ಹೇಳಿದರು. ಸಾಮಾನ್ಯ ಹಳ್ಳಿಯ ಪರಿಶಿಷ್ಟ ಕುಟುಂಬದಲ್ಲಿ ಹುಟ್ಟಿದ ಹಾವನೂರು ಅವರು ವಿದ್ಯಾರ್ಥಿ ದೆಸೆಯಲ್ಲೇ ಪ್ರತಿಭಟನೆ ಮಾಡುವ ಗುಣ ಹೊಂದಿದ್ದರು. ಹಾವನೂರು ಅವತ್ತು ಈ ಜಾತಿಯ ಮೊದಲ ವಕೀಲರಾಗಿದ್ದರು ಎಂದು ಸ್ಮರಿಸಿದರು.

ನಾನು ಹಣಕಾಸು ಮಂತ್ರಿಯಾದಾಗ, ʼಈ ಸಿದ್ದರಾಮಯ್ಯಂಗೆ ನೂರು ಕುರಿ ಎಣಿಸೋಕೆ ಬರಲ್ಲ ಬಜೆಟ್ ಮಂಡಿಸ್ತಾರಾʼ ಎಂದು ಪತ್ರಿಕೆಯೊಂದರಲ್ಲಿ ಬರೆದಿದ್ದರು. ಇದನ್ನು ನಾನು ಸವಾಲಾಗಿ ಸ್ವೀಕರಿಸಿದೆ. 16 ಬಜೆಟ್ ಮಂಡಿಸಿದೆ. 17ನೇ ಬಜೆಟನ್ನೂ ಮಂಡಿಸುತ್ತೇನೆ. ನನಗೆ ಅವಕಾಶ ಸಿಕ್ಕಿದ್ದರಿಂದ ನಾನು ಇಷ್ಟೆಲ್ಲಾ ಮಾಡಲು ಸಾಧ್ಯವಾಯಿತು. ಅವಕಾಶ ಸಿಗದಿದ್ದರೆ ನನ್ನಿಂದ ಇದನ್ನು ಮಾಡಲು ಸಾಧ್ಯವಿರಲಿಲ್ಲ. ಆದ್ದರಿಂದ ದಮನಿತ ಜಾತಿಗಳಿಗೆ ಅವಕಾಶ ಮುಖ್ಯ ಎಂದು ತಿಳಿಸಿದರು.

ಬೇಡರ ಜಾತಿಯಲ್ಲಿ ಜನಿಸಿದ ಹಾವನೂರು ಅವರು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶ ಸಿಕ್ಕಾಗ ಹೊರಗೆ ಬರುತ್ತದೆ ಎಂದರು. ನಾನು 1991ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದೆ. ಆಗ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದೆ. ನನ್ನ ಅರ್ಜಿ ಪರವಾಗಿ ಹಾವನೂರು ಅವರು ವಾದಿಸಿದ್ದರು. ಆ ಸಂದರ್ಭದಲ್ಲಿ ನಾನು ಹಾವನೂರು ಅವರ ಜತೆ ಆತ್ಮೀಯತೆ ಬೆಳೆದಿತ್ತು ಎಂದು ಸ್ಮರಿಸಿದರು.

ಎಲ್ಲಿಯವರೆಗೂ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಮೀಸಲಾತಿ ಇರಬೇಕು ಎನ್ನುವುದು ಡಾ.ಬಿ.ಆರ್. ಅಂಬೇಡ್ಕರ್ ಅವರ ಮಾತಾಗಿತ್ತು. ನಮ್ಮಲ್ಲಿ ಶಿಕ್ಷಣ ಪ್ರಮಾಣ ಶೇ.68 ರಷ್ಟಿದ್ದರೂ ಜಾತಿ ವ್ಯವಸ್ಥೆ ಇನ್ನಷ್ಟು ಗಟ್ಟಿಯಾಗುತ್ತಿದೆ. ಜಾತಿ ವ್ಯವಸ್ಥೆಯಿಂದ ಅನುಕೂಲ ಮಾಡಿಕೊಂಡವರು ಈ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿದ್ದಾರೆ. ಹಿಂದುಳಿದವರು ಇನ್ನೂ ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬಂದಿಲ್ಲ. ಮೇಲು ಜಾತಿಯ ಬಡವರನ್ನೂ ಬಹುವಚನದಿಂದ ಕರೆಯುವುದು, ಕೆಳ ಜಾತಿಯ ಶ್ರೀಮಂತರನ್ನು ಏಕವಚನದಲ್ಲಿ ಕರೆಯುವುದೇ ಗುಲಾಮಿ ಮನಸ್ಥಿತಿಯ ಸಂಕೇತ ಎಂದರು.

ವಿದ್ಯಾವಂತರು ವಿದ್ಯೆ ಪಡೆದಷ್ಟೂ ಮೌಢ್ಯವನ್ನು ಹೆಚ್ಚೆಚ್ಚು ನಂಬುತ್ತಾರೆ. ಬಡತನಕ್ಕೆ ಹಣೆಬರಹ ಕಾರಣ ಎಂದು ನಂಬುವವರು ಇನ್ನೂ ಇದ್ದಾರೆ. ಹಿಂದುಳಿದ ವರ್ಗಗಳ ವಿದ್ಯಾವಂತರೂ ಮೌಢ್ಯವನ್ನು ನಂಬುತ್ತಾರೆ ಎಂದರು.

ಮೀಸಲಾತಿ ಮಿತಿ ಶೇ.70-75ಕ್ಕೆ ಹೆಚ್ಚಿಸಲೂ ಸಿದ್ಧ: ಸಿಎಂ

ನಮ್ಮ ಸರ್ಕಾರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವರದಿಯನ್ನು ಒಪ್ಪಿಕೊಂಡು ಜಾರಿ ಮಾಡಲು ಸಿದ್ಧವಿದೆ. ಮೀಸಲಾತಿ ಪ್ರಮಾಣವನ್ನು ಶೇ. 70-75 ಕ್ಕೆ ಹೆಚ್ಚಿಸುವ ಬಗ್ಗೆಯೂ ಆಸಕ್ತಿ ಹೊಂದಿದೆ. ನನಗೆ ಕೊನೆಯ ಉಸಿರು ಇರುವವರೆಗೂ, ನಾನು ರಾಜಕಾರಣದಲ್ಲಿ ಇರುವವರೆಗೂ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Mekedatu Project: ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪರಿಷ್ಕೃತ ಡಿಪಿಆರ್ ಸಲ್ಲಿಕೆ: ಡಿ.ಕೆ. ಶಿವಕುಮಾರ್

ರಾಹುಲ್ ಗಾಂಧಿಯವರಿಗೆ ಸೈದ್ಧಾಂತಿಕ ಬದ್ಧತೆ ಇದ್ದಿದ್ದರಿಂದಲೇ ಜಾತಿ ಗಣತಿಗೆ ಒತ್ತಡ ಹೇರಿದರು. ಮೊನ್ನೆ ನನಗೂ ʼಏನಾಯ್ತು ನಿಮ್ಮ ಗಣತಿʼ ಎಂದು ನನಗೆ ಕೇಳಿದರು ಎಂದು ತಿಳಿಸಿದ ಅವರು, ರಾಹುಲ್ ಗಾಂಧಿಯವರಿಗೆ ಸ್ಪಷ್ಟತೆ ಇರುವುದರಿಂದಲೇ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಜಾತಿ ಗಣತಿ ನಡೆಸುವಂತೆ ಮಾಡಿದ್ದಾರೆ. ನಮ್ಮ ಸರ್ಕಾರ ಕೂಡ ಈ ಗಣತಿಯನ್ನು ಒಪ್ಪಿಕೊಂಡು ಜಾರಿ‌ಮಾಡಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.